ಗುರುತು ಆಧಾರಿತ ಹತ್ಯೆಗಳಾಗುತ್ತಿವೆ -ಸಂಜಯ ಹೆಗ್ಡೆ
ದೇಶದ ನಗರ ಪ್ರದೇಶಗಳಲ್ಲಿ ಸಂಘಟಿತ ಗುಂಪುಗಳಿಂದ

ಗುಂಪುಗಳಿಂದ ನಡೆಯುವ ಹತ್ಯೆಗಳನ್ನು ತಡೆಯಲು ಈಗಿನ ಕಾನೂನುಗಳು ಸಾಧ್ಯವಿಲ್ಲ ಮತ್ತು ಇಂತಹ ಅಪರಾಧಗಳನ್ನೆಸಗುವವರಿಗೆ ಜೀವಾವಧಿ ಶಿಕ್ಷೆ ಆಗಬೇಕು ಎನ್ನುತ್ತಾರೆ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಸಂಜಯ ಹೆಗ್ಡೆ . ಮಾನವ ಸುರಕ್ಷಾ ಕಾನೂನು(ಮಾಸುಕಾ) ಕರಡು ಮಸೂದೆಯನ್ನು ರಚಿಸಿರುವ ಅವರು ರೆಡಿಫ್‌ನ್ಯೂಸ್.ಕಾಮ್‌ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಈ ಕಾನೂನು ಇಂದು ಏಕೆ ಅಗತ್ಯವಾಗಿದೆ ಎನ್ನುವುದನ್ನು ಅವರು ಇಲ್ಲಿ ವಿವರಿಸಿದ್ದಾರೆ.
♦ ಗುಂಪುಗಳಿಂದ ಹತ್ಯೆಗಳನ್ನು ತಡೆಯಲು ಹೊಸ ಕರಡು ಕಾನೂನನ್ನು ರಚಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ. ಇದಕ್ಕೆ ನಿಮ್ಮನ್ನು ಪ್ರೇರೇಪಿಸಿದ್ದು ಯಾವುದು?
ಉ: ಈಗಿರುವ ಕಾನೂನುಗಳಲ್ಲಿ ಹಲವಾರು ಲೋಪದೋಷ ಗಳಿರುವುದರಿಂದ ಇದು ಗುಂಪುಗಳಿಂದ ಹತ್ಯೆಗಳ ಗಂಭೀರ ವಿಷಯವನ್ನು ನಿರ್ವಹಿಸುವ ನಾಗರಿಕ ಪ್ರಯತ್ನವಾಗಿದೆ. ಇಂತಹ ಹತ್ಯೆಗಳನ್ನು ನಡೆಸುವವರು ಮತ್ತು ಅವರಿಗೆ ಕುಮ್ಮಕ್ಕನ್ನು ನೀಡುವರಿಗೆ ಶಿಕ್ಷೆಯಾಗುವಂತೆ ಮಾಡುವ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಒದಗಿಸುವ ಮತ್ತು ಅವರಿಗೆ ಶೀಘ್ರ ನ್ಯಾಯವನ್ನೊದಗಿಸುವ ಹಾಗೂ ಇಂತಹ ಘಟನೆಗಳು ನಡೆಯಲು ಅವಕಾಶ ನೀಡುವ ಅಧಿಕಾರಗಳ ಹೊಣೆಗಾರಿಕೆಯನ್ನು ನಿಗದಿಗೊಳಿಸುವ ಉದ್ದೇಶವನ್ನು ಈ ಕರಡು ಕಾನೂನು ಹೊಂದಿದೆ.
ಉದಾಹರಣೆಗೆ ಘಟನೆ ನಡೆದ ಪ್ರದೇಶದಲ್ಲಿಯ ಪೊಲೀಸರು. ಈಗಿರುವ ಭಾರತೀಯ ಕಾನೂನಿನಡಿ ವ್ಯಕ್ತಿಯನ್ನು ಆತನ ಧರ್ಮದ ಆಧಾರ ದಿಂದ ಗುರುತಿಸಿ ಗುಂಪುಗಳಿಂದ ಹತ್ಯೆ ಪ್ರಕರಣಗಳ ಕುರಿತಂತೆ ಕಾನೂನು ಕ್ರಮವನ್ನೇಕೆ ಜರುಗಿಸಬಾರದು ಎನ್ನುವುದಕ್ಕೆ ಯಾವುದೇ ಕಾರಣಗಳಿಲ್ಲ. ಕೊಲೆ.....ಅದನ್ನು ಒಬ್ಬನೇ ಮಾಡಿರಲಿ ಅಥವಾ ಗುಂಪಿನಿಂದ ನಡೆದಿರಲಿ, ಕೊಲೆ ಕೊಲೆಯೇ. ಹೀಗಾಗಿ ಅದು ಐಪಿಸಿಯ ಕಲಂ 302ರಡಿ ಬರುತ್ತದೆ.
♦ ಆದರೆ ಹೊಸ ಕಾನೂನು ಏಕೆ?
ಉ: ಜನರು ಕಳ್ಳನನ್ನು ಹಿಡಿದು ಹತ್ಯೆ ಮಾಡಿದ ಅಥವಾ ಸ್ಥಳೀಯರು ಮಹಿಳೆಯನ್ನು ಮಾಟಗಾತಿಯೆಂದು ಆರೋಪಿಸಿ ಕೊಂದಂತಹ ಪ್ರಕರಣಗಳ ವಿಚಾರಣೆಗಾಗಿ ನಮ್ಮಲ್ಲಿ ಕಾನೂನು ಗಳಿವೆ. ಆದರೆ ಕಳೆದ ಕೆಲವು ವರ್ಷಗಳಿಂದ ಸಂಘಟಿತ, ಧರ್ಮದ ಹಿನ್ನೆಲೆಯಲ್ಲಿ ಗುರುತು ಆಧಾರಿತ ಹತ್ಯೆಗಳು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನಡೆಯುತ್ತಿವೆ.
ಸಾಮಾನ್ಯ ಕಾನೂನುಗಳು ಜನರಲ್ಲಿ ಭೀತಿ ಹುಟ್ಟಿಸುವುದಿಲ್ಲ, ಹೀಗಾಗಿ ಇಂತಹ ಪ್ರಕರಣಗಳಲ್ಲಿ ಅವು ಏನೇನೂ ಸಾಲದು. ಆಡಳಿತ ಯಂತ್ರವು ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಆರೋಪಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುವುದನ್ನು ನಾವು ಕಂಡಿದ್ದೇವೆ. ಹೀಗಾಗಿ ಈ ಸಾಮಾಜಿಕ ಸಮಸ್ಯೆಗೆ ಪರಿಹಾರವೊಂದನ್ನು ನಾವು ಸೂಚಿಬೇಕಾದ ಅಗತ್ಯವಿದೆ.
♦ ಆದರೆ ಈ ಉಪಕ್ರಮಕ್ಕೆ ಕಾನೂನಿನ ಮಾನ್ಯತೆಯಿಲ್ಲವಲ್ಲ?
ಉ: ನಿಜ, ಜನರು ದಾಖಲೆಯೊಂದನ್ನು ತೋರಿಸಿ ಈ ಸಾಮಾಜಿಕ ಪಿಡುಗನ್ನು ನಿರ್ಮೂಲಿಸಲು ಸೂಕ್ತ ಕಾನೂನುಗಳನ್ನು ಅಂಗೀಕರಿಸುವಂತೆ ನಮ್ಮ ಸಂಸದರು ಮತ್ತು ರಾಜ್ಯ ವಿಧಾನ ಸಭೆಗಳ ಶಾಸಕರನ್ನು ಆಗ್ರಹಿಸಲು ಸಾಧ್ಯವಾಗುವಂತೆ ಅವರಿಗೆ ಒಂದು ಸಿದ್ಧ ಮಾದರಿಯನ್ನು ಒದಗಿಸುವುದು ಈ ಕರಡು ಮಸೂದೆಯ ಉದ್ದೇಶವಾಗಿದೆ. ಈಗಾಗಲೇ ಕಾನೂನು ಗಳಿವೆ ಮತ್ತು ಹೊಸ ಕಾನೂನುಗಳ ಅಗತ್ಯವಿಲ್ಲ ಎಂದು ಜನಪ್ರತಿನಿಧಿ ಗಳು ನುಣುಚಿಕೊಳ್ಳಬಹುದು. ಆದರೆ ಇಂತಹ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳಿವೆ, ಆದರೆ ಕಾನೂನು ರೂಪಕರು ಅವುಗಳನ್ನು ತಿರಸ್ಕರಿಸುತ್ತಿದ್ದಾರೆ ಎಂಬ ಪ್ರಬಲ ಸಂದೇಶವನ್ನು ಈ ಕರಡು ಮಸೂದೆಯು ಜನರಿಗೆ ನೀಡುತ್ತದೆ. ಭ್ರಷ್ಟಾಚಾರ ವಿರೋಧಿ ಲೋಕಪಾಲ ಕಾಯ್ದೆಯೂ ಇಂತಹುದೇ ಉಪಕ್ರಮವಾಗಿದ್ದು, ಆ ಬಗ್ಗೆ ಕ್ರಮಕ್ಕಾಗಿ ಜನರು ಸಂಸತ್ತಿನ ಮೇಲೆ ಒತ್ತಡ ಹೇರಿದ್ದರು.
♦ ಗುಂಪುಗಳಿಂದ ಹತ್ಯೆ ಘಟನೆಗಳ ಹಿಂದೆ ರಾಜಕೀಯ ಶಕ್ತಿಗಳಿವೆ ಎಂದು ನೀವು ಶಂಕಿಸಿದ್ದೀರಾ?
ಉ: ನಾವು ಈ ಕರಡನ್ನು ರಾಜಕೀಯರಹಿತವಾಗಿಸಲು ಬಯಸಿದ್ದೇವೆ. ಗುಂಪುಗಳಿಂದ ಹತ್ಯೆಗಳು ಕಾನೂನನ್ನು ಉಲ್ಲಂಘಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳು, ಟಿವಿ ಸ್ಟುಡಿಯೋಗಳು ಮತ್ತು ಸಾರ್ವಜನಿಕ ಭಾಷಣಗಳಿಂದ ಇಂತಹ ಘಟನೆಗಳು ಹೆಚ್ಚುತ್ತಿದೆ.
2012ರ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ಪ್ರತಿಭಟನೆಗಳು ರಾಜಕೀಯ ಸ್ವರೂಪವನ್ನು ಹೊಂದಿದ್ದವು, ಆದರೆ ಕ್ರಿಮಿನಲ್ ಕಾನೂನಿನಲ್ಲಿ ಬದಲಾವಣೆಗೆ ಅವು ಕಾರಣವಾಗಿದ್ದವು. ಇದೇ ರೀತಿ ಲೋಕಪಾಲ ಪರ ಪ್ರತಿಭಟನೆಗಳೂ ರಾಜಕೀಯ ಸ್ವರೂಪವನ್ನು ಹೊಂದಿದ್ದವು, ಆದರೆ ಭ್ರಷ್ಟಾಚಾರ ನಿಗ್ರಹ ಕಾನೂನಿನಲ್ಲಿ ಬದಲಾವಣೆಗೆ ಕಾರಣವಾಗಿದ್ದವು.
♦ ನೀವು ರೂಪಿಸಿರುವ ಕರಡು ಕಾನೂನಿನಲ್ಲಿಯ ಒಂದೆರಡು ಅಂಶಗಳನ್ನು ಉಲ್ಲೇಖಿಸುತ್ತೀರಾ?
ಉ: ಅಪವಾದಗಳ ಮೂಲಕ ಗುಂಪುಗಳಿಗೆ ಪರೋಕ್ಷ ಪ್ರಚೋದನೆ ನೀಡುವುದನ್ನು ಈ ಕರಡು ಕಾನೂನು ಅಪರಾಧ ವನ್ನಾಗಿಸಿದೆ ಮತ್ತು ಇಂತಹ ಅಪರಾಧಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವಂತೆ ಶಿಫಾರಸು ಮಾಡಿದೆ. ಇಂತಹ ಘಟನೆಗಳನ್ನು ತಡೆಯಲು ಉದ್ದೇಶಪೂರ್ವಕವಾಗಿ ವಿಫಲರಾಗುವ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಠಾಣಾಧಿಕಾರಿಯನ್ನು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಗುಂಪುಗಳಿಂದ ನಡೆಯುವ ಹತ್ಯೆಗಳಿಗೆ ಹೊಣೆಗಾರನನ್ನಾಗಿ ಮಾಡಲಾಗಿದೆ. ಆದರೆ ಅದಕ್ಕೂ ಮುನ್ನ ಘಟನೆಗಳು ನಿಜಕ್ಕೂ ಸ್ಥಳೀಯ ಠಾಣಾಧಿಕಾರಿಯ ನಿಯಂತ್ರಣವನ್ನು ಮೀರಿತ್ತೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾಲಮಿತಿಯ ನ್ಯಾಯಾಂಗ ತನಿಖೆಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.
♦ ಅಪರಾಧಿಗಳಿಗೆ ನೆರವಾಗುವವರನ್ನೂ ಅಪರಾಧಿಗಳೆಂದು ನಿಮ್ಮ ಕರಡು ಕಾನೂನು ಪರಿಗಣಿಸಿದೆಯೇ?
ಉ: ಹೌದು. ಗುಂಪು ಹತ್ಯೆ ನಡೆಸುತ್ತದೆ ಎನ್ನುವುದು ಗೊತ್ತಿದ್ದೂ ಹಣಕಾಸಿನ ಸಹಾಯ ಅಥವಾ ಇನ್ನಿತರ ಯಾವುದೇ ಬೆಂಬಲ ನೀಡುವವರೂ ಈ ಕಾಯ್ದೆಯಡಿ ಅಪರಾಧಿಗಳಾಗಿದ್ದಾರೆ. ಈಗಿರುವ ಕಾನೂನುಗಳು ಈ ಬಗ್ಗೆ ಗಮನ ಹರಿಸುವುದಿಲ್ಲ.
♦ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಹೇಗೆ?
2012ಎ ಪೊಕ್ಸೊ ಕಾಯ್ದೆಯಡಿ ಸ್ಥಾಪಿಸಲಾಗಿರುವಂತೆ ಗುಂಪುಗಳಿಂದ ಹತ್ಯೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ರಚನೆಯನ್ನು ಕರಡು ಕಾನೂನು ಪ್ರಸ್ತಾಪಿಸಿದೆ. ಇದು ತ್ವರಿತ ನ್ಯಾಯ ದೊರೆಯುವಂತೆ ಮಾಡುವ ಜೊತೆಗೆ ಯಾವುದೇ ಸಮಸ್ಯೆಯನ್ನು ಎದುರಿಸುವ ಕಾನೂನಿನ ಉದ್ದೇಶವನ್ನು ಪ್ರಕಟಿಸುತ್ತದೆ. ಅಲ್ಲದೆ ಕೊಲೆಯಾದವರ ಕುಟುಂಬಗಳಿಗೆ ರಾಜ್ಯ ಸರಕಾರಗಳಿಂದ ಪುನರ್ವಸತಿ ಮತ್ತು ಪರಿಹಾರ ನೀಡಿಕೆಯನ್ನು ಈ ಕರಡು ಕಾನೂನು ಕಡ್ಡಾಯಗೊಳಿಸಿದೆ. ಅಲ್ಲದೆ ಸಾಕ್ಷಿಗಳ ರಕ್ಷಣೆಗೂ ವಿಶೇಷ ಒತ್ತು ನೀಡಲಾಗಿದೆ.