ಗೋರಖ್‌ಪುರ ಪ್ರಕರಣ ಕಲಿಸಿದ ಪಾಠ
ಈ ಪ್ರಕರಣವು ಜಾಗತಿಕ ಆಮ್ಲಜನಕ ಪೂರೈಕೆಯ ಸವಾಲುಗಳನ್ನು ಭಾರತಕ್ಕೆ ತಂದಿದೆ.

ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ಪರಿಣಾಮವಾಗಿ ಗೋರಖ್‌ಪುರ ಆಸ್ಪತ್ರೆಯಲ್ಲಿ ಸಾವುಗಳು ಸಂಭವಿಸಿದಂತಹ ಪ್ರಕರಣಗಳು ಭವಿಷ್ಯದಲ್ಲಿ ಮರುಕಳಿಸುವುದನ್ನು ತಾನು ತಡೆಯುವುದಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಅವರು ಹೇಳಿರುವುದನ್ನು ಕಾರ್ಯಗತಗೊಳಿಸುವುದೆಂದರೆ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಕಂಡುಹಿಡಿದು ಅವುಗಳನ್ನು ಪರಿಹರಿಸುವುದೇ ಹೊರತು ಕೆಲವು ವ್ಯಕ್ತಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದಲ್ಲ.
ಇನ್ನೂ ವಿವರಗಳು ಹೊರಬರುತ್ತಲೇ ಇರುವ ಗೋರಖ್‌ಪುರ ಘಟನೆಯ ಅತ್ಯಂತ ಭಯಾನಕ ವಿಷಯ, ಜನರು ಅತ್ಯಂತ ಹೆದರುವ ವಿಷಯವೆಂದರೆ ಆಮ್ಲಜನಕ ಪೂರೈಕೆಯಲ್ಲಿ ಉಂಟಾದ ಅವ್ಯವಸ್ಥೆ; ಆ ಪೂರೈಕೆ ಅಸ್ತವ್ಯಸ್ತಗೊಂಡ ರೀತಿ. ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡದ್ದೇ ನೇರವಾದ, ಪ್ರತ್ಯಕ್ಷವಾದ ಕಾರಣವೋ; ಅಥವಾ ಪೂರೈಕೆದಾರ ಪೂರೈಕೆಯನ್ನು ನಿಲ್ಲಿಸಿದನೋ ಅಥವಾ ಪೂರೈಕೆಯಾದ ಆಮ್ಲಜನಕವನ್ನು ಯಾರಾದರೂ ಕದ್ದಿದ್ದರೋ ಎಂಬುದು ಏನೇ ಇರಲಿ; ಆಯಕಟ್ಟಿನ ವೈದ್ಯಕೀಯ ಸೌಕರ್ಯವಿರುವ ಒಂದು ಆಸ್ಪತ್ರೆಯಲ್ಲಿ ಅಷ್ಟೊಂದು ಮುಖ್ಯವಾದ, ಜೀವರಕ್ಷಕವಾದ ಆಮ್ಲಜನಕದಂತಹ ಒಂದು ಸರಕಿನ ಅಪಾಯಕಾರಿ ಸ್ಥಿತಿ ಆರೋಗ್ಯ ಸೇವೆ ಪೂರೈಕೆದಾರರನ್ನು ಮತ್ತು ಸಾರ್ವಜನಿಕರನ್ನು ಆತಂಕಕ್ಕೆ ಈಡುಮಾಡಲೇ ಬೇಕಾಗಿದೆ.
‘‘ಆಮ್ಲಜನಕದ ಪೂರೈಕೆ ಸ್ಥಗಿತಗೊಳ್ಳಲು ಅವಕಾಶ ನೀಡಿದ್ದು ಯಾಕೆ? ಎಂದು ನಮಗೆ ಭಾರತದಾದ್ಯಂತ ಇರುವ ವೈದ್ಯರಿಗೆ ತಿಳಿಯಬೇಕಾಗಿದೆ’’ ಎಂದು ಗೋರಖ್‌ಪುರ ಘಟನೆಯ ಬಗ್ಗೆ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಕೆ.ಕೆ. ಅಗರ್‌ವಾಲ್ ಹೇಳಿರುವುದಾಗಿ ವರದಿಯಾಗಿದೆ. ವೈದ್ಯಕೀಯ ಆರೈಕೆ ನೀಡುವವರು, ತೆರಿಗೆದಾರರು ಮತ್ತು ಸಾರ್ವಜನಿಕರು ಇದೇ ಪ್ರಶ್ನೆಯನ್ನು ಕೇಳಬೇಕಾಗಿದೆ.
ಕೇಂದ್ರ ಆರೋಗ್ಯ ಸ್ಥಿತಿಗಳಲ್ಲಿ ಆಮ್ಲಜನಕ ಜೀವಗಳನ್ನು ಉಳಿಸಬಲ್ಲದು. ಆಸ್ಪತ್ರೆಗೆ ಬರುವ ಮಗು ಉತ್ತರಪ್ರದೇಶದ ಒಂದು ಹಳ್ಳಿಯ ಮಗು ಇರಬಹುದು ಅಥವಾ ಲಂಡನ್‌ನ ಒಂದು ಶ್ರೀಮಂತ ಹೊರವಲಯದ ಮಗು ಇರಬಹುದು; ಆಮ್ಲಜನಕದ ಆವಶ್ಯಕತೆ ಎಲ್ಲ ಮಕ್ಕಳಿಗೂ, ಎಲ್ಲರಿಗೂ ಅನಿವಾರ್ಯವಾದ ಒಂದು ಆವಶ್ಯಕತೆ. ಆರೋಗ್ಯಸೇವೆಯಲ್ಲಿ ಆಮ್ಲಜನಕದ ಪಾತ್ರದ ಬಗ್ಗೆ, ವಿಶೇಷವಾಗಿ ಕಡಿಮೆ ಆದಾಯದ ಚೌಕಟ್ಟುಗಳಲ್ಲಿ ನಿರಂತರವಾದ ಆಮ್ಲಜನಕದ ಪೂರೈಕೆಯ ಬಗ್ಗೆ ಒಂದು ವ್ಯಾಪಕವಾದ, ಜಾಗತಿಕವಾದ ಸಂಭಾಷಣೆಗೆ, ಸಂವಾದಕ್ಕೆ ಗೋರಖ್‌ಪುರ ಈಗ ಒಂದು ವಿಷಯವಾಗಿದೆ.
ಯಾವ ಆಮ್ಲಜನಕ?
ಒಂದು ಆರೋಗ್ಯಸೇವೆ ವ್ಯವಸ್ಥೆಯ ಅಥವಾ ಆಸ್ಪತ್ರೆಯ ಆಮ್ಲಜನಕದ ವಿವಿಧ ಪೂರೈಕೆ ಆಯ್ಕೆಗಳ ಮೇಲೆ ಹಣವನ್ನು ವ್ಯಯಿಸಬಹುದು. ಸಿಲಿಂಡರ್‌ಗಳು, ದ್ರವ ಆಮ್ಲಜನಕ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್‌ಗಳು (ಅಥವಾ ‘ಪ್ರೆಶರ್ ಸ್ವಿಂಗ್ ಅಬ್ಸಾರ್ಪ್‌ಶನ್’ ತಂತ್ರಜ್ಞಾನ).
ದ್ರವ ಆಮ್ಲಜನಕ ಅಂದರೆ, ಸಿಲಿಂಡರ್‌ಗಳಿಗೆ ಹೋಲಿಸಿದಾಗ, ಕಡಿಮೆ ಸ್ಥಳಾವಕಾಶದಲ್ಲಿ ದಾಸ್ತಾನು ಮಾಡಿ ಇಡಬಹುದಾದ ಘಟಕಗಳು. ಸಿಲಿಂಡರ್‌ಗಳನ್ನು ಕಳವು ಮಾಡಿದಷ್ಟು ಸುಲಭವಾಗಿ ದ್ರವ ಆಮ್ಲಜನಕದ ದಾಸ್ತಾನುಗಳನ್ನು ಕಳವು ಮಾಡಲು ಸಾಧ್ಯವಿಲ್ಲ. (ಅತ್ಯಂತ ಹಗುರವಾದ ಒಂದು ಸಿಲಿಂಡರ್ ಕೂಡ 4 ಕಿ.ಗ್ರಾಂ ನಷ್ಟು ಭಾರವಿರುತ್ತದೆ). ಅದೇನಿದ್ದರೂ ದ್ರವ ಆಮ್ಲಜನಕಕ್ಕೆ ಖರ್ಚಿನ ಇತರ ಕೆಲವು ಬಾಬತ್ತುಗಳು ಇವೆ. ದ್ರವ ಆಮ್ಲಜನಕಕ್ಕೆ ಒಂದು ವಿಶೇಷವಾದ ಸ್ಟೋರೇಜ್ ಕಂಟೈನರ್ ಬೇಕು. ಅಂದರೆ, ಒಂದು ಬೃಹತ್ತಾದ ವ್ಯಾಕ್ಯೂಮ್ ಫ್ಲಾಸ್ಕ್‌ನ ಹಾಗೆ ಕಾರ್ಯನಿರ್ವಹಿಸುವ ಒಂದು ಟ್ಯಾಂಕ್ ಬೇಕು. ಹಾಗೆಯೇ, ಬಳಸುವ ಮೊದಲು ಅದನ್ನು ಅನಿಲವಾಗಿ ಬದಲಿಸಲು ಒಂದು ವೇಪರೈಸರ್ ಬೇಕು; ಮತ್ತು ಅನಿಲವನ್ನು ಹಾಸಿಗೆಯ ಪಕ್ಕಕ್ಕೆ ನೇರವಾಗಿ ತರಲು ಕೊಳವೆಯ ಒಂದು ನೆಟ್‌ವರ್ಕ್ ಬೇಕು.
ಆಮ್ಲಜನಕ ಕಾನ್ಸಂಟ್ರೇಟರ್‌ಗಳು ಆಮ್ಲಜನಕವನ್ನು ಬಳಸುವ ಜಾಗದಲ್ಲಿ ಅದನ್ನು ವಾಯುವಿನಿಂದ ಹೀರುತ್ತವೆ. ಹಾಗಾಗಿ, ಇವುಗಳಿಗೆ ರಸ್ತೆ ಸಾರಿಗೆಯಾಗಲಿ ಅಥವಾ ಆಡಳಿತಾತ್ಮಕ ಹೊರೆಯ ಆವಶ್ಯಕತೆಯಾಗಲಿ ಇರುವುದಿಲ್ಲ. ರೆಗ್ಯುಲರ್ ರೀಫಿಲ್ಲಿಂಗ್‌ನ ಅಗತ್ಯವೂ ಇರುವುದಿಲ್ಲ. ಗರಿಷ್ಠ 4 ರೋಗಿಗಳಿಗೆ ಸಾಕಾಗುವ ಹಾಗೆ ಹೆಚ್ಚಿನ ಕಾನ್ಸಂಟ್ರೇಟರ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಆದರೆ ಇಡೀ ಆಸ್ಪತ್ರೆಗೆ ಬೇಕಾಗುವಷ್ಟು ಆಮ್ಲಜನಕವನ್ನು ಪೂರೈಸಬಲ್ಲ ಬೃಹತ್ತಾದ ಕಾನ್ಸಂಟ್ರೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಾನ್ಸಂಟ್ರೇಟರ್‌ಗಳಿಗೆ ನಂಬಲರ್ಹವಾದ, ತಡೆರಹಿತ ವಿದ್ಯುತ್ ಪೂರೈಕೆ ಬೇಕು. ಅಲ್ಲದೆ ಹೆಚ್ಚುವರಿ ನಿಗಾ, ನಿರ್ವಹಣೆ ಬೇಕು ಹಾಗೂ ರಿಪೇರಿಯ ಖರ್ಚುಗಳು ಬರುತ್ತವೆ.
ಹೆಚ್ಚು ಆದಾಯ ಇರುವ ದೇಶಗಳು ಈ ಮೇಲಿನ ಮೂರು ಆಯ್ಕೆಗಳನ್ನೂ ಬಳಸಿಕೊಳ್ಳುತ್ತವೆ. ಇಂಗ್ಲೆಂಡಿನಲ್ಲಿ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಆಮ್ಲಜನಕ ದಾಸ್ತಾನಿನಲ್ಲಿ ಮುಖ್ಯ ದ್ರವಟ್ಯಾಂಕ್‌ಗೆ ಜೋಡಿಸಲಾದ ಒಂದು ಪೈಪ್‌ಲೈನ್ ವ್ಯವಸ್ಥೆ, ಕಾದಿರಿಸಲಾದ ದ್ರವಟ್ಯಾಂಕ್ ಮತ್ತು ಕಾದಿರಿಸಲಾದ ಗ್ಯಾಸ್ ಸಿಲಿಂಡರ್‌ಗಳ ಒಂದು ಗುಂಪು ಅಥವಾ ‘ಮ್ಯಾನಿಫೋಲ್ಡ್’ ಇರುತ್ತದೆ. ಇಷ್ಟೇ ಅಲ್ಲದೆ, ಪ್ರತ್ಯೇಕವಾದ, ಪೈಪ್‌ಲೈನ್ ರಹಿತ ಸಿಲಿಂಡರ್‌ಗಳನ್ನು ‘‘ಬ್ಯಾಕ್ ಅಪ್ ಆಗಿ ಬಳಸಲಾಗುತ್ತದೆ. ಒಂದು ವೇಳೆ ಪೈಪ್‌ಲೈನ್ ವ್ಯವಸ್ಥೆ ಹಾಳಾದಲ್ಲಿ ಅಥವಾ ಆಮ್ಲಜನಕ ಪೂರೈಕೆಗೆ ಬೇಡಿಕೆ ಹೆಚ್ಚಾದಲ್ಲಿ, ಕಾದಿರಿಸಲಾದ ದಾಸ್ತಾನು ಮತ್ತು ಬ್ಯಾಕ್‌ಅಪ್ ವ್ಯವಸ್ಥೆಗಳು ತುರ್ತು ನೆರವಿಗೆ ದೊರಕುತ್ತವೆ.
ಕೆನಡಾದಲ್ಲಿ ಆರೋಗ್ಯ ಸೌಕರ್ಯ(ಫೆಸಿಲಿಟಿ)ಗಳಿಗೆ ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಯಾಕೆಂದರೆ ಅಲ್ಲಿ ಅನೇಕ ಆಸ್ಪತ್ರೆಗಳೂ ಚಿಕಿತ್ಸಾಲಯಗಳು ತೀರ ದೂರದ ಪ್ರದೇಶಗಳಲ್ಲಿ ಮತ್ತು ಉತ್ತಮ ರಸ್ತೆ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿವೆ. ವಿದ್ಯುತ್ ಕೈಕೊಟ್ಟಲ್ಲಿ ಸಿಲಿಂಡರ್‌ಗಳನ್ನು ಅಲ್ಲಿ ಇನ್ನೂ ಬಳಸಲಾಗುತ್ತದೆ. ಕಡಿಮೆ ಆದಾಯದ ದೇಶಗಳಲ್ಲಿ ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಬಳಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಕೆಲವು ಸಂದರ್ಭಗಳಲ್ಲಿ ಸೌರಶಕ್ತಿ-ಚಾಲಿತ ಕಾನ್ಸಂಟ್ರೇಟರ್‌ಗಳನ್ನೂ ಬಳಸಲಾಗುತ್ತದೆ.