ದೇವರಾಜ ಅರಸು ಮತ್ತು ಸಾಮಾಜಿಕ ಪರಿವರ್ತನೆ

ಕಳೆದ ಅಗಸ್ಟ್ 20ಕ್ಕೆ ದೇವರಾಜ ಅರಸುರವರಿಗೆ 102 ವರ್ಷ ಆಗಲೇ ಈ ಲೇಖನ ಬರೆಯಬೇಕಿತ್ತು. ಅರಸುರವರ ಜನ್ಮದಿನವನ್ನು ಆಚರಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನನಗೆ ಅವರ ಸಾಧನೆ ಮತ್ತು ಅವರಿಗಿದ್ದ ಸಾಮಾಜಿಕ ಬದ್ಧತೆ ಬಗ್ಗೆ ತಿಳಿದು ಆಶ್ವರ್ಯವಾಯಿತು ಹಾಗಾಗಿ ತಡವಾಗಿಯಾದರೂ ಅರಸುರವರ ಕುರಿತು ಒಂದು ಲೇಖನ ಬರೆಯಬೇಕೆನಿಸಿತು.
ಬಹುಶಃ ಕರ್ನಾಕಟದಲ್ಲಿ ಈ ತನಕ ಆಡಳಿತ ನಡೆಸಿದ ಯಾವ ಮುಖ್ಯಮಂತ್ರಿಯೂ ಅರಸುರವರಷ್ಟು ಸಾಧನೆಗಳನ್ನು ಮಾಡಿಲ್ಲ ಎಂದರೆ ಅದು ಅತಿಶೋಕ್ತಿ ಅಲ್ಲ. ಮೂಲತಃ ಮೈಸೂರು ಜಿಲ್ಲೆಯ ಹುಣಸೂರಿನ ಅರಸು ಮನೆತನಕ್ಕೆ ಸೇರಿದ ಇವರು ಕೈಗೊಂಡ ಕಾರ್ಯಗಳು ಈ ರಾಜ್ಯದಲ್ಲಿ ಅನೇಕ ಸಾಮಾಜಿಕ ಬದಲಾವಣೆಗಳಿಗೆ ನಾಂದಿಯಾಗಿದೆ. ಬಸವಣ್ಣನವರು 12 ಶತಮಾನದಲ್ಲಿ ಕೈಗೊಂಡ ಸುಧಾರಣೆಗಳ ಮುಂದುವರಿದ ಭಾಗವಾಗಿ ಅರಸುರವರ ಕಾರ್ಯಗಳು ಗೋಚರಿಸುತ್ತವೆ. ಬಿ.ಎಸ್ಸಿ ಪದವೀಧರರಾಗಿದ್ದ ಅರಸುರವರು ಸ್ವಾತಂತ್ರ ಪೂರ್ವದಲ್ಲೇ ಅಂದರೆ 1941ರಲ್ಲಿ ಮೈಸೂರು ಪ್ರಾಂತದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಆಯ್ಕೆಯಾದರು. ಆಗ ಅವರಿಗೆ 26 ವರ್ಷ ವಯಸ್ಸು ನಂತರ ಸ್ವಾತಂತ್ರ ಬಂದ ಮೇಲೆ ನಡೆದ ಹಳೆಯ ಮೈಸೂರು ಸರಕಾರದ ಶಾನಸ ಸಭೆಗೆ 1952ರಲ್ಲಿ ಆಯ್ಕೆಯಾದ ಇವರು ತಮ್ಮ ಕೊನೆಯ ದಿನಗಳವರೆಗೂ ಸತತವಾಗಿ ವಿಧಾನಸಭೆಗೆ ಆರಿಸಿ ಬಂದರು. 1962ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಪ್ರತಿಸ್ಪರ್ಧಿಯೇ ಇಲ್ಲದೆ ಅವಿರೋಧವಾಗಿ ಆರಿಸಿ ಬಂದು ಇತಿಹಾಸ ನಿರ್ಮಿಸಿದರು. ಈಗ ಇಂತಹ ಸಂದರ್ಭವನ್ನಾಗಲ್ಲೀ ವ್ಯಕ್ತಿತ್ವವನ್ನಾಗಲೀ ರಾಜಕಾರಣದಲ್ಲಿ ಕಾಣಲು ಸಾಧ್ಯವೇ?
ಅರಸುರವರ ಆಡಳಿತದ ಬಗ್ಗೆ ಹೇಳುವುದಾದರೆ ಅವರಿಗೆ ಕರ್ನಾಟಕ ಬಗ್ಗೆ ಒಂದು ಕನಸಿತ್ತು ಅದು ಈ ರಾಜ್ಯವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ಕನಸು. ಹಾಗಾಗಿಯೇ ಅವರು ಭೂಸುಧಾರಣೆಯಂತಹ ಕ್ರಾಂತಿಕಾರಿ ಮಸೂದೆಯನ್ನು ಜಾರಿಗೆ ತರಲು ಸಾಧ್ಯವಾಯಿತು. ಅನಿಷ್ಟ ಮಲಹೊರುವ ಪದ್ಧತಿಯನ್ನು ನಿಷೇಧಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಪಡೆಯಲು ಸಾಧ್ಯವಾಯಿತು. ಹಿಂದುಳಿದ ವರ್ಗದವರಿಗೆ ಮೀಸಲಾತಿ ಜಾರಿಗೆ ತಂದ ಮೊದಲ ಸರಕಾರ ಕರ್ನಾಟಕದ ಅರಸು ಸರಕಾರ. ವಾಸ್ತವವಾಗಿ 1952ರಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಸಲುವಾಗಿ ಸಂವಿಧಾನ ತಿದ್ದುಪಡಿ ಮಾಡಲಾಯಿತು. ಆದರೆ ಅದನ್ನು ಜಾರಿಗೆ ತರುವ ಎದೆಗಾರಿಕೆ ಯಾವ ಸರಕಾರಕ್ಕೂ ಮತ್ತು ಯಾವ ಮುಖ್ಯಮಂತ್ರಿಗೂ ಇರಲಿಲ್ಲ. ತಾವು ಅಧಿಕಾರಕ್ಕೇರಿ ಬಂದ 1972ರಲ್ಲೇ ಹಾವನೂರು ಆಯೋಗ ರಚಿಸಿ ಅವರ ಶಿಫಾರಸ್ಸುಗಳನ್ನು ಯಥಾವತ್ತಾಗಿ 1977ರಲ್ಲಿ ಜಾರಿಗೆ ತಂದ ಕೀರ್ತಿ ಅರಸುರವರಿಗೆ ಸಲ್ಲಬೇಕು. ಈ ನಾಡಿನ ಹಿಂದುಳಿದ ವರ್ಗಕ್ಕೆ ಸೇರಿದವರೆಲ್ಲರೂ ಅರಸುರವರಿಗೆ ಚಿರಋಣಿಳಾಗಿರಬೇಕು, ಕಾರಣ ಹಿಂದುಳಿದ ವರ್ಗದ ಅಭಿವೃದ್ಧಿಗೆ ಇಷ್ಟೆಲ್ಲಾ ಶ್ರಮಿಸಿದ ಅರಸುರವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಲಿಲ್ಲ. ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ ಅವರೇನು ದಲಿತ ವರ್ಗಕ್ಕೆ ಸೇರಿದವರಾಗಿರಲಿಲ್ಲ. ಉಳುವವನೇ ಹೊಲದೊಡೆಯ ಎಂಬ ಕಾನೂನು ತಂದ ಇವರು ತಾವೆಂದೂ ರೈತನ ಮಗ, ಮಣ್ಣಿನ ಮಗ ಎಂದು ಹೇಳಲಿಲ್ಲ. ಗೇಣಿದಾರರಿಗೆ ಬದುಕು ನೀಡಿದ ಇವರು ಸಮಾಜವಾದಿಗಳಾಗಿರಲಿಲ್ಲ. ಇಷ್ಟೆಲ್ಲಾ ‘ಅಲ್ಲ’ಗಳ ನಡುವೆ ಇವರು ಇಷ್ಟೊಂದು ಸುಧಾರಣೆಗಳನ್ನು ತರಲು ಕಾರಣ ಅವರು ನಿಜವಾದ ‘ಅರಸು’ ಆಗಿದ್ದರು. ಈ ನಾಡಿನ ಬಡವರ, ಶೋಷಿತರ, ದಲಿತರ ತಬ್ಬಲಿ ಜಾತಿಗಳ ತಳಸಮುದಾಯದವರ ಕಷ್ಟವನ್ನು ಅರಿತವರಾಗಿದ್ದವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನ ಹೊಣೆಗಾರಿಕೆಯನ್ನು ಅರಿತಿದ್ದ ನಿಜನಾಯಕರಾಗಿದ್ದರು.
ಇವರ ಭೂ ಸುಧಾರಣಾ ಕಾಯ್ದೆಯ ಲಾಭ ಪಡೆದವರು ಸರಿ ಸುಮಾರು 5 ಲಕ್ಷ ರೈತ ಕುಟುಂಬಗಳು 21ಲಕ್ಷ ಎಕರೆ ಭೂಮಿ ಪಡೆದು ಭೂ ಮಾಲಕರಾದರು. ಈ ಕಾರಣದಿಂದ ಅರಸುರವರು ಜಮೀನುದಾರರ ಕೋಪಕ್ಕೆ ಗುರಿಯಾಗಿ ಅಧಿಕಾರ ಕಳೆದು ಕೊಂಡರು.
ವಿಚಿತ್ರವೆಂದರೆ ಲಾಭ ಪಡೆದ ರೈತರು ಯಾರೂ ಅಂದು ಅರಸುರವರ ಬೆಂಬಲಕ್ಕೆ ನಿಲ್ಲಲಿಲ್ಲ. ಇದೊಂದು ಸಹಜ ದುರಂತ.
ಇದಲ್ಲದೆ ಹದಿನಾಲ್ಕು ಸಾವಿರದ ಏಳುನೂರು ಭೂರಹಿತ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾರ್ಮಿಕರಿಗೆ ಒಂದೂವರೆ ಲಕ್ಷ ಎಕರೆ ಭೂಮಿಯನ್ನು ವಿತರಣೆ ಮಾಡಲಾಯಿತು 3,700 ಕೃಷಿ ಕಾರ್ಮಿಕರು ತಾವು ವಾಸಿಸುತ್ತಿದ್ದ ಮನೆಯ ಮಾಲಕರಾದರು. ತುರ್ತು ಪರಿಸ್ಥಿತಿಯ ಸಂದರ್ಭವನ್ನು ರಾಜ್ಯದ ಹಿತಕ್ಕೆ ತಕ್ಕಂತೆ ಬಳಸಿಕೊಂಡ ಅರಸುರವರು ಮಾರ್ವಾಡಿ ಅಂಗಡಿಗಳಲ್ಲಿ ಗಿರವಿ ಇಟ್ಟಿದ ವಸ್ತುಗಳನ್ನು ಅದರ ಒಡೆಯರಿಗೆ ಮುಫತ್ತಾಗಿ ಹಿಂದಿರುಗಿಸುವಂತಹ ಅನೇಕ ಜನೋಪಕಾರಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನಾಡಿನ ಮನೆಮಾತಾಗಿದ್ದರು.
ಇಷ್ಟೆಲ್ಲಾ ಅರಸುರವರಿಗೆ ಸಾಧ್ಯವಾಗಿದ್ದು ಅವರು ಕನಸುಗಾರರಾಗಿದ್ದ ಕಾರಣಕ್ಕೆ. ಈ ರಾಜ್ಯವನ್ನು ಔನ್ನತೀಕರಿಸುವ ದಿಸೆಯಲ್ಲಿ ಅವರು ಅನುಸರಿಸಿದ ಮಾರ್ಗದಿಂದಾಗಿ ಆರ್ಥಿಕವಾಗಿ 11ನೆ ಸ್ಥಾನದಲ್ಲಿದ್ದ ಕರ್ನಾಟಕವು 5ನೆ ಸ್ಥಾನಕ್ಕೇರಿತು.
ದೀನ ದಲಿತರ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಇದ್ದ ಅರಸುರವರು ಅವರ ಬದುಕಿಗೆ ಒಂದು ಹೊಸ ಆಯಾಮವನ್ನು ನೋಡುವ ಪ್ರಯತ್ನ ಮಾಡಿದರು. ಅವರಿಗೆ ಸಾಮಾಜಿಕ ಸಮಾನತೆಯ ಸವಿ ಉಣಬಡಿಸುವ ಕಾರ್ಯಕ್ರಮಗಳನ್ನು ನೀಡಿದರು. ಅರಸುರವರ ಅಧಿಕಾರ ಅವಧಿಯ ನಂತರ ಬಂದ ಸರಕಾರಗಳು ಇವರ ಎಲ್ಲಾ ಸುಧಾರಣೆಗಳನ್ನು, ಮಸೂದೆಗಳನ್ನೂ ದುರ್ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿದವು. ಗರಿಷ್ಠ 54 ಎಕರೆಯನ್ನು ಹೊಂದುವ ಭೂಮಿಯನ್ನು ಬರುಬರುತ್ತಾ ಸಡಿಲಗೊಳಿಸಿ ಬಂಡವಾಳಶಾಹಿಗಳಿಗೆ ಭೂ ಖರೀದಿದಾರರಿಗೆ ಅನುಕೂಲ ಮಾಡಿಕೊಡಲಾಯಿತು.
ಕರ್ನಾಟಕ ರಾಜ್ಯದ ಮಟ್ಟಿಗೆ ಸಮಾಜವಾದಿ ಚಳವಳಿ ಹುಟ್ಟಿದ್ದು ಗೇಣಿದಾರರ ಪರವಾದ ಹೋರಾಟದ ಸಲುವಾಗಿ. ಆದರೆ ಅರಸುರವರ ಭೂಸುಧಾರಣೆ ಕಾಯ್ದೆಯು ಗೇಣಿದಾರರ ಪರವಾಗಿದ್ದರಿಂದ ಸಮಾಜವಾದಿ ಹೋರಾಟಗಾರರ ಕೆಲಸ ಹಗುರವಾದಂತಾಯಿತು. ಹಾಗಾಗಿ ಈ ಕಾಲವನ್ನು ಕರ್ನಾಟಕಕ್ಕೆ ಒಬ್ಬ ಸತ್ವಶಾಲಿ ಹಾಗೂ ಧೀಮಂತ ನಾಯಕ ದೊರೆತ ಕಾಲ ಎನ್ನಬಹುದು. ಅರಸುರವರು ‘ದೀನದಲಿತರ ಉನ್ನತಿಗೆ ಅವಕಾಶದ ಬಾಗಿಲು ತೆಗೆಯಬೇಕು, ಅದಕ್ಕೆ ಅವರಿಗೆ ರಾಜಕೀಯ ಪ್ರಭುತ್ವಬೇಕು’ ಎಂದು ಕರೆ ನೀಡಿದರು. ಯಾರು ಇತಿಹಾಸವನ್ನು ಚೆನ್ನಾಗಿ ತಿಳಿದಿರುತ್ತಾರೋ ಅವರಿಂದ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎನ್ನುವುದನ್ನು ಮನಗಂಡಿದ್ದ ಅರಸುರವರು ತಾವಿದ್ದ ಕಾಲಕ್ಕಿಂತ ಹತ್ತು ವರ್ಷಗಳ ಮುಂದಕ್ಕೆ ಹೊಂದುವಂತಹ ಆಲೋಚನೆಯನ್ನು ಉಳ್ಳವ ರಾಗಿದ್ದರು ಎಂದು ಖ್ಯಾತ ಅಂಕಣಕಾರರಾದ ದಿನೇಶ್ ಅಮೀನ್ ಮಟ್ಟುರವರು ಹೇಳಿದ್ದು ಸರಿಯೆನಿಸುತ್ತಿದೆ.
ಇಷ್ಟೆಲ್ಲಾ ಗುಣಾತ್ಮಕ ವಿಚಾರಗಳನ್ನು ಹೊಂದಿದ್ದ ಅರಸುಕಾಲ ಅಪವಾದಗಳಿಂದ ಹೊರತಾಗೇನೂ ಇರಲಿಲ್ಲ. ಭ್ರಷ್ಟಾಚಾರ ಆರಂಭವಾಗಿದ್ದೇ ಅವರ ಕಾಲದಲ್ಲಿ ಅನ್ನುವವರಿದ್ದಾರೆ. ಇರಬಹುದು, ಭ್ರಷ್ಟಾಚಾರಿಗಳ ನಡುವೆಯಿದ್ದುಕೊಂಡೇ ಅರಸು ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಕೆಟ್ಟದ್ದು, ಭ್ರಷ್ಟಾಚಾರ ಯಾವತ್ತೂ ಇರುತ್ತದೆ. ಆದರೆ ನಾಯಕನಿಗೆ ಒಳ್ಳೆಯದನ್ನು ಮಾಡುವ ಮನಸ್ಸಿರಬೇಕು, ಕರ್ತವ್ಯ ಪ್ರಜ್ಞೆ, ಬದ್ಧತೆ ಇರಬೇಕು. ಇವೆಲ್ಲಾ ಇದ್ದ ಕಾರಣದಿಂದ ಅರಸುರವರು ಬಹಳ ಎತ್ತರವಾದ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂದಿನ ಪೀಳಿಗೆಯ ಜನನಾಯಕರು ಕನಿಷ್ಠ ಅರಸುರವರ ವ್ಯಕ್ತಿತ್ವ, ಕಾರ್ಯತತ್ಪರತೆಯನ್ನು ಆದರ್ಶವಾಗಿಸಿಕೊಳ್ಳಬೇಕು. ಇದೇ ನಾವು ಅರಸುರವರಿಗೆ ತೋರಬಹುದಾದ ಗೌರವ.







