ಅಂಗವೈಕಲ್ಯ ನನಗೆ ಅಡ್ಡಿಯಾಗಲಿಲ್ಲ: ಹಸನ್ ಕುಂಞಿ
ಹಜ್ಯಾತ್ರೆ ಅನುಭವ

ನನ್ನದು ಕೃಷಿ ಕುಟುಂಬ. ಸಣ್ಣ ಪ್ರಾಯದಲ್ಲೇ ಕೃಷಿಯ ಜೊತೆ ನಂಟು ಬೆಳೆಸಿಕೊಂಡಿದ್ದೆ. ನನಗಾಗ 28 ವರ್ಷ ವಯಸ್ಸು. ತೆಂಗಿನಕಾಯಿ ಕೀಳಲೆಂದು ಮರ ಹತ್ತಿದ್ದೆ. ಆಕಸ್ಮಿಕವಾಗಿ ಮರದಿಂದ ಬಿದ್ದು ಒಂದು ಕಾಲಿನ ಬಲ ಕಳೆದುಕೊಂಡೆ. ನನ್ನ ಬದುಕು ಇಲ್ಲಿಗೆ ಮುಗಿಯಿತು ಅಂತ ಭಾವಿಸಿದ್ದೆ. ಆದರೆ, ಅಲ್ಲಾಹನ ಅನುಗ್ರಹದಿಂದ 2 ಬಾರಿ ಊರುಗೋಲಿನ ಸಹಾಯದಿಂದ ಹಜ್ ನಿರ್ವಹಿಸಿದ್ದು ಗೊತ್ತೇ ಆಗಲಿಲ್ಲ. ಇದು ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ನಡುಪದವು ಸಮೀಪದ ಮುಳ್ಳುಗುಡ್ಡೆಯ ಹಸನ್ ಕುಂಞಿ ಹಾಜಿಯ ಮಾತು.
62ರ ಹರೆಯದ ಹಸನ್ ಕುಂಞಿ ಹಾಜಿ 2009 ಮತ್ತು 2011ರಲ್ಲಿ ಹಜ್ ಯಾತ್ರೆ ಪೂರೈಸಿದ್ದಾರೆ. ಅದೂ ಊರುಗೋಲು ಬಳಸಿ. 2009ರಲ್ಲಿ ಹಸನ್ ಕುಂಞಿಯೊಂದಿಗೆ ಅವರ ಅಕ್ಕ ಮತ್ತು 2011ರಲ್ಲಿ ಅವರ ಪತ್ನಿ ಸಾಥ್ ನೀಡಿದ್ದರು. ತನ್ನ 28ರ ಹರೆಯದಲ್ಲಿ ಮರದಿಂದ ಬಿದ್ದು ಕಾಲಿನಲ್ಲಿ ಬಲ ಕಳೆದುಕೊಂಡ ಹಸನ್ ಕುಂಞಿ ಮದುವೆಯ ಸಂದರ್ಭವೂ ಊರುಗೋಲು ಬಳಸಿದ್ದರು. 6 ಮಕ್ಕಳ ತಂದೆಯಾಗಿರುವ ಹಸನ್ ಕುಂಞಿ ಹಾಜಿಗೆ ಈಗಲೂ ಊರುಗೋಲು ಆಸರೆಯಾಗಿದೆ. ಊರುಗೋಲು ಇಲ್ಲದೆ ಒಂದು ಕ್ಷಣವೂ ಅವರು ಅತ್ತಿಂದಿತ್ತ ನಡೆಯಲಾರರು. ಹೀಗಿರುವಾಗ 2009ರಲ್ಲಿ ಹಜ್ ಯಾತ್ರೆ ಮಾಡಲು ಸಂಕಲ್ಪಿಸಿದರು. ಆದರೆ ಹೆದರಿಕೆ ಆವರಿಸಿತ್ತು. ಕಾಲಲ್ಲಿ ಬಲವಿಲ್ಲದ ತಾನು ಹಜ್ ಯಾತ್ರೆ ಪೂರೈಸಬಲ್ಲನೇ ಎಂಬ ಆತಂಕ ಇತ್ತು. ಅಂತೂ ತನ್ನ ಕಾಲಲ್ಲಿ ಬಲ ಇಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಹಜ್ ಕಮಿಟಿಯ ಮೂಲಕ ಯಾತ್ರೆ ಹೊರಟರು. 40 ದಿನಗಳ ಕಾಲವೂ ಅವರಿಗೆ ಅಲ್ಲಿ ಊರುಗೋಲು ಆಸರೆಯಾಗಿತ್ತು. ಬಳಿಕ 2011ರಲ್ಲೂ ಹಜ್ ಯಾತ್ರೆ ಪೂರೈಸಿದ್ದರು.
‘ನಾನು ಎರಡು ಬಾರಿ ಹಜ್ ಯಾತ್ರೆ ಹೇಗೆ ಪೂರೈಸಿದ್ದೇನೆ ಎಂದು ಈಗ ಯೋಚಿಸುವಾಗ ಆಶ್ಚರ್ಯವಾಗುತ್ತದೆ. ಯಾಕೆಂದರೆ ನನ್ನ ಕಾಲಿನ ಶಕ್ತಿ ಕುಂದಿತ್ತು. ಒಂದು ಹೆಜ್ಜೆ ಮುಂದಿಡಲೂ ಅಸಾಧ್ಯವಾಗಿತ್ತು. ಆದರೆ, ದೃಢ ಸಂಕಲ್ಪದಿಂದ ಯಾತ್ರೆ ಹೊರಟೆ. ಎಲ್ಲರ ದುಆ-ಆಶೀರ್ವಾದ, ಅಲ್ಲಾಹನ ಅನುಗ್ರಹದಿಂದ ಹಜ್ ಕರ್ಮ ಪೂರೈಸಿದ ತೃಪ್ತಿ ನನಗಿದೆ. ಆರ್ಥಿಕವಾಗಿ ವೃದ್ಧಿಗೊಂಡರೆ ಇದೇ ಊರುಗೋಲು ಬಳಸಿ ಇನ್ನ್ತೊಮ್ಮೆ ಹಜ್ ಯಾತ್ರೆ ಮಾಡುವ ಇಚ್ಛೆ ಇದೆ’ ಎಂದು ಹಸನ್‌ಕುಂಞಿ ಹಾಜಿ ಹೇಳುತ್ತಾರೆ.







