ಊರುಗೋಲಿನಲ್ಲೇ ಹಜ್ ನಿರ್ವಹಿಸಿದೆ: ಮುಹಮ್ಮದ್ ಬಾವಾ
ಹಜ್ಯಾತ್ರೆ ಅನುಭವ

ವಾಹನ ಅಪಘಾತದಿಂದಾಗಿ ಒಂದು ಕಾಲನ್ನು ಕಳೆದುಕೊಂಡಿದ್ದರೂ ನನ್ನ ಒಂಟಿ ಕಾಲು ನನಗೆ ಹಜ್ ನಿರ್ವಹಣೆಗೆ ಅಡ್ಡಿಯಾಗಲಿಲ್ಲ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ನಿರ್ವಹಿಸಬೇಕು ಎಂದು ಹಲವು ವರ್ಷಗಳ ಬಯಕೆ ನನ್ನದಾಗಿತ್ತು. ಒಂಟಿ ಕಾಲಿನ ತೊಡಕು ಎದುರಿಸಬೇಕಾಗಬಹುದು ಎಂಬ ಆತಂಕ ನನ್ನನ್ನು ಆಂತರಿಕವಾಗಿ ಕಾಡುತ್ತಿದ್ದರೂ ನನ್ನ ಛಲ ಮತ್ತು ಧೈರ್ಯ ಹಜ್ ನಿರ್ವಹಣೆಗೆ ಪ್ರೇರಣೆಯಾಗಿತ್ತು ಎಂದು ಉಪ್ಪಿನಂಗಡಿ ಕಲ್ಲೇರಿ ಸಮೀಪದ ನಿವಾಸಿ ಮುಹಮ್ಮದ್ ಬಾವ(64) ಎಂಬವರು ತಾನು ಹಜ್ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡರು.
‘‘ಮಂಗಳೂರಿನ ಎನ್‌ಎಂಪಿಟಿಯಲ್ಲಿ ಉದ್ಯೋಗದಲ್ಲಿದ್ದೆ. 1992ರಲ್ಲಿ ರವಿವಾರದಂದು ಬೆಳ್ತಂಗಡಿಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದೆ. ಹಿಂದಿರುಗುವಾಗ ಲಾಯಿಲಾ ಎಂಬಲ್ಲಿ ನನ್ನ ದ್ವಿಚಕ್ರ ವಾಹನ ಬಸ್‌ನಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದೆ. ಬಲ ಕಾಲಿನ ಮೇಲೆ ಬಸ್‌ನ ಚಕ್ರ ಹರಿದಿದ್ದರಿಂದ ತೊಡೆಯ ಮೇಲಿನ ಭಾಗವದವರೆಗೆ ನನ್ನ ಕಾಲನ್ನು ಕತ್ತರಿಸಲಾಗಿತ್ತು. ಈ ಘಟನೆಯ ಬಳಿಕ ನಾನು ನನ್ನ ಉದ್ಯೋಗವನ್ನು ತ್ಯಜಿಸಬೇಕಾಯಿತು’’
ಊರುಗೋಲು ಆಶ್ರಯಿಸಿದ್ದೆ
ರಸ್ತೆ ಅಪಘಾತಕ್ಕೀಡುವ ಮುಂಚೆಯೇ ಹಜ್ ನಿರ್ವಹಿಸಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದೆ. ಈ ಘಟನೆಯ ಬಳಿಕ ಊರುಗೋಲುಗಳ ಸಹಾಯದಿಂದ ನಡೆದಾಡುತ್ತಿರುವ ನನ್ನ ಪಾಲಿಗೆ ಇನ್ನು ಹಜ್ ಯಾತ್ರೆಯು ಕನಸಿನ ಮಾತು ಅಂದುಕೊಂಡಿದ್ದೆ. 13 ವರ್ಷಗಳ ಬಳಿಕ ಮತ್ತೆ ಹಜ್ ನಿರ್ವಹಿಸಬೇಕೆಂಬ ಹಂಬಲ ಮನಸ್ಸಿನಲ್ಲಿ ಚಿಗುರಿಕೊಂಡಿತು. ಅದರಂತೆ ನಾನು ಈ ವಿಷಯವನ್ನು ನನ್ನ ಮಕ್ಕಳ ಮುಂದಿಟ್ಟಾಗ ಅವರು ಅದಕ್ಕೆ ಸಮ್ಮತಿ ನೀಡಿದರು. 2006ರಲ್ಲಿ ಕೊನೆಗೂ ಹಜ್ ನಿರ್ವಹಿಸುವ ಭಾಗ್ಯ ಒದಗಿ ಬಂತು. ಅದೇ ವರ್ಷದಲ್ಲಿ ನಾನು ಪತ್ನಿ ಸಮೇತ ಹಜ್‌ಗೆ ತೆರಳಿದ್ದೆ.
ಒಂಟಿ ಕಾಲು ತೊಡಕಾಗಿಲ್ಲ
2006ರಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ತೆರಳಿದ್ದೆ. ಅಲ್ಲಿಂದ ವಿಮಾನದ ಮೂಲಕ ಜಿದ್ದಾಕ್ಕೆ ತೆರಳಿದೆ. ನನ್ನ ಲಗೇಜ್ ಮತ್ತಿತರ ಕೆಲಸಗಳಿಗೆ ಸಂಬಂಧಿಸಿ ಸ್ವಯಂ ಸೇವಕರು ಇದ್ದುದರಿಂದ ಯಾವುದೇ ತೊಡಕಾಗಲಿಲ್ಲ. ನಾನು ಜಿದ್ದಾವರೆಗೆ ತಲುಪಿದ ಬಗ್ಗೆ ನಾನೇ ಹೆಮ್ಮೆಪಡುತ್ತಿದ್ದೆ. ಅಲ್ಲಿಂದ ಬಸ್ಸಿನ ಮೂಲಕ ನಮಗೆ ಮೀಸಲಿಸಲಾಗಿದ್ದ ಕೊಠಡಿಗೆ ಕರೆದುಕೊಂಡು ಹೋಗಲಾಯಿತು. ಯಾವುದೇ ಆತಂಕ, ಅಂಜಿಕೆ ಇಲ್ಲದೆ ಎಲ್ಲವೂ ಉತ್ತಮ ರೀತಿಯಲ್ಲಿ ಆಯಿತು ಎಂದು ಮುಹಮ್ಮದ್ ಬಾವ ಹೇಳುತ್ತಾರೆ.







