1500 ರೂಪಾಯಿಯಲ್ಲಿ ಹಜ್ ಯಾತ್ರೆಗೈದ ಗಫ್ಫಾರ್
ಹಜ್ಯಾತ್ರೆ ಅನುಭವ

ಹುಣಸೂರು ತಾಲೂಕಿನಲ್ಲಿ ಪ್ರಥಮವಾಗಿ 1959ರಲ್ಲಿ ಹಜ್‌ಯಾತ್ರೆಗೆ ತೆರಳಿದ ಏಕೈಕ ಪ್ರಥಮ ವ್ಯಕ್ತಿ ಅಬ್ದುಲ್ ಗಫ್ಫಾರ್. ನಗರದ ಲಾಲ್ ಬಂದ್ ಮೊಹಲ್ಲಾದ ನಿವಾಸಿ ಅಬ್ದುಲ್ ಗಫ್ಫಾರ್ ರವರು ಹಜ್ ಯಾತ್ರೆಗೆ ತೆರಳಿದ್ದು ಹಡಗಿನಲ್ಲಿ. ಮುಂಬೈಯಿಂದ ಹಡಗಿನಲ್ಲಿ ಜಿದ್ದಾಗೆ ಪ್ರಯಾಣಿಸಿದರು. ಜಿದ್ದಾದಿಂದ ಮಕ್ಕಾಗೆ ವಿಮಾನದಲ್ಲಿ ಪಯಣಿಸಿದರು. ಯಾತ್ರಾ ಸ್ಥಳಕ್ಕೆ ಸಾಗಲು ಅವರು ಸುಮಾರು 2,060 ಕಿಲೋಮೀಟರ್ ಪ್ರಯಾಣಿಸಿದ್ದರು. ಇವರು 1959ನೆ ಸಾಲಿನಲ್ಲಿ ಯಾತ್ರೆಗಾಗಿ ಕೂಡಿಟ್ಟ ಸುಮಾರು 1500 ರೂ. ಯಲ್ಲಿ 1 ತಿಂಗಳ ಕಾಲ ಮಕ್ಕಾ ಮದೀನ ಸ್ಥಳದಲ್ಲಿ ಒಂದು ಕೋಣೆಯಲ್ಲಿ 100ರೂ. ಬಾಡಿಗೆ ಕೊಟ್ಟು ವಾಸವಿದ್ದರು. ಪ್ರವಾಸದ ಖರ್ಚು-ವೆಚ್ಚಗಳನ್ನೆಲ್ಲಾ ಭರಿಸಿ ಸ್ವ-ಗ್ರಾಮಕ್ಕೆ ಹಿಂದಿರುಗಿದರು. ಅಂದಿನ ಕಾಲದಲ್ಲಿ ಇವರ ಪ್ರವಾಸದ ದಿನಗಳು 150 ಅಂದರೆ 5 ತಿಂಗಳು.ಸಮಯಕ್ಕೆ ಸರಿಯಾಗಿ ಮನೆಗೆ ಹಿಂದಿರುಗಲಿಲ್ಲ ಎಂದು ಕುಟುಂಬದ ಸದಸ್ಯರು ಅಂದು ಭಯ-ಭೀತರಾಗಿದ್ದರು. ಆದರೆ ಪ್ರವಾಸದಿಂದ ಅವರು ಮರಳಿದಾಗ ಇಡೀ ಊರೇ ದಿಗ್ಮೂಢವಾಗಿತ್ತು.
ಲಾಲ್ ಬಂದ್ ಮೊಹಲ್ಲಾದ ನಿವಾಸಿ ಅಬ್ದುಲ್ ರಹೀಮ್ ರವರ ದೊಡ್ಡ ಮಗನಾದ ಅಬ್ದುಲ್ ಗಫ್ಫಾರ್ (90) ಅವರದು ದನಗಳಿಗೆ ಲಾಳ ಕಟ್ಟುವ (ಹಲ್ಲೆ) ಕೆಲಸ. ವೃತ್ತಿಯಲ್ಲಿ ಅಂದಿನಿಂದ ಇಂದಿನ ವರೆಗೂ ಹಿರಿಯವರಾಗಿದ್ದು ಅಂದಿನ ದಿನಗಳಲ್ಲಿ 1 ಜೊತೆ ದನಕ್ಕೆ ಲಾಳಕಟ್ಟಿದರೆ ಪ್ಯಸೆ ಲೆಕ್ಕದಲ್ಲಿ ಕೊಡುತ್ತಿದ್ದರು. ಆ ಕಾಲದಲ್ಲಿ ಬಸ್ ಸೌಲಭ್ಯ ಇದ್ದಿರಲಿಲ್ಲ. ಕಾಲ್ನಡಿಗೆಯಲ್ಲಿಯೇ ಮೈಲಿಗಟ್ಟಲೆ ಹಳ್ಳಿಗಳನ್ನು ಸುತ್ತಿ ದೊಡ್ಡ ಸಂಸಾರದ ಬಂಡಿಯನ್ನು ಎಳೆಯ ಬೇಕಿತ್ತು. ಬದುಕಿನಲ್ಲಿ ತೀರಾ ಸಂಕಟಗಳಿದ್ದರೂ ಇವರು ತಮ್ಮ ಹಜ್ ಯಾತ್ರೆಯನ್ನು ನೆರವೇರಿಸಿದ್ದು ಆ ಕಾಲದಲ್ಲಿ ಒಂದು ಸಾಹಸಗಾಥೆಯೇ ಆಗಿತ್ತು.





