ಅಂದಿಗೂ ಇಂದಿಗೂ ಅಜಗಜಾಂತರವಿದೆ: ಮುಕ್ರಿ ಹಾಜಿ
ಹಜ್ಯಾತ್ರೆ ಅನುಭವ

ಹೆಜಮಾಡಿಯ ಕನ್ನಂಗಾರ್ ಜುಮಾ ಮಸೀದಿಯ ಬಳಿಯ ನಿವಾಸಿ 96 ವರ್ಷದ ಹಾಜಿ ಕೆ.ಮೊಯ್ದು (ಮುಕ್ರಿ ಹಾಜಿ) ಎಂಬವರು ಸುಮಾರು 11ಬಾರಿ ಹಜ್ ನಿರ್ವಹಿಸಿದ್ದಾರೆ. 1953ರಲ್ಲಿ ಮೊದಲ ಬಾರಿಗೆ ಹಜ್‌ಗೆ ತೆರಳಿದರು. ಕನ್ನಂಗಾರ್ ಜುಮಾ ಮಸೀದಿಯಲ್ಲಿ ಸುಮಾರು 45ವರ್ಷಗಳ ಕಾಲ ಮದರಸದ ಗುರುಗಳಾಗಿ ಕೆಲಸ ನಿರ್ವಹಿಸಿದ ಮುಕ್ರಿ ಹಾಜಿಯವರ ಅಂದಿನ ಮತ್ತು ಇಂದಿನ ಅನುಭವದ ಮಾತು ಹೀಗಿದೆ. 1953ರಲ್ಲಿ ಪಡುಬಿದ್ರಿಯಿಂದ ಮಂಗಳೂರು ಮೂಲಕ ಚಿಕ್ಕಮಗಳೂರಿನ ಕಡೂರಿಗೆ ಬಸ್ಸಿನಲ್ಲಿ ಸಂಚರಿಸಿ ಅಲ್ಲಿಂದ ಮುಂಬೈಗೆ ತಲುಪುತಿದ್ದೆವು. ಆ ಬಳಿಕ ಅಲ್ಲಿಂದ ಹಡಗಿನಲ್ಲಿ ನೇರ ಜಿದ್ದಾಕ್ಕೆ ತೆರಳುತ್ತಿದ್ದೆವು. ಕೆಲ ವರ್ಷಗಳ ಬಳಿಕ ಮಲ್ಪೆ ಮೂಲಕ ಮುಂಬೈ ತಲುಪಿ ಅಲ್ಲಿಂದ ಜಿದ್ದಾ ಅಥವಾ ಕೆಲವೊಮ್ಮೆ ಕೇರಳದ ಮೂಲಕವೂ ಜಿದ್ದಾಕ್ಕೆ ತೆರಳುತಿದ್ದೆವು. 60ವರ್ಷಗಳ ಹಿಂದಿನ ಹಜ್‌ಗೂ ಈಗಿನ ಹಜ್‌ಗೂ ಅಜಗಜಾಂತರವಿದೆ. ಇಂದಿನ ಹಾಗೆ ಅಂದು ವ್ಯವಸ್ಥೆ ಇರಲಿಲ್ಲ. ವಾಸ್ತವ್ಯ ಪ್ರಯಾಣ ಸೇರಿ ಅಂದು ಒಟ್ಟು 100 ದಿನಗಳು ಆಗುತ್ತಿದ್ದವು. ರಮಝಾನ್ ಮುಗಿದ ಬಳಿಕ ಇಲ್ಲಿಂದ ಮುಂಬೈಗೆ ಹೊರಟು ಅಲ್ಲಿಂದ ಜಿದ್ದಾ ಮೂಲಕ ಮಕ್ಕಾ ತಲುಪುತಿದ್ದೆವು. ಅದರಲ್ಲಿ 15 ದಿನಗಳ ಕಾಲ ಹಡಗಿನಲ್ಲಿ ಸಂಚರಿಸಲು ಸಮಯಬೇಕು. ಆ ಮೇಲೆ ಅಲ್ಲಿ ವಾಸ್ತವ್ಯ. ಹೀಗೆ ಒಟ್ಟು 100 ದಿನಗಳು ಆಗುತಿದ್ದವು. ಆದರೆ ಇಂದು 45ದಿನಗಳು ಸಾಕು. ಒಂದು ದಿನ ತೆರಳಲು, ಒಂದು ದಿನ ಹಿಂದಿರುವುದಕ್ಕೆ ಸಾಕು. ವಾಸ್ತವ್ಯ ಸೇರಿ 45 ದಿನಗಳು ಆಗುತ್ತವೆ.


60ವರ್ಷಗಳ ಹಿಂದೆ ಮಕ್ಕಾದಲ್ಲಿ ವಸತಿ, ಶೌಚಾಲಯದ ಸರಿಯಾದ ವ್ಯವಸ್ಥೆ ಇರಲಿಲ್ಲ. ಮರುಭೂಮಿ, ಬೆಟ್ಟ ಗುಡ್ಡಗಳ ಸಾಲುಗಳೇ ಕಾಣುತ್ತಿದ್ದವು. ಆದರೆ ಇಂದು ಹಾಗಿಲ್ಲ. ಎಲ್ಲಿ ನೋಡಿದರೂ ಬೃಹದಾಕಾರದ ಕಟ್ಟಡಗಳೇ ಕಾಣಸಿಗುತ್ತವೆ. ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಬಟ್ಟೆಯ ಟೆಂಟ್‌ನಲ್ಲಿ ಮಿನಾದಲ್ಲಿ ವಾಸ್ತವ್ಯ ಹೂಡುತಿದ್ದೆವು. ಮಿನಾ ದುರಂತದ ಬಳಿಕ ಈಗ ಅಗ್ನಿ ನಿರೋಧಕ ಟೆಂಡ್‌ಗಳನ್ನು ಅಳವಡಿಸಲಾಗಿದೆ. ಕಅಬಾ ಹೊರತುಪಡಿಸಿ ಇಡೀ ಮಕ್ಕಾ ಬದಲಾಗಿದೆ. ಕಅಬಾದ ಮತಾಫ್ ಹಿಂದೆ ಕಲ್ಲು, ಮರಳುಗಳಿಂದ ಆವೃತವಾಗಿತ್ತು. ಸಣ್ಣ ಗಾತ್ರದ ಕಲ್ಲುಗಳ ಮಧ್ಯೆ ಬಟ್ಟೆಗಳನ್ನು ಹಾಸಿ ನಮಾಝ್ ಮಾಡಬೇಕಾಗಿತ್ತು. ಆದರೆ ಇಂದು ನೆಲಹಾಸಿಗೆ ಮಾರ್ಬಲ್‌ಗಳನ್ನು ಅಳವಡಿಸಲಾಗಿದೆ.







