ಹಜ್ ಯಾತ್ರೆಯಿಂದ ತಂದೆ ತಾಯಿ ಪ್ರೀತಿಯನ್ನು ಮರಳಿ ಪಡೆದೆ: ಅಬ್ದುಲ್ ಅಝೀಝ್
ಹಜ್ಯಾತ್ರೆ ಅನುಭವ

ರಾಜ್ಯದ ಯಾತ್ರಿಗಳು ಮೊದಲು ಚೆನ್ನೈ, ಮುಂಬೈ ಮಾರ್ಗವಾಗಿ ಹಜ್‌ಯಾತ್ರೆ ಕೈಗೊಳ್ಳಬೇಕಿತ್ತು. 1996ರಲ್ಲಿ ಮೊತ್ತ ಮೊದಲ ಬಾರಿಗೆ ಬೆಂಗಳೂರಿನಿಂದ ರಾಜ್ಯ ಹಜ್ ಸಮಿತಿ ವತಿಯಿಂದ ಕಳುಹಿಸಲಾದ ಯಾತ್ರಿಗಳ ತಂಡದಲ್ಲಿ ನಾನು ಹಾಗೂ ನನ್ನ ಪತ್ನಿ ಹೋಗಿದ್ದೆವು.
ಹಜ್‌ಯಾತ್ರೆಯ ತರಬೇತಿ ಶಿಬಿರದಲ್ಲಿ ಕಾಸಿಮ್ ಖುರೇಷಿ ಎಂಬವರು ನೀಡಿದ ಮಾರ್ಗದರ್ಶನ ನಮ್ಮ ಪಾಲಿಗೆ ಹೆಚ್ಚು ಸಹಕಾರಿಯಾಗಿತ್ತು. ಪವಿತ್ರ ಕಾಬಾ, ಮದೀನಾ, ಅರಫಾ ಮೈದಾನ ಎಲ್ಲವನ್ನೂ ನಾವು ಕೇವಲ ಉಲೆಮಾಗಳು ಮಾಡುತ್ತಿದ್ದ ಪ್ರವಚನಗಳ ಮೂಲಕ ಕಲ್ಪಿಸಿಕೊಳ್ಳುತ್ತಿದ್ದೆವು. ಆದರೆ, ಪ್ರತ್ಯಕ್ಷವಾಗಿ ಆ ಸ್ಥಳದಲ್ಲಿ ಸಿಗುವ ಅನುಭವವನ್ನು ವರ್ಣಿಸಲು ಅಸಾಧ್ಯವಾದದ್ದು.
ಹಜ್‌ಯಾತ್ರೆಯಿಂದ ತಂದೆ ತಾಯಿಯನ್ನು ಮರಳಿ ಪಡೆದೆ ಕೌಟುಂಬಿಕ ಕಾರಣಗಳಿಂದಾಗಿ ನನ್ನ ತಂದೆ ಹಾಗೂ ತಾಯಿ 9 ವರ್ಷಗಳ ಕಾಲ ನನ್ನಿಂದ ದೂರವಾಗಿದ್ದರು. ಹಲವಾರು ಬಾರಿ ಅವರನ್ನು ಭೇಟಿಯಾಗಿ ಮಾತನಾಡಿಸಲು ಪ್ರಯತ್ನಪಟ್ಟರು ಸಾಧ್ಯವಾಗಿರಲಿಲ್ಲ.
ನನ್ನ ಮನೆಗೆ ಸಂಬಂಧಿಕರು, ಸ್ನೇಹಿತರು ಎಲ್ಲರೂ ಬರುತ್ತಿದ್ದರು. ಆದರೆ, ನನ್ನ ಹೆತ್ತವರೆ ನನ್ನ ಜೊತೆ ಇಲ್ಲವಲ್ಲ ಎಂಬ ನೋವು ಸದಾ ಕಾಡುತ್ತಿತ್ತು. ಪವಿತ್ರ ಕಾಬಾ ಭವನವನ್ನು ಮೊದಲ ಬಾರಿಗೆ ನೋಡಿದಾಗ ಮಾಡುವ ಪ್ರಾರ್ಥನೆ ಖಂಡಿತವಾಗಿಯೂ ಈಡೇರುತ್ತದೆ ಎಂಬುದು ನನ್ನ ಜೀವನದಲ್ಲಿ ನಿಜವಾಗಿದೆ.
ಹಜ್‌ಯಾತ್ರೆ ಆರಂಭಿಸಿದ ನಾಲ್ಕನೆ ದಿನ ನಾನು ಮನೆಗೆ ದೂರವಾಣಿ ಕರೆ ಮಾಡಿದ್ದೆ. ಆಗ ನನ್ನ ತಂದೆ ಹಾಗೂ ತಾಯಿ ನನ್ನ ಮನೆಗೆ ಹಿಂದಿರುಗಿರುವ ಶುಭ ಸಂದೇಶ ಆ ಪವಿತ್ರ ನೆಲದಲ್ಲಿ ಸಿಕ್ಕಿದ್ದು ಮರೆಯಲು ಸಾಧ್ಯವಿಲ್ಲ. ಆನಂತರ, ಅವರಿಬ್ಬರೂ ತಮ್ಮ ಕೊನೆಯ ಉಸಿರು ಇರುವವರೆಗೂ ನನ್ನ ಜೊತೆಯೆ ಇದ್ದರು. ಅದಕ್ಕಾಗಿ ಪರಮ ಕರುಣಾಮಯಿ ಅಲ್ಲಾಹ್‌ನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಹಜ್‌ಯಾತ್ರೆಯನ್ನು ಪೂರೈಸಿದವರ ಮನಸ್ಸಿನಲ್ಲಿ ನವಜಾತ ಶಿಶುವಿನಂತಹ ಭಾವನೆ ಮೂಡುತ್ತದೆ. ಅಲ್ಲಾಹ್ ಯಾರನ್ನು ತನ್ನ ಮನೆಗೆ ಕರೆಸಿಕೊಳ್ಳಬೇಕೋ ಅವರನ್ನು ಕರೆಸಿಕೊಳ್ಳುತ್ತಾನೆ. ಹಜ್‌ಯಾತ್ರೆಯನ್ನು ಪರಿಪೂರ್ಣಗೊಳಿಸಿದ ಬಳಿಕ ಅಲ್ಲಾಹ್ ಹಾಗೂ ಪ್ರವಾದಿಯ ಮಾರ್ಗದರ್ಶನದಲ್ಲಿ ಸಾಗಿದರೆ ನಿಜಕ್ಕೂ ಜೀವನ ಪಾವನವಾಗುತ್ತದೆ. ಮದೀನಾದಲ್ಲಿರುವ ಮಸ್ಜಿದೆ ನಬವಿಯಲ್ಲಿ ಇರುವಷ್ಟು ಸಮಯ ಸ್ವರ್ಗದಲ್ಲಿ ಇದ್ದಂತಹ ಭಾವನೆ ಮೂಡುತ್ತದೆ. ಅರಫಾತ್ ಮೈದಾನದಲ್ಲಿ ಇರುವಾಗ, ಈ ಪ್ರದೇಶ ನಮಗೆ ಚಿರಪರಿಚಿತವಾಗಿದೆ ಎಂದು ಭಾಸವಾಗುತ್ತದೆ. ಕುರ್‌ಆನ್ ಹಾಗೂ ಹದೀಸ್‌ಗಳಲ್ಲಿ ಈ ಪ್ರದೇಶಗಳ ಬಗ್ಗೆ ಇರುವ ಉಲ್ಲೇಖವನ್ನು ನಾವು ಪ್ರತ್ಯಕ್ಷವಾಗಿ ಕಾಣಬಹುದು.
ಮರಳುಭೂಮಿಯಾಗಿರುವ ಸೌದಿ ಅರೇಬಿಯಾದಲ್ಲಿ ಖರ್ಜೂರವೇ ಮುಖ್ಯಬೆಳೆ. ಆದರೆ, ಹಜ್‌ಯಾತ್ರೆಗೆ ಹೋದವರು ಮಕ್ಕಾ ಹಾಗೂ ಮದೀನಾದಲ್ಲಿ ವಿಶ್ವದ ಎಲ್ಲ ಭಾಗಗಳಲ್ಲಿ ಬೆಳೆಯುವಂತಹ ಹಣ್ಣು ಹಂಪಲು, ಆಹಾರ ಪದಾರ್ಥಗಳನ್ನು ಒಂದೇ ಕಡೆ ನೋಡಲು ಸಾಧ್ಯವಾಗುತ್ತದೆ. ಇಂತಹ ವಾತಾವರಣ ನಾವು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.







