ಇತಿಹಾಸವಾದ ರೆಬೆಲ್ ಹುಡುಗಿ

ಚಿದಾನಂದ ರಾಜ್ ಘಟ್ಟ
ಹಂತಕರ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ಗೆ ಅವರ ಮಾಜಿ ಪತಿ, ಹಿರಿಯ ಪತ್ರಕರ್ತ, ನ್ಯೂಯಾರ್ಕ್ನಲ್ಲಿ ಟೈಮ್ಸ್ ಆಫ್ ಇಂಡಿಯಾದ ಸ್ಥಾನಿಕ ಸಂಪಾದಕರಾಗಿರು ಚಿದಾನಂದ ರಾಜ್ಘಟ್ಟ ಹಾಗೂ ಅವರ ಪತ್ನಿ ಮೇರಿ ಬ್ರೀಡಿಂಗ್ ಅವರ ಹೃದಯಸ್ಪರ್ಶಿ ನುಡಿನಮನ.
ನಾವಿಬ್ಬರೂ ಬೇರ್ಪಟ್ಟು, ನಮ್ಮದೇ ಆದ ದಾರಿ ಯನ್ನು ಹಿಡಿದ ಸುದೀರ್ಘ ಸಮಯದ ಬಳಿಕ ಗೌರಿ ನನ್ನನ್ನು ಅಮೆರಿಕದಲ್ಲಿ 1996ರಲ್ಲಿ ಭೇಟಿ ಯಾಗಿದ್ದಳು. ನಮ್ಮ ಅಂತಿಮ ಗಮ್ಯತಾಣ ಒಂದೇ ಅಂದರೆ ಮಣ್ಣಲ್ಲೇ ಜನಿಸಿ, ಮಣ್ಣಿಗೇ ಮರಳುವುದು ಎಂಬುದು ನಾಸ್ತಿಕ ರಾದ ನಮ್ಮಿಬ್ಬರಿಗೂ ಚೆನ್ನಾಗಿ ಅರಿವಿತ್ತು. ಇವೆರಡರ ಮಧ್ಯೆ ಘನತೆಯನ್ನು ಮೆರೆಯಲು ಸಾಕಷ್ಟು ಅವಕಾಶವಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೆವು.
ಹಲವು ಅಪಾಯಗಳು, ಪರಿಶ್ರಮಗಳು ಹಾಗೂ ಉರುಳುಗಳನ್ನು ನಾವು ಈಗಾಗಲೇ ಎದುರಿಸಿದ್ದೇವೆ
ಆ ಘನತೆಯು ನಮ್ಮನ್ನು ಇಷ್ಟು ದೂರದವರೆಗೂ ಕರೆತಂದಿದೆ
ಹಾಗೂ ಘನತೆಯು ನಮ್ಮನ್ನು ಮನೆಯೆಡೆಗೆ ಕರೆದೊಯ್ಯವುದು
ಹಾಗೂ ಘನತೆಯು ನಮ್ಮನ್ನು ಮನೆಯೆಡೆಗೆ ಕರೆದೊಯ್ಯವುದು
ಆ ಘನತೆಯನ್ನು ನೀವು ಅಳೆಯಲು ಬಯಸಿದ್ದೇ ಆದರೆ, ನಮ್ಮ ಮಗಳಿಗೆ ಗೌರಿ ಮಾದರಿಯಾಗಲಿ ಎಂದು ಹಾರೈಸಿ ನನ್ನ ಪತ್ನಿ ಮೇರಿ ಬ್ರೀಡಿಂಗ್ ಸಲ್ಲಿಸಿರುವ ಶ್ರದ್ಧಾಂಜಲಿಯನ್ನು ನೋಡಿ. ಇದೊಂದು ಅದ್ಭುತವಾದ ಘನತೆಯಾಗಿದೆ. ನಮ್ಮ ಮಕ್ಕಳಾದ ದಿಯಾ ಹಾಗೂ ಧ್ಯಾನ್ ಮೇಲೆ ಪ್ರೀತಿಯ ಹೊನಲನ್ನೇ ಹರಿಸುವ ಮೂಲಕ ಗೌರಿ ಅಳೆಯಲು ಸಾಧ್ಯವಿಲ್ಲದಷ್ಟು ಘನಸ್ಥಿಕೆಯನ್ನು ಹಿಂದಿರುಗಿ ಸಿದ್ದಾಳೆ. ಅದು ಆಕೆಗಷ್ಟೇ ಸಾಧ್ಯ. ಉದಾರವಾದ ಚೇತನ, ವಿಶಾಲವಾದ ಹೃದಯ, ಮಿತಿಯಿಲ್ಲದ ಪ್ರೀತಿ ಆಕೆಯದು.
ಆದರೆ ಇವೆಲ್ಲವೂ ಅವೈಚಾರಿಕರಿಗೆ ಅರ್ಥವಾಗದು. ಇಂತಹ ಘನತೆಯು ಅವರನ್ನು ಹಾಗೂ ಅವರ ಗ್ರಹಿಕೆ ಯನ್ನು ಮೀರಿದ್ದಾಗಿದೆ.
ಗೌರಿಗೆ ಶ್ರದ್ಧಾಂಜಲಿ ಸಲ್ಲಿಸಲು ನನಗೆ ಪದಗಳು ಸಿಗದಿದ್ದಾಗ, ನನ್ನ ಪತ್ನಿ ಮೇರಿ ಬ್ರೀಡಿಂಗ್ ಅವೆಲ್ಲವನ್ನೂ ಹೇಳಿದಳು. ಅದನ್ನು ಅವಳ ಮಾತುಗಳಲ್ಲೇ ಓದಿ...
ಆ ರಾತ್ರಿ ಬೆಂಗಳೂರಿನಲ್ಲಿ ವಾಕ್ಸ್ವಾತಂತ್ರ ಮೂಕ ವಾಗಿತ್ತು. ಕೆಲವೇ ತಾಸುಗಳ ಮೊದಲು ನನ್ನ ಅತ್ತಿಗೆಯ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದಾಗ, ಟಿವಿ ಪರದೆಯಮೇಲೆ ‘‘ಗೌರಿ ಲಂಕೇಶ್ರನ್ನು ಗುಂಡಿಕ್ಕಿ ಕೊಲೆಗೈಯಲಾಗಿದೆ’’ಎಂಬ ಸುದ್ದಿ ಅಪ್ಪಳಿಸಿತು. ಗೌರಿ... ನಮ್ಮ ಗೌರಿ ಅವರನ್ನು ಆಕೆಯ ಮನೆಯ ಮುಂದೆಯೇ ಗುಂಡಿಕ್ಕಲಾಗಿದೆ. ಫೋನ್ನ ಇನ್ನೊಂದು ಬದಿಯಿಂದ ಬಿಕ್ಕಳಿಕೆ ಕೇಳಿಬಂದಿತು. ಹಾಗಾಗಲಾರದು. ನಿನಗೆ ಖಚಿತವಿದೆಯೇ ಎಂದು ನಾನಾಕೆಯನ್ನು ಕೇಳಿದೆ. ಆಕೆ ಹೇಳಿದಳು. ಹೌದು...
ವೌನವಾದೆ. ನಾನು ಫೋನನ್ನು ಬಿಟ್ಟು, ತಕ್ಷಣವೇ ಓಡುತ್ತಾ ಮೆಟ್ಟಿಲೇರಿದೆ. ಚಿದುವನ್ನು ಕರೆದೆ. ಆ ಕ್ಷಣವಾ ದರೂ ನಾನು ಆತನೊಂದಿಗಿರಬೇಕಾಗಿದೆ. ನನ್ನ ಹೃದಯ ಒಡೆದಿತ್ತು. ವಿಷಾದ ಮಡುಗಟ್ಟಿತ್ತು. ಅತ್ಯಂತ ಭಯಾನಕ ಕ್ಷಣ ಅದಾಗಿತ್ತು.
ಹುಣ್ಣಿಮೆಯ ದಿನವದು.. ಪ್ರೇರೇಪಿಸಲ್ಪಟ್ಟ ಕೆಲವು ಹುಚ್ಚು ಅವೈಚಾರಿಕರು ಆಕೆಯ ಮನೆಯ ಮುಂದೆ ಗುಂಡಿನ ಮಳೆಗೆರೆದು ಆಕೆಯನ್ನು ಕೊಲೆಗೈದಿದ್ದಾರೆ. ಹೇಗೆ... ಅದಕ್ಕೆ ಪದಗಳೇ ಇಲ್ಲ. ಆ ಕ್ಷಣದಲ್ಲಿ ವಾಕ್ಸ್ವಾತಂತ್ರಕ್ಕಾಗಿನ ಹೋರಾಟವು ಮೂಕವಾಗಿತ್ತು.
ಆಕೆ ನನ್ನ ಪತಿಯ ಮೊದಲ ಪತ್ನಿಯಾಗಿದ್ದಳು. ಆಕೆ ನನ್ನ ಗೆಳತಿಯೂ ಆಗಿದ್ದಳು ಮತ್ತು ಪ್ರಕೃತಿಯ ಪ್ರಬಲವಾದ ಶಕ್ತಿ ಅವಳಾಗಿದ್ದಳೆಂದು ಪರಿಗಣಿಸಬಹುದಾಗಿದೆ. ನಾವು ಆಕೆಯನ್ನು ಪ್ರೀತಿಸಿದ್ದೆವು. ವಿಚಾರವಾದಿ, ನಾಸ್ತಿಕವಾದಿ ಅವಳಾಗಿದ್ದಳು. ಹೆಮ್ಮೆಯ ಕನ್ನಡಿಗಳಾಗಿದ್ದಳು ಹಾಗೂ ಪ್ರತಿ ಯೊಬ್ಬರಿಗೂ ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮಾತನಾಡುವ ಹಕ್ಕಿದೆ ಎಂಬುದನ್ನು ಆಕೆ ದೃಢವಾಗಿ ನಂಬಿದ್ದಳು. ತಮಗಾಗಿ ಮಾತನಾಡಲು ಸಾಧ್ಯವಾಗದವರ ಪರವಾಗಿ ಗೌರಿ ಧ್ವನಿಯೆತ್ತಿದ್ದಳು. ತನ್ನ ಪತ್ರಿಕೆಯ ಮೂಲಕ ಆಕೆ ಅವರಿಗೆ ಧ್ವನಿ ಯಾದಳು. ಆಕೆಯ ಬಗ್ಗೆ ತಿಳಿದುಕೊಂಡರೆ ನಿಮಗೆ ಹೆಮ್ಮೆ ಯೆನಿಸುವುದು. ಅವಳು ಸ್ಥಾಪಿತ ಹಿತಾಸಕ್ತಿಗಳ ಬಲವಾದ ವಿರೋಧಿಯಾಗಿದ್ದಳು, ಇತರರು ಅಂಜುವೆಡೆ ಮುನ್ನುಗ್ಗು ವುದಕ್ಕೆ ಗೌರಿ ಹಿಂದೆಮುಂದೆ ನೋಡುತ್ತಿರಲಿಲ್ಲ. ಅನ್ಯಾಯ ವನ್ನು ಕಂಡಲ್ಲಿ ಅದರ ವಿರುದ್ಧ ಧ್ವನಿಯೆತ್ತದೆ ಬಿಡುತ್ತಿರಲಿಲ್ಲ.
ಇಂದು ರಾತ್ರಿ ಭಾರತ ಹಾಗೂ ಎಲ್ಲೆಡೆ ವಾಕ್ಸ್ವಾತಂತ್ರ ಕ್ಕಾಗಿ, ಜಾತ್ಯತೀತತೆಗಾಗಿ ಹಾಗೂ ನ್ಯಾಯಕ್ಕಾಗಿನ ಹೋರಾಟ ವಾಸ್ತವವಾಗುತ್ತಿದೆ. ಬಲಿಷ್ಠ ಹಾಗೂ ದಿಟ್ಟ ಸ್ವತಂತ್ರ ಮನೋಭಾವದ ಗೌರಿಯು ನನ್ನ ಮಗಳಿಗೆ ಮಾದರಿ ಯಾಗಲಿ ಎಂದು ನಾನು ಹಾರೈಸುತ್ತೇನೆ.
ಆಕೆಯ ಸಾವಿನ ಕೆಲವೇ ನಿಮಿಷಗಳ ಬಳಿಕ ದಿಯಾ ಮಹಡಿ ಮೆಟ್ಟಿಲೇರಿ, ನಿದ್ರಿಸಲು ಸಿದ್ಧಳಾಗುತ್ತಿದ್ದಳು. ಆಕೆ ನನ್ನನ್ನು ಕೇಳಿದಳು. ‘‘ ಅಮ್ಮಾ.. ಪ್ರಮಾದವೇನಾದರೂ ನಡೆ ಯಿತೇ? ಏನಾಯಿತು?. ಬರಸಿಡಿಲಿನಂತೆ ಬಂದೆರಗಿದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದ ನಾನು, ಆಕೆಯನ್ನು ತಬ್ಬಿಕೊಂಡು ಎಲ್ಲವೂ ಸರಿಯಾಗಿದೆ ಎಂದೆ. ಗೌರಿ ದಿಯಾಳನ್ನು ಪ್ರೀತಿಸುತ್ತಿದ್ದಳು ಮತ್ತು ದಿಯಾಗೆ ಗೌರಿಯೆಂದರೆ ಸದಾ ಕುತೂಹಲ.
ದಿಯಾ ಎಂದಿನಂತೆ, ‘ಗುಡ್ನೈಟ್ ಸ್ಟೋರಿಸ್ ಫಾರ್ ರೆಬೆಲ್ ಗರ್ಲ್ಸ್’ ಎಂಬ ಪುಸ್ತಕವನ್ನು ಎತ್ತಿಕೊಂಡಳು. ಆಗ ಒತ್ತರಿಸಿ ಬಂದ ಕಣ್ಣೀರನ್ನು ತಡೆಯಲು ಕಷ್ಟಪಟ್ಟು ಪ್ರಯತ್ನಿ ಸಿದೆ. ದಿಯಾ, ಸೊಮಾಲಿಯಾದ ಪ್ರಪ್ರಥಮ ಮಹಿಳಾ ಅಧ್ಯಕ್ಷೀಯ ಅಭ್ಯರ್ಥಿ ಫಾದುಮೊ ದಾಯಿಬ್ಳ ಬಗ್ಗೆ ಮಾತ ನಾಡಿದಳು. ಅಮ್ಮಾ, ಫಾದುಮೊ ಬಗ್ಗೆ ನಾವು ಮತ್ತೊಮ್ಮೆ ಓದೋಣವೇ?. ಯಾಕೆ ಜನರು ಯುದ್ಧ ಮಾಡುತ್ತಾರೆಂದು ನನಗೆ ಹೇಳುವಿಯಾ ಎಂದು ಆಕೆ ಪ್ರಶ್ನಿಸಿದಳು.
ಈಗಲೂ ಕಣ್ಣೀರನ್ನು ತಡೆದುಕೊಳ್ಳಲು ಬಹಳ ಕಷ್ಟಪಟ್ಟೆ. ದುಃಖದಿಂದ ತುಟಿಯನ್ನು ಕಚ್ಚಿಕೊಂಡ ನಾನು, ದಿಯಾಳಿಗೆ ಜನರು ಯಾಕೆ ಯುದ್ಧ ಮಾಡುತ್ತಾರೆ ಹಾಗೂ ಜಗತ್ತಿನಲ್ಲಿ ಯಾಕೆ ಅನ್ಯಾಯ ಹಾಗೂ ದ್ವೇಷ ತಾಂಡವವಾಡುತ್ತಿದೆ ಯೆಂಬುದನ್ನು ವಿವರಿಸಲು ಪ್ರಯತ್ನಿಸಿದೆ. ‘‘ ಚಿಂತಿಸಬೇಡ ಅಮ್ಮಾ. ಮಾಟಿಲ್ಡ್ಳಂತೆ (ಆಂಗ್ಲ ಕಾದಂಬರಿಕಾರ ರೋಲ್ಡ್ ಡಾಹ್ಲ್ ಅವರ ಕಾದಬಂರಿಯ ಕಥಾಪಾತ್ರ) ಲೋಕದಲ್ಲಿ ಜನರು ಒಳ್ಳೆಯದನ್ನು ಅಥವಾ ಕೆಟ್ಟದನ್ನು ಆರಿಸಿಕೊಳ್ಳುತ್ತಾರೆ. ಮಾಟಿಲ್ಡ್ ತನ್ನ ಶಕ್ತಿಯನ್ನು ಒಳಿತಿಗಾಗಿ ಬಳಸಿಕೊಂಡಳು. ನಾವು ಕೂಡಾ ನಮ್ಮ ಶಕ್ತಿಯನ್ನು ದುಷ್ಟ ಜನರ ವಿರುದ್ಧ ಒಳ್ಳೆಯದಕ್ಕಾಗಿ ಬಳಸಿಕೊಳ್ಳಬೇಕಾಗಿದೆ...
ಫಾದುಮೊಳ ಕಥೆಯ ಕೊನೆಯ ಸಾಲನ್ನು ಓದುತ್ತಿದ್ದ ನಾನು ಅವಳ ಮಾತಿಗೆ ಹೌದೆಂದೆ. ಬದುಕಿನ ಎಲ್ಲಾ ಸಾಧ್ಯತೆಗಳು ನಿನ್ನ ಅಂಗೈಯಲ್ಲಿರುತ್ತದೆ ಎಂದು ನನ್ನ ತಾಯಿ ಯಾವತ್ತೂ ಹೇಳುತ್ತಿದ್ದಳು. ಅದು ಖಂಡಿತವಾಗಿಯೂ ಸತ್ಯ. ದಿಯಾಳನ್ನು ನಿದ್ದೆ ಆವರಿಸುತ್ತಿತ್ತು ಹಾಗೂ ಆಕೆಯ ಕಣ್ಣುಗಳು ಮುಚ್ಚುತ್ತಿದ್ದವು. ಈ ಹೊತ್ತಲ್ಲಿ ಗೌರಿ ನಮ್ಮಿಂದಿಗಿರಬೇಕೆಂದು ನನಗನಿಸುತ್ತಿತ್ತು. ಆಕೆಯೂ ಅದಕ್ಕೆ ಸಮ್ಮತಿಸುತ್ತಿದ್ದಳು ಎಂದು ನಾನು ಭಾವಿಸುತ್ತೇನೆ. ಈಗ, ನನ್ನ ಮಗಳಿಗೆ ನಮ್ಮ ಅಚ್ಚುಮೆಚ್ಚಿನ ನಿಜವಾದ ರೆಬೆಲ್ ಹುಡುಗಿ ಗೌರಿ ಲಂಕೇಶ್ಳ ಕಥೆಯನ್ನು ಓದಿಹೇಳಲು ನಾನು ಶಕ್ತಿಯನ್ನು ರೂಢಿಸಿಕೊಳ್ಳಬೇಕಾಗಿದೆ.