ಹದಿಹರೆಯದವರನ್ನು ಸಾವಿಗೆ ದೂಡುತ್ತಿರುವ ಮಾರಣಾಂತಿಕ ಗೇಮ್ ಗಳು

ತಂತ್ರಜ್ಞಾನವು ದಿನೇದಿನೇ ಹೆಚ್ಚುತ್ತಿದ್ದು, ಹೊಸ ಹೊಸ ರೂಪಗಳನ್ನು ಪಡೆದುಕೊ ಳ್ಳುತ್ತಿದೆ. ಇದು ಜನರ ಮನಸ್ಸುಗಳು ಮತ್ತು ಭಾವನೆಗಳ ಜೊತೆಗೆ ಹೇಗೆ ಆಟವಾಡುತ್ತಿದೆ ಎನ್ನುವುದನ್ನು ನಾವು ಈಗ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಬ್ಲೂ ವ್ಹೇಲ್‌ನಂತಹ ಮಾರಣಾಂತಿಕ ಗೇಮ್‌ಗಳು ಅಟ್ಟಹಾಸ ಮೆರೆಯುತ್ತಿದ್ದು, ಹದಿಹರೆಯದ ಮಕ್ಕಳು ಅವುಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಗೇಮ್‌ಗಳು ವ್ಯಕ್ತಿಯ ಮನಸ್ಸಿನ ಮೇಲೆ ಎಷ್ಟೊಂದು ಸುಲಭವಾಗಿ ಪ್ರಭಾವ ಬೀರುತ್ತಿರುವುದು ಅಚ್ಚರಿಯನ್ನು ಮೂಡಿಸುತ್ತಿವೆ.
ಪ್ರಸಿದ್ಧವಾಗಿರುವ ಕೆಲವು ಮಾರಣಾಂತಿಕ ಗೇಮ್‌ಗಳ ಕುರಿತು ಮಾಹಿತಿ ಇಲ್ಲಿದೆ. ಜನರು ಇವುಗಳಿಂದಾಗುವ ಅಪಾಯದ ಬಗ್ಗೆ ಗೊತ್ತಿಲ್ಲದೆ ಆಡುತ್ತಿದ್ದಾರೆ ಮತ್ತು ಹಲವರು ಇವುಗಳ ಹುಚ್ಚಿಗೆ ಬಿದ್ದು ಪ್ರಾಣಗಳನ್ನೂ ಕಳೆದುಕೊಂಡಿದ್ದಾರೆ. ನಿಮಗೆ ಆಘಾತವಾಗಬಹುದು, ಹದಿಹರೆಯದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಈ ಗೇಮ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳತೊಡಗಿವೆ ಎನ್ನುವುದು ಕರಾಳ ಸತ್ಯವಾಗಿದೆ. ಜೀವವನ್ನೇ ಬಲಿ ತೆಗೆದುಕೊಳ್ಳುವ ಇಂತಹ ಗೇಮ್‌ಗಳ ಬಗ್ಗೆ ತಿಳಿದುಕೊಂಡು ಅವುಗಳಿಂದ ದೂರವುಳಿಯುವುದು ಎಲ್ಲ ರೀತಿಗಳಿಂದಲೂ ಒಳ್ಳೆಯದು.
ಬ್ಲೂ ವ್ಹೇಲ್ ಚಾಲೆಂಜ್
ಈ ಆಟದ ಅಂತಿಮ ಹಂತವನ್ನು ತಲುಪುವ ಹದಿಹರೆಯದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿದ್ದಂತೆ ಈ ಆಟವು ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಈ ಆಟದಲ್ಲಿ ಭಾಗಿಯಾಗುವವರು ಸ್ವಯಂ ಹಾನಿ, ಅಂಗಛೇದ ಮತ್ತು ಹಾರರ್ ವೀಡಿಯೊಗಳ ವೀಕ್ಷಣೆ ಸೇರಿದಂತೆ 50 ಟಾಸ್ಕ್‌ಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಆತ್ಮಹತ್ಯೆ ಅಂತಿಮ ಟಾಸ್ಕ್ ಆಗಿದೆ.
ಕಾರ್ ಸರ್ಫಿಂಗ್ ಚಾಲೆಂಜ್
ಈ ಆಟದಲ್ಲಿ ವ್ಯಕ್ತಿಯು ಕಾರಿನ ಛಾವಣಿ, ಬಂಪರ್ ಅಥವಾ ಹುಡ್‌ನ ಮೇಲೆ ಸರ್ಫ್ ಮಾಡುತ್ತಾನೆ. ಆತ ಮಾಡಬೇಕಿರುವುದು ಕಾರು ಚಲಿಸುತ್ತಿದ್ದಾಗ ಇವುಗಳ ಮೇಲೆ ಕುಳಿತಿರುವುದು ಅಥವಾ ಕಾರಿಗೆ ಸ್ಕೇಟ್ ಬೋರ್ಡ್ ಅಥವಾ ಯಾವುದೇ ವಸ್ತುವನ್ನು ಕಟ್ಟಿ ಅದರ ಮೇಲೆ ಸವಾರಿ ಮಾಡುವುದು,ಅಷ್ಟೇ! ಈ ಅಪಾಯಕಾರಿ ಆಟದಲ್ಲಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪಿರುವ ನಿದರ್ಶನಗಳಿವೆ.
ಐಸ್ ಆ್ಯಂಡ್ ಸಾಲ್ಟ್ ಚಾಲೆಂಜ್
ಈ ಸವಾಲು ಶರೀರದ ಮೇಲೆ ಉಪ್ಪನ್ನು ಸುರಿದುಕೊಂಡು ತಕ್ಷಣವೇ ಅದರ ಮೇಲೆ ಮಂಜುಗಡ್ಡೆಯನ್ನು ಇರಿಸುವುದನ್ನು ಒಳಗೊಂಡಿದೆ. ವ್ಯಕ್ತಿ ಹೀಗೆ ಮಾಡಿದಾಗ ಅದು ಸುಟ್ಟ ಗಾಯದ ಅನುಭವವನ್ನು ನೀಡುತ್ತದೆ. ವ್ಯಕ್ತಿ ಎಷ್ಟು ಸುದೀರ್ಘ ಸಮಯ ಈ ನೋವನ್ನು ತಡೆದುಕೊಳ್ಳುತ್ತಾನೆ ಎನ್ನುವುದು ಇಲ್ಲಿಯ ಚಾಲೆಂಜ್ ಆಗಿದೆ. ಮಂಜುಗಡ್ಡೆ, ನೀರು ಮತ್ತು ಉಪ್ಪು ಇವುಗಳು ಮೇಳೈಸಿದರೆ ಅದು ಅತ್ಯಂತ ಅಪಾಯಕಾರಿಯಾಗುತ್ತದೆ ಮತ್ತು ಹಿಮವೃಣದಂತಹ 2-3ನೆ ಡಿಗ್ರಿಯ ಸುಟ್ಟ ಗಾಯಗಳನ್ನುಂಟು ಮಾಡುತ್ತದೆ.
ಚೋಕಿಂಗ್ ಚಾಲೆಂಜ್
ಅತ್ಯಂತ ಅಪಾಯಕಾರಿ ಚಾಲೆಂಜ್ ಆಗಿರುವ ಈ ಉಸಿರು ತಡೆಹಿಡಿಯುವ ಆಟದ ಹಲವಾರು ಪ್ರಕರಣಗಳು ಬೆಳಕಿಗೆ ಬಂದ ನಂತರ ಇದು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭ್ರಮಾಧೀನರಾಗಲು ಹದಿಹರೆಯದ ಮಕ್ಕಳು ಸ್ವಯಂ ಉಸಿರುಗಟ್ಟಿಸಿ ಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಮಿದುಳಿಗೆ ಆಮ್ಲಜನಕದ ಪೂರೈಕೆಯನ್ನು ಸ್ಥಗಿತಗೊಳಿಸುವುದು ಈ ಚಾಲೆಂಜ್‌ನ ಪರಿಕಲ್ಪನೆಯಾಗಿದೆ. ಆಮ್ಲಜನಕ ಪೂರೈಕೆ ಸ್ಥಗಿತಗೊಳ್ಳುವುದರಿಂದ ಅದು ತಾತ್ಕಾಲಿಕ ಉನ್ಮತ್ತತೆಯನ್ನು ಉಂಟು ಮಾಡುತ್ತದೆ. ಆದರೆ ಅತ್ಯಂತ ಕೆಟ್ಟ ಸತ್ಯವೆಂದರೆ ಯುವಕರು ಬಹು ಮುಖ್ಯ ಘಳಿಗೆಯಲ್ಲಿಯೂ ಉಸಿರನ್ನು ಬಿಗಿ ಹಿಡಿದುಕೊಂಡಿರುತ್ತಾರೆ, ಪರಿಣಾಮ ಸಾವು ಸಂಭವಿಸುತ್ತದೆ. ಈ ಆಟವು ಅಮೆರಿಕವೊಂದರಲ್ಲೇ ಪ್ರತಿವರ್ಷ 250ಕ್ಕೂ ಅಧಿಕ ಜೀವಗಳನ್ನು ಬಲಿ ಪಡೆಯುತ್ತಿದೆ ಎಂದು ಅಂದಾಜಿಸಲಾಗಿದೆ.
ಘೋಸ್ಟ್ ಪೆಪ್ಪರ್ ಚಾಲೆಂಜ್
ಇದೊಂದು ವಿಲಕ್ಷಣ ಸವಾಲಿನ ಆಟವಾಗಿದ್ದು, ಇಲ್ಲಿ ಆಟಗಾರರು ಜಗತ್ತಿನಲ್ಲಿಯೇ ಅತ್ಯಂತ ಖಾರದ ಮೆಣಸನ್ನು ಬಳಸಬೇಕಾಗುತ್ತದೆ. ಅವರು ಈ ಮೆಣಸನ್ನು ಬಾಯಿಯಲ್ಲಿ ಕಚ್ಚಿಕೊಂಡು ತಮ್ಮ ಪ್ರತಿಕ್ರಿಯೆಗಳನ್ನು ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಈ ಆಟ ಬಾಯಿಯಲ್ಲಿ ತೀವ್ರ ನೋವನ್ನುಂಟು ಮಾಡುವ ಜೊತೆಗೆ ವಾಕರಿಕೆಯೂ ಅನುಭವ ವಾಗಬಹುದು ಮತ್ತು ಆಸ್ಪತ್ರೆಯ ದರ್ಶನವನ್ನೂ ಮಾಡಿಸಬಹುದು.
ಸಿನಾಮನ್ ಚಾಲೆಂಜ್
ಈ ಸವಾಲಿನ ಆಟದಲ್ಲಿ ಆಟಗಾರನು ಒಂದು ಚಮಚ ಅಥವಾ ಹೆಚ್ಚು ದಾಲ್ಚಿನ್ನಿಯನ್ನು ನುಂಗಬೇಕಾಗುತ್ತದೆ. ಹಾಗೆ ಮಾಡುವಾಗ ಆತ ನೀರನ್ನು ಕುಡಿಯುವಂತಿಲ್ಲ. ವ್ಯಕ್ತಿ ಈ ಸವಾಲನ್ನು ಒಪ್ಪಿಕೊಂಡು ದಾಲ್ಚಿನ್ನಿಯನ್ನು ನುಂಗಿದರೆ ಅದು ಉಸಿರಾಟ ಮತ್ತು ಗಂಟಲಿನ ಸಮಸ್ಯೆಗಳನ್ನುಂಟು ಮಾಡಬಹುದು. ಅಲ್ಲದೆ ಶ್ವಾಸಕೋಶಗಳು ದುರ್ಬಲಗೊಂಡು ಉಸಿರಾಟಕ್ಕೆ ತೊಂದರೆಯಾಗಬಹುದು. ಈ ಸವಾಲನ್ನು ಪೂರ್ಣಗೊಳಿಸುವಲ್ಲಿ ಹಲವರು ಪ್ರಾಣವನ್ನೇ ಕಳೆದುಕೊಂಡಿರುವ ವರದಿಗಳಿವೆ.