ಗೌರಿ ಲಂಕೇಶ್ ಹತ್ಯೆಯೂ... ವಿಕೃತ ಜನರ ಸಂಭ್ರಮವೂ...
ಚಿಂತಕರು, ವಿಚಾರವಂತರು ಈ ನೆಲದ ಮಣ್ಣಿನ ಗುಣವನ್ನು ಹೊತ್ತುಬಂದವರು. ದಾನ ಮಾಡಿ ಯಥಾಸ್ಥಿತಿವಾದಿಗಳಿಂದ ದಾನವರೆನಿಸಿಕೊಂಡವರು, ರಕ್ಷಣೆ ಮಾಡಿ ರಕ್ಕಸರೆನಿಸಿಕೊಂಡವರು, ಸತ್ಯಕ್ಕೆ ನಿಷ್ಠರಾಗಿ ಸತ್ಯ ಹರಡಲು ತಮ್ಮ ರಕ್ತದ ಕಣಕಣವನ್ನೂ ಮೀಸಲಿಟ್ಟು ರಕ್ತ ಬೀಜಾಸುರರೆನಿಸಿಕೊಂಡವರು. ಆದ್ದರಿಂದಲೇ ಇಂದಿಗೂ ಅವರು ಒಬ್ಬರನ್ನು ಕೊಂದರೆ ಸಾವಿರಾರು ವಿಚಾರವಂತರು ಹುಟ್ಟುತ್ತಾರೆ. ಒಬ್ಬ ಗೌರಿಯ ರಕ್ತವು ‘ನಾನೂ ಗೌರಿ’ ಎನ್ನುವ ಲಕ್ಷಾಂತರ ಮಂದಿಯನ್ನು ದೇಶಾದ್ಯಂತ ಸೃಷ್ಟಿಸಿದೆ.
ಪ್ರಗತಿಪರ ಚಿಂತಕಿ, ದಿಟ್ಟ ಪತ್ರಕರ್ತೆ ಹಾಗೂ ಕೋಮುಸೌಹಾರ್ದತೆಗಾಗಿ ಬದುಕನ್ನೇ ಮೀಸಲಿಟ್ಟಿದ್ದ ಗೌರಿ ಲಂಕೇಶ್ ಹತ್ಯೆ ಆಘಾತಕಾರಿಯಾದುದು ಮತ್ತು ಅತ್ಯಂತ ಅನ್ಯಾಯಯುತವಾದುದು. ಇದು ವೈಚಾರಿಕ ಚಿಂತನೆಯ ಮೇಲೆ ನಡೆದ ದಾಳಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ತಮ್ಮ ಮಾತು ಕೃತಿ ಹಾಗೂ ಬರಹಗಳ ಮೂಲಕ ಕೋಮುವಾದ ಹಾಗೂ ಮೌಢ್ಯತೆಗಳನ್ನು ವಿರೋಧಿಸಿ ಮನುವಾದಿಗಳ ಮರ್ಮವನ್ನು ಅನಾವರಣಗೊಳಿಸುತ್ತಿದ್ದ ಗೌರಿ ಲಂಕೇಶ್ ಅವರನ್ನು ಸೆಪ್ಟಂಬರ್ 5 ರಾತ್ರಿ ಅವರ ಮನೆಯ ಬಳಿಯೇ ನಡುಬೀದಿಯಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ಬೆನ್ನಹಿಂದೆ ನಿಂತು ಗುಂಡಿಕ್ಕಿ ಕೊಂದಿರುವುದು ಇಡೀ ದೇಶದ ಪ್ರಗತಿಪರರನ್ನು ಆಘಾತಕ್ಕೀಡುಮಾಡಿದೆ. ಇಂತಹ ದುಷ್ಕೃತ್ಯವನ್ನು ಇಡೀ ದೇಶದ ಪ್ರಜ್ಞಾವಂತ ನಾಗರಿಕರು, ಚಿಂತಕರು, ಹೋರಾಟಗಾರರು ಹಾಗೂ ಜನಪರ ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಇದು ದೇಶದ ನಾಗರಿಕರು ತಲೆತಗ್ಗಿಸುವ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದರ ಹಿಂದಿರುವ ಸಂಚನ್ನು ಶೀಘ್ರವೇ ಬಯಲುಗೊಳಿಸಲು ಎಲ್ಲರೂ ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ. ಕಲಬುರ್ಗಿಯವರ ಹತ್ಯೆಯಾಗಿ ಎರಡು ವರ್ಷಗಳು ಕಳೆದಿದ್ದರೂ, ಅವರ ಹಂತಕರನ್ನು ಪತ್ತೆ ಹಚ್ಚುವಲ್ಲಿ ಸರಕಾರ ವಿಫಲವಾಗಿದೆ. ಅದನ್ನು ಭೇದಿಸಿದ್ದಿದ್ದರೆ ಗೌರಿ ಹತ್ಯೆಯನ್ನು ಖಂಡಿತ ತಡೆಯಬಹುದಿತ್ತು.
ಗುಂಡಿಕ್ಕಿದ ಆ ದುಷ್ಕರ್ಮಿ ಹಂತಕರಿಗೆ ಖಂಡಿತವಾಗಿ ತಾವು ಕೊಂದದ್ದು ಎಂತಹ ವ್ಯಕ್ತಿಯನ್ನು ಎಂಬ ಕನಿಷ್ಠ ಅರಿವೂ ಇರುವುದಿಲ್ಲ. ಹಿಂದೆ ದಾಭೋಲ್ಕರ್, ಪನ್ಸಾರೆ ಹಾಗೂ ಕಲಬುರ್ಗಿಯವರನ್ನು ಕೊಂದ ಹಂತಕರಿಗೂ ಅಷ್ಟೇ ತಾವು ಕೊಂದ ಚೇತನಗಳು ಎಂತಹವು ಎಂಬ ಅರಿವಿಲ್ಲ ಎಂಬುದು ಗೌರಿ ಲಂಕೇಶರ ಹತ್ಯೆಯಿಂದ ವೇದ್ಯವಾಗುತ್ತದೆ. ಯಾಕೆಂದರೆ ಅವರು ಕೇವಲ ಬಾಡಿಗೆ ಹಂತಕರು. ಕೊಲ್ಲುವುದೂ ಸಹ ಅವರಿಗೊಂದು ಕೂಲಿಯೇ! ಅಂತಹ ಅಮಾಯಕರನ್ನೇ ರಕ್ತಪಿಪಾಸುಗಳು ಹುಡುಕಿ ಅವರಿಗೆ ತರಬೇತು ನೀಡಿ, ಒಂದು ಫೋಟೊ ಕೊಟ್ಟೋ ಅಥವಾ ದೂರದಿಂದ ತೋರಿಸಿಯೋ ಅಮಾಯಕರಲ್ಲಿ ಆತ್ಮಸ್ಥೈರ್ಯ ತುಂಬಿ ತಾವು ಮಾಡುವ ಕೆಲಸವು ದೊಡ್ಡದು ಎಂದು ನಂಬಿಸಿ ಕೊಲ್ಲಿಸಿದ್ದಾರೆ.
ಹೀಗೆ ಕ್ಷಣಮಾತ್ರದಲ್ಲಿ ಬೆನ್ನಹಿಂದೆ ಕೊಂದು ಮರೆಯಾಗುವ ಆ ಕೊಲೆಗಡುಕರಿಗೆ ಇಲ್ಲಿ ಕೊಲೆಯಾದ ನಂತರ ನಡೆವ ಬೆಳವಣಿಗೆಗಳು ಹೇಗೆ ಗೊತ್ತಾದಾವು. ಆದರೆ ಕೊಲ್ಲಿಸಿದವರಿಗೆ? ಅವರು ವಿಕೃತಾನಂದ ಅನುಭವಿಸುತ್ತಿರುತ್ತಾರೆ. ಕೊಂದವರು ಸಿಗದೆ ಕೊಲ್ಲಿಸಿದವರು ಸಿಗುವುದಾದರೂ ಎಂತು? ಹೀಗಾಗಿಯೇ ದಾಭೋಲ್ಕರ್, ಪನ್ಸಾರೆ ಹಾಗೂ ಕಲಬುರ್ಗಿ ಹಾಗೂ ಗೌರಿಯವರನ್ನು ಕೊಂದ ದುಷ್ಕರ್ಮಿಗಳು ದೇಶದ ಯಾವುದೋ ಮೂಲೆಯಲ್ಲಿ ತಮಗೂ ಆ ಸಾವುಗಳಿಗೂ ಯಾವುದೇ ಸಂಬಂಧವಿರದಂತೆ ಇರುತ್ತಾರೆ ಅಥವಾ ಕೊಲ್ಲಿಸಿದವರಿಂದ ಅವರೂ ಹತರಾಗಿ ಎಲ್ಲೋ ವಾರಸುದಾರರಿಲ್ಲದ ಅನಾಥ ಹೆಣವಾಗಿರಲೂಬಹುದು! ಯಾರು ಬಲ್ಲರು ರಕ್ತಪಿಪಾಸು ಕೊಲೆಗಡುಕರ ವಿಕೃತ ಆಟವನ್ನು? ತನಿಖೆ ನಡೆಸುವವರು ಸಾವಿನ ಹಿಂದಿನ ಉದ್ದೇಶ, ಹತರಾದವರಿಗೂ ಹತ್ಯೆಮಾಡಿದವರಿಗೂ ಇರುವ ವೈಯಕ್ತಿಕ ದ್ವೇಷ, ಸೈದ್ಧಾಂತಿಕ ತಿಕ್ಕಾಟ ಮುಂತಾದ ಸಂಬಂಧಗಳ ಜಾಡಿಡಿದು ಉತ್ತರ ಸಿಗದೆ ಹೈರಾಣಾಗುತ್ತಾರೆ. ಅಲ್ಲಿ ಮತ್ತೊಬ್ಬರ ಕೊಲೆಗೆ ಮತ್ತಷ್ಟು ಅಮಾಯಕರ ತರಬೇತಿ ನಡೆದಿರುತ್ತದೆ ಮತ್ತು ಇನ್ಯಾರೋ ಬಲಿಪಶುವಾಗುತ್ತಿರುತ್ತಾರೆ! ಹೇಗೆ ಇದನ್ನು ಭೇದಿಸುವುದು?
ಆದರೆ ಒಂದಂತೂ ಸತ್ಯ, ಇಲ್ಲೇ ನಮ್ಮ ನಡುವೆಯೇ ಸಭ್ಯರಂತಿರುವ ಪಟ್ಟಭದ್ರ ಹಿತಾಸಕ್ತ ಗೋಮುಖ ವ್ಯಾಘ್ರ ರಕ್ತಪಿಪಾಸುಗಳು ವಿಪರೀತ ಆತಂಕಕ್ಕೊಳಗಾಗಿದ್ದಾರೆ. ಅವರು ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದಾರೆ. ಅವರು ಅತ್ಯಂತ ಹತಾಶೆಗೆ ಒಳಗಾಗಿದ್ದಾರೆ. ವಿಚಾರವಂತರ, ಚಿಂತಕರ ಪ್ರಖರವಾದ ಬೆಳವಣಿಗೆ ಅವರ ಕಣ್ಣು ಕುಕ್ಕುತ್ತಿದೆ. ದಿನದಿಂದ ದಿನಕ್ಕೆ ವಿಚಾರಕ್ರಾಂತಿಯು ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿರುವುದು ಯಥಾಸ್ಥಿಯಲ್ಲಿ ಮಾತ್ರ ಸುಖವಾಗಿರಬಲ್ಲ ಈ ಮೈಗಳ್ಳರ ನೆಮ್ಮದಿ ಕೆಡಿಸಿದೆ. ಇದೆಲ್ಲವನ್ನು ಮುಖಾಮುಖಿ ಎದುರಿಸಲಾಗದೆ, ತಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಳ್ಳಲೂ ಆಗದೆ ಯಥಾಸ್ಥಿತಿವಾದಿಗಳು ಭಯಂಕರ ವಿಷಣ್ಣತೆಗೊಳಗಾಗಿದ್ದಾರೆ. ಆದ್ದರಿಂದಲೇ ಅವರು ತಮ್ಮ ಅಸ್ತಿತ್ವದ ಉಳಿವಿಗಾಗಿ ಕೊಲ್ಲುವ ಹಂತಕ್ಕಿಳಿದಿದ್ದಾರೆ. ಕೊಲ್ಲುವ ಮೂಲಕ ಅಖಂಡವಾಗಿ, ಅಂತರ್ಗಾಮಿಯಾಗಿ ಹರಿದು ವ್ಯಾಪಿಸುತ್ತಿರುವ ವಿಚಾರವಾದವನ್ನು ಹತ್ತಿಕ್ಕಬಹುದೆಂಬ ಹುಂಬ ತೀರ್ಮಾನಕ್ಕೆ ಬಂದಿದ್ದಾರೆ. ಸತ್ಯವೇ ಉಳಿಯುತ್ತದೆ ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೆ ಹೀಗೆ ಬೆತ್ತಲಾಗಹೊರಟಿದ್ದಾರೆ.
ಚಿಂತಕರು, ವಿಚಾರವಂತರು ಈ ನೆಲದ ಮಣ್ಣಿನ ಗುಣವನ್ನು ಹೊತ್ತುಬಂದವರು. ದಾನ ಮಾಡಿ ಯಥಾಸ್ಥಿತಿವಾದಿಗಳಿಂದ ದಾನವರೆನಿಸಿಕೊಂಡವರು, ರಕ್ಷಣೆ ಮಾಡಿ ರಕ್ಕಸರೆನಿಸಿಕೊಂಡವರು, ಸತ್ಯಕ್ಕೆ ನಿಷ್ಠರಾಗಿ ಸತ್ಯ ಹರಡಲು ತಮ್ಮ ರಕ್ತದ ಕಣಕಣವನ್ನೂ ಮೀಸಲಿಟ್ಟು ರಕ್ತ ಬೀಜಾಸುರರೆನಿಸಿಕೊಂಡವರು. ಆದ್ದರಿಂದಲೇ ಇಂದಿಗೂ ಅವರು ಒಬ್ಬರನ್ನು ಕೊಂದರೆ ಸಾವಿರಾರು ವಿಚಾರವಂತರು ಹುಟ್ಟುತ್ತಾರೆ. ಒಬ್ಬ ಗೌರಿಯ ರಕ್ತವು ‘ನಾನೂ ಗೌರಿ’ ಎನ್ನುವ ಲಕ್ಷಾಂತರ ಮಂದಿಯನ್ನು ದೇಶಾದ್ಯಂತ ಸೃಷ್ಟಿಸಿದೆ. ಎಷ್ಟು ಜನರನ್ನು ಈ ಕೊಲೆಪಾತಕರು ಕೊಂದಾರು ಇಂದು? ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದ ಶರಣ ಸಂಸ್ಕೃತಿಯವರನ್ನು ಕೊಂದು ಹೇಗೆ ವಿಚಾರವಾದದ ಹರವನ್ನು ತಡೆದಾರು? ಕೊಂದು ಅವರು ಕ್ಷೀಣಿಸುತ್ತಿದ್ದಾರೆ. ಹತರಾಗಿ ನಾವು ನೂರ್ಮಡಿಸುತ್ತಿದ್ದೇವೆ! ಸಾವನ್ನು ಸಂಭ್ರಮಿಸುತ್ತಿರುವ ವಿಕೃತರೇ ಹೇಳಿ ಇದು ಯಾರ ಗೆಲುವು? ಒಬ್ಬರನ್ನು ಕೊಂದು ವಿಕೃತಾನಂದ ಅನುಭವಿಸುತ್ತಾ, ಒಡಲೊಳಗಿರುವ ವಿಷವನ್ನೆಲ್ಲಾ ಕಕ್ಕುತ್ತಿರುವ ವಿದ್ಯಾವಂತ ಅನಾಗರಿಕರೇ ನೀವು ಜಗತ್ತಿನೆದುರು ಬೆತ್ತಲಾಗಿ ನಿಂತಿದ್ದೀರಿ. ಜಗತ್ತು ನಿಮ್ಮ ನಗ್ನತೆಯನ್ನು ನೋಡಿ ಗಹಗಹಿಸಿ ನಗುತ್ತಿದೆ. ಇದನ್ನರಿಯದೇ ನೀವು ಒಂದು ಶವದ ಮುಂದೆ ನಿಂತು ಆನಂದಿಸುತ್ತಿದ್ದೀರಲ್ಲ ನಿಮಗೆ ನಾಚಿಕೆಯಾಗಬೇಕು.
ನಾವಿಲ್ಲಿ ಹುಟ್ಟಿರುವುದು ಒಬ್ಬರಿಗೊಬ್ಬರು ಬಡಿದಾಡಿ ಸಾಯುವುದಕ್ಕಲ್ಲ. ಎಲ್ಲರೂ ಬದುಕುವುದಕ್ಕಾಗಿ. ಮನುಷ್ಯರ ಸ್ವೇಚ್ಛಾಚಾರವನ್ನು ನಿಯಂತ್ರಿಸುವ ಸಲುವಾಗಿ ಧರ್ಮಗಳು ಸೃಷ್ಟಿಯಾದುವೇ ವಿನಃ ಅವನ ಸಹಜ ಅಭಿವ್ಯಕ್ತಿ ಮತ್ತು ಮುಕ್ತಸ್ವಾತಂತ್ರ್ಯವನ್ನು ನಿಯಂತ್ರಿಸಲು ಅಲ್ಲ. ಅವರವರ ಆಚಾರ ವಿಚಾರ ಸಂಸ್ಕೃತಿಗಳನ್ನು ಪಾಲಿಸಿ ಸಂತೋಷವಾಗಿರೋಣ. ಆದರೆ ನಮ್ಮದೇ ಶ್ರೇಷ್ಟ, ನಮ್ಮದೇ ಸನಾತನ ಎಲ್ಲರೂ ನಮ್ಮದನ್ನೇ ಪಾಲಿಸಬೇಕೆಂದು ಉಳಿದೆಲ್ಲರ ಮೇಲೆ ಹೇರಿಕೆ ಸಲ್ಲದು. ಇಂತಹ ಹೇರಿಕೆಗಳಿಂದಲೇ ಕೋಮುಸಂಘರ್ಷಗಳು ಸೃಷ್ಟಿಯಾದುದಲ್ಲವೇ? ಕೋಮುಸಂಘರ್ಷಗಳು ಸೃಷ್ಟಿಸುವ ಕೊಲೆ, ಸುಲಿಗೆ, ಗಲಭೆ, ಅಶಾಂತಿಯಂತಹ ಸಾಮಾಜಿಕ ಸಾಮರಸ್ಯ ಕದಡುವ ಹಾಗೂ ಅದಕ್ಕೆಲ್ಲಾ ಬಲಿಪಶುಗಳಾಗುವ ಮುಗ್ಧರ ಬದುಕನ್ನು ಹಸನುಗೊಳಿಸಲೆಂದೇ ಅಲ್ಲವೇ ನಮ್ಮ ದೇಶದಲ್ಲಿ ಬುದ್ಧ, ಬಸವ, ವಿವೇಕ, ಅಂಬೇಡ್ಕರ್ ಮುಂತಾದವರು ತಮ್ಮ್ಮಿಡೀ ಬದುಕನ್ನೇ ಧಾರೆಯೆರೆದದ್ದು? ಈ ಪರಂಪರೆಯಲ್ಲಿ ಮುಂದುವರಿದವರು ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಮತ್ತು ಗೌರಿಯಂತಹವರು. ಅಷ್ಟಕ್ಕೆ ಅವರೆಲ್ಲರನ್ನೂ ಮರೆಮೋಸದಿಂದ ಮುಗಿಸುವ ಕೃತ್ಯವು ಎಷ್ಟು ಹೀನಾತಿಹೀನವಾದದಲ್ಲವೇ?
ಇಂದು ಹುಸಿ ಸಿದ್ಧಾಂತಿಗಳ ಮಾತನ್ನು ನಂಬಿ, ಹುಸಿದೇಶಭಕ್ತಿಯ ಅಮಲೇರಿಸಿಕೊಂಡು ಶ್ರೇಷ್ಠತೆಯ ವ್ಯಸನಕ್ಕೆ ಬೀಳುವ ಅಮಾಯಕ ಯುವಜನರು ಹಾಳುಹಾದಿ ಹಿಡಿಯುತ್ತಿದ್ದಾರೆ. ಅವರು ಇಂದು ವಿಚಾರವಂತರನ್ನು ಕೊಲ್ಲಬಹುದು. ಆದರೆ ನಾಳೆ ಕೊಲ್ಲಿಸಿದವರನ್ನೇ ಕೊಲ್ಲದೆ ಬಿಡುವುದಿಲ್ಲ. ಯಾರನ್ನೋ ಸುಡಲು ಹಚ್ಚುವ ಸಣ್ಣ ಬೆಂಕಿ ದೊಡ್ಡ ಜ್ವಾಲೆಯಾಗಿ ಆವರಿಸುವಾಗ ಅದನ್ನು ಆರಿಸುವ ಶಕ್ತಿ ಬೆಂಕಿ ಹಚ್ಚಿದವರಿಗೇ ಇಲ್ಲವಾಗುತ್ತದೆ.