ತ್ರಿಪುರಾ ಪತ್ರಕರ್ತನ ಕೊಲೆಯ ಹಿಂದಿರುವ ರಾಜಕೀಯ
ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಭೌಮಿಕ್ ವಿರೋಧಿಸುತ್ತಿದ್ದಾರೆಂದು ಆಪಾದಿಸಿದ ಯುವಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಥಳಿಸಿ ಅವರನ್ನು ಕೊಂದಿತ್ತೆಂದು ಪ್ರತ್ಯಕ್ಷದರ್ಶಿ ಪತ್ರಕರ್ತರು ಹೇಳಿದ್ದಾರೆ. ‘‘ಪ್ರತ್ಯೇಕ ರಾಜ್ಯ ಆದಿವಾಸಿಗಳ ಹಿತಾಸಕ್ತಿಗೆ ಪೂರಕವಲ್ಲ’’ ಎಂಬ ಭೌಮಿಕ್‌ರ ವರದಿಯನ್ನು ಆ ಯುವಕರು ನಂಬಿದಂತೆ ಕಂಡಿತೆಂದು ಸ್ಥಳೀಯ ದೈನಿಕವೊಂದರ ವರದಿಗಾರನೊಬ್ಬ ಹೇಳಿದ್ದಾರೆ.
ಬುಧವಾರ ಸೆಪ್ಟಂಬರ್ 20ರಂದು ಮತ್ತೊಬ್ಬ ಭಾರತೀಯ ಪತ್ರಕರ್ತನನ್ನು ಕೊಲೆ ಮಾಡಲಾಯಿತು. ಅಮೆರಿಕ ಮೂಲದ ‘ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಜರ್ನಲಿಸ್ಟ್’ ಪ್ರಕಾರ, ತ್ರಿಪುರಾದ ಖೊವಾಯಿ ಜಿಲ್ಲೆಯ ಮಂಡಾಯಿಯಲ್ಲಿ ನಡೆದ ಶಂತನು ಭೌಮಿಕ್‌ರ ಕೊಲೆ, 1992ರಿಂದ ಇಷ್ಟರವರೆಗೆ ಭಾರತೀಯ ಪತ್ರಕರ್ತನೊಬ್ಬನ ಮೇಲೆ ನಡೆದ ಮಾರಣಾಂತಿಕ ದಾಳಿ ಮತ್ತು ಕೊಲೆಯ 72ನೆ ಪ್ರಕರಣ. ಗೌರಿ ಲಂಕೇಶ್‌ರನ್ನು ಬೆಂಗಳೂರಿನ ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದ ಎರಡು ವಾರಗಳೊಳಗಾಗಿ ಭೌಮಿಕ್‌ರ ಕೊಲೆ ನಡೆದಿದೆ.
ಭೌಮಿಕ್ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ (ಐಪಿಎಫ್‌ಟಿ) ಎಂಬ ಆದಿವಾಸಿಗಳ ಒಂದು ಪಕ್ಷ ಸಂಘಟಿಸಿದ್ದ ರಸ್ತೆ ತಡೆ ಕಾರ್ಯಕ್ರಮದ ವರದಿ ಮಾಡುತ್ತಿದ್ದರು. ಆಗ ರಸ್ತೆ ತಡೆ ಹಿಂಸಾತ್ಮಕ ರೂಪ ಪಡೆದು ಅವರು ಕೊಲ್ಲಲ್ಪಟ್ಟರು. ಐಪಿಎಫ್‌ಟಿ ತಾನು ರಾಜ್ಯದ ಆದಿವಾಸಿ ಜನರ ಪ್ರತಿನಿಧಿ ಎಂದು ಹೇಳುತ್ತಿದ್ದು, ಆದಿವಾಸಿಗಳಿಗಾಗಿ ಒಂದು ಪ್ರತ್ಯೇಕ ರಾಜ್ಯ, ‘ಟ್ವಿಪ್ರಾಲ್ಯಾಂಡ್’ ರಚನೆಯಾಗಬೇಕೆಂದು ಹೋರಾಟ ನಡೆಸುತ್ತಿದೆ. ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಭೌಮಿಕ್ ವಿರೋಧಿಸುತ್ತಿದ್ದಾರೆಂದು ಆಪಾದಿಸಿದ ಯುವಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಥಳಿಸಿ ಅವರನ್ನು ಕೊಂದಿತ್ತೆಂದು ಪ್ರತ್ಯಕ್ಷದರ್ಶಿ ಪತ್ರಕರ್ತರು ಹೇಳಿದ್ದಾರೆ. ‘‘ಪ್ರತ್ಯೇಕ ರಾಜ್ಯ ಆದಿವಾಸಿಗಳ ಹಿತಾಸಕ್ತಿಗೆ ಪೂರಕವಲ್ಲ’’ ಎಂಬ ಭೌಮಿಕ್‌ರ ವರದಿಯನ್ನು ಆ ಯುವಕರು ನಂಬಿದಂತೆ ಕಂಡಿತೆಂದು ಸ್ಥಳೀಯ ದೈನಿಕವೊಂದರ ವರದಿಗಾರನೊಬ್ಬ ಹೇಳಿದ್ದಾರೆ.
ಪತ್ರಕರ್ತ ಭೌಮಿಕ್‌ರ ಕೊಲೆ ನಡೆದು ಮೂರು ಗಂಟೆಗಳೊಳಗಾಗಿ ತ್ರಿಪುರಾ ಪೊಲೀಸರು ಮೂರು ಮಂದಿಯನ್ನು ಬಂಧಿಸಿದರು. ಪೊಲೀಸರು ಹೇಳಿರುವಂತೆ ಆ ಮೂವರು ಐಪಿಎಫ್‌ಟಿಗೆ ಸೇರಿದವರು.
ಭೌಮಿಕ್ ಅಗರ್ತಲಾದ ನ್ಯೂಸ್ ಚಾನೆಲ್ ‘ದಿನ್‌ರಾತ್’ನ ವರದಿಗಾರರಾಗಿದ್ದರು. ದಿನ್‌ರಾತ್ ತ್ರಿಪುರಾದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) ಪರವಾಗಿ ಅನುಕಂಪ ಹೊಂದಿರುವ ಚಾನೆಲ್ ಎಂದು ಹೇಳಲಾಗಿದೆ.
ಪಕ್ಷದ ಉನ್ನತಿ
1996ರಲ್ಲಿ ‘ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ’ ಅಸ್ತಿತ್ವಕ್ಕೆ ಬಂತು. ಈ ಪಕ್ಷಕ್ಕೆ ಈಗ ನಿಷೇಧಿತ ಪ್ರತ್ಯೇಕವಾದಿ ಗುಂಪಾಗಿರುವ ‘ನ್ಯಾಶನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ’ದ ಬೆಂಬಲವಿತ್ತು ಎನ್ನಲಾಗಿದೆ.
ಮುಂದಿನ ವರ್ಷ, 1997ರಲ್ಲಿ ಐಪಿಎಫ್‌ಟಿ, ರಾಜ್ಯದ ಮೊದಲ ಆದಿವಾಸಿ ಪಕ್ಷವಾಗಿರುವ ‘ತ್ರಿಪುರಾ ಉಪ್‌ಜಾತಿ ಜುಬಾ ಸಮಿತಿ’ಯೊಂದಿಗೆ ಕೈ ಜೋಡಿಸಿತು.
ಸ್ವಲ್ಪವೇ ಸಮಯದ ಬಳಿಕ, ‘ದಿ ಟ್ರೈಬಲ್ ನ್ಯಾಶನಲ್ ವಾಲಂಟಿಯರ್ಸ್’ ಕೂಡ ಐಪಿಎಫ್‌ಟಿಯನ್ನು ಸೇರಿಕೊಂಡಿತು. ಈ ಮೂರು ಸೇರಿಕೊಂಡು ಒಟ್ಟಾಗಿ ‘ಇಂಡಿಜಿನಸ್ ನ್ಯಾಶನಲಿಸ್ಟ್ ಪಾರ್ಟಿ ಆಫ್ ಟ್ವಿಪ್ರಾ’ (ಐಎನ್‌ಪಿಟಿ) ಎಂದು ಕರೆಯಲ್ಪಟ್ಟವು.
ಅವನತಿ
ಅದೇನಿದ್ದರೂ, ಐಎನ್‌ಪಿಟಿ 2003 ಮತ್ತು 2008ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳಲ್ಲಿ ಗಣನೀಯ ಯಶಸ್ಸು ಕಾಣುವಲ್ಲಿ ವಿಫಲವಾದವು. ಚುನಾವಣೆಯಲ್ಲಿ ಅದರ ಕಳಪೆ ನಿರ್ವಹಣೆಯಿಂದಾಗಿ ಅದು ಭಾರೀ ಪ್ರಮಾಣದ ಪಕ್ಷಾಂತರವನ್ನು ಎದುರಿಸಬೇಕಾಯಿತು. ಪರಿಣಾಮವಾಗಿ, ಅದು ಇಬ್ಭಾಗವಾಗಿ ಐಪಿಎಫ್‌ಟಿ ಮತ್ತು ಐಎನ್‌ಪಿಟಿ ಎಂಬ ಎರಡು ಪಕ್ಷಗಳು ಮುನ್ನೆಲೆಗೆ ಬಂದವು.
ನವೀಕೃತ ಪ್ರಾಮುಖ್ಯತೆ
ಅದೇನಿದ್ದರೂ ಮುಂದಿನ ವರ್ಷ ಚುನಾವಣೆ ನಡೆಯಲಿರುವ ತ್ರಿಪುರಾದಲ್ಲಿ ಐಪಿಎಫ್‌ಟಿ ಮತ್ತೊಮ್ಮೆ ಒಂದು ಪ್ರಮುಖ ಪಕ್ಷವಾಗಲಿದೆ. 60 ಸೀಟುಗಳಿರುವ ತ್ರಿಪುರಾ ಅಸೆಂಬ್ಲಿಯ ಮೂರನೆ ಒಂದು ಭಾಗವನ್ನು ಅದರ ಬೃಹತ್ ಪ್ರಮಾಣದ ಆದಿವಾಸಿ ಜನಸಂಖ್ಯೆಗೆ ಮೀಸಲಿಡಲಾಗಿದೆ. ರಾಜ್ಯದ ಆದಿವಾಸಿ ಪ್ರದೇಶಗಳಿಗೆ ಪ್ರವೇಶ ಪಡೆಯಲು ಐಪಿಎಫ್‌ಟಿ ತನಗೆ ನೆರವಾಗಬಹುದಾದ ಪಕ್ಷವೆಂದು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ.
ಹೊಸ ಸಂಬಂಧಗಳು
ಪ್ರತ್ಯೇಕ ರಾಜ್ಯ ಬೇಡಿಕೆಗೆ ತನ್ನ ಬೆಂಬಲ ಇಲ್ಲವೆಂದು ಬಿಜೆಪಿ ಹೇಳುತ್ತದೆಯಾದರೂ ಅದರ ತ್ರಿಪುರಾ ಘಟಕದ ಓರ್ವ ವಕ್ತಾರ ಮೃಣಾಲ್ ಕಾಂತಿ ದೇಬ್, ಸ್ಕ್ರಾಲ್. ಇನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಬಿಜೆಪಿಯು ‘‘ರಾಜ್ಯದ ಆದಿವಾಸಿಗಳ ಅವಕಾಶಹೀನತೆಯನ್ನು ಪರಿಗಣಿಸುವುದಾಗಿಯೂ’’ ಮತ್ತು ತಾನು ಚುನಾಯಿತವಾದಲ್ಲಿ ಆದಿವಾಸಿ ಜಿಲ್ಲಾ ಸಮಿತಿಯನ್ನು ಒಂದು ರಾಜ್ಯ ಸಮಿತಿಯಾಗಿ ಪರಿವರ್ತಿಸುವುದಾಗಿಯೂ ಹೇಳಿದ್ದಾರೆ. ಬಿಜೆಪಿ ಇತ್ತೀಚೆಗೆ ಐಪಿಎಫ್‌ಟಿಯ ಜೊತೆ ಸಖ್ಯ ಬೆಳೆಸಲು ಒಂದು ಪ್ರಯತ್ನ ಮಾಡಿದೆಯಾದರೂ ಅವುಗಳ ಮಧ್ಯೆ ಒಂದು ಅಧಿಕೃತ ಮೈತ್ರಿ ಇನ್ನೂ ಅನಿಶ್ಚಿತವಾಗಿಯೇ ಇದೆ. ಐಪಿಎಫ್‌ಟಿಯ ಮುಖ್ಯಸ್ಥ ಡೆಬ್ಬರ್ಮ ಕೂಡ ‘‘ಇಷ್ಟರವರೆಗೆ ಯಾವುದೇ ಮೈತ್ರಿ ಆಗಿಲ್ಲ’’ ಎಂದಿದ್ದಾರೆ.
ಪತ್ರಕರ್ತ ಶಂತನು ಭೌಮಿಕ್‌ರವರ ಕೊಲೆಗಡುಕರಿಗೆ ತನ್ನ ಪಕ್ಷದ ಜೊತೆ ಸಂಬಂಧವಿದೆ ಎಂಬ ಬಗ್ಗೆ ಮತ್ತು ಆ ವ್ಯಕ್ತಿಗಳ ಬಂಧನದ ಬಗ್ಗೆ ಡೆಬ್ಬರ್ಮ ‘‘ಅದು ಸಿಬಿಐ ವಿಚಾರಣೆಗೆ ಒಳಪಡಿಸಬೇಕಾದ ವಿಷಯ’’ ಎಂದಿದ್ದಾರೆ.
1993ರಿಂದ ತ್ರಿಪುರಾದಲ್ಲಿ ಆಡಳಿತ ನಡೆಸುತ್ತಿರುವ ಮತ್ತು ಈಗ 60 ಮಂದಿ ಸದಸ್ಯರ ಸದನದಲ್ಲಿ 50 ಸ್ಥಾನಗಳನ್ನು ಪಡೆದಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್)ವು ಬಿಜೆಪಿ ತ್ರಿಪುರಾದಲ್ಲಿ ಅಶಾಂತಿ ಹಂಚಲು ಐಪಿಎಫ್‌ಟಿಯನ್ನು ಬೆಂಬಲಿಸುತ್ತಿದೆ ಎಂದು ಆಪಾದಿಸಿದೆ.
ಅದೇ ವೇಳೆ, ಭೌಮಿಕ್‌ರ ಹತ್ಯೆಯ ಪರಿಣಾಮವಾಗಿ ಮಂಡಾಯಿಯಲ್ಲಿ ಪರಿಸ್ಥಿತಿ ಬಿಗುವಾಗಿಯೇ ಇದೆ. ಆ ಪ್ರದೇಶಕ್ಕೆ ಕೋಮು ಸಂಘರ್ಷದ ಒಂದು ಇತಿಹಾಸವಿದೆ. ವರದಿಗಳ ಪ್ರಕಾರ ಬಾಂಗ್ಲಾ ದೇಶದ ಗಡಿಯ ಸಮೀಪದಲ್ಲಿರುವ ಆ ಹಳ್ಳಿಯಲ್ಲಿ 1980ರ ಜೂನ್ 8ರಂದು ಆಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ಭಯಾನಕವಾದ ನರಮೇಧಗಳಲ್ಲಿ ಒಂದು ನರಮೇಧ ನಡೆಯಿತು. ಅದರಲ್ಲಿ ಸಶಸ್ತ್ರ ಆದಿವಾಸಿ ಬಂಡುಕೋರರು 350 ಬಂಗಾಲಿಗಳನ್ನು ಬರ್ಬರವಾಗಿ ಹತ್ಯೆಗೈದಿದ್ದರು.
ಕೃಪೆ: scroll.in