ಸಂವಿಧಾನದ ಆಶಯ ಸಮನಾಗಿ ಈಡೇರಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ನ್ಯಾ. ಸುಭ್ರೊ ಕಮಲ್ ಮುಖರ್ಜಿ
ಮೈಸೂರು, ಸೆ.26: ಸಂವಿಧಾನದ ಆಶಯವನ್ನು ಸಮನಾಗಿ ಈಡೇರಿಸುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲದ ಮುಖ್ಯ ನ್ಯಾಯಮೂರ್ತಿ ಸುಭ್ರೊ ಕಮಲ್ ಮುಖರ್ಜಿ ಹೇಳಿದ್ದಾರೆ.
ಜಿಲ್ಲಾಡಳಿತ ಹಾಗೂ ದಸರಾ ಮಹೋತ್ಸವ ಸಮಿತಿ ವಿಶೇಷವಾಗಿ ಆಯೋಜಿಸಿದ್ದ ಎರಡು ದಿನಗಳ “ಸಂವಿಧಾನ-ಪ್ರಜಾಸತ್ತೆ-ಸಮಾನತೆ: ಕರ್ನಾಟಕ ಒಂದು ಆದರ್ಶ ಮಾದರಿ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನ ಜಗದ್ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ನಡೆಸಲಾಗುತ್ತಿರುವ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತೋಷವನ್ನುಂಟುಮಾಡಿದೆ. ಇಂತಹ ವಿಚಾರ ಸಂಕಿರಣಗಳು ಜ್ಞಾನವನ್ನು ಹೆಚ್ಚಿಸುತ್ತದೆ. ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಸಂವಿಧಾನವೇ ನಮ್ಮ ಪರಮೋಚ್ಚ, ಯಾವುದೇ ರೀತಿಯ ಅಸಮಾನತೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಎಲ್ಲರೂ ಸಮಾನರು ಹಾಗೂ ಸಮಾನ ಅವಕಾಶಗಳನ್ನು ಪಡಯಬಹುದಾಗಿದೆ. ಅಲ್ಲದೆ, ಮೂಲಭೂತ ಹಕ್ಕುಗಳ ರಕ್ಷಣೆಯೇ ಇದರ ಪ್ರಮುಖಾಂಶವಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಮುಖ್ಯವಾಗಿ ಶಿಕ್ಷಣ, ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಯಶಸ್ವಿ ಪ್ರಯೋಗಗಳನ್ನು ನಡೆಸಿದೆ. ಪಂಚಾಯತ್ ರಾಜ್ ವ್ಯವಸ್ಥೆ ಪ್ರತಿಯೊಬ್ಬರಿಗೂ ಗ್ರಾಮ ಮಟ್ಟದಿಂದಲೇ ಶಕ್ತಿ ತುಂಬಿದೆ. ಬಡತನ ಮತ್ತು ಅಭಿವೃದ್ಧಿಯ ಸವಾಲುಗಳನ್ನು ಎದುರಿಸಲು ಪ್ರಬಲ ಸೇತುವೆಯಾಗಿದೆ ಎಂದರು.
ವಿಚಾರ ಸಂಕಿರಣದಲ್ಲಿ ದೆಲ್ಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಗೋಪಾಲ್ ಗುರು ಮಾತನಾಡಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸದ್ವಿಚಾರಗಳನ್ನು ಕ್ರೋಡಿಕರಿಸಿ ಸರ್ವಜನರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ಬೌದ್ದ ಧರ್ಮದ ಮೂಲ ಆಶಯಗಳ ಪ್ರಭಾವ ಸಂವಿಧಾನದಲ್ಲಿ ಅಳವಡಿಸಲಾಗಿದೆ. ರಾಷ್ಟ್ರ ಧ್ವಜದಲ್ಲಿರುವ ಚಕ್ರ ನಿರಂತರ ಬದಲಾವಣೆ, ಕ್ರಿಯಾಶೀಲತೆಯ ಸಂಕೇತ ಎಂದ ಅವರು, ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರಿಗೆ ಅವಕಾಶ ಹಾಗೂ ಘನತೆ ದೊರೆಯುವುದೇ ಸಂವಿಧಾನದ ಉದ್ದೇಶವಾಗಿದ್ದು, ದಸರಾ ಹಬ್ಬದ ಆಶಯವು ಇದೇ ಆಗಿದೆ ಎಂದು ವಿವರಿಸಿದರು.
ಈ ಸಮದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.