ಸಸ್ಯಕಾಶಿಯಲ್ಲಿ ಮನಮೋಹಕ ಜಲಪಾತ..!

ಬೆಂಗಳೂರು, ಅ.22: ಲಾಲ್‌ಬಾಗ್ ಕೆರೆಯ ನೀರಿನ ಗುಣಮಟ್ಟ ಕಾಪಾಡುವುದರ ಜೊತೆಗೆ ನೋಡುಗರ ಮನ ತಣಿಸಲು ಲಾಲ್‌ಬಾಗ್‌ನಲ್ಲಿ ಕೆನಡಾದಲ್ಲಿನ ಮನಮೋಹಕವಾದ ನಯಾಗರ ಫಾಲ್ಸ್ ಮಾದರಿಯ ನೀರಿನ ಜಲಪಾತ ತಲೆ ಎತ್ತುತ್ತಿದೆ. ದೊಡ್ಡ ಕೆರೆಯ ಎದುರಿನ ಚಿಕ್ಕ ಕೆರೆಯಲ್ಲಿ ಈ ಫಾಲ್ಸ್ ನಿರ್ಮಾಣವಾಗುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
ಕೆರೆಯ ನೀರನ್ನು ಸ್ವಚ್ಛವಾಗಿಸುವುದರ ಜತೆಗೆ ನೀರಿನ ಗುಣಮಟ್ಟವನ್ನು ಕಾಪಾಡುವುದು ಈ ಫಾಲ್ಸ್‌ನ ಮುಖ್ಯ ಉದ್ದೇಶವಾಗಿದ್ದು, ಇಂತಹ ವಿನೂತನ ವ್ಯವಸ್ಥೆ ದೇಶದಲ್ಲೇ ಪ್ರಥಮ ಪ್ರಯತ್ನವಾಗಿದೆ.
ಲಾಲ್‌ಬಾಗ್‌ನ ಸಿದ್ದಾಪುರ ದ್ವಾರದ ಎಡಬದಿಯಲ್ಲಿರುವ ನಿರರ್ಥಕವಾದ ಬಂಡೆ ಕ್ವಾರಿ ಜಾಗವನ್ನು ಬಳಸಿಕೊಂಡು ಉದ್ಯಾನದ ಚಿಕ್ಕ ಕೆರೆಯಲ್ಲಿ ಈ ಫಾಲ್ಸ್ ನಿರ್ಮಿಸಲಾಗುತ್ತಿದೆ. ಕಳೆದ ಎರಡು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಪೂಣಗೊಳ್ಳಲಿದೆ. ಇದನ್ನು ಪರಿಸರ ಇಂಜಿನಿಯರ್ ಹಾಗೂ ಲಾಲ್‌ಬಾಗ್‌ನ ಸಲಹಾ ಸಮಿತಿ ಸದಸ್ಯ ಡಾ. ಡಿ.ಎನ್. ರವಿಶಂಕರ್ ವಿನ್ಯಾಸಗೊಳಿಸಿದ್ದಾರೆ.
ಫಾಲ್ಸ್‌ನ ವಿಸ್ತಾರ: 150 ಅಡಿ ಉದ್ದ ಹಾಗೂ 15-20 ಅಡಿ ಎತ್ತರದ ಅರ್ಧ ಚಂದ್ರಾಕಾರದ ವಾಟರ್ ಫಾಲ್ಸ್ ಇದಾಗಿದ್ದು, ತೋಟಗಾರಿಕೆ ಇಲಾಖೆಯ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಉದ್ಯಾನದಲ್ಲಿ 3 ಎಕರೆ ವಿಸ್ತೀರ್ಣದ ಸಣ್ಣ ಮತ್ತು 27 ಎಕರೆ ವಿಸ್ತೀರ್ಣದ ದೊಡ್ಡ ಕೆರೆಗಳಿದ್ದು, ಅವುಗಳ ನಡುವೆ ಇದನ್ನು ನಿರ್ಮಿಸಲಾಗುತ್ತಿದೆ. ಸುಮಾರು ಎರಡು ಕೋಟಿಗೂ ಅಧಿಕ ಹಣ ಖರ್ಚಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಆಯುಕ್ತ ಪಿ.ಸಿ. ರೇ ತಿಳಿಸಿದರು.
ಫಾಲ್ಸ್‌ನಿಂದಾಗುವ ಲಾಭಗಳು: ದೊಡ್ಡ ಕೆರೆಯ ನೀರನ್ನು 120 ಅಡಿ ಅಗಲದ ವಾಟರ್ ಟ್ಯಾಂಕ್‌ಗೆಪಂಪ್ ಮಾಡಿ, ಚಿಕ್ಕ ಕೆರೆಯ ಮೂಲಕ ಎತ್ತರದಿಂದ ಬೀಳುವಂತೆ ಮಾಡಿ, ಮತ್ತೆ ಪಾಚಿರಹಿತ ಹಾಗೂ ನಿಷ್ಕಲ್ಮಶ ನೀರು ದೊಡ್ಡ ಕೆರೆಗೆ ಸಣ್ಣ ಬ್ರಿಡ್ಜ್ ಮೂಲಕ ಹರಿದು ಹೋಗುವಂತೆ ಮಾಡಲಾಗುವುದು. ಇದರಿಂದ ಕೆರೆಯಲ್ಲಿ ಪಾಚಿ ವಾಸನೆ ಇರುವುದಿಲ್ಲ. ನೀರನಲ್ಲಿ ಬೆಳೆದಿರುವ ಪಾಚಿ ನಿರ್ಮೂಲನೆಯಾಗುತ್ತದೆ.
ನೀರು ತಿಳಿಯಾಗಿ, ಅದರ ಗುಣಮಟ್ಟ ಹೆಚ್ಚುತ್ತದೆ. ಪಾಚಿಯಿಲ್ಲದೆ ನೀರು ತಿಳಿಯಾಗಿರುವುದರಿಂದ ಮೀನುಗಳು ಕಾಣುತ್ತವೆ. ವಿಶ್ವದ ನಾನಾ ಭಾಗಗಳಿಂದ ಆಹಾರ ಅರಸಿ ಬರುವ ಹಕ್ಕಿಗಳಿಗೆ ಇದರಿಂದ ಆಹಾರದ ಕೊರತೆ ಉಂಟಾಗುವುದಿಲ್ಲ. ನೀರನ್ನು ಹೆಚ್ಚು ಸಂಗ್ರಹಿಸಿಟ್ಟುಕೊಳ್ಳಲು ಕೂಡ ಇದರಿಂದ ಹೆಚ್ಚು ಅನುಕೂಲವಾಗಲಿದೆ. ನೋಡುಗರಿಗೆ ಮನರಂಜನೆಯ ತಾಣವೂ ಆಗಲಿದೆ.
ಜಲಚರಗಳಿಗೆ ಆಮ್ಲಜನಕ: ನಗರದಲ್ಲಿನ ಹಲಸೂರು, ಸ್ಯಾಂಕಿ ಕೆರೆಗಳಲ್ಲಿ ಈ ಹಿಂದೆ ನೀರು ಹರಿಯದೆ ನಿಂತ ಕಾರಣ ಆಮ್ಲಜನಕದ ಕೊರತೆಯಿಂದ ಮೀನು, ಬಾತುಕೋಳಿಗಳು ಸಾವನ್ನಪ್ಪಿದ್ದವು. ಈ ಸಂದರ್ಭದಲ್ಲಿ ನೀರಿನಲ್ಲಿ ನಿರಂತರ ಆಮ್ಲಜನಕ ಪೂರೈಕೆಯಾಗುವಂತೆ ಮಾಡಲು ಆಕಾಶದೆತ್ತರ ಕಾರಂಜಿಗಳನ್ನು ಅಳವಡಿಸಲಾಗಿತ್ತು. ಇದರಿಂದ ಆಮ್ಲಜನಕದ ಕೊರತೆ ಉಂಟಾಗದೆ ಸದ್ಯ ಆ ಎರಡೂ ಕೆರೆಗಳು ಸುಸ್ಥಿತಿಯಲ್ಲಿವೆ.
ಇಂಥದೇ ಸಮಸ್ಯೆ ಲಾಲ್‌ಬಾಗ್‌ನ ಕೆರೆಗೆ ಬಾರದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಕಾರಂಜಿ ಬದಲಾಗಿ ಕೆರೆಗೆ ಸೌಂದರ್ಯ ಕಲ್ಪಿಸಿ ಮತ್ತಷ್ಟು ಆಕರ್ಷಣೆಗೊಳಿಸುವ ಉದ್ದೇಶದಿಂದ ವಾಟರ್ ಫಾಲ್ಸ್ ನಿರ್ಮಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
♦ ಜಲಪಾತದ ಪಂಪ್ ಸಾಮರ್ಥ್ಯ 250 ಎಚ್‌ಪಿ
♦ ಪಂಪ್ ಮಾಡುವ ಎತ್ತರ 17 ಮೀಟರ್
♦ ಪೈಪ್‌ನ ವ್ಯಾಸ 600 ಮಿಲಿ ಮೀಟರ್
♦ ಪೈಪ್‌ನ ಉದ್ದ 200 ಮೀಟರ್
♦ 120 ಅಡಿ ಅಗಲದ ವಾಟರ್ ಟ್ಯಾಂಕ್ ಧುಮುಕಲಿದೆ
♦ ಒಟ್ಟಾರೆ ಯೋಜನೆಯ ವೆಚ್ಚ 2.75 ಕೋಟಿ
‘ನೀರಿನಲ್ಲಿ ಬೆಳೆಯುವ ಪಾಚಿಯಲ್ಲಿ ಟಾಕ್ಸಿನ್ ಇರುತ್ತೆ. ಇದು ಕ್ಯಾನ್ಸರ್ ತಂದೊಡ್ಡುತ್ತದೆ. ನೀರಿನ ಮೇಲೆ ಬಿಸಿಲು ಬೀಳುವುದರಿಂದ ಯಥೇಚ್ಛವಾಗಿ ಪಾಚಿ ಬೆಳೆಯುತ್ತದೆ. ಲೋಟಸ್, ಕ್ಯಾಟೈಲ್, ಬುಲ್‌ರಶ್‌ನಂತಹ ಸಸಿಗಳನ್ನು ಬೆಳೆಸಿ, ನೀರಿಗೆ ಬಿಸಿಲು ಬೀಳದಂತೆ ಮಾಡುತ್ತೇವೆ. ಇದರಿಂದ ಪಾಚಿ ಬೆಳೆಯುವುದಿಲ್ಲ. ಆಗ ಕೆರೆಯ ನೀರಿನ ಗುಣಮಟ್ಟ ಹೆಚ್ಚುತ್ತದೆ’
-ಡಾ. ಡಿ.ಎನ್. ರವಿಶಂಕರ್
ನಯಾಗರ ಫಾಲ್ಸ್ ವಿನ್ಯಾಸಕಾರರು
ಲಾಲ್‌ಬಾಗ್ ಕೆರೆಯ ನೀರನ್ನು ಯಾವ ಕಾರ್ಯಗಳಿಗೂ ಬಳಸುವುದಿಲ್ಲ. ಹೀಗಾಗಿ ವರ್ಷಾನುಗಟ್ಟಲೆ ನಿಂತಲ್ಲಿಯೇ ನಿಂತಿರುತ್ತದೆ. ಇದರಿಂದ ಇಲ್ಲಿನ ಜಲಚರಗಳ ಜೀವಕ್ಕೆ ಆಪತ್ತು ಉಂಟಾಗುತ್ತದೆ. ಇವಕ್ಕೆ ಆಮ್ಲಜನಕದ ಕೊರತೆ ಉಂಟಾಗದಂತೆ ಕೆರೆಯ ನೀರನ್ನು ಚಲನಶೀಲಗೊಳಿಸಿ, ನೀರಿನ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಮಿನಿ ಜಲಪಾತ ನಿರ್ಮಿಸಲು ನಿರ್ಧರಿಸಲಾಗಿದೆ. ಇದೀಗ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಆದರೆ ಅಂತಿಮವಾಗಿ ಜಲಪಾತದಿಂದ ನೀರಿನ ಹರಿವು ಹೇಗಿರಬೇಕು ಎಂಬುದನ್ನು ಬೇರೆ ಬೇರೆ ತಜ್ಞರೊಂದಿಗೆ ಚರ್ಚಿಸಿ ಅವರ ಸಲಹೆ ಮೇರೆಗೆ ನಿರ್ಧರಿಸಲಾಗುತ್ತದೆ. ಈ ವರ್ಷದ ಅಂತ್ಯದೊಳಗೆ ಫಾಲ್ಸ್ ಹರಿಯುವ ನಿರೀಕ್ಷೆಯಿದೆ.
- ಡಾ.ಎಂ. ಜಗದೀಶ್
ಜಂಟಿ ನಿರ್ದೇಶಕರು ತೋಟಗಾರಿಕೆ ಇಲಾಖೆ