Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಮೋದಿಯವರ ಚುನಾವಣಾ ಪೂರ್ವ ಆಶ್ವಾಸನೆಗಳು...

ಮೋದಿಯವರ ಚುನಾವಣಾ ಪೂರ್ವ ಆಶ್ವಾಸನೆಗಳು ಇದೀಗ ಬಣ್ಣದ ತಗಡಿನ ತುತ್ತೂರಿ....ಆಗುತ್ತಿದೆಯೇ?

ಎಸ್.ವಿ.ಅಮೀನ್ಎಸ್.ವಿ.ಅಮೀನ್25 Oct 2017 11:52 PM IST
share
ಮೋದಿಯವರ ಚುನಾವಣಾ ಪೂರ್ವ ಆಶ್ವಾಸನೆಗಳು ಇದೀಗ ಬಣ್ಣದ ತಗಡಿನ ತುತ್ತೂರಿ....ಆಗುತ್ತಿದೆಯೇ?

 ಭಾಗ-1

2014ರ ಲೋಕಸಭಾ ಚುನಾವಣಾ ಪೂರ್ವದ ಸುಮಾರು ಒಂದು ವರ್ಷ ಕಾಲ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಡೆಸಿದ ಚುನಾವಣಾ ಪ್ರಚಾರವೇ ಅಭೂತ ಪೂರ್ವವಾಗಿತ್ತು. ಭಾರೀ ಭರಾಟೆಯ ಪ್ರಚಾರದ ನಡುವೆ ನೀಡಲಾದ ಹತ್ತಾರು ಆಶ್ವಾಸನೆಗಳು ಜನರಲ್ಲಿ ವಿಶೇಷವಾಗಿ ಯುವ ಮತ್ತು ಮಧ್ಯಮ ವರ್ಗದ ಮತದಾರರಲ್ಲಿ ಹುಟ್ಟಿಸಿದ ಭಾರೀ ನಿರೀಕ್ಷೆಗಳ ಪರಿಣಾಮ ಬಿ.ಜೆ.ಪಿ/ಎನ್.ಡಿ.ಎ ನಿಚ್ಚಳ ಬಹುಮತದಿಂದ ಅಧಿಕಾರಕ್ಕೇರಿ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿ ಇದೀಗ ಸುಮಾರು ಮೂರುವರೆ ವರ್ಷಗಳೇ ಸಂದಿವೆ. ಆರಂಭದ ಎರಡು ವರ್ಷ 5 ಮೋದಿ ಸರಕಾರದ ಘೋಷಿತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ತಾಳ್ಮೆಯಿಂದಲೇ ಕಾಯುತ್ತ ಬೇರೆ ಬೇರೆ ರಾಜ್ಯಗಳ ವಿಧಾನ ಸಭಾ ಚುನಾವಣೆಗಳಲ್ಲೂ ಬಹುತೇಕ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದ ಮತದಾರರಿಗೆ ಇದೀಗ ವಾಸ್ತವಾಂಶಗಳ ಅರಿವಾಗುತ್ತಿದೆ. ಮೋದಿ ಸರಕಾರದ ತಪ್ಪುಹಾಗೂ ಜನವಿರೋಧಿ ನಿಲುವುಗಳಿಂದ ಜನ ಭ್ರಮ ನಿರಸನಗೊಳಗಾಗುತ್ತಿದ್ದಾರೆ. ಆದರೆ ಈ ಸರಕಾರದ ಹುಳುಕುಗಳನ್ನು, ಜನವಿರೋಧಿ ನಿಲುವುಗಳನ್ನು ವ್ಯವಸ್ಥಿತವಾಗಿ, ವ್ಯಾಪಕವಾಗಿ ಜನರ ಬಳಿ ಕೊಂಡು ಹೋಗುವುದರಲ್ಲಿ ಸೊರಗಿ ಚೇತರಿಸಿಕೊಳ್ಳದ ವಿರೋಧ ಪಕ್ಷಗಳ ದೌರ್ಬಲ್ಯವೇ ಮೋದಿ ಮತ್ತು ಬಿಜೆಪಿಗೆ ವರದಾನವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಸರಕಾರ ಕಳೆದ ಮೂರುವರೆ ವರ್ಷಗಳಲ್ಲಿ ತಾನು ನೀಡಿರುವ ಆಶ್ವಾಸನೆಗಳ ಬದಲಾಗಿ ಬೇರೆಯೇ ಅಜೆಂಡಾ ಮುಂದಿಟ್ಟು ಮಾಡಿರುವ ತಪ್ಪುನಿರ್ಧಾರಗಳು ಮತ್ತು ಅದರಿಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ರಂಗಕ್ಕೆ ಆಗುತ್ತಿರುವ ಕೆಟ್ಟ ಪರಿಣಾಮಗಳ ಕುರಿತಾದ ಒಂದು ವಸ್ತುನಿಷ್ಠ ವಿಮರ್ಶೆ ಇಲ್ಲಿದೆ.

ಆರ್ಥಿಕ ರಂಗದಲ್ಲಿ ಆಗಿರುವ ಪ್ರಮಾದಗಳು ಮತ್ತು ಅದರ ಪರಿಣಾಮಗಳು: ಸ್ವಿಸ್ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಠೇವಣಿ ಇಡಲಾದ ಉದ್ಯಮಪತಿಗಳ/ರಾಜಕಾರಣಿಗಳ ಕಪ್ಪುಹಣವನ್ನು ಜನತೆ ತನಗೆ ಅಧಿಕಾರಕೊಟ್ಟರೆ ಕೇವಲ 100 ದಿನಗಳಲ್ಲಿ ಭಾರತಕ್ಕೆ ವಾಪಸ್ ತಂದು ಜನರ ಪ್ರತೀ ಬ್ಯಾಂಕ್ ಖಾತೆಗಳಿಗೂ 15 ಲಕ್ಷ ರೂ. ಜಮೆ ಮಾಡಲಾಗುವುದೆಂದು ಮೋದಿಯವರು ದೇಶದ ಉದ್ದಗಲಕ್ಕೂ ಪ್ರಚಾರ ಸಭೆಗಳಲ್ಲಿ ಸಾರಿದ್ದರು. ಆದರೆ ಇದೀಗ 100 ದಿನಗಳು ಬಿಡಿ 1,100 ದಿನಗಳ ಅವಧಿ ಕಳೆದರೂ ಮೋದಿಯವರಿಗೆ ತನ್ನ ಈ ಆಶ್ವಾಸನೆ ಈಡೇರಿಸಲು ಸಾಧ್ಯವಾಗಿಲ್ಲ ಅಥವಾ ಅವರಲ್ಲಿ ಈ ಬಗ್ಗೆ ಇಚ್ಛಾಶಕ್ತಿಯೇ ಇಲ್ಲವೆನ್ನಬೇಕಾಗುತ್ತದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅಮಿತ್ ಶಾ ‘‘ಅದು ಚುನಾವಣಾ ಸಂದರ್ಭದಲ್ಲಿ ಆಡಿರುವ ಜುಮ್ಲಾ ವಿಷಯ’’ (ಎಂದರೆ ಬರೀ ಚಿಲ್ಲರೆ ವಿಷಯ) ಎಂದು ತೇಲಿಬಿಡುತ್ತಾರೆ. ಭಾರತದಂತಹ ಬೃಹತ್ ರಾಷ್ಟ್ರದ ಪ್ರಧಾನಿ ಉಮೇದುವಾರಿ ಇಂತಹ ಗಂಭೀರ ಆಶ್ವಾಸನೆ ನೀಡಿ ಅದನ್ನು ಈಗ ಬರೀ ಚಿಲ್ಲರೆ ವಿಷಯ ಎಂದು ಹೇಳಿದರೆ ಇಂತಹ ಭರವಸೆಗಳನ್ನೇ ನಂಬಿ ಇವರುಗಳಿಗೆ ಮತ ನೀಡಿದವರ ಪಾಡೇನು? ಇದು ಮುಗ್ಧ ಜನರ ಭಾವನೆಗಳ ಮೇಲೆ ಇವರು ಚೆಲ್ಲಾಟ ಆಡುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತಿಲ್ಲವೇ?

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸದ ಕೇಂದ್ರ ಸರಕಾರ: ಯು.ಪಿ.ಎ ಸರಕಾರ ಆಡಳಿತದಲ್ಲಿದ್ದಾಗ ಕೆಲ ಸಂದರ್ಭಗಳಲ್ಲಿ ನೀರುಳ್ಳಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿದಾಗ ದೇಶಾದ್ಯಂತ ಪ್ರತಿಭಟಿಸಿ, ಪಾರ್ಲಿಮೆಂಟ್ ಕಲಾಪವೂ ಸುಸೂತ್ರವಾಗಿ ನಡೆಯಲು ಬಿಡದ ಬಿಜೆಪಿಗೆ ಇದೀಗ ತನ್ನ ಆಡಳಿತ ಅವಧಿಯಲ್ಲಿ ನೀರುಳ್ಳಿ ಬೆಲೆ ಕೆ.ಜಿ.1ರ ರೂ. 80/100ಕ್ಕೆ, ತೊಗರಿಬೇಳೆ ಮತ್ತಿತರ ಬೇಳೆ ಕಾಳುಗಳ ಬೆಲೆ ರೂ. 150 ರಿಂದ 200ಕ್ಕೆ ಜಿಗಿದಾಗ ಇವರಿಗೆ ಅದನ್ನು ತಡೆಯಲು ಏಕೆ ಸಾಧ್ಯವಾಗಿಲ್ಲ?

ಕಚ್ಚಾತೈಲ ಬೆಲೆ ಇಳಿಕೆಯನ್ನು ಖಜಾನೆ ತುಂಬಲು ಬಳಸಿ ಗ್ರಾಹಕರಿಗೆ ಮೋಸ:    ಕಾಂಗ್ರೆಸ್ /ಯು.ಪಿ.ಎ ಸರಕಾರ ಆಡಳಿತ (ಮುಖ್ಯವಾಗಿ 2008 ರಿಂದ 2014) ದಲ್ಲಿದ್ದ ಸಂದರ್ಭ ಕಚ್ಚಾ ತೈಲ ಬೆಲೆ ಉದ್ದಕ್ಕೂ ಏರುಗತಿಯಲ್ಲಿತ್ತು. 2008ರ ಸಂದರ್ಭದಲ್ಲಿ ಕಚ್ಚಾ ತೈಲಬೆಲೆ ಈವರೆಗಿನ ಗರಿಷ್ಠ ಬೆಲೆಯಾದ 131.28 ಡಾಲರ್‌ಗೆ ಏರಿದಾಗ ಅಂದಿನ ಸರಕಾರ ಅಳೆದೂ ತೂಗಿ ಲೀಟರ್ 1ರ ರೂ. 52.86 ರಿಂದ ರೂ. 57.17ಕ್ಕೆ ಏರಿಸಿದಾಗ ಭೂಮಿ ಆಕಾಶ ಒಂದಾಗುವಂತೆ ಬೊಬ್ಬಿರಿದು 5/6 ವಾರಗಳಷ್ಟು ಅವಧಿ ಪಾರ್ಲಿಮೆಂಟ್ ಕಲಾಪ ನಡೆಯಗೊಡದ ಬಿಜೆಪಿ, ಇದೀಗ ತನ್ನ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಚ್ಚಾ ತೈಲ ಬೆಲೆ ಪ್ರತಿಶತ 60-80% ಇಳಿದರೂ ಪೆಟ್ರೋಲ್/ಡೀಸೆಲ್ ಬೆಲೆಗಳನ್ನು ಅದೇ ಪ್ರಮಾಣದಲ್ಲಿ ಏಕೆ ಇಳಿಸುತ್ತಿಲ್ಲ? ಮೇಲೆ ತಿಳಿಸಿರುವಂತೆ ಜುಲೈ 2008ರಲ್ಲಿ ಕಚ್ಚಾ ತೈಲೆ ಬೆಲೆ ಬ್ಯಾರಲ್ 1ರ 131.28 ಡಾಲರ್ (ಈವರೆಗಿನ ಗರಿಷ್ಠ ದಾಖಲೆ ಬೆಲೆ)ಗೆ ಏರಿಕೆಕಂಡಾಗ ಅಂದಿನ ಯುಪಿಎ ಸರಕಾರ ಪೆಟ್ರೋಲ್ ಮಾರಾಟ ಬೆಲೆ 57.17 ಕ್ಕೆ ಏರಿಸಿತ್ತು. 2014ರ ಉತ್ತರಾರ್ಧದಿಂದ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಇಳಿಕೆಯಾಗುತ್ತಾ ಜನವರಿ 2016ರ ಸಂದರ್ಭ ಮೋದಿ ಸರಕಾರ ಪೆಟ್ರೋಲ್ ಬೆಲೆಯನ್ನು ರೂ. 61.72 ರಷ್ಟು ಮಾತ್ರ ಇಳಿಸಿತ್ತು. ತೈಲ ಬೆಲೆ ಕೇವಲ 28.68 ಡಾಲರ್‌ಗೆ ಇಳಿದಾಗ, ಮೋದಿ ಸರಕಾರ ನಿಗದಿಪಡಿಸಿದ ಕನಿಷ್ಠ ಮಾರಾಟ ಬೆಲೆ ರೂ. 61.72 ಇದ್ದರೆ ಅದು ಯು.ಪಿ.ಎ ಸರಕಾರ ತೈಲಬೆಲೆ ದಾಖಲೆಯ 131.28 ಡಾಲರ್ ಏರಿದ ಸಂದರ್ಭದಲ್ಲಿ ನಿಗದಿಪಡಿಸಿದ ರೂ. 57.17 ರ ಬೆಲೆಗಿಂತಲೂ ಹೆಚ್ಚಾಗಿತ್ತು ಎಂಬ ವಿಚಾರವನ್ನು ಜನತೆ ವಿಶ್ಲೇಷಿಸಿದರೆ ಮೋದಿ ಸರಕಾರ ಜನ ಸಾಮಾನ್ಯರಿಗೆ ಯಾವ ರೀತಿ ಮೋಸ ಮಾಡುತ್ತಿದೆ. ಎಂಬುದನ್ನು ತಿಳಿಯಲು ಸಾಧ್ಯ. ಈ ಸರಕಾರ ಕಚ್ಚಾತೈಲ ಬೆಲೆ ಇಳಿಕೆಯ ವ್ಯತ್ಯಾಸವನ್ನು ಗ್ರಾಹಕರಿಗೆ ನೀಡುವ ಬದಲು ಸುಮಾರು 5/6 ಬಾರಿ ಕೇಂದ್ರ ಅಬಕಾರಿ ಸುಂಕವನ್ನು ಪರಿಷ್ಕರಿಸಿ ಲೀಟರ್‌ಗೆ ಸುಮಾರು ರೂ. 15/- ಖಜಾನೆಗೆ ತುಂಬಿಸಿ ಜನರಿಗೆ ಮೋಸ ಮಾಡುತ್ತಲೇ ಬಂದಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಒತ್ತಡ ಬಂದಾಗ ಕೇವಲ ರೂ.2/- ಕಡಿಮೆ ಮಾಡಿ ರಾಜ್ಯ ಸರಕಾರಗಳತ್ತ ಬೊಟ್ಟು ಮಾಡುತ್ತಿದೆೆ. ಒಟ್ಟು ಅಬಕಾರಿ ಸುಂಕ ಏರಿಕೆ ರೂ. 15/-ರ ವಿರುದ್ಧ ಕೇವಲ ರೂ.2/- ಇಳಿಕೆ ಮಾಡಿ ಜನರಿಗೆ ಮತ್ತೆ ಮಂಕು ಬೂದಿ ಎರಚಲು ಹವಣಿಸುತ್ತಿದೆ ಮೋದಿ ಸರಕಾರ. ಈ ಬಾಬ್ತು ಸರಕಾರಕ್ಕೆ ವಾರ್ಷಿಕ ಸುಮಾರು 1 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ಬರುತ್ತಿದೆ ಅಲ್ಲದೆ ಹೆಚ್ಚುವರಿ ಆದಾಯಗಳಿಸುವ ಈ ಅಯಿಲ್ ಕಂಪೆನಿಗಳು ಆಡಳಿತ ಪಕ್ಷಕ್ಕೆ ನಿಧಿ ಸಂಗ್ರಹ ಮಾಡುತ್ತಿವೆ ಎಂಬ ಸುದ್ದಿಯೂ ಇದೆ.

 ಅಗತ್ಯ ವಸ್ತುಗಳ ಬೆಲೆ ನಿಗದಿ ಪಡಿಸುವ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರಕಾರ ಮೇಲೆ ವಿವರಿಸಿದಂತೆ ಉದ್ದಕ್ಕೂ ಮೋಸ ಮಾಡುತ್ತಿದ್ದರೆ, ವಿರೋಧಪಕ್ಷಗಳು ಇವರ ಮೋಸದಾಟವನ್ನು ಜನರ ಬಳಿಕೊಂಡೊಯ್ಯಲು ವಿಫಲರಾಗಿರುವುದೇ ಈ ಸರಕಾರದ ಜನವಿರೋಧಿ ನಿಲುವುಗಳನ್ನು ತಿಳಿಯಲು ಜನರಿಗೆ ಸಾಧ್ಯವಾಗದಿರಲು ಕಾರಣ.

ಆಧಾರ್ ಬಳಕೆಯಿಂದ ಎಲ್.ಪಿ.ಜಿ. ದುರ್ಬಳಕೆ ನಿಂತರೆ ಅಲ್ಲಿಯೂ ಮೋದಿ ಪ್ರಚಾರದ ಕಮಾಲ್: ಮೇಲೆ ವಿವರಿಸಿದಂತೆ ಆಧಾರ್ ಕಾರ್ಡ್ ಬಳಕೆ ಆರಂಭವಾದ ನಂತರ ಎಲ್ಲಾ ಢೋಂಗಿ, ಡುಪ್ಲಿಕೇಟ್ ಕಾರ್ಡ್‌ಗಳು ಅಂದರೆ ಸುಮಾರು ಒಂದು ಕೋಟಿ ಯಷ್ಟು ಕಾರ್ಡ್‌ಗಳು ತಪಾಸಣೆ ನಂತರ ರದ್ದಾದರೆ ಮೋದಿ ಸಾಹೇಬರು ಅಲ್ಲೂ ತನ್ನ ಬ್ರಾಂಡ್ ಪ್ರಚಾರ ಮಾಡಬೇಕೆ! ಮೇಲೆ ವಿವರಿಸಿದಂತೆ ಆಧಾರ್ ಬಳಕೆಯಿಂದ ಡುಪ್ಲಿಕೇಟ್ ಬಳಕೆದಾರರು ರದ್ದುಗೊಂಡಾಗ ಮೋದಿ ತನ್ನ ಒಂದು ಕರೆಯನ್ನು ಮನ್ನಿಸಿ ಒಂದು ಕೋಟಿ ಗ್ಯಾಸ್ ಬಳಕೆದಾರರು ಸಬ್ಸಡಿ ಬಿಟ್ಟುಕೊಟ್ಟರು ಎಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಡಾಯಿ ಕೊಚ್ಚಿಕೊಂಡರು!. ಇನ್ನು ಇದೇ ಆಧಾರ್ ಯೋಜನೆಯನ್ನು ಯು.ಪಿ.ಎ ಸರಕಾರ ಆರಂಭಿಸಿದಾಗ ಈ ಬಿಜೆಪಿಯವರು ಅದನ್ನು ವಿರೋಧಿಸಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಆಧಾರ್ ಬಳಕೆಯಿಂದ ಮೇಲೆ ತಿಳಿಸಿರುವಂತೆ ಸರಕಾರಕ್ಕೆ ಆದ ಆರ್ಥಿಕ ಅನುಕೂಲ (ವಾರ್ಷಿಕ ಸುಮಾರು ರೂ. 58,500 ಕೋಟಿ)ವನ್ನು ತನ್ನ ಒಂದು ಕರೆಯಿಂದ ಆಯಿತು ಎಂದು ಪುಕ್ಕಟೆ ಪ್ರಚಾರ ಮಾಡುವ ಮೋದಿ ಎಷ್ಟೊಂದು ಪ್ರಚಾರ ಪ್ರಿಯರು ಎಂಬುದನ್ನು ತಿಳಿಸುತ್ತದೆ.

ಒಟ್ಟು ರಾಷ್ಟೀಯ ಉತ್ಪನ್ನ (ಜಿ.ಡಿ.ಪಿ) ಉತ್ಪನ್ನ ಕುಸಿತಕ್ಕೆ ನೋಟು ಅಮಾನ್ಯವೇ ಮುಖ್ಯ ಕಾರಣ: ಸಂಬಂಧಿತ ಸಕ್ಷಮ ಪ್ರಾಧಿಕಾರಗಳಾದ ರಿಸರ್ವ್ ಬ್ಯಾಂಕ್, ನೀತಿ ಆಯೋಗ ಮುಂತಾದ ಸಂಸ್ಥೆಗಳನ್ನು ಉಪೇಕ್ಷಿಸಿ ಮೋದಿ ಸಾಹೇಬರು ನವೆಂಬರ್ 8,2016 ರಂದು 500 ಮತ್ತು 1,000 ರೂ.ನ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸಿರುವುದು ಇದೀಗ ಇತಿಹಾಸ. ಬೇಕಾದ ಪೂರ್ವ ಸಿದ್ಧತೆ ಇಲ್ಲದೆ ಘೋಷಣೆಯಾದ ಈ ನೋಟು ಅಮಾನ್ಯತೆಯಿಂದ ಸಮಗ್ರ ಜನತೆ ಅನುಭವಿಸಿದ ಗೋಳು, ಕಷ್ಟ ನಷ್ಟಗಳು ಹತ್ತು ಹಲವು ತೆರನಾದವು. ಕಷ್ಟ ನಷ್ಟ ಅನುಭವಿಸಿದ ನೂರಾರು ಜನ ಜೀವತೆತ್ತರು ಕೂಡಾ. ನೋಟು ಅಮಾನ್ಯ ನಿರ್ಧಾರ ಘೋಷಣೆಯ ಕೆಲವೇ ವಾರಗಳ ನಂತರ ದೇಶದ ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರು ಈ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಮಾತನಾಡುತ್ತಾ ‘‘ಏನೊಂದೂ ಪೂರ್ವ ಸಿದ್ಧತೆಯಿಲ್ಲದೆ ತರಾತುರಿಯಲ್ಲಿ ನೋಟು ಅಮಾನ್ಯ ಮಾಡಿರುವುದರ ಪರಿಣಾಮವನ್ನು ದೇಶದ ಸಮಗ್ರ ಜನತೆ ಅನುಭವಿಸಲಿದೆ, ಅಲ್ಲದೆ ಇದರಿಂದ ದೇಶದ ಒಟ್ಟಾರೆ ಅಭಿವೃದ್ಧಿ ಅಂದರೆ ಜಿ.ಡಿ.ಪಿ. ಶೇಕಡಾ 2ರಷ್ಟು ಕುಸಿಯಲಿದೆ. ಒಂದು ರೀತಿಯಲ್ಲಿ ಇದು ಸರಕಾರದ ಸುಪರ್ದಿಯಲ್ಲೇ ಕಾನೂನಾತ್ಮಕವಾಗಿ ನಡೆಯಲಿರುವ ಲೂಟಿ’’ ಎಂಬ ಗಂಭೀರ ಮಾತುಗಳನ್ನಾಡಿದ್ದರು. ಮೋದಿ ಹಾಗೂ ಸಂಪುಟ ಸಹೋದ್ಯೋಗಿಗಳು ಸಿಂಗ್ ಅವರ ಈ ಹೇಳಿಕೆ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಲ್ಲದೆ ಅವರನ್ನು ಲೇವಡಿ ಮಾಡಿದ್ದರು! ಇದೀಗ ಅಂತಾರಾಷ್ಟ್ರೀಯ ಸಂಸ್ಥೆಗಳಾದ ಜಾಗತಿಕ ಬ್ಯಾಂಕ್, ಐ.ಎಂ.ಎಫ್ ಇತರ ರೇಟಿಂಗ್ ಸಂಸ್ಥೆಗಳು ಅಲ್ಲದೆ ನಮ್ಮ ಸಕ್ಷಮ ಪ್ರಾಧಿಕಾರ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕ ಅಭಿವೃದ್ಧಿ 2% ರಷ್ಟು ಕುಸಿದಿರುವುದನ್ನು ರುಜುಪಡಿಸಿದೆ. ಮೇಲಿನ ಪ್ರಕರಣ ಸಿಂಗ್ ಅವರಿಗೆ ಆರ್ಥಿಕ ಕ್ಷೇತ್ರದಲ್ಲಿರುವ ತನ್ನ ಅಪಾರ ತಜ್ಞತೆಯನ್ನು ಮತ್ತೊಮ್ಮೆ ರುಜುಗೊಳಿಸಿದ್ದರೆ, ಮೋದಿ ಮತ್ತು ಅವರ ಸಹವರ್ತಿಗಳ ಉದ್ಧಟತನ ಮತ್ತು ಅವರ ತೀರಾ ಅಸಹನೆಯ ವರ್ತನೆಯನ್ನು ಅನಾವರಣಗೊಳಿಸಿದೆ. ಈ ರೀತಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ, ಯಾವುದೇ ಸಕ್ಷಮ ಪ್ರಾಧಿಕಾರಗಳ ಒಪ್ಪಿಗೆ ಇಲ್ಲದೆ ಮೋದಿಯವರು ಮಾಡಿರುವ ಏಕಪಕ್ಷೀಯ ತೀರ್ಮಾನ ದೇಶದ ಹಿತಾಸಕ್ತಿಗೆ ಮಾರಕವಾಗುವಂತಹ ಘಟನೆ ಇನ್ನಾವುದೇ ಐರೋಪ್ಯ ದೇಶಗಳಲ್ಲೇನಾದರೂ ನಡೆದಿದ್ದರೆ ಅಂತಹ ಪ್ರಧಾನಿ ಇಷ್ಟರಲ್ಲೇ ಪದಚ್ಯುತಗೊಂಡು ದೇಶ ಮತ್ತು ಜನತೆಯನ್ನು ಸಂಕಷ್ಟಕ್ಕೆ ತಳ್ಳಿದ ತಪ್ಪಿಗಾಗಿ ಮೊಕದ್ದಮೆ ಎದುರಿಸಬೇಕಾಗಿತ್ತೋ ಏನೋ? ಆದರೆ ತಾನು ಏನು ಮಾಡಿದರೂ ಸಮರ್ಥಿಸುವ ಪಕ್ಷ/ಪರಿವಾರದ ನಿಷ್ಠ ಸೇನಾನಿಗಳ ದಂಡೇ ಇರುವುದರಿಂದ ಮತ್ತು ಫ್ರೆಂಡ್ಲಿ ಮಾಧ್ಯಮಗಳ ಸಹಕಾರದಿಂದ ಮೋದಿಯವರು ಇನ್ನೂ ದೇಶದ ಪ್ರಧಾನಿ ಪಟ್ಟದಲ್ಲಿ ಭದ್ರವಾಗಿ ಕೂತಿದ್ದಾರೆ.

ಅವಸರದ ಜಿ.ಎಸ್.ಟಿ. ಜಾರಿಯಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಿಗಳಿಗೆ ನಷ್ಟ ಮತ್ತು ಗ್ರಾಹಕರಿಗೆ ಕರಭಾರ: ಹಿಂದೆ ಯು.ಪಿ.ಎ. ಸರಕಾರವು ಜನರಿಗೆ ಹೊರೆಯಾಗದ ರೀತಿಯಲ್ಲಿ ಜಿ.ಎಸ್.ಟಿ. ತೆರಿಗೆ ವ್ಯವಸ್ಥೆ ಜಾರಿಗಾಗಿ ಪಾರ್ಲಿಮೆಂಟ್‌ನಲ್ಲಿ ಕರಡು ಮಸೂದೆ ಮಂಡಿಸಿದ ಪ್ರತಿಹಂತದಲ್ಲೂ ಅದನ್ನು ವಿರೋಧಿಸುತ್ತಾ ಬಂದವರು ಇದೇ ಬಿಜೆಪಿಯವರು. ಇದೀಗ ಅಬ್ಬರದ ಪ್ರಚಾರದೊಂದಿಗೆ ಅವಸರದಲ್ಲಿ ಈ ನೂತನ ತೆರಿಗೆ ವ್ಯವಸ್ಥೆ ಜಾರಿಗೊಳಿಸಿ ಸಣ್ಣ ಮತ್ತು ಅತೀ ಸಣ್ಣ ಉದ್ಯಮಿ, ವ್ಯಾಪಾರಸ್ಥರು ಕಿರಿಕಿರಿ ಮತ್ತು ನಷ್ಟ ಅನುಭವಿಸುವಂತೆ ಮಾಡಿದರೆ, ಜನಸಾಮಾನ್ಯರು ನಿತ್ಯ ಬಳಸುವ ಬಹುತೇಕ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ ಎಲ್ಲರೂ ಕಷ್ಟ ನಷ್ಟ ಅನುಭವಿಸುವಂತಾಗಿದೆ.

ಮುಂದುವರಿಯುವುದು

share
ಎಸ್.ವಿ.ಅಮೀನ್
ಎಸ್.ವಿ.ಅಮೀನ್
Next Story
X