ಮೋದಿಯವರ ಚುನಾವಣಾ ಪೂರ್ವ ಆಶ್ವಾಸನೆಗಳು ಇದೀಗ ಬಣ್ಣದ ತಗಡಿನ ತುತ್ತೂರಿ....ಆಗುತ್ತಿದೆಯೇ?

ಭಾಗ-2
ಸಂಭಾವ್ಯ ಉತ್ತಮ ಆರ್ಥಿಕ ಅಭಿವೃದ್ಧಿ ಸ್ವಯಂಕೃತ ಅಪರಾಧದಿಂದ ಹಳ್ಳ ಹಿಡಿಯಿತು: ಯು.ಪಿ.ಎ. ಸರಕಾರ ಕೈಗೊಂಡ ಆರ್ಥಿಕ ಸುಧಾರಣಾ ಕಾರ್ಯಕ್ರಮಕ್ಕೆ ಮತ್ತು ಒಂದೆರಡು ವರ್ಷಗಳ ಉತ್ತಮ ಮಳೆ ಬೆಳೆಯಿಂದ ಅಗತ್ಯ ವಸ್ತುಗಳ ಬೆಲೆ ಹತೋಟಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕುಸಿತದ ಪರಿಣಾಮ ದೇಶದ ಖಜಾನೆಗೆ ದೊಡ್ಡ ಪ್ರಮಾಣದ ಉಳಿತಾಯವಾಗಿ ದೇಸದ ಒಟ್ಟಾರೆ ಆರ್ಥಿಕ ಸ್ಥಿತಿ ಮತ್ತು ಅಭಿವೃದ್ಧಿ ದರ 2014 -15ರ ಅವಧಿಯಲ್ಲಿ ಏರುಮುಖದಲ್ಲಿದ್ದು, ಮುಂದೆ ಅದು ಮೇಲೆ ವಿವರಿಸಲಾದ ಸ್ವಯಂಕೃತ ಅಪರಾಧದಿಂದ ತೀರಾ ಕುಸಿತ ಅನುಭವಿಸುವತ್ತ ಸಾಗಿತು. ಆದರೂ ಆಡಳಿತಾರೂಢ ಬಿಜೆಪಿ ನಾಯಕರು 2008-09 ರ ಸಂದರ್ಭದಲ್ಲಿ ಯು.ಪಿ.ಎ. ಆಡಳಿತದಲ್ಲುಂಟಾದ ಆರ್ಥಿಕ ಕುಸಿತಕ್ಕಿಂತ ಇದು ಉತ್ತಮ ಎಂಬ ಮೊಂಡುವಾದ ಪಠಿಸುತ್ತಿದ್ದಾರೆ. 2008-09 ರಲ್ಲಿ ಉಂಟಾದ ಆರ್ಥಿಕ ತಲ್ಲಣ ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಯಾಗಿತ್ತು. ಅಂದು ಅಮೆರಿಕ, ರಷ್ಯಾ, ಜಪಾನ್ ನಂತಹ ಬಲಿಷ್ಠ ರಾಷ್ಟ್ರಗಳು ಮತ್ತು ಐರೋಪ್ಯ ರಾಷ್ಟ್ರಗಳೆಲ್ಲವೂ ಆರ್ಥಿಕ ಹಿನ್ನಡೆ ಅನುಭವಿಸಿದ್ದವು. ಸದ್ರಿ ಹಿನ್ನಡೆ ಬಗ್ಗೆ ಪೂರ್ವ ಸೂಚನೆ ವರ್ಷಗಳ ಹಿಂದೆಯೇ ನೀಡಿದವರು ನಮ್ಮವರೇ ಆದ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್. ಅಂದು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದ್ದ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಸ್ವಯಂ ಒಬಾಮಾ ಅವರೇ ನಮ್ಮ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಅವರ ಆರ್ಥಿಕ ದುಸ್ಥಿತಿಯ ಬಗ್ಗೆ ಪರಾಮರ್ಶಿಸಿ ಸಲಹೆ ಕೇಳಿದ್ದೇ ಅಲ್ಲದೆ ಭಾರತ ಅಂದಿನ ಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಪ್ರಶಂಸಿರುವುದು ಈಗ ಇತಿಹಾಸ. ಆದರೆ ಸಮಸ್ಯೆ ಏನೆಂದರೆ ಮೋದಿಯಂತಹ ಬಿಜೆಪಿ ನಾಯಕರಿಗೆ ಸರಿಯಾದ ಇತಿಹಾಸ ತಿಳಿಯುವ ಅಥವಾ ಓದುವ ಹವ್ಯಾಸ ಇಲ್ಲ. ಅವರಿಗೆ ಏನಿದ್ದರೂ ತಮಗೆ ಇಷ್ಟವಾದ ಇತಿಹಾಸ ಇತರರಿಗೆ ಬೋಧಿಸುವುದೇ ಅವರ ಜಾಯಮಾನ!
ನೋಟು ಅಮಾನ್ಯತೆ ಉದ್ದೇಶಿತ ಗುರಿ ಬದಲಾವಣೆ:
ದೇಶದ ಆರ್ಥಿಕ ರಂಗದಲ್ಲಿ ಹಾವಳಿ ಮಾಡುತ್ತಿರುವ ಅಗಾಧ ಪ್ರಮಾಣದ ಕಪ್ಪುಹಣ, ಭಯೋತ್ಪಾದನೆಗೆ ಬಳಕೆ ಯಾಗುತ್ತಿರುವ ಕಪ್ಪುಹಣದ ದುರ್ಬಳಕೆ ತಡೆದು ದೇಶದ ಆರ್ಥಿಕತೆಗೆ ಒಂದು ಸಂಜೀವಿನಿಯಾಗಿ ಈ ನೋಟು ಅಮಾನ್ಯ ಮಾಡಿರುವುದಾಗಿ ಘೋಷಿಸಿದ ಮೋದಿಯವರು, ಉದ್ದೇಶಿತ ಗುರಿ ಸಾಧನೆ ಕಷ್ಟ ಎನಿಸಿದಾಗ ಮುಂದಿನ ದಿನಗಳಲ್ಲಿ ಮೇಲಿನ ಗುರಿಗಳನ್ನು ಬದಲಾಯಿಸಿ ಸ್ವಚ್ಛ ಹಣಕಾಸು ವ್ಯವಹಾರಕ್ಕಾಗಿ ಡಿಜಿಟಲೀಕರಣದಿಂದ ನಗದುರಹಿತ ಅರ್ಥವ್ಯವಸ್ಥೆ ಎಂಬ ಹೊಸ ಉದ್ದೇಶ ಜಪಿಸಿದರು. ಇದೀಗ ರಿಸರ್ವ್ ಬ್ಯಾಂಕ್ ನೀಡಿರುವ ಅಂಕೆ ಸಂಖ್ಯೆ ಪ್ರಕಾರ ದೇಶದಲ್ಲಿ ಒಟ್ಟು ಚಲಾವಣೆಯಲ್ಲಿದ್ದ (ರೂ. 500 ಮತ್ತು 1000 ನೋಟುಗಳು) 15.44 ಲಕ್ಷ ಕೋಟಿ ರೂ.ಗಳಲ್ಲಿ ಇಷ್ಟರಲ್ಲೇ 14.97 ಲಕ್ಷಕೋಟಿ ರೂ.ಗಳು ಖಜಾನೆಗೆ ವಾಪಾಸ್ ಬಂದಿದೆ. ಅಂದರೆ ಈ ಸರಕಾರಕ್ಕೆ ಯಾವುದೇ ಕಪ್ಪುಹಣ ಪತ್ತೆ ಮಾಡಲು ಸಾಧ್ಯವಾಗಿಲ್ಲ, ಅಲ್ಲದೆ ಭಯೋತ್ಪಾದನೆಗೆ ಕಪ್ಪುಹಣ ಬಳಕೆಯಾಗಿರುವ ಒಂದೇ ಒಂದು ಪ್ರಕರಣ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದಾಯಿತು?
ಹಾಗಾದರೇ ಚಲಾವಣೆಯಲ್ಲಿದ್ದ ಕಪ್ಪುಹಣ ಎಲ್ಲಿ ಹೋಯ್ತು? ಅಮಾನ್ಯಗೊಂಡ ಸದರಿ ನೋಟುಗಳ ಬದಲಾವಣೆಯ ಆ ದಿನಗಳಲ್ಲಿ ಈ ನೋಟು ಬದಲಾವಣೆಯ ದಂಧೆಯಲ್ಲಿ ತೊಡಗಿರುವ ಕೆಲ ಬಿಜೆಪಿ ಪ್ರಮುಖರ ಮತ್ತು ಅವರ ನಿಕಟವರ್ತಿಗಳಾದ ಕೆಲ ಉದ್ಯಮಿಗಳ ಹೆಸರು ಆಗಾಗ್ಗೆ ಕೇಳಿ ಬರುತ್ತಿತ್ತು. ಇದೀಗ ಜಯ್‌ಶಾಹ ವಿರುದ್ಧ ಕೇಳಿ ಬಂದ ವ್ಯವಹಾರ ಟರ್ನ್‌ಓವರ್ ಮತ್ತು ಆದಾಯ ಗಳಿಕೆ ಯಲ್ಲಿನ ಅಸಾಮಾನ್ಯ ಏರಿಕೆ ಬಗ್ಗೆ ಕೇಳಿ ಬರುತ್ತಿರುವ ಪ್ರಕರಣ ಮೇಲಿನ ಪಿಸು ಮಾತುಗಳಿಗೆ ಪುಷ್ಟಿ ನೀಡುತ್ತಿದೆಯೇ? ಕಾಲಾಂತರದಲ್ಲಿ ಇದಕ್ಕೂ ಉತ್ತರ ದೊರೆಯಬಹುದು.
ಭರವಸೆಯಾಗಿಯೇ ಉಳಿದ ವಾರ್ಷಿಕ ಎರಡು ಕೋಟಿ ಉದ್ಯೋಗ ನಿರ್ಮಾಣ:
ತನ್ನ ಪಕ್ಷಕ್ಕೆ ಬಹುಮತ ದೊರಕಿ ಅಧಿಕಾರಕ್ಕೆ ಬಂದರೆ ವಾರ್ಷಿಕ 2 ಕೋಟಿ ಉದ್ಯೋಗ ನಿರ್ಮಾಣ ಮಾಡುವುದಾಗಿ ಮೋದಿಯವರು ದೇಶಾದ್ಯಂತ ತನ್ನ ಚುನಾವಣಾ ಪ್ರಚಾರ ಸಭೆಗಳಲ್ಲಿ ಆಶ್ವಾಸನೆಯಿತ್ತಿದ್ದರು. ಇದೀಗ ವಾರ್ಷಿಕ 2 ಕೋಟಿ ಬಿಡಿ, 2 ಲಕ್ಷ ಉದ್ಯೋಗ ನಿರ್ಮಾಣ ಮಾಡಲೂ ಸಾಧ್ಯವಾಗಿಲ್ಲ ಈ ಮೋದಿ ಸರಕಾರಕ್ಕೆ. ಹೀಗೆ ಈ ಮಾತನ್ನು ನಂಬಿ ಮತ ಹಾಕಿದ್ದ ಜನ ಇಲ್ಲಿಯೂ ಮೋಸ ಹೋಗಿದ್ದಾರೆ.
ಲೋಕಪಾಲ ನೇಮಕಾತಿ ಬಗ್ಗೆ ದಿವ್ಯ ನಿರ್ಲಕ್ಷ:
ಭ್ರಷ್ಟಾಚಾರ ವಿರುದ್ಧ ಸದಾ ಮಾತಿನಲ್ಲೇ ಸಮರ ಸಾರುತ್ತಿರುವ ಮೋದಿಯವರು ಲೋಕಪಾಲರ ನೇಮಕಾತಿ ಬಗ್ಗೆ ದಿವ್ಯ ನಿರ್ಲಕ್ಷ ತಾಳಿರುವುದನ್ನು ನೋಡಿದರೆ ಈ ವಿಷಯದಲ್ಲೂ ಬರೀ ಮಾತಿನ ಮಂಟಪ ಕಟ್ಟುತ್ತಿದ್ದಾರೆ ಎನ್ನಬೇಕಾಗಿದೆ.
ಆಡಳಿತ ಪಕ್ಷದ ವಿರುದ್ಧ ದನಿ ಎತ್ತುವವರನ್ನು ದಮನಿಸುವ ಅಸಹನೆಯ ಪಿಡುಗು ಎಲ್ಲೆಡೆ ವ್ಯಾಪಿಸಿದೆ:
ಮೋದಿ ಮತ್ತು ಕೇಂದ್ರ ಸರಕಾರ, ಸಂಘ ಪರಿವಾರದ ಸಂಘಟನೆಗಳ ಬಗ್ಗೆ ಟೀಕಾತ್ಮಕವಾಗಿ ಮಾತಾಡುವ ಅಥವಾ ಲೇಖನ ಬರೆಯುವವರ ವಿರುದ್ಧ ದಾಳಿ ಮಾಡುವ ಸುದ್ದಿ ದೇಶದ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಸ್ವಯಂ ಘೋಷಿತ ಗೋರಕ್ಷಕರ ಹಾವಳಿಯಂತೂ ಎಲ್ಲೆಡೆ ಮಿತಿ ಮೀರಿ ನಡೆಯುತ್ತಿದೆ. ಮೋದಿ ಮತ್ತು ಸಹೋದ್ಯೋಗಿಗಳು ಕೇವಲ ಉಪಚಾರಕ್ಕಾಗಿ ಅಂತಹವರ ವಿರುದ್ಧ ಹೇಳಿಕೆ ಕೊಟ್ಟು ಯಾರನ್ನೂ ಶಿಕ್ಷಿಸುವ ಗೋಜಿಗೆ ಹೋಗುತ್ತಿಲ್ಲ. ಇದರೊಂದಿಗೆ ಮನೆಯಲ್ಲಿ ಆಡು/ಕುರಿ ಮಾಂಸ ಇಟ್ಟುಕೊಂಡವರನ್ನು ದನದ ಮಾಂಸ ಇಡಲಾಗಿದೆ ಎಂದು ಮನೆಯಿಂದ ಹೊರಗೆಳೆದು ಥಳಿಸುವ, ಕೊಲ್ಲಲೂ ಹೇಸದ ಘಟನೆಗಳ ವರದಿಗಳು ಬರುತ್ತಿವೆ. ಉತ್ತರ ಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಎಂಬವರ ಮನೆಯಲ್ಲಿ ದನದ ಮಾಂಸ ಇಟ್ಟಿರುವರೆಂದು ಆಪಾದಿಸಿ ಮನೆಯಿಂದ ಹೊರಗೆಳೆದು ಥಳಿಸಿ ಕೊಲ್ಲಲಾಯಿತು. ಅಖ್ಲಾಕ್‌ನನ್ನು ಕೊಂದ ಸಂಘ ಪರಿವಾರದ ಕಾರ್ಯಕತರನ್ನು ಶಿಕ್ಷಿಸುವ ಬದಲು ಅವರಿಗೆ ಸರಕಾರಿ ಉದ್ಯೋಗ ನೀಡಿ ಅವರ ಘನ ಕಾರ್ಯಕ್ಕಾಗಿ ಪುರಸ್ಕರಿಸಲಾಗಿದೆ! ಈ ರೀತಿ ದೇಶದ ಎಲ್ಲೆಡೆ ಅಸಹನೆಯಿಂದ ದಾಳಿ ನಡೆಯುತ್ತಿರುವ ವರದಿಗಳು ಬರುತ್ತಲೇ ಇವೆ. ಆದರೆ ಸರಕಾರ ಈ ಬಗ್ಗೆ ಕಣ್ಮುಚ್ಚಿ ಕೂತಿದೆ.
ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಯಾದ ಸಂದರ್ಭದಲ್ಲಿ ಬಹಳಷ್ಟು ಜನ ಸಂಘ ಪರಿವಾರದ ಕಾರ್ಯಕರ್ತರು ಸಂಭ್ರಮಿಸಿ ಸಂತಸದಿಂದ ಟ್ವೀಟ್ ಮಾಡಿರುವ ವಿಚಾರ ಕೇಳಿಬಂದಿದೆ. ಪ್ರಧಾನಿ ಮೋದಿಯವರ ಟ್ವಿಟರ್ ಹಿಂಬಾಲಿಸುವ ಸಾವಿರಾರು ಜನ ಮೇಲಿನ ಕೊಲೆಯನ್ನು ಸಮರ್ಥಿಸುವ ರೀತಿಯಲ್ಲಿ ಟ್ವೀಟ್ ಮಾಡುತ್ತಿದ್ದರೂ ಈ ಹಿಂಬಾಲಕರ ಚಟುವಟಿಕೆಗಳನ್ನು ನಿಗ್ರಹಿಸಲು ಉಪಕ್ರಮಿಸದ ಪ್ರಧಾನಿ ಮೋದಿ ಬಗ್ಗೆ ಏನೆನ್ನಬೇಕು. ಈ ಬಗ್ಗೆ ವಿಮರ್ಶೆ ಮಾಡಿ ಮಾತಾಡಿದ ಖ್ಯಾತ ನಟ ಪ್ರಕಾಶ್‌ರೈ ಬಗ್ಗೆ ಏನೆಲ್ಲಾ ಅಸಹನೆ ಮಾತುಗಳನ್ನು ಕೇಳ ಬೇಕಾಯಿತು ಎಂಬುದು ಎಲ್ಲರಿಗೂ ತಿಳಿದ ವಿಚಾರ. ನಿಷ್ಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎನ್.ಡಿ.ಟಿ.ವಿ.ಯಂತಹ ಮಾಧ್ಯಮ ಸಂಸ್ಥೆಗಳಿಗೆ ಐ.ಟಿ., ಇಡಿ ಇಲಾಖೆಗಳನ್ನು ಛೂ ಬಿಟ್ಟು ಮೋದಿ ಸರಕಾರ ಕಿರುಕುಳ ನೀಡಿರುವುದು ಈಗ ಎಲ್ಲರ ಗಮನ ಸೆಳೆದಿದೆ.
ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಮೋದಿಯವರ ಪ್ರಚಾರದ ಗೀಳಿಗೆ ಬಲಿಯಾಗುತ್ತಿದೆಯೇ?:
2016 ಅಕ್ಟೋಬರ 2ರ ಗಾಂಧಿ ಜಯಂತಿಯಂದು ಅಹಮದಾಬಾದ್ ಮತ್ತು ಗುಜರಾತ್ ಇತರ ದೊಡ್ಡ ನಗರಗಳನ್ನು ಪೂರ್ಣ ಸ್ವಚ್ಛತಾ (ಬಯಲು ಬಹಿರ್ದೆಸೆ ಮುಕ್ತ) ನಗರ ಗಳೆಂದು ಪ್ರಧಾನಿ ನರೇಂದ್ರ ಮೋದಿಯವರು ಸಾರಿದರಲ್ಲದೆ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಯಿತು. ಈ ನಗರಗಳ ಪೂರ್ಣ ಸ್ವಚ್ಛತಾ ಘೋಷಣೆಯ ನಂತರ ಅದರ ಸತ್ಯಾಸತ್ಯತೆಯನ್ನು ತಳಮಟ್ಟದಲ್ಲಿ ತಿಳಿಯಲು ಕಾರವಾನ್ ಪಾಕ್ಷಿಕ ಪತ್ರಿಕೆಯವರು ಮಾಡಿರುವ ತಪಾಸಣಾ ವರದಿ ಸದರಿ ಘೋಷಣೆ ಪೂರ್ಣ ಸತ್ಯ ಆಗಿರದೆ ಅದು ಅರ್ಧ ಸತ್ಯವಾಗಿದೆ ಎಂಬುದನ್ನು ಸಾಬೀತುಗೊಳಿಸಿದೆ. ಅಹಮದಾಬಾದ್‌ನ ಮಣಿನಗರ (ಮೋದಿಯವರು 3 ಸಲ ಆಯ್ಕೆಯಾಗಿದ್ದ ವಿಧಾನಸಭಾಕ್ಷೇತ್ರ) ವನ್ನು ತನ್ನ ಸರ್ವೇ ಕಾರ್ಯಕ್ಕಾಗಿ ಆಯ್ಕೆ ಮಾಡಿತ್ತು. ಸರ್ವೇ ತಂಡ ಮಣಿನಗರದ ಕೇಂದ್ರಭಾಗದಲ್ಲಿರುವ ಚಂದೋಲಾ ಸರೋವರ ಎಂಬ ದೊಡ್ಡ ಕೆರೆ ಮತ್ತು ಅದರ ಆಚೆ ಹರಡಿರುವ ಸ್ಲಮ್ ಪ್ರದೇಶದ ಮಧ್ಯೆ ಇರುವ ಸುಮಾರು 10 ಮೀಟರ್ ಅಗಲದ ದಂಡೆಯ ಮೇಲೆ ಉದ್ದಕ್ಕೂ ಅಲ್ಲಲ್ಲಿ ಕಾಲು ಇಡಲು ಜಾಗವಿಲ್ಲದಂತೆ ಕಂಡು ಬಂದ ಮಲದ ರಾಶಿಯಿಂದ ಸಹಿಸಲಾಗದ ವಾಸನೆ ಮತ್ತು ಅದರ ಮೇಲೆ ಸುಂಯ್‌ಗುಡುತ್ತಾ ಹಾರಾಡುತ್ತಿದ್ದ ನೊಣ ಮತ್ತು ಸೊಳ್ಳೆಗಳ ಕಾಟದಿಂದ ಮುಂದೆ ನಡೆದಾಡುವುದು ಕಷ್ಟ ಸಾಧ್ಯವಾಗಿತ್ತು ಎಂದು ಸತ್ಯಶೋಧನಾ ತಂಡ ವರದಿ ಮಾಡಿದೆ ಎಂದು 2016ರ ಮೇ ತಿಂಗಳ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅತೀವ ಪ್ರಚಾರದ ಚಪಲಕ್ಕಾಗಿ ತರಾತುರಿಯಲ್ಲಿ ಮೇಲಿನ ಘೋಷಣೆ ಮಾಡಿದ ಮೋದಿ ಇಂತಹ ಒಂದು ಉತ್ತಮ ಕಾರ್ಯಕ್ರಮವನ್ನು ಬಲಿಕೊಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅಹಮದಾಬಾದ್ ನಗರ ಅಲ್ಲದೇ ಇತರೆ ಪ್ರಮುಖನಗರಗಳಲ್ಲಿ ಘೋಷಿಸಲಾದ ಆ ಪೂರ್ಣ ಸ್ವಚ್ಛತಾ ಕಾರ್ಯ ಪೂರ್ಣ ಜೂಟ್ ಕಾರ್ಯ ಆಗುತ್ತಿದೆ.
ಮೇಲಿನ ವಿವರಿಸಲಾದ ಎಲ್ಲಾ ವಾಸ್ತವಾಂಶಗಳನ್ನು ಗಮನಿಸಿದರೆ ಒಂದಂಶವಂತೂ ಸ್ಪಷ್ಟ. ಕೇವಲ ರಂಗು ರಂಗಿನ ಮಾತಿನ ಮಂಟಪ ಕಟ್ಟುತ್ತಾ ಮೋದಿಯವರು ತನ್ನ ನವನವೀನ ಆಶ್ವಾಸನೆ, ಭರವಸೆಗಳಿಂದ ಮುಗ್ಧ ಜನತೆಯ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾ ಇದುವರೆಗೆ ತನ್ನ ಮತ ಬ್ಯಾಂಕ್ ವಿಸ್ತರಿಸುತ್ತಾ ಬಂದಿದ್ದಾರೆಯೇ ವಿನಃ ದೇಶದ ಹಿತಾಸಕ್ತಿ ಕಾಯುವುದರಲ್ಲಿ ಅಲ್ಲ. ಆದರೆ ಇದೀಗ ಜನ ಕ್ರಮೇಣ ಇವರ ಬಣ್ಣದ ತಗಡಿನ ತುತ್ತೂರಿ ಬಗ್ಗೆ ಎಚ್ಚೆತ್ತು ಕೊಳ್ಳುತ್ತಿದ್ದಾರೆ. ಎಲ್ಲ ವಿರೋಧ ಪಕ್ಷಗಳು ಮೈ ಕೊಡವಿ ಎಚ್ಚೆತ್ತು ಪರಸ್ಪರ ಹೊಂದಾಣಿಕೆಯ ಮಹಾಘಟಿಬಂಧನ ಮೂಲಕ 2019ರ ಲೋಕಸಭಾ ಚುನಾವಣೆಗೆ ಈಗಿಂದೀಗಲೇ ಸಿದ್ಧತೆ ಆರಂಭಿಸಿದರೆ ಮೋದಿ ಮತ್ತು ಅವರ ಪಕ್ಷ ಪ್ರಚಾರದ ತುತ್ತೂರಿ ಬಾರಿಸುವುದನ್ನು ನಿಲ್ಲಿಸಲು ಸಾಧ್ಯ, ವಿರೋಧ ಪಕ್ಷಗಳು ಒಂದಾಗುವರೇ?