ಭಾರತವು ಬಹುತ್ವವಾದಿ ರಾಷ್ಟ್ರ
ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ

ಭಾಗ-1
ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ತನ್ನ ಹುದ್ದೆಯಿಂದ ನಿವೃತ್ತಿಗೊಂಡ ದಿನದಂದು ಅವರನ್ನು ಖ್ಯಾತ ಟಿವಿ ಪತ್ರಕರ್ತ ಕರಣ್‌ಥಾಪರ್ ಸಂದರ್ಶಿಸಿದ್ದರು. ಈ ಸಂದರ್ಶನದಲ್ಲಿ ಹಾಮಿದ್ ಅನ್ಸಾರಿ ಅವರು ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಮುಸ್ಲಿಮರಲ್ಲಿ ಮೂಡಿರುವ ಅಭದ್ರತೆಯ ಭಾವನೆ ಇತ್ಯಾದಿ ಮಹತ್ವದ ಸಮಸ್ಯೆಗಳ ಬಗ್ಗೆ ಮುಕ್ತಮನಸ್ಸಿನಿಂದ ಮಾತನಾಡಿದ್ದಾರೆ. ಅವರ ಸಂದರ್ಶನದ ಕೆಲವು ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.
ಕರಣ್‌ಥಾಪರ್: ನಿಮಗೆ, ಉಪರಾಷ್ಟ್ರಪತಿಯಾಗಿ ಭಾರತೀಯ ರಾಜಕೀಯ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ವೀಕ್ಷಿಸುವ ವಿಶಿಷ್ಟ ಸದವಕಾಶವು ಲಭಿಸಿತ್ತು. ಇದು ನಮ್ಮ ಸ್ವಾತಂತ್ರದ 70ನೆ ವರ್ಷವೂ ಹೌದು. ನಮ್ಮ ರಾಜಕೀಯ ವ್ಯವಸ್ಥೆಯು ಪರಿಣಾಮಕಾರಿಯಾಗಿ ಹಾಗೂ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಅಥವಾ ಅದು ಆಗಾಗ್ಗೆ ನಿಷ್ಕ್ರಿಯಗೊಂಡಿತ್ತೇ ಇಲ್ಲ ಅಡ್ಡಿಆತಂಕಗಳನ್ನು ಎದುರಿಸುತ್ತಿದೆಯೇ?.
ಹಾಮಿದ್ ಅನ್ಸಾರಿ: ಎರಡೂ ಹೌದು.70 ವರ್ಷಗಳಿಗೂ ಅಧಿಕ ಕಾಲಾವಧಿಯಲ್ಲಿ ಪ್ರಜಾಪ್ರಭುತ್ವವು ನಮ್ಮ ದೇಶದಲ್ಲಿ ಆಳವಾಗಿ ಬೇರೂರಿದೆ. ಇಲ್ಲಿ ದೊಡ್ಡ ಮಟ್ಟದಲ್ಲಿ ಮತದಾರರ ಪಾಲ್ಗೊಳ್ಳುವಿಕೆಯಿದೆ. ರಾಜಕೀಯ ಕ್ಷೇತ್ರದಲ್ಲಿನ ವಿದ್ಯಮಾನಗಳ ಬಗ್ಗೆ ಸಾರ್ವಜನಿಕರಲ್ಲಿ ಅಪಾರವಾದ ಆಸಕ್ತಿಯಿದೆ. ಇನ್ನೊಂದೆಡೆ, ವಿವಿಧ ಸ್ತರಗಳಲ್ಲಿ ರಾಜಕೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಕೂಡಾ ಉತ್ತಮವಾಗಿಲ್ಲ.
ಕರಣ್‌ಥಾಪರ್: ಬಹುಶಃ ವೈಯಕ್ತಿಕ ಹೊಣೆಗಾರಿಕೆಯ ಕೊರತೆ ಇದಕ್ಕೆ ಕಾರಣವೇ?.
ಹಾಮಿದ್ ಅನ್ಸಾರಿ: ಸರಿ. ಒಟ್ಟಾರೆಯಾಗಿ ಹೌದೆನ್ನಬಹುದು. ಆದರೆ ವೈಯಕ್ತಿಕ ನೆಲೆಯಲ್ಲಿ ಅಲ್ಲ.
ಕರಣ್ ಥಾಪರ್: ಹಾಗಾದರೆ, ಜನತಾ ಪ್ರಾತಿನಿಧ್ಯದ ಸಂಸ್ಥೆಗಳ ಗುಣಮಟ್ಟ ಕುಸಿದಿದೆಯೇ? ಈ ಸಂಸ್ಥೆಗಳು ತಾವಾಗಿ, ಪಟ್ಟಭದ್ರ ಶಕ್ತಿಗಳಾಗಿ ಮಾರ್ಪಾಡುಗೊಂಡಿವೆಯೇ?.
ಹಾಮಿದ್ ಅನ್ಸಾರಿ: ಇಲ್ಲ, ಗುಣಮಟ್ಟ ಹಾಳಾಗಿಲ್ಲ. ಆದರೆ ಅವುಗಳ ನಡವಳಿಕೆಗಳು ಬದಲಾಗಿವೆ. ನೀವು ನಂಬಲಾರಿರಿ. ಉದಾಹಣೆಗೆ 50ರ ದಶಕದ ಮಧ್ಯದಲ್ಲಿ ಅಥವಾ 60ರ ದಶಕದಲ್ಲಿಯೂ ಈಗ ನಡೆಯುತ್ತಿರುವಂತೆ, ಸದನ ಕಲಾಪಗಳಿಗೆ ಅಡ್ಡಿಪಡಿಸಲಾಗುತ್ತಿತ್ತು.
ಕರಣ್ ಥಾಪರ್: ಮನಮೋಹನ್‌ಸಿಂಗ್‌ರಿಂದ ಆರಂಭಿಸಿ ನರೇಂದ್ರ ಮೋದಿ ತನಕ ಎರಡು ವಿಭಿನ್ನ ಪ್ರಧಾನಿಗಳೊಂದಿಗೆ ನೀವು ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದೀರಿ. ಇವರಿಬ್ಬರ ವ್ಯಕ್ತಿತ್ವ ತೀರಾ ಭಿನ್ನವಾದುದೆಂದು ನಮಗೆಲ್ಲರಿಗೂ ಗೊತ್ತು. ಆದರೆ ಅವರಲ್ಲೂ ಪರಸ್ಪರ ಸಾಮ್ಯತೆಗಳಿವೆಯೆಂದು ನೀವು ತಿಳಿದಿದ್ದೀರಾ?
ಹಾಮಿದ್ ಅನ್ಸಾರಿ: ಈ ಬಗ್ಗೆ ಹೇಳಲು ಸ್ವಲ್ಪ ಸಮಯ ಬೇಕಾಗಬಹುದೆಂದು ನಾನು ಭಾವಿಸಿದ್ದೇನೆ.
ಕರಣ್ ಥಾಪರ್: ಅಂದರೆ, ಈಗ ನೀವು ಅದನ್ನು ಹೇಳಲಾರಿರಿ...
ಹಾಮಿದ್ ಅನ್ಸಾರಿ: ಈ ಎರಡು ವ್ಯಕ್ತಿತ್ವಗಳು ತೀರಾ ವಿಭಿನ್ನವಾಗಿವೆ. ಅವರ ಕಾರ್ಯನಿರ್ವಹಣಾ ಶೈಲಿ ತುಂಬಾ ವಿಭಿನ್ನವಾದುದಾಗಿದೆ. ಈಗ ನೀವು ಅವರ ಕಾರ್ಯನಿರ್ವಹಣಾ ವಿಧಾನದಲ್ಲಿ ಕೆಲವು ಸಮಾನ ಅಂಶಗಳನ್ನು ಕಾಣಬಹುದು. ಈ ಎರಡು ವ್ಯಕ್ತಿತ್ವಗಳು ಎಲ್ಲರಿಗೂ ಗೋಚರವಾಗುತ್ತಿವೆ. ಆ ಬಗ್ಗೆ ನಾನೇನು ಹೇಳಬೇಕಾಗಿಲ್ಲ.
ಕರಣ್‌ಥಾಪರ್: ಹಾಲಿ ಪ್ರಧಾನಿಯ ಜೊತೆ ನೀವು ಉತ್ತಮವಾದ ನಿಕಟ ಬಾಂಧವ್ಯವನ್ನು ಹೊಂದಿದ್ದೀರಾ?. ಅಥವಾ ಅದು ಕೇವಲ ಔಪಚಾರಿಕವಾಗಿತ್ತೇ?
ಹಾಮಿದ್ ಅನ್ಸಾರಿ: ಬಹುತೇಕ ಸಂದರ್ಭಗಳಲ್ಲಿ ಅದು ಔಪಚಾರಿಕವಾಗಿತ್ತು. ಆದರೆ ಅತ್ಯಂತ ಗಂಭೀರವಾದ ಮಾತುಕತೆಗಳು ನಡೆದ ಸಂದರ್ಭಗಳೂ ಇದ್ದವು.
ಕರಣ್‌ಥಾಪರ್: ಉಪರಾಷ್ಟ್ರಪತಿಯಾಗಿ ಮೊದಲ ಬಾರಿಗೆ ನೀವು ಹುಟ್ಟುಹಬ್ಬ ಆಚರಿಸಿದಾಗ ಡಾ.ಮನಮೋಹನ್‌ಸಿಂಗ್ ಹಾಗೂ ಅವರ ಪತ್ನಿ ನಿಮಗೆ ಶುಭ ಕೋರಲು ಆಗಮಿಸಿದ್ದರೆಂದು ನೀವು ಹೇಳಿದ್ದೀರಿ. ಮೋದಿ ಪ್ರಧಾನಿಯಾದ ಬಳಿಕ ನೀವು ಮೂರು ಹುಟ್ಟುಹಬ್ಬಗಳನ್ನು ಆಚರಿಸಿದ್ದೀರೆಂದು ನಾನು ಭಾವಿಸುತ್ತೇನೆ. ಮೋದಿ ನಿಮಗೆ ಶುಭಾಶಯಗಳನ್ನು ಸಲ್ಲಿಸಿದ್ದರೇ?.
ಹಾಮಿದ್ ಅನ್ಸಾರಿ: ಓಹೋ, ನಿಯಮಿತವಾಗಿ. ಕಳೆದ ಬಾರಿ, ಅವರು ದೇಶದಿಂದ ಹೊರಗಿದ್ದಾಗ, ಸಂದೇಶವೊಂದನ್ನು ರವಾನಿಸಿರುವುದು ನನಗೆ ನೆನಪಾಗುತ್ತಿದೆ. ಆದರೆ ಮೊದಲ ಎರಡು ಸಂದರ್ಭಗಳಲ್ಲಿ ಅವರು ಖುದ್ದಾಗಿ ಆಗಮಿಸಿ ಶುಭ ಕೋರಿದ್ದರು.
ಕರಣ್ ಥಾಪರ್: ಈ ಒಂದು ಸಂಗತಿಯು, ಅಪಾರವಾದ ಗಮನಸೆಳೆದಿತ್ತು. 2015ರಲ್ಲಿ ಆಗ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಈಗಲೂ ಆ ಸ್ಥಾನದಲ್ಲೇ ಮುಂದುವರಿದಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು ಉಪರಾಷ್ಟ್ರಪತಿಯಾಗಿ ನಿಮ್ಮ ನಡವಳಿಕೆಯನ್ನು ಬಹಿರಂಗವಾಗಿ ಟೀಕಿಸಿ ಟ್ವೀಟ್ ಮಾಡಿದ್ದರು. ಆ ವರ್ಷ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೀವು ಉದ್ದೇಶಪೂರ್ವಕವಾಗಿ ಭಾಗವಹಿಸಿರಲಿಲ್ಲವೆಂದು ಆತ ಹೇಳಿದ್ದರು. ಜೊತೆಗೆ ನಿಮ್ಮ ಉಸ್ತುವಾರಿಯಲ್ಲಿದ್ದ ರಾಜ್ಯಸಭಾ ಟಿವಿ ಕೂಡಾ ಆ ಕಾರ್ಯಕ್ರಮವನ್ನು ಪ್ರಸಾರ ಮಾಡಲಿಲ್ಲವೆಂದು ಆತ ತಿಳಿಸಿದ್ದರು. ಆನಂತರ ಮಾಧವ್ ಈ ಬಗ್ಗೆ ಕ್ಷಮೆಯಾಚಿಸಿದ್ದರು ಹಾಗೂ ತನ್ನ ಟ್ವೀಟ್‌ಗಳನ್ನು ಅಳಿಸಿಹಾಕಿದರೆಂಬುದು ಈಗ ನನಗೆ ಗೊತ್ತಾಗಿದೆ. ಹೀಗೆ ಉಪರಾಷ್ಟ್ರಪತಿಯನ್ನು ಟೀಕಿಸಿದ್ದಷ್ಟೇ ಅಲ್ಲ, ಇದುವರೆಗೆ ಯಾವುದೇ ಆಡಳಿತಾರೂಢ ಪಕ್ಷದ ಪ್ರಧಾನ ಕಾರ್ಯದರ್ಶಿ ಹೀಗೆ ಕ್ಷಮೆಯಾಚಿಸಿದ ಯಾವುದೇ ಪೂರ್ವನಿದರ್ಶನಗಳಿಲ್ಲ. ಈ ಬಗ್ಗೆ ನಿಮಗೆ ಅಚ್ಚರಿ ಹಾಗೂ ಬೇಸರವಾಗಿತ್ತೇ?.
ಹಾಮಿದ್ ಅನ್ಸಾರಿ: ಅಚ್ಚರಿಗೊಂಡಿದ್ದೆ. ಹೌದು. ವಾಸ್ತವಾಂಶಗಳೇನೆಂಬುದು ಎಲ್ಲರಿಗೂ ತಿಳಿದಿದೆ ಹಾಗೂ ಅವು ಅತ್ಯಂತ ಸ್ಪಷ್ಟವಾಗಿವೆ. ಕಚೇರಿಯಲ್ಲಿರುವ ನನ್ನ ಸಹದ್ಯೋಗಿಗಳು, ಅತ್ಯಂತ ತ್ವರಿತವಾಗಿ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದರು. ಅಲ್ಲಿ ಯಾವುದೇ ಸಂದಿಗ್ಧತೆಯಾಗಲಿ ಅಥವಾ ಗೊಂದಲವಾಗಲಿ ಇರಲಿಲ್ಲ.
ಕರಣ್‌ಥಾಪರ್: ಹೀಗಾಗಿದ್ದುದಕ್ಕೆ ನಿಮಗೆ ಬೇಸರವಾಗಿತ್ತೇ?
ಹಾಮಿದ್ ಅನ್ಸಾರಿ: ನಿಜವಾಗಿಯೂ ಇಲ್ಲ.
ಕರಣ್ ಥಾಪರ್: ಆ ಜಂಟಲ್‌ಮ್ಯಾನ್ ಯಾವತ್ತಾದರೂ ವೈಯಕ್ತಿಕವಾಗಿ ಕ್ಷಮೆಯಾಚಿಸಿದ್ದರೇ? ಅಥವಾ ವೈಯಕ್ತಿಕವಾಗಿ ಈ ಬಗ್ಗೆ ಏನಾದರೂ ವಿವರಣೆ ನೀಡಿದ್ದರೇ?.
ಹಾಮಿದ್ ಅನ್ಸಾರಿ: ಆ ಬಗ್ಗೆ ಮಾತನಾಡುವುದು ಬೇಡ.
ಕರಣ್‌ಥಾಪರ್: ನೀವು ಉಪರಾಷ್ಟ್ರಪತಿಯಾಗಿದ್ದಾಗ ಆಫ್ರಿಕಾಗೆ ನೀವು ವ್ಯಾಪಕವಾಗಿ ಪ್ರವಾಸ ಮಾಡಿದ್ದೀರಿ. ಕಳೆದ ಹತ್ತು ವರ್ಷಗಳಲ್ಲಿ ನೀವೊಬ್ಬರೇ ಹತ್ತು ವಿವಿಧ ದೇಶಗಳಿಗೆ ಪ್ರಯಾಣಿಸಿದ್ದೀರಿ. ಆದರೆ ಭಾರತದಲ್ಲಿ ಆಫ್ರಿಕನ್ನರ ಮೇಲೆ ಹಲ್ಲೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದ ಸಮಯದಲ್ಲೇ ಈ ಭೇಟಿಗಳು ನಡೆದಿವೆ. ಈ ಬಗ್ಗೆ ಅಫ್ರಿಕನ್ ರಾಯಭಾರಿಗಳಲ್ಲಿ ವ್ಯಾಪಕವಾಗಿ ಆತಂಕ ವ್ಯಕ್ತವಾಗಿದ್ದು, ಅವರು ಸಾರ್ವಜನಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರಲ್ಲವೇ?.
ಹಾಮಿದ್ ಅನ್ಸಾರಿ: ಹೌದು.
ಕರಣ್ ಥಾಪರ್: ನೀವು ಭೇಟಿ ಮಾಡಿದ ರಾಷ್ಟ್ರಗಳ ವರಿಷ್ಠರು ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪಿಸಿದ್ದರೇ?
ಹಾಮಿದ್ ಅನ್ಸಾರಿ: ನನಗೆ ನೆನಪಿರುವ ಮಟ್ಟಿಗೆ ಇಲ್ಲ.
ಕರಣ್ ಥಾಪರ್: ಹಾಗಾದರೆ, ಅವು ನಿಮ್ಮನ್ನು ತಬ್ಬಿಬ್ಬುಗೊಳಿಸಬಹುದಾದ ವಿಷಯದ ಗೋಜಿಗೆ ಹೋಗದೆ ಇರುವಷ್ಟು ರಾಜತಾಂತ್ರಿಕತೆಯುಳ್ಳವರೆಂದಾಯಿತು?
ಹಾಮಿದ್ ಅನ್ಸಾರಿ: ಸರಿ. ಅವರು ಆ ವಿಷಯವನ್ನು ಮುಟ್ಟುವ ಗೋಜಿಗೇ ಹೋಗಿಲ್ಲ. ಪ್ರತಿಯೊಂದು ಭೇಟಿಗಳಲ್ಲೂ ನಾವು ಅತ್ಯುತ್ತಮ ಮಾತುಕತೆಗಳನ್ನು ನಡೆಸಿದ್ದೆವು. ಭಾರತ-ಆಫ್ರಿಕನ್ ಬಾಂಧವ್ಯಕ್ಕೆ ಪರಿಪೂರ್ಣತೆಯನ್ನು ತಂದುಕೊಟ್ಟಿದ್ದೇವೆ. ಆ ಪ್ರತಿಯೊಂದು ದೇಶಗಳಲ್ಲಿಯೂ ನನಗೆ ಮತ್ತು ನನ್ನ ಪತ್ನಿಗೆ ಉತ್ತಮವಾದ ಸ್ವಾಗತ ದೊರೆತಿದೆ.
ಕರಣ್‌ಥಾಪರ್: ಈ ಸಂದರ್ಭವನ್ನು ನಾನು ದೇಶದಲ್ಲಿ ನೆಲೆಸಿರುವ ಸಾಮಾನ್ಯ ಪರಿಸ್ಥಿತಿಯ ಬಗ್ಗೆ ಮಾತನಾಡಲಿಚ್ಛಿಸುತ್ತೇನೆ. ಯಾಕೆಂದರೆ, ಇದು ದೇಶದ ಬೃಹತ್ ವರ್ಗಗಳಿಗೆ ಸಂಬಂಧಿಸಿದ ವಿಷಯವೆಂದು ನನಗೆ ಗೊತ್ತಿದೆ. ಗೋರಕ್ಷಕರ ದಾಳಿ ಘಟನೆಗಳ ಕುರಿತು ಓದದ ಒಂದು ದಿನವೂ ಇರಲಾರದು. ಮೊದಲು ನಾವು ಥಳಿತದ ಘಟನೆಗಳನ್ನು ಓದುತ್ತಿದ್ದೆವು. ನಾವು ಬೀಫ್ ನಿಷೇಧದ ಬಗ್ಗೆ ಓದಿದ್ದೇವೆ. ‘ಭಾರತ್ ಮಾತಾ ಕೀ ಜೈ’ ಎಂದು ಹೇಳಲು ನಿರಾಕರಿಸಿದವರಿಗೆ ಬಹಿರಂಗವಾಗಿ ದೇಶ ಬಿಟ್ಟು ತೆರಳುವಂತೆ ಹೇಳಲಾಯಿತು. ಲವ್ ಜಿಹಾದ್ ಆರೋಪಗಳು, ಘರ್‌ವಾಪಸಿ ಅಭಿಯಾನಗಳು ಹಾಗೂ ಪ್ರಗತಿಪರ ಚಿಂತಕರ ಕೊಲೆಗಳು ನಡೆಯುತ್ತಿವೆ?. ಇವೆಲ್ಲವುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?. ಇಲ್ಲಿ ಕುಳಿತುಕೊಂಡು, ನೀವು ಇವೆಲ್ಲವನ್ನು ಯಾವ ರೀತಿಯಾಗಿ ಪರಾಮರ್ಶಿಸುತ್ತೀರಿ?.
ಹಾಮಿದ್ ಅನ್ಸಾರಿ: ಭಾರತೀಯ ವೌಲ್ಯಗಳ ಕುಸಿತ, ಸಾಮಾನ್ಯ ಕಾನೂನು ಅನುಷ್ಠಾನದ ಕೆಲಸವನ್ನು ವಿವಿಧ ಸ್ಥಳಗಳಲ್ಲಿ, ವಿವಿಧ ಸ್ತರಗಳಲ್ಲಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಸಾಮರ್ಥ್ಯದ ಕುಸಿತ ಹಾಗೂ ಪ್ರತಿಯೊಬ್ಬ ನಾಗರಿಕನ ಭಾರತೀಯತೆಯನ್ನು ಪ್ರಶ್ನಿಸಲಾಗುತ್ತಿರುವ ಕಳವಳಕಾರಿ ಸಂಗತಿಯಾಗಿದೆ.
ಕರಣ್‌ಥಾಪರ್: ಭಾರತೀಯ ವೌಲ್ಯಗಳು ಯಾಕೆ ಹಠಾತ್ತನೆ ಕುಸಿಯತೊಡಗಿವೆ?.
ಹಾಮಿದ್ ಅನ್ಸಾರಿ: ಯಾಕೆಂದರೆ ನಾವು 70 ವರ್ಷಗಳಿಂದಲ್ಲ, ಹಲವು ಶತಮಾನಗಳಿಂದಲೇ ಬಹುತ್ವವಾದಿ ಸಮಾಜವಾಗಿದ್ದೆವು. ಪರಸ್ಪರ ಸ್ವೀಕೃತಿಯ ವಾತಾವರಣದಲ್ಲಿ ಜೀವಿಸಿದ್ದೆವು.
ಕರಣ್ ಥಾಪರ್: ಈ ವಾತಾವರಣವು ಹಠಾತ್ತನೆ ಬದಲಾಗುತ್ತಿದೆ?.
ಹಾಮಿದ್ ಅನ್ಸಾರಿ: ಅದು ಬೆದರಿಕೆಗೊಳಗಾಗಿದೆ.
ಕರಣ್‌ಥಾಪರ್: ನಾವು ಅಸಹಿಷ್ಣು ಸಮಾಜವಾಗುತ್ತಿದ್ದೇವೆಂದು ಹಲವರು ಭಾವಿಸಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ನೀವು ಓದಿರಬಹುದು, ಟಿವಿಯಲ್ಲಿ ಈ ಕುರಿತಾದ ಚರ್ಚೆಗಳನ್ನು ನೋಡಿರಬಹುದು. ಸ್ವತಃ ನಿಮಗೆ ಈ ಬಗ್ಗೆ ಭಯವಾಗುತ್ತಿದೆಯೇ?.
ಹಾಮಿದ್ ಅನ್ಸಾರಿ: ಹೌದು. ನನ್ನ ಸಹ ನಾಗರಿಕರ ಜೊತೆ ನಾನು ಒಡನಾಟವಿಟ್ಟುಕೊಂಡಿದ್ದೇನೆ. ಸಮಾಜದ ವಿವಿಧ ಕ್ಷೇತ್ರಗಳ ಮಂದಿ ನನ್ನೊಂದಿಗೆ ಈ ಬಗ್ಗೆ ಮಾತನಾಡುತ್ತಿರುತ್ತಾರೆ.
- ಕೃಪೆ: ಝಕಾತ್ ಮೀಡಿಯಾ