ವಿಶ್ವದ ರಿಸೈಕ್ಲಿಂಗ್‌ನ ಕತೆ ಏನು?
ಚೀನಾ ವಿದೇಶಿ ತ್ಯಾಜ್ಯವನ್ನು ನಿಷೇಧಿಸಿದೆ

ಉತ್ಪಾದನಾರಂಗದಲ್ಲಿ ಚೀನಾದ ಜಾಗತಿಕ ಪ್ರಾಬಲ್ಯವೇ ನಾವೀಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿದೆ. ಹಲವು ದೇಶಗಳು ತಮ್ಮ ತ್ಯಾಜ್ಯ ಮತ್ತು ರಿಸೈಕ್ಲಿಂಗ್ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಮಾರುಕಟ್ಟೆಯನ್ನು, (ಚೀನಾವನ್ನು) ಮಾತ್ರ ಅವಲಂಬಿಸಿರುವುದೇ ಸಮಸ್ಯೆಯ ಮೂಲವಾಗಿದೆ.
ಜಾಗತಿಕ ಉತ್ಪಾದನಾರಂಗದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯವು ಅದು ಹಲವು ವರ್ಷಗಳಿಂದ ಅನೇಕ ರೀತಿಯ ಮರುಬಳಕೆಯ ಹಲವು ಸಾಮಗ್ರಿಗಳ ಅತ್ಯಂತ ದೊಡ್ಡ ಜಾಗತಿಕ ಆಮದುದಾರ ಎಂಬುದನ್ನೂ ಸೂಚಿಸುತ್ತದೆ. ಕಳೆದ ವರ್ಷ ಚೀನಿ ಉತ್ಪಾದಕರು ಯುಕೆ, ಯೂರೋಪಿಯನ್ ಯೂನಿಯನ್ ಅಮೆರಿಕ ಮತ್ತು ಜಪಾನ್ ಒಳಗೊಂಡು, ಅಭಿವೃದ್ಧಿ ಹೊಂದಿದ ದೇಶಗಳಿಂದ, 7.3ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ತ್ಯಾಜ್ಯವನ್ನು ಆಮದು ಮಾಡಿಕೊಂಡಿದ್ದರು.
ಅದೇನಿದ್ದರೂ, ಜುಲೈ ತಿಂಗಳಲ್ಲಿ ಆಮದಿತ ಸಾಮಗ್ರಿಗಳ ಮೇಲೆ ಹೊರಿಸಲಾಗಿದ್ದ ಗುಣಮಟ್ಟ ನಿಯಂತ್ರಣದಲ್ಲಿ ಚೀನಾ ಭಾರೀ ಬದಲಾವಣೆಗಳನ್ನು ಪ್ರಕಟಿಸಿತು. ವರ್ಷಾಂತ್ಯದ ವೇಳೆಗೆ ತಾನು 24 ರೀತಿಗಳ ಪುನರ್‌ಬಳಸಬಹುದಾದ ಸಾಮಗ್ರಿಗಳ ಮತ್ತು ಘನತ್ಯಾಜ್ಯಗಳ ಆಮದನ್ನು ನಿಷೇಧಿಸುವುದಾಗಿ ಅದು ವಿಶ್ವವಾಣಿಜ್ಯ ಸಂಘಟನೆಗೆ ತಿಳಿಸಿತು. ಯಾಂಗ್ ಲಾಜಿ ಅಥವಾ ವಿದೇಶಿ ತ್ಯಾಜ್ಯದ ವಿರುದ್ಧ ನಡೆಸಲಾಗುವ ಅಭಿಯಾನವು ಪ್ಲಾಸ್ಟಿಕ್, ಜವಳಿ(ಬಟ್ಟೆ)ಗಳು ಮತ್ತು ಮಿಶ್ರ ಕಾಗದಕ್ಕೆ ಅನ್ವಯಿಸುತ್ತದೆ. ಮತ್ತು ಇದರ ಪರಿಣಾಮವಾಗಿ, ಆಮದಿತ ಸಾಮಗ್ರಿಗಳಿಗೆ ಬದಲಾಗಿ ತನ್ನದೇ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ರಿಸೈಕಲ್ ಆದ ಸಾಮಗ್ರಿಯನ್ನು ಬಳಸುವುದರಿಂದ ಅದು ಈಗ ತೆಗೆದುಕೊಳ್ಳುವುದಕ್ಕಿಂತ ತುಂಬ ಕಡಿಮೆ ತ್ಯಾಜ್ಯವನ್ನು ತೆಗೆದುಕೊಳ್ಳುತ್ತದೆ. ಚೀನಾದಲ್ಲಿ ಬೆಳೆಯುತ್ತಿರುವ, ಹೆಚ್ಚುತ್ತಿರುವ ಮಧ್ಯಮವರ್ಗ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ಪ್ರಭಾವಿತರಾದ ಬಳಕೆದಾರರಿಂದ ಅದಕ್ಕೆ ಈ ತ್ಯಾಜ್ಯ ವಸ್ತುಗಳು ಸಿಗಲಿವೆ.
ಇದರಿಂದಾಗಿ ದೂರಗಾಮಿ ಪರಿಣಾಮಗಳಾಗಲಿವೆ. ರಿಸೈಕಲ್ ಆದ ಪ್ಲಾಸ್ಟಿಕ್‌ಗೆ ಈಗ ಚೀನಾ ಬಹದೊಡ್ಡ ಪ್ರಬಲ ಮಾರುಕಟ್ಟೆ. ಅದು ಈಗ ಆಮದು ಮಾಡಿಕೊಳ್ಳುತ್ತಿರುವ ತ್ಯಾಜ್ಯದ ಬಹಳಷ್ಟು ಪಾಲು, ವಿಶೇಷವಾಗಿ ಲೋವರ್‌ಗ್ರೇಡ್ ಸಾಮಗ್ರಿಗಳು, ಕೊಳ್ಳುವವರಿಲ್ಲದೆ ತ್ಯಾಜ್ಯರಾಶಿಗಳು ಬೆಟ್ಟಗಳಾಗಿ ನಿಲ್ಲಲಿವೆ. ಇಯು27 ಸೇರಿದಂತೆ ಇದು ಇತರ ದೇಶಗಳನ್ನು ಸಮಾನವಾಗಿ ಕಾಡಲಿರುವ ಸಮಸ್ಯೆ. ಈ ದೇಶಗಳ ರಿಸೈಕಲ್ ಮಾಡಲಾದ ಪ್ಲಾಸ್ಟಿಕ್‌ನ ಶೇ.87ರಷ್ಟು ನೇರವಾಗಿ ಅಥವಾ (ಹಾಂಗ್‌ಕಾಂಗ್) ಮೂಲಕ ಪರೋಕ್ಷವಾಗಿ ಚೀನಾಕ್ಕೆ ರಫ್ತಾಗುತ್ತಿತ್ತು. ಜಪಾನ್ ಮತ್ತು ಅಮೆರಿಕ ಕೂಡ ತಮ್ಮ ರಿಸೈಕಲ್ ಮಾಡಲಾದ ಪ್ಲಾಸ್ಟಿಕ್ ಕೊಂಡುಕೊಳ್ಳಲು ಚೀನಾವನ್ನೇ ಅವಲಂಬಿಸಿವೆ. ಕಳೆದ ವರ್ಷ ಅಮೆರಿಕ ಅಂದಾಜು 495 ಮಿಲಿಯನ್ ಡಾಲರ್‌ಗಳಷ್ಟು ವೌಲ್ಯದ 1.42 ಮಿಲಿಯನ್‌ಟನ್‌ಗಳಷ್ಟು ಗುಜರಿ(ಸ್ಕ್ರಾಪ್) ಪ್ಲಾಸ್ಟಿಕ್‌ಅನ್ನು ಚೀನಾಕ್ಕೆ ರಫ್ತುಮಾಡಿತ್ತು.
ಪ್ಲಾಸ್ಟಿಕ್ ಸಮಸ್ಯೆಗಳು
ಹಾಗಾದರೆ, ಚೀನಿಯರು ಪ್ಲಾಸ್ಟಿಕ್‌ನ್ನು ಸ್ವೀಕರಿಸಲು ನಿರಾಕರಿಸಿದ ಬಳಿಕ ಈ ಎಲ್ಲ ದೇಶಗಳು ಸಂಗ್ರಹಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಅವಸ್ಥೆ ಏನಾಗುತ್ತದೆ? ರಿಸೈಕ್ಲಿಂಗ್‌ಗಾಗಿ ಸಂಗ್ರಹಿಸಲ್ಪಟ್ಟ ಪ್ಲಾಸ್ಟಿಕ್, ಶಕ್ತಿ ಮರಳಿಪಡೆಯುವಿಕೆ (ಇನ್‌ಸಿನರೇಶನ್)ಗೆ ಹೋಗಬಹುದು. ಈ ಪ್ಲಾಸ್ಟಿಕ್ ತ್ಯಾಜ್ಯಗಳು ಪಳೆಯುಳಿಕೆ ಇಂಧನ ಆಧಾರಿತ ದ್ರವ್ಯ/ಸಾಮಗ್ರಿಯಾಗಿರುವುದರಿಂದ, ಅವು ತುಂಬ ಚೆನ್ನಾಗಿ ಸುಡುತ್ತವೆ. ಆದ್ದರಿಂದ, ಅವು ವಿದ್ಯುತ್ ಉತ್ಪಾದಿಸಿ, ಇಂಧನ ಸ್ವಾವಲಂಬನೆಯನ್ನು ಸುಧಾರಿಸಬಲ್ಲವು.
ಹಾಗೆಯೇ, ಅವುಗಳು (ಆದರ್ಶ ಬಳಕೆಯಲ್ಲವಾದರೂ) ಹೊಂಡಗಳನ್ನು ತುಂಬಿಸಲು (ಲ್ಯಾಂಡ್‌ಫಿಲ್) ಬಳಕೆಯಾಗಬಹುದು. ಅಥವಾ ಹೊಸ ಮಾರುಕಟ್ಟೆಗಳು ಲಭ್ಯವಾಗುವವರೆಗೆ ಅವುಗಳನ್ನು ದಾಸ್ತಾನುಮಾಡಿ ಇಡಬಹುದು. ಇದು ಕೂಡ ಸಮಸ್ಯೆಗಳನ್ನು ತರುತ್ತದೆ. ರೀಸೈಕಲ್ ಮಾಡಬಹುದಾದ ಸಾಮಗ್ರಿಗಳನ್ನು ರಾಶಿ ಹಾಕಿಟ್ಟ ನಿವೇಶನಗಳಲ್ಲಿ ನೂರಾರು ಬೆಂಕಿ ಅವಘಡಗಳು ಸಂಭವಿಸಿವೆ.
ಪ್ಲಾಸ್ಟಿಕ್ ಜೊತೆ ನಮ್ಮ ಸಂಬಂಧ ಬದಲಾಗಬೇಕಾದ ಕಾಲ ಸನ್ನಿಹಿತವಾಗಿದೆಯೇ?
ಹಲವು ವಿಧಗಳಲ್ಲಿ ಉಪಯೋಗಿಯಾದರೂ ಪ್ಲಾಸ್ಟಿಕ್ ಉಂಟುಮಾಡುವ ಸಮಸ್ಯೆಗಳು, ಅತಿಮುಖ್ಯವಾಗಿ ಪ್ಲಾಸ್ಟಿಕ್‌ಕಸ ಮತ್ತು ಸಾಗರ ಪ್ಲಾಸ್ಟಿಕ್‌ಗಳು, ಈಗ ಹೆಚ್ಚಿನ ಗಮನಪಡೆಯುತ್ತಿವೆ.
ಈ ಸಮಸ್ಯೆಗಳಿಗಿರುವ ಒಂದು ಪರಿಹಾರವೆಂದರೆ, ಅದರ ಕಾರ್ಯಗಳನ್ನು ಮಿತಿಗೊಳಿಸುವುದು, ಬಳಸಿ ಎಸೆಯಬಹುದಾದ ಹಲವು ವಸ್ತುಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತಿದೆ. ಅವುಗಳಲ್ಲಿ ಕೆಲವನ್ನು ನೈರ್ಮಲ್ಯ ಕಾರಣಗಳಿಗಾಗಿ (ರಕ್ತದ ಚೀಲಗಳು ಮತ್ತು ಇತರ ವೈದ್ಯಕೀಯ ಐಟಮ್‌ಗಳು) ಎಸೆಯಲೇಬೇಕಾಗುತ್ತದೆ. ಆದರೆ ಇತರ ಅನೇಕ ವಸ್ತುಗಳನ್ನು ಅನುಕೂಲಕ್ಕಾಗಿ ಎಸೆಯಲಾಗುತ್ತಿದೆ.
ಬಳಕೆದಾರರ ದೃಷ್ಟಿಯಲ್ಲಿ ನೋಡಿದರೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡುವ ಹಲವು ದಾರಿಗಳಿವೆ. ಪ್ಲಾಸ್ಟಿಕ್‌ಬ್ಯಾಗ್‌ಗಳನ್ನು ಬಳಸಿದಾಗ ಹಣಕಾಸು ರಿಯಾಯಿತಿ/ ಡಿಸ್ಕೌಂಟ್ ಕೊಡದಿರುವುದು ಇಂತಹ ಒಂದು ದಾರಿ. ಇಂತಹ ಕ್ರಮ ಪ್ಲಾಸ್ಟಿಕ್‌ಬಳಕೆಯನ್ನು ಕಡಿಮೆಮಾಡುವುದರಲ್ಲಿ ತುಂಬ ಫಲನೀಡಿದೆ. ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಬಳಸಿ ಎಸೆಯುವ ಕೆಲವು ರೀತಿಯ ವಸ್ತುಗಳನ್ನು (ಪ್ಲಾಸ್ಟಿಕ್ ಡ್ರಿಂಕಿಂಗ್ ಸ್ಟ್ರಾಗಳು) ನಿಷೇಧಿಸಲಾಗಿದೆ.
ಪ್ಲಾಸ್ಟಿಕ್ ಬಾಟಲಿಗಳು ಮತ್ತು ಡ್ರಿಂಕ್ ಕ್ಯಾನ್‌ಗಳನ್ನು ಒಂದು ನಿರ್ದಿಷ್ಟ ಬೆಲೆಗೆ ಮರಳಿಸುವ ಕ್ರಮ ಕೂಡ ಜನರ, ಗ್ರಾಹಕರ ಪ್ಲಾಸ್ಟಿಕ್ ಬಳಕೆಯಲ್ಲಿ ಬದಲಾವಣೆ ತರಬಲ್ಲದು. ಶೃಂಗಾರ ಸಾಧನಗಳಲ್ಲಿ ಬಳಕೆಯಾಗುವ ಮೈಕ್ರೊ-ಬೀಡ್ಸ್ ಗಳನ್ನು ನಿಷೇಧಿಸುವ ಬಗ್ಗೆ ತಾನು ಯೋಚಿಸುತ್ತಿರುವುದಾಗಿ ಬ್ರಿಟಿಷ್ ಸರಕಾರ ಪ್ರಕಟಿಸಿದೆ. ಅಮೆರಿಕ, ಕೆನಡಾ, ಹಲವು ಯುರೋಪಿಯನ್ ಯೂನಿಯನ್ ರಾಷ್ಟ್ರಗಳು, ದಕ್ಷಿಣ ಕೊರಿಯಾ ಮತ್ತು ನ್ಯೂಝಿಲ್ಯಾಂಡ್ ಕೂಡ ಪ್ಲಾಸ್ಟಿಕ್ ನಿಷೇಧಿಸಲು ಯೋಜನೆಗಳನ್ನು ರೂಪಿಸುತ್ತಿವೆ.
ಹಲವು ಸ್ಥಳೀಯ ಸರಕಾರಗಳು, ಸಂಸ್ಥೆಗಳು ರಿಸೈಕ್ಲಿಂಗ್‌ಗಾಗಿ ಪ್ಲಾಸ್ಟಿಕ್ ಸಂಗ್ರಹಿಸಿ ರಾಶಿಹಾಕುತ್ತವೆ. ಇದರಿಂದ ಮಾಲಿನ್ಯಮಟ್ಟಗಳು ಏರಿ, ಪ್ಲಾಸ್ಟಿಕ್‌ನ ಗುಣಮಟ್ಟ ಕಡಿಮೆಯಾಗಿ, ಅದನ್ನು ಸೀಮಿತ ಮಾರುಕಟ್ಟೆಗೆ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ.
ಇದಕ್ಕೆ ಬದಲಾಗಿ, ರಿಸೈಕಲ್ ಆದ ಪ್ಲಾಸ್ಟಿಕ್‌ಅನ್ನು ಪೆಟ್ರೋ ಕೆಮಿಕಲ್ ರಂಗಕ್ಕೆ ರಾಸಾಯನಿಕಗಳನ್ನು ಪೂರೈಸಲು ಬಳಸಬಹುದು. ಸಾರಿಗೆ ವಿಮಾನಯಾನ ರಂಗಕ್ಕೆ ಇಂಧನಕ್ಕಾಗಿ ಬಳಸಬಹುದು.
ಉತ್ಪಾದನಾರಂಗದಲ್ಲಿ ಚೀನಾದ ಜಾಗತಿಕ ಪ್ರಾಬಲ್ಯವೇ ನಾವೀಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿದೆ. ಹಲವು ದೇಶಗಳು ತಮ್ಮ ತ್ಯಾಜ್ಯ ಮತ್ತು ರಿಸೈಕ್ಲಿಂಗ್ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಮಾರುಕಟ್ಟೆಯನ್ನು, (ಚೀನಾವನ್ನು) ಮಾತ್ರ ಅವಲಂಬಿಸಿರುವುದೇ ಸಮಸ್ಯೆಯ ಮೂಲವಾಗಿದೆ. ನಾವೀಗ ನಮ್ಮ ತ್ಯಾಜ್ಯ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳಲು ಸಕಾಲ, ಸುಸಂದರ್ಭ ಒದಗಿ ಬಂದಿದೆ. ರೀಸೈಕಲ್ ಮಾಡಲಾಗುವ ಪ್ಲಾಸ್ಟಿಕನ್ನು ಹೊಸ ರೀತಿಗಳಲ್ಲಿ ಬಳಸಿಕೊಳ್ಳಲು ನಾವು ಕಲಿಯಬೇಕಾಗಿದೆ.
ಕೃಪೆ: theconversation.com