Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಕನಕದಾಸರ ಹರಿಭಕ್ತಿಸಾರ: ವೆಚಾರಿಕ...

ಕನಕದಾಸರ ಹರಿಭಕ್ತಿಸಾರ: ವೆಚಾರಿಕ ವಿವೇಚನೆ

ಡಾ. ಸಿದ್ರಾಮ ಕಾರಣಿಕಡಾ. ಸಿದ್ರಾಮ ಕಾರಣಿಕ7 Nov 2017 12:01 AM IST
share
ಕನಕದಾಸರ ಹರಿಭಕ್ತಿಸಾರ: ವೆಚಾರಿಕ ವಿವೇಚನೆ

ಭಾಗ-2

ಹರಿಭಕ್ತಿಸಾರವು ಅಂದಿನ ಭಕ್ತಿಪಂಥದವರಲ್ಲಿದ್ದ ಭಕ್ತಭಾವ, ಇಷ್ಟದೈವದ ಹೊಗಳಿಕೆ ಮತ್ತು ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದೆ. ನಡು ನಡುವೆ ಕನಕದಾಸರ ವೈಚಾರಿಕವಾದ ಭಾವವೂ ಅಲ್ಲಲ್ಲಿ ಹಣಕಿ ಹಾಕಿದೆ. ಮುಖ್ಯ ಉದ್ದೇಶ ಭಕ್ತಿಯೇ ಆಗಿದ್ದರೂ ಸಾಮಾಜಿಕ ಕಳಕಳಿ ಕೂಡ ವ್ಯಕ್ತವಾಗಿದೆ. ಭ್ರಮೆ ಮತ್ತು ವಾಸ್ತವತೆಯ ಎರಡೂ ಮಗ್ಗುಲುಗಳನ್ನು ನೋಡಿ ಅದನ್ನು ಮೀರಿ ಬೆಳೆಯಬಲ್ಲವರಾಗಿದ್ದರೂ ಆ ಕಾಲದ ಮಿತಿಯಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.

ಹರಿಯ ಅನುಗ್ರಹವೊಂದಿದ್ದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸುವ ಕನಕದಾಸರು ರಾಮಾಯಣದಲ್ಲಿ ರಾವಣನನ್ನು ಕೊಂದದ್ದು, ವಿಭೀಷಣನನ್ನು ಮಿತ್ರನಾಗಿಸಿಕೊಂಡಿದ್ದು, ಹನುಮಂತನನ್ನು ಮಗನೆಂದು ಸ್ವೀಕರಿಸಿದ್ದನ್ನು ಉಲ್ಲೇಖಿಸುತ್ತಾರೆ. ಇಡೀ ಜೀವಮಾನದಲ್ಲೆಲ್ಲ ಪಾಪಗಳನ್ನೇ ಮಾಡುತ್ತ ಬಂದ ಅಜಾಮಿಳ ಎಂಬಾತ ಸಾಯುವಾಗ ತನ್ನ ಮಗ ನಾರಾಯಣನ ಹೆಸರನ್ನೂ ಕರೆದರೂ ಹರಿ ಆತನಿಗೆ ಸದ್ಗತಿ ನೀಡಿದ ಎನ್ನುವ ಮೂಲಕ ತನ್ನ ದೈವ ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ಎಂಬುದನ್ನು ಪರಿಗಣಿಸುತ್ತಾರೆ. ಇದಲ್ಲದೇ, ಹೆತ್ತ ಮಗಳನ್ನು ಮದುವೆಯಾದ ಬ್ರಹ್ಮ, ಗುರುಪತ್ನಿಯ ಮೇಲೆ ಕಣ್ಣು ಹಾಕಿದ ಚಂದ್ರ, ಮಾವನಿಗೆ ಕೃತಘ್ಞನಾದ ಕಾಮ, ಮುನಿವರ್ಯನ ಮಡದಿಯನ್ನು ಕೆಡಿಸಿದ ಇಂದ್ರ ಮೊದಲಾದವರು ಜಗಮೀರಿದ ಹಾದರ ಮಾಡಿದರೂ ಹರಿ ಅವರಿಗೆ ಕೈವಲ್ಯ ನೀಡಿದ್ದು ಕನಕದಾಸರಿಗೆ ಅಚ್ಚರಿಯನ್ನುಂಟು ಮಾಡಿದರೂ ಅಂಥವರನ್ನೆಲ್ಲ ಎತ್ತಿ ಹಿಡಿದ ಹರಿ ನಮ್ಮನ್ನೂ ರಕ್ಷಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಇಲ್ಲಿ ಗಮನೀಯವಾದ ಅಂಶವೆಂದರೆ ದೇವತೆಗಳು ಮಾಡಿದ ಹಾದರವನ್ನು ಯಾವುದೇ ಭಿಡೆಯಿಲ್ಲದೇ ಹೇಳಿದ ಪರಿ.

47 ರಿಂದ 101ನೆ ಪದ್ಯಗಳವರೆಗೆ ಮನುಷ್ಯನ ನಿಸ್ಸಹಾಯಕತೆ, ಮನುಷ್ಯ ತಾಯಿಯ ಹೊಟ್ಟೆಯಲ್ಲಿ ಮಾಂಸ-ರಕ್ತಗಳ ಮಧ್ಯ ಇದ್ದು ಇದ್ದು ಹೊರಕ್ಕೆ ಬಂದ ಸ್ಥಿತಿ, ದೇಹದ ನಶ್ವರತೆ, ಭಗವಂತನ ಕರುಣೆ, ಹರಿಯ ಶಕ್ತಿ ಮೊದಲಾದವುಗಳನ್ನೆಲ್ಲ ಹೇಳುತ್ತ ಮನುಷ್ಯನಾದವನು ಬಹಿರ್ ಆಚರಣೆಗೆ ಹೆಚ್ಚು ಮಹತ್ವ ನೀಡದೇ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯವಿದೆ ಎಂದು ಹೇಳುತ್ತಾರೆ.

‘ಇಲ್ಲಿಹನು ಅಲ್ಲಿಲ್ಲವೆಂಬೀ
ಸೊಲ್ಲು ಸಲ್ಲದು ಹೊರಗೊಳಗೆ ನೀ
ನಲ್ಲದಿಲ್ಲನ್ಯತ್ರವೆಂಬುದನೆಲ್ಲ ಕೆಲಕೆಲರು
ಬಲ್ಲರಿಳೆಯೊಳು ಭಾಗವತರಾ
ದೆಲ್ಲರಿಗೆ ವಂದಿಸದ ಕುಜನರಿ
ಗಿಲ್ಲ ಸದ್ಗತಿ ನೋಡು ... ...’

ಇಲ್ಲಿ ದೈವದ ನೆಲೆಗಳನ್ನು ಮೊದಲಿಗೆ ಹೇಳಿದ್ದು, ಆನಂತರದಲ್ಲಿ ಭಾಗವತರಿಗೆ ವಂದಿಸದಿದ್ದರೆ ಸದ್ಗತಿಯಿಲ್ಲ ಎಂಬ ಮಾತನ್ನು ಹೇಳಿದ್ದು ವಿಚಿತ್ರವೆನಿಸುತ್ತದೆ. ಯಾಕೆಂದರೆ ಎಂಥ ನೀಚ ಕೆಲಸ ಮಾಡಿದವರಿಗೂ ಹರಿ ಸದ್ಗತಿ ನೀಡುತ್ತಾನೆ ಎಂದು ಈ ಮೊದಲು ತಿಳಿಸಿರುವ ಕನಕದಾಸರು ಇಲ್ಲಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ದಾಖಲಿಸಿದ್ದಾರೆ ಎನ್ನಬೇಕಾಗುತ್ತದೆ! ವಿರೋಧ ಮತ್ತು ಶರಣಾಗತಿ ಈ ಎರಡೂ ಪ್ರಕಾರದ ವಿಚಾರಗಳ ದ್ವಂದ್ವ ಇಡೀ ಕೃತಿಯಲ್ಲಿ ಕಂಡುಬರುವ ಅಂಶವಾಗಿದೆ.
‘ದೀನ ನಾನು, ಸಮಸ್ತ ಲೋಕಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು’ ಎನ್ನುವ ಕನಕದಾಸರು,

‘ತರಳತನದಲಿ ಕೆಲವು ದಿನದುರು ಭರದ ಗರ್ವದಿ ಕೆಲವು ದಿನ ಮೈ

ಮರೆತು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ
ನರಕಭಾಜಕನಾಗಿ ಕಾಮಾ
ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ...’

ಎಂಬಲ್ಲಿ ಹರೆಯದಲ್ಲಿ ವಿಷಯ ಕೇಳಿ, ಪರಸತಿಗೆ ಮನ ಹರಿದ ಪಾಪ, ಪರಧನದ ಆಸೆಬುರುಕತನ ಇವುಗಳಿಂದ ಆವೃತ್ತನಾಗಿ ಹರಿಯನ್ನು ಮರೆತುದ್ದಕ್ಕೆ ಪಶ್ಚಾತ್ತಾಪಪಡುತ್ತಿರುವಂತೆ ಕನಕದಾಸರು ಕಾಣಿಸುತ್ತಾರೆ. ಈ ಪದ್ಯವನ್ನು ಮೂಲ ಆಕರವನ್ನಾಗಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಕನಕದಾಸರ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲಬಹುದು. ದಾಸರಾಗುವುದಕ್ಕಿಂತ ಮುಂಚಿನ ಕನಕದಾಸರ ಗುಣಾವಗುಣಗಳ ಉಲ್ಲೇಖ ಇಲ್ಲಿ ದೊರೆಯಬಲ್ಲದು. ‘ಮರೆದನಭ್ಯುದಯದಲಿ’ ಎನ್ನುವ ಮೂಲಕ ತಮ್ಮ ಪಶ್ಚಾತ್ತಾಪದ ಉರಿಯನ್ನು ತನ್ನ ದೈವದ ಮುಂದೆ ಬಿತ್ತರಿಸಿ ತನ್ನನ್ನು ಉದ್ದರಿಸಬೇಕು ಎಂದು ಆರ್ತಸ್ವರದಲ್ಲಿ ಅಂಗಲಾಚಿಸಿರುವುದು ಕೂಡ ಇದೇ ಎಳೆಯನ್ನು ತೋರುತ್ತದೆ. ಯಾವುದನ್ನೇ ಮುಚ್ಚಿಡದೆ ತಮ್ಮ ನಿಜವೃತ್ತಾಂತವನ್ನು ಹೇಳಿಕೊಂಡ ಕನಕದಾಸರು ದೈವಿಕತೆ ಮತ್ತು ವಾಸ್ತವಿಕತೆಗೆ ಮಹತ್ವ ನೀಡಿದ ಕವಿಯಾಗಿದ್ದಾರೆ.

ಭೂಮಿಯಲ್ಲಿ ನಳ, ಹರಿಶ್ಚಂದ್ರ, ಪುರುಕುತು, ಪ್ರರೂರವಸ, ಸಗರ ಮತ್ತು ಕಾರ್ತವೀರ್ಯ ಎಂಬ ಪ್ರಸಿದ್ಧ ಚಕ್ರವರ್ತಿಗಳಲ್ಲದೆ ಹಿಂದೆ ಎಷ್ಟೋ ಜನರಿದ್ದರೂ ಅವರನ್ನೆಲ್ಲ ಬಿಟ್ಟು ಭೂಮಿ, ಹರಿಯ ಬೆನ್ನು ಹತ್ತಿದ್ದಾಳೆ ಎಂದು ತಿಳಿಸುವ ಕನಕದಾಸರು ವೈಜ್ಞಾನಿಕವಾದ ವಿಚಾರದ ಪ್ರತಿಪಾದನೆಗೆ ಯತ್ನಿಸಿದ್ದಾರೆ. ಭೂಮಿ, ಅಗ್ನಿ, ನೀರು, ವಾಯು, ಆಕಾಶಗಳೆಂಬ ಪಂಚಭೂತಗಳಿಂದ ಒಡಗೂಡಿರುವ ದೇಹವು ಪೂರ್ವಸಂಚಿತ ಫಲ ಎನ್ನುವುದು ಸರಿಯಲ್ಲ ಎಂಬುದು ಕನಕದಾಸರ ವಾದವಾಗಿದೆ. ಪಂಚಭೂತಗಳಿಂದ ಕೂಡಿ ಜನ್ಮ ತಳೆಯುವ ದೇಹದ ಹುಟ್ಟಿಗೆ ಹಿಂದಿನ ಜನ್ಮದ ಫಲ ಕಾರಣವಲ್ಲ ಎನ್ನುವ ಮೂಲಕ ವೈದಿಕ ಧರ್ಮದ ಕರ್ಮಸಿದ್ಧಾಂತವನ್ನು ಅಲ್ಲಗಳೆಯುತ್ತಾರೆ. ಆದರೆ ಹರಿಯನ್ನು ಸ್ತುತಿಸುವಾಗ ಮಾತ್ರ ಮತ್ತೆ ಮತ್ತೆ ಕರ್ಮದ ಪಾಪವ ತೊಳೆದು ಪಾವನ ಮಾಡು ಎಂದು ಅಂಗಲಾಚುತ್ತಾರೆ ! ಯಾಕೆಂದರೆ ‘ಎತ್ತಿದೆನು ನಾನಾ ಶರೀರವ’ ಎನ್ನುವಲ್ಲಿ ಪುನರ್ಜನ್ಮದ ಸಿದ್ಧಾಂತದಲ್ಲಿ ಅವರು ನಂಬಿಕೆ ಇಟ್ಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರ ಇನ್ನೂ ತಮ್ಮನ್ನು ಕಾಡುತ್ತಿರುವವು ಎಂದು ಹೇಳುವಲ್ಲಿ ದಾಸರಾದರೂ ವಿಷಯಸುಖದೆಡೆಗೆ ಒಮ್ಮಿಮ್ಮೆ ಮನಸ್ಸು ಮುಖ ಮಾಡುವುದನ್ನು ಬಿಚ್ಚಿಟ್ಟಿದ್ದಾರೆ. ಯಾಕೆಂದರೆ ಕನಕದಾಸರು ಮೊದಲು ಮದುವೆಯಾಗಿ ಮಕ್ಕಳೊಂದಿಗೆ ಬಾಳಿದವರು. ‘ನಿನ್ನಡಿಯ ಭಜಿಸದೆ ದುರುಳನಾದೆನು ಮಡದಿ ಮಕ್ಕಳ ಮೋಹದಲಿ ಸಿಲುಕುತಡಿಗೆ’ ಎನ್ನುವಲ್ಲಿ ಈ ಬಗ್ಗೆ ಸಾಕ್ಷ್ಯ ದೊರೆಯುತ್ತದೆ. ಸತ್ವ. ರಜಸ್ಸು, ತಮಸ್ಸು ಎಂಬ ಮೂರು ಗುಣಗಳು ಹರಿ, ಬ್ರಹ್ಮ, ಹರ ಎಂಬ ಮೂರ್ತಿ ಧರಿಸಿ ಸ್ಥಿತಿ, ಸೃಷ್ಟಿ, ಸಂಚಾರ ಕಾರ್ಯವನ್ನು ಮಾಡುತ್ತವೆ. ಪ್ರಳಯ ಕಾಲದಲ್ಲಿ ಈ ಮೂರೂ ಗುಣಗಳು ಭಗವಂತನಲ್ಲಿ ಲೀನವಾಗುತ್ತವೆ ಎಂದು ತಿಳಿಸುವ ಕನಕದಾಸರು ‘ನೀರ ಮೇಲನ ಗುಳ್ಳೆ, ಬಿದ್ದು ಹೋಗುವ ಕಾಯದ ಪಾಶದಲ್ಲಿ ಬದ್ಧನಾಗಬಾರದು’ ಎಂಬುದಾಗಿ ಜೀವನದ ನಶ್ವರತೆಯನ್ನು ಸಾರಿ, ಸಂಸಾರ ಬಂಧನದಲ್ಲಿ ಸಿಲುಕದೆ, ಜನ್ಮದಿಂದ ಜನ್ಮಕ್ಕೆ ಜಿಗಿಯುವ ದೇಹಕ್ಕೆ ಊರು, ಮನೆ, ಮೋಹ ಇರಬಾರದು ಎಂಬುದನ್ನು ಬೋಧಿಸುತ್ತಾರೆ. ತಾಯಿಯ ಗರ್ಭದಿಂದ (ಜರಾಯುಜ), ಮೊಟ್ಟೆಯಿಂದ (ಅಂಡಜ), ಬೆವರಿನಿಂದ (ಸ್ವೇದಜ) ಮತ್ತು ಸಸ್ಯಗಳಿಂದ (ಉಧ್ಭಿಜ್ಯ) ಎಂಬ ನಾಲ್ಕು ಪ್ರಕಾರಗಳಲ್ಲಿ ಹುಟ್ಟುವ ಚೌಷಷ್ಠ (ಅರವತ್ತ್ನಾಲ್ಕು) ಜೀವಿಗಳು ಹರಿಯ ಪ್ರೇರಣೆಯಿಂದಲೇ ಹಲವು ರೀತಿಯ ಒಳಭೇದಗಳಿಂದ ತೊಗಲು ಬೊಂಬೆಗಳಂತೆ ವರ್ತಿಸುತ್ತವೆ. ಇಲ್ಲಿ ಹರಿಯೇ ಸೂತ್ರಧಾರ ಎನ್ನುವುದನ್ನು ಕನಕದಾಸರು ಹರಿಯ ಶ್ರೇಷ್ಠತ್ವವನ್ನು ಮನಗಾಣಿಸಲು ಪ್ರಯತ್ನಿಸಿದ್ದಾರೆ.

ಮೃತ್ಯು ತನ್ನ ಬೆನ್ನ ಹಿಂದೆಯೇ ಇರುತ್ತದೆ. ಜೊತೆಗೆ ಸತ್ತ ಮೇಲೆ ಯಾರೂ ಜೊತೆಗೆ ಬರುವುದಿಲ್ಲ ಎಂಬ ದೇಹದ ನಶ್ವರತೆಯನ್ನು ಪ್ರತಿಪಾದಿಸುವ ಕನಕದಾಸರು ಜನನ-ಮರಣದ ನಿಜ ಅರ್ಥವನ್ನು ತಿಳಿದು ಬದುಕಬೇಕು ಎಂದಿರುವುದಲ್ಲದೆ ‘ಹುಟ್ಟು ಸಾವಿನ ಮಧ್ಯ ತಾ ನಿಪುಣ ನೆಂಬುವದು ನಗೆಗೀಡು’ ಎಂಬ ಸತ್ಯವನ್ನು ಹೇಳುತ್ತಾರೆ.

ಬದುಕನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತ ಸಾಮಾಜಿಕ ತಾರತಮ್ಯಗಳನ್ನು ಕಟುವಾಗಿ ಟೀಕಿಸುತ್ತಾರೆ.

‘ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಆಲದೊಳಗೆ ಮುಳುಗಿದರೆ ತೊಲಗದು
ಹೊಲಗೆಲಸವೀ ದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ’

ಎನ್ನುವಲ್ಲಿ ಹೊಲೆಯೆಂದು ಪಂಚೆಯನ್ನೆತ್ತಿಕೊಂಡು ಪಕ್ಕಕ್ಕೆ ನೆಗೆಯುವ, ಮಡಿ ಮಡಿಯೆಂದು ಅಡಿಗಡಿಗೆ ಹಾರುವ ಮಂದಿಯ ಬಗ್ಗೆ ಮಾರ್ಮಿಕವಾದ ಮಾತಿದೆ. ಯಾರೂ ಮೇಲಲ್ಲ; ಯಾರೂ ಕೀಳಲ್ಲ. ಹೊಲೆ ಹೊಲೆ ಎಂದು ಹಾರುವವರು ಕೀಳಾದ ಕಾರ್ಯ ಮಾಡಿ ಮೂಗನ್ನು ಹಿಡಿದು ನೀರಲ್ಲಿ ಮುಳುಗು ಹಾಕಿದಾಕ್ಷಣ ಮಾಡಿದ ಹೊಲೆಗೆಲಸ ಹೋಗಿ ಬಿಡುವುದಿಲ್ಲ. ಹುಟ್ಟಿನ ಹೊಲೆತನಕ್ಕಿಂತ ಉತ್ತಮರು ಎಂದುಕೊಂಡು ಹೊಲಸು ಕೆಲಸ ಮಾಡುವುದು ಕೆಟ್ಟದ್ದು; ಹೇಯವಾದದ್ದು ಎಂದು ಕನಕದಾಸರು ತಿಳಿ ಹೇಳಿದ್ದಾರೆ. ತಾರತಮ್ಯ ನೀತಿಯನ್ನು ಖಂಡಿಸುವ ಕನಕದಾಸರು, ಪಾಂಡಿತ್ಯದಿಂದ ಪಾಪವನ್ನು ಕಳೆಯಲಾಗದು ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ. ಅಹಂಕಾರಿಗಳು, ಸರಿಯಾದ ನಡೆಯನ್ನು ಹೊಂದದವರು ‘ವೇದ ಪುರಾಣ ಶಾಸ್ತ್ರಗಳೋದಿ ಫಲವೇನು?’ಎಂದು ಪ್ರಶ್ನಿಸುತ್ತಾರೆ.

ಮಡಿ ಮಡಿ ಎಂದುಕೊಂಡು ನಿತ್ಯವೂ ದೇಹವನ್ನು ತೊಳೆದುಕೊಳ್ಳುವವರು ಮತ್ತು ಎಂಜಲು ಸಲ್ಲುವುದಿಲ್ಲ ಎಂದು ವ್ಯಾಖ್ಯಾನ ಮಾಡುವವರಿಗೂ ಕನಕದಾಸರು ವಾಸ್ತವವನ್ನು ಮನಗಾಣಿಸಿದ್ದಾರೆ. ಎಂಜಲು ಎಂಬವರ ನುಡಿಯೇ ಎಂಜಲು ಎನ್ನುವ ಅವರು, ನೀರು, ಅದರೊಳಗಿನ ಪ್ರಾಣಿಗಳ ಎಂಜಲು, ಹಾಲು ಕರುವಿನ ಎಂಜಲು! ವಿಚಾರ ಮಾಡಿದರೆ ಎಂಜಲಲ್ಲದ್ದು ಯಾವುದೂ ಇಲ್ಲ; ನಮಗಾಗಿಯೇ ಮಾತ್ರ ಸೃಷ್ಟಿಯಾದದ್ದು ಯಾವುದೂ ಇಲ್ಲ ಎಂದು ತಿಳಿಸಿದ್ದಾರೆ. ವೈದಿಕ ಸಾಮಾಜಿಕ ವಾತಾವರಣದಿಂದ ನಿರಂತರ ನೋವು ಉಂಡ ಅವರು ಇಂಥ ಡಂಭಾಚಾರಗಳನ್ನು ಕಂಡು ಸಿಡಿದೇಳುತ್ತಾರೆ; ಪ್ರತಿಭಟಿಸುತ್ತಾರೆ ಮತ್ತು ಖಂಡಿಸುತ್ತಾರೆ. ತಮ್ಮ ದೈವದ ಮೂಲಕ ಹೊಸ ಬದುಕನ್ನು ಹಾರೈಸುತ್ತಾರೆ.

102ರಿಂದ 108ನೆ ಪದ್ಯಗಳವರೆಗೆ ಕನಕದಾಸರು ಹರಿಭಕ್ತಿಸಾರವನ್ನು ಕೇಳಿದವರಿಗೆ ಆಗುವ ಫಲಶೃತಿಯನ್ನು ವಿವರಿಸಿದ್ದಾರೆ. ಪ್ರತೀ ಪುರಾಣ ಕಾವ್ಯಗಳ ಕೊನೆಯಲ್ಲಿ ಬರುವ ಫಲಶೃತಿ ಸಂಪ್ರದಾಯದ ಛಾಪು ಕನಕದಾಸರಲ್ಲೂ ಕಂಡುಬರುತ್ತದೆ. ಇಂಥಲ್ಲಿ ತಮ್ಮ ದೈವವನ್ನು ಪಾರಮ್ಯಕ್ಕೇರಿಸುವ ಗುರಿ ಮಾತ್ರ ಇರುತ್ತದೆ. ಮುಂದಿನ 109 ರಿಂದ 111ನೆ ಪದ್ಯಗಳಲ್ಲಿ ಮಂಗಲವನ್ನು ಹಾಡಲಾಗಿದೆ. ಇಲ್ಲಿ ಕೂಡ ಹರಿನಾಮಸ್ಮರಣೆಯೇ ಪ್ರಮುಖವಾಗಿದೆ. ಕೆಲ ವಿದ್ವಾಂಸರು ಈ ಮೂರು ಪದ್ಯಗಳನ್ನು ಬಿಟ್ಟು 108ನೆ ಪದ್ಯಗಳವರೆಗೆ ಮಾತ್ರ ಕೃತಿಯನ್ನು ಪರಿಗಣಿಸಿದ್ದಾರೆ.

ಒಟ್ಟಿನಲ್ಲಿ ಹರಿಭಕ್ತಿಸಾರವು ಅಂದಿನ ಭಕ್ತಿಪಂಥದವರಲ್ಲಿದ್ದ ಭಕ್ತಭಾವ, ಇಷ್ಟದೈವದ ಹೊಗಳಿಕೆ ಮತ್ತು ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದೆ. ನಡು ನಡುವೆ ಕನಕದಾಸರ ವೈಚಾರಿಕವಾದ ಭಾವವೂ ಅಲ್ಲಲ್ಲಿ ಹಣಕಿ ಹಾಕಿದೆ. ಮುಖ್ಯ ಉದ್ದೇಶ ಭಕ್ತಿಯೇ ಆಗಿದ್ದರೂ ಸಾಮಾಜಿಕ ಕಳಕಳಿ ಕೂಡ ವ್ಯಕ್ತವಾಗಿದೆ. ಭ್ರಮೆ ಮತ್ತು ವಾಸ್ತವತೆಯ ಎರಡೂ ಮಗ್ಗುಲಗಳನ್ನು ನೋಡಿ ಅದನ್ನು ಮೀರಿ ಬೆಳೆಯಬಲ್ಲವರಾಗಿದ್ದರೂ ಆ ಕಾಲದ ಮಿತಿಯಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.

share
ಡಾ. ಸಿದ್ರಾಮ ಕಾರಣಿಕ
ಡಾ. ಸಿದ್ರಾಮ ಕಾರಣಿಕ
Next Story
X