ಟಿಪ್ಪುವನ್ನು ಸ್ಮರಿಸೋಣ! ಸುಭದ್ರ ಕರ್ನಾಟಕ ಕಟ್ಟೋಣ!

ಇತಿಹಾಸದ ಆ ಕಾಲಘಟ್ಟದಲ್ಲಿ ಕ್ರಾಂತಿಕಾರಿ ಪಾತ್ರವಹಿಸಿದ ಟಿಪ್ಪುಸುಲ್ತಾನ್ ನೆನಪು ಇಂದಿಗೂ ನಾಡಿನ ವಿಮೋಚನಾ ಹೋರಾಟದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ. ಆದ್ದರಿಂದಲೇ ಆ ನೆನಪನ್ನು ಸಹ ನಾಶ ಮಾಡಿ ಈ ನಾಡನ್ನು ಕತ್ತಲಲ್ಲಿ ಮುಳುಗಿಸ ಬಯಸುವ ಪ್ರತಿಗಾಮಿ ಶಕ್ತಿಗಳ ವಿರುದ್ಧ ನಿಜವಾದ ದೇಶಪ್ರೇಮಿಗಳು ರಾಜಿರಹಿತ ಸಮರ ಸಾರಬೇಕಿದೆ,
ಮಾನವ ಸಮಾಜದ ವಿಕಾಸದ ಗತಿಚಕ್ರಕ್ಕೆ ಚಾಲನೆ ನೀಡುವುದು ಆ ಸಮಾಜದ ಹಳೆಯ ಪ್ರತಿಗಾಮಿ ಶಕ್ತಿಗಳ ಹಾಗೂ ಹೊಸದಾಗಿ ಉದಯಿಸುತ್ತಿರುವ ಪ್ರಗತಿಪರ ಶಕ್ತಿಗಳ ನಡುವೆ ನಡೆಯುವ ಸತತ ಸಂಘರ್ಷವೇ ಆಗಿದೆ. ಹಳೆಯ ಸಮಾಜದ ವ್ಯವಸ್ಥೆಯ ಗರ್ಭದೊಳಗೆ ಹುಟ್ಟಿಕೊಳ್ಳುವ ಹೊಸ ವ್ಯವಸ್ಥೆಯ ಭ್ರೂಣ ಶಕ್ತಿಗಳು ತಮ್ಮ ಐತಿಹಾಸಿಕ ವಿಕಾಸಕ್ಕೆ ಅಡ್ಡಿಯಾಗುವ ಹಳೆ ವ್ಯವಸ್ಥೆಯ ಆಳುವ ಶಕ್ತಿಗಳೊಡನೆ ನಿರಂತರ ಯುದ್ಧ ನಡೆಸುತ್ತವೆ. ಈ ಸಂಘರ್ಷದಿಂದ ಹೊಸ ಸಮಾಜ ವ್ಯವಸ್ಥೆ ಉಗಮ ಗೊಳ್ಳುತ್ತದೆ. ವಿಶ್ವದೆಲ್ಲೆಡೆ ಮಾನವ ಸಮಾಜ ವಿಕಸನಗೊಂಡದ್ದು ಈ ರೀತಿಯಲ್ಲೇ.
ಗುಲಾಮ ವ್ಯವಸ್ಥೆಯ ಬರ್ಬರ ಶೋಷಣೆಯ ವಿರುದ್ಧ ಗುಲಾಮರು ನಡೆಸಿದ ಐತಿಹಾಸಿಕ ಸಂಗ್ರಾಮವು ಊಳಿಗಮಾನ್ಯ ವ್ವವಸ್ಥೆಗೆ ದಾರಿ ಮಾಡಿಕೊಟ್ಟಿತು. ಅದೇ ರೀತಿ ಊಳಿಗಮಾನ್ಯ ವ್ಯವಸ್ಥೆಯ ಪಾಳೇಗಾರಿ ಶಕ್ತಿಗಳ ವಿರುದ್ಧ ರೈತರೂ, ವ್ಯಾಪಾರಿಗಳೂ, ಉದ್ಯಮಿಗಳೂ ನಡೆಸಿದ ವರ್ಗ ಸಂಘರ್ಷವೇ ಬಂಡವಾಳಶಾಹಿ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಯೂರೋಪಿನಲ್ಲಿ ಈ ರೀತಿ ಬಂಡವಾಳಶಾಹಿ ಕ್ರಾಂತಿಗಳು ಸಂಭವಿಸಿದ್ದರಿಂದಲೇ ಆ ದೇಶಗಳಿಗೆ ಪ್ರಗತಿಯ ಮಹಾ ಮುನ್ನಡೆ ದೊರೆತು ಇಂದು ಜಗತ್ತಿನ ಪ್ರಬಲ ಶಕ್ತಿಗಳಾಗಲು ತಳಹದಿ ದೊರೆಯಿತು. ನಂತರ ಬಂಡವಾಳಶಾಹಿ ವ್ಯವಸ್ಥೆಯ ಒಳಗಿನಿಂದ ಕಾರ್ಮಿಕವರ್ಗವು ನಡೆಸುವ ಪ್ರಜ್ಞಾಪೂರ್ವಕ ಸಮಾಜವಾದಿ ಕ್ರಾಂತಿ ಮಾನವ ಸಮಾಜವನ್ನು ಶೋಷಣಾರಹಿತ ಸಮಾಜವಾದಿ ಸಮಾಜದೆಡೆಗೆ ಕೊಂಡೊಯ್ಯುತ್ತದೆ. ಇದು ಇತಿಹಾಸದ ಗತಿಕ್ರಮ.
ಅದೇ ರೀತಿ ಕರ್ನಾಟಕವೂ ಸಹ ಊಳಿಗಮಾನ್ಯತೆಯ ಕತ್ತಲಲ್ಲಿ ತಡವರಿಸುತ್ತಿರುವಾಗಲೇ ಬ್ರಿಟಿಷ್ ವಸಾಹತುಶಾಹಿಯ ಆಕ್ರಮಣವೂ ನಡೆದು ಈ ನಾಡಿನಲ್ಲೂ ಸಂಭವಿಸಬೇಕಾಗಿದ್ದ ಊಳಿಗಮಾನ್ಯ ವಿರೋಧಿ ಪ್ರಜಾಸತ್ತಾತ್ಮಕ ಕ್ರಾಂತಿಗೆ ಬಹುದೊಡ್ಡ ಸವಾಲೇ ಎದುರಾಯಿತು. ಇಂತಹ ಸಂಕ್ರಮಣಾವಸ್ಥೆಯಲ್ಲಿ ಮೈಸೂರಿನ ಆಳ್ವಿಕೆ ವಹಿಸಿಕೊಂಡ ಟಿಪ್ಪು-ಹೈದರರು ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಗಳಾಗಿರದೆ, ಅದನ್ನು ವಿರೋಧಿಸಿ ಸೆಣೆಸುತ್ತಾ ಐತಿಹಾಸಿಕವಾಗಿ ಪ್ರಗತಿಪರ ಪಾತ್ರವಹಿಸುತ್ತಿದ್ದ ಸ್ವದೇಶಿ ವ್ಯಾಪಾರಿವರ್ಗಗಳ ಪರವಾಗಿ ನಿಂತು ಇತಿಹಾಸದ ಈ ಬಿಕ್ಕಟ್ಟನ್ನು ಯುದ್ಧದ ಮೂಲಕ ಸಂಪೂರ್ಣವಾಗಿ ಪರಿಹರಿಸುವ ಕ್ರಾಂತಿಕಾರಿಗಳ ಪಾತ್ರವಹಿಸಿದರು.
ಟಿಪ್ಪು-ಹೈದರರ ಪ್ರಭುತ್ವವೇ ಪಾಳೇಗಾರಿ ಊಳಿಗಮಾನ್ಯ ಶಕ್ತಿಗಳನ್ನು ನಿರ್ಮೂಲನೆ ಮಾಡಿದ್ದಲ್ಲದೇ, ವಸಾಹತುಶಾಹಿ ವಿರೋಧಿ ಸಂಗ್ರಾಮ ಸೋಲಿನಲ್ಲಿ ಕೊನೆಗೊಂಡರೂ, ಊಳಿಗಮಾನ್ಯ ಶಕ್ತಿಯನ್ನು ಮಾತ್ರ ನಾಶಗೊಳಿಸುವಲ್ಲಿ ತಮ್ಮ ಕಾಲದಲ್ಲಿ ಟಿಪ್ಪು-ಹೈದರ್ ಯಶಸ್ವಿಯಾಗಿದ್ದರು.
ಹೀಗೆ ಇತಿಹಾಸದ ಕಾಲಗತಿಯಲ್ಲಿ ಕರ್ನಾಟಕದ ಚರಿತ್ರೆಗೆ ಹಳೆಯ ಪ್ರತಿಗಾಮಿ ವರ್ಗಗಳ ನಿರ್ಮೂಲನೆಯ ಮೂಲಕ ಹೊಸ ರೂಪ ತಂದುಕೊಟ್ಟವನು ಟಿಪ್ಪು ಸುಲ್ತಾನ್. ಈ ಯುಗದ ಕ್ರಾಂತಿಕಾರಿ ಆಶಯವಾಗಿರುವ ಸಮತಾವಾದದ ಹಿನ್ನೆಲೆಯಲ್ಲಿ ನೋಡಿದರೆ ಟಿಪ್ಪುಪ್ರತಿನಿಧಿಸಿದ ವರ್ಗಗಳಿಗೂ ಹಾಗೂ ಅದರ ಮೌಲ್ಯಗಳಿಗೂ ಶೋಷಣಾ ಗುಣವಿರುವುದು ನಿಜವೇ. ಆದರೆ ಅದು ಟಿಪ್ಪು ಬಾಳಿದ ಕರ್ನಾಟಕದ ಆ ಐತಿಹಾಸಿಕ ಕಾಲಘಟ್ಟದ ಐತಿಹಾಸಿಕ ಮಿತಿಯೂ ಆಗಿತ್ತೆಂಬುದನ್ನು ಮರೆಯುವಂತಿಲ್ಲ.
ಆ ಕಾಲಘಟ್ಟದ ಕ್ರಾಂತಿ ಊಳಿಗಮಾನ್ಯ ವಿರೋಧಿ, ಪ್ರಜಾಸತ್ತಾತ್ಮಕ ಕ್ರಾಂತಿಯಾಗಿತ್ತು ಹಾಗೂ ವಸಾಹತು ಶಾಹಿಯನ್ನು ಮೂಲೋತ್ಪಾಟನೆ ಮಾಡದೆ ಈ ಕ್ರಾಂತಿ ನೆರವೇರುವಂತಿರಲಿಲ್ಲ. ಟಿಪ್ಪುಈ ಎರಡೂ ಶತ್ರುಗಳ ವಿರುದ್ಧ ನಿರ್ಣಯಾತ್ಮಕ ಸಂಗ್ರಾಮ ನಡೆಸಿ ರಣರಂಗದಲ್ಲಿ ಪ್ರಾಣ ಕೊಟ್ಟು ಹುತಾತ್ಮನಾದ. ಆದ್ದರಿಂದಲೇ ಟಿಪ್ಪುಸುಲ್ತಾನ್ ದೊರೆಯಾದರೂ ಕ್ರಾಂತಿಕಾರಿಯಾಗಿ ಉಳಿದುಕೊಂಡ ಏಕೈಕ ರಾಜನಾಗಿದ್ದನೆನ್ನಬಹುದು.
ಟಿಪ್ಪು, ಹೈದರರ ಆಳ್ವಿಕೆಯ ಕೇವಲ 38 ವರ್ಷಗಳಲ್ಲಿ ಕರ್ನಾಟಕವು ಇಡೀ ಪ್ರಪಂಚವೆನಿಬ್ಬೆರಗಾಗುವಂತೆ ಪ್ರಗತಿ ಸಾಧಿಸಿತ್ತು. ಕೃಷಿ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಪಾಳೇಗಾರಿ, ಬ್ರಾಹ್ಮಣಶಾಹಿ ಹಾಗೂ ಮಧ್ಯವರ್ತಿ ವರ್ಗವನ್ನು ಟಿಪ್ಪು ಸರ್ವನಾಶ ಮಾಡಿದ್ದರಿಂದ ರೈತರ ಮೇಲಿನ ಹೊರೆ ಕಡಿಮೆಯಾಗಿ ಕೃಷಿ ಅಭಿವೃದ್ಧಿಯ ಅದ್ಭ್ಬುತ ನೆಗೆತ ಸಾಧಿಸಿತು. ಅಲ್ಲದೆ ಟಿಪ್ಪುವಿನ ಪ್ರಭುತ್ವ ನೀಡಿದ ನೀರಾವರಿ ಸೌಲಭ್ಯ, ಕೃಷಿ ತಕಾವಿ ಸಾಲ, ಸರಳ ರಿಯಾಯಿತಿ ತೆರಿಗೆ, ಹೊಸ ವಾಣಿಜ್ಯ ತಳಿಗಳ ಅಭಿವೃದ್ಧಿ ಇತ್ಯಾದಿಗಳು ಕೃಷಿಯಲ್ಲಿ ವಾಣಿಜ್ಯೀಕರಣವನ್ನು ತಂದು ಗೃಹ ಮಾರುಕಟ್ಟೆಯನ್ನು ಹಿಗ್ಗಿಸಿತು. ಮತ್ತೊಂದೆಡೆ ದೇಶೀಯ ವ್ಯಾಪಾರ ಹಾಗೂ ಕೈಗಾರಿಕೆಯನ್ನು ಬೆಳೆಸಲು ಬ್ರಿಟಿಷ್ ಸರಕು ಮಾರಾಟವನ್ನು ಟಿಪ್ಪುಸಂಪೂರ್ಣವಾಗಿ ನಿಷೇಧಿಸಿದ್ದನಲ್ಲದೆ, ಗೃಹ ಮಾರುಕಟ್ಟೆಯ ವಿಸ್ತರಣೆಗೂ ಮೇಲಿನ ಕ್ರಮಗಳಿಂದ ಉತ್ತೇಜನ ನೀಡಿದ. ಇದರಿಂದ ಕೇವಲ ಎರಡು ದಶಕಗಳಲ್ಲಿ ಮೈಸೂರು ಪ್ರಾಂತಗಳಲ್ಲಿ ಕೈಗಾರಿಕೆಯು ಯೂರೋಪಿಗೆ ಸರಿಸಮವಾಗಿ ಅಭಿವೃದ್ಧಿ ಹೊಂದುವ ಹಂತದಲ್ಲಿತ್ತು. ಇದರಿಂದಾಗಿ ಜನಾನುರಾಗಿ ಟಿಪ್ಪುವಿನ ಪ್ರಭುತ್ವವು ಜನಪರವಾಗಿ ಊಳಿಗಮಾನ್ಯತೆ ಹಾಗೂ ವಸಾಹತುಶಾಹಿಯಂಥ ಜನರನ್ನು ಹಿಮ್ಮೆಟ್ಟಿಸುವ ಮೂಲಕ ಅಭಿವೃದ್ಧಿಯೆಡೆಗೆ ಮುನ್ನಡೆಸಿತು. ಒಂದೆಡೆ ಟಿಪ್ಪುವಿನ ನೀತಿಗಳಿಂದ ಜಾತಿ ಪದ್ಧತಿಯಿಂದ ಜನತೆ ವಿಮುಕ್ತಿಯತ್ತ ಸಾಗಿದರೆ, ಮತ್ತೊಂದೆಡೆ ಗೃಹ ಮಾರುಕಟ್ಟೆ ವಿಸ್ತರಣೆಯಿಂದ ಹಾಗೂ ರಕ್ಷಣೆಯಿಂದ ಕನ್ನಡನಾಡೂ ಸಹ ಮೊತ್ತ ಮೊದಲಬಾರಿಗೆ ಆಧುನಿಕ ತಳಹದಿಯಲ್ಲಿ ಒಗ್ಗೂಡಿತು.
ವ್ಯಕ್ತಿಯಾಗಿಯೂ ಸಹ ಟಿಪ್ಪು-ಹೈದರರು ಊಳಿಗಮಾನ್ಯ ವಿರೋಧಿ ಮೌಲ್ಯಗಳನ್ನು ಅರಗಿಸಿಕೊಂಡಿದ್ದ ವ್ಯಕ್ತಿತ್ವ ಹೊಂದಿದ್ದರು. ಅವರ ಕಾಲದಲ್ಲಿ ಸಾರ್ವಜನಿಕ ಕೆರೆ-ಕಟ್ಟೆ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದರೂ ತಮ್ಮ ಅರಮನೆಗಳನ್ನು ವೈಭವಯುತವಾಗಿ ಕಟ್ಟಿಕೊಳ್ಳಲಿಲ್ಲ. ಇಂದಿಗೂ ಶ್ರೀರಂಗಪಟ್ಟಣದ ಹಾಗೂ ಬೆಂಗಳೂರಿನ ಟಿಪ್ಪುವಿನ ಅರಮನೆಗಳು ಸರಳತೆಗೆ ಪ್ರತೀಕವಾಗಿ ನಿಂತಿದ್ದರೆ, ಮೈಸೂರು ಅರಸರ ಅರಮನೆ ಊಳಿಗಮಾನ್ಯದೊಂದಿಗೆ, ಸುಖಲೋಲುಪತೆಗೆ ಸಾಕ್ಷಿಯಾಗಿ ನಿಂತಿದೆ. ಟಿಪ್ಪುವು ವಿಶೇಷವಾಗಿ ಜ್ಞಾನದಾಹಿಯಾಗಿದ್ದ. ಇತರ ಅರಸರ ಅರಮನೆಗಳಲ್ಲಿ ಮದಿರೆ, ಸುಗಂಧ ಸುಖಭೋಗದ ಸಾಧನಗಳು ವಿಫುಲವಾಗಿ ದೊರೆತರೆ ಟಿಪ್ಪುವಿನ ಅರಮನೆಯಲ್ಲಿ ದೊರೆತದ್ದು, ಪುಸ್ತಕಗಳು, ಪ್ರಯೋಗ ಸಾಧನಗಳು, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸೂಫಿ ಧರ್ಮಸಾಹಿತ್ಯ ಇತ್ಯಾದಿಗಳು. ನಾಡಿನ ಅಭಿವೃದ್ಧಿಗೆ ಬೇಕಾದಷ್ಟು ವಿಶ್ವದಲ್ಲಿ ಎಲ್ಲೇ ದೊರೆತರೂ ಅದನ್ನು ಕೂಡಲೇ ತರಿಸಿ ಈ ನಾಡಿನಲ್ಲಿ ಪ್ರಯೋಗಕ್ಕೆ ಹಚ್ಚುತ್ತಿದ್ದ ಮಹಾನ್ ಉದ್ಯಮಶೀಲ, ಜ್ಞಾನದಾಹಿ, ಜನಾನುರಾಗಿ ದೊರೆ ಟಿಪ್ಪುಸುಲ್ತಾನ್.
ಇವೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕವನ್ನು, ಕರ್ನಾಟಕದ ಜನತೆಯನ್ನು ನುಂಗಲು ನುಗ್ಗಿ ಬರುತ್ತಿದ್ದ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಪ್ರಾಣವನ್ನು, ಮಕ್ಕಳನ್ನು ಪಣವಾಗಿಟ್ಟು ಹೋರಾಡಿದ ಮಹಾನ್ ದೇಶಪ್ರೇಮಿ ಟಿಪ್ಪುಸುಲ್ತಾನ್. ಕನಾಟಕದ ಇತಿಹಾಸದ ಗತಿಯಲ್ಲಿ ಪ್ರಗತಿಪರ ಶಕ್ತಿಗಳ ಪರವಾಗಿ ನಿಂತು ಪ್ರತಿಗಾಮಿ ಶಕ್ತಿಗಳ ವಿರುದ್ಧ ರಾಜಿ ಇಲ್ಲದೇ ಹೋರಾಟ ನಡೆಸಿ ಹುತಾತ್ಮನಾದ ಕ್ರಾಂತಿಕಾರಿ, ಟಿಪ್ಪು ಸುಲ್ತಾನ್. ಆದ್ದರಿಂದಲೇ ಟಿಪ್ಪುವಿನ ಸಾಲಿನಲ್ಲಿ, ಸೋಲಿನಲ್ಲಿ ಕರ್ನಾಟಕದ ಶೋಷಿತ ಜನತೆಯೂ ಸೋಲುಂಡಿತು. ಟಿಪ್ಪುವಿನ ಸಾವಿನಿಂದ ಸಂಭ್ರಮ ಪಟ್ಟವರು ಭೂ ಮಾಲಕ, ಊಳಿಗಮಾನ್ಯ ವರ್ಗಗಳು. ಪರಾವಲಂಬಿ ಮೈಸೂರು ಅರಸೊತ್ತಿಗೆ ಹಾಗೂ ಬ್ರಿಟಿಷ್ ವಸಾಹತುಶಾಹಿಗಳು. ಟಿಪ್ಪುವಿನ ಕಾಲದಲ್ಲಿ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಿ ಅಭಿವೃದ್ಧಿಯ ಸವಿಯುಂಡ ರಾಷ್ಟ್ರೀಯ ವ್ಯಾಪಾರಿ, ಕೈಗಾರಿಕೋದ್ಯಮಿ, ರೈತಾಪಿ ವರ್ಗ ಮತ್ತೆ ನಿಸ್ಸಹಾಯಕರಾಗಿ ಊಳಿಗಮಾನ್ಯತೆಯ ಮತ್ತು ವಸಾಹತುಶಾಹಿಯ ಕಬಂಧ ಬಾಹುಗಳಿಗೆ ಸಿಲುಕಿದರು.
ಟಿಪ್ಪು ಪ್ರಾರಂಭಿಸಿದ ಊಳಿಗಮಾನ್ಯ ವಿರೋಧಿ, ವಸಾಹತು ಶಾಹಿ ವಿರೋಧಿ ಹೋರಾಟ ಇನ್ನೂ ಪರಿಪೂರ್ಣಗೊಂಡಿಲ್ಲ. ಅಂದು ಟಿಪ್ಪುವಿನ ಸಾವಿನ ನಂತರ ಗದ್ದುಗೆ ಹಿಡಿದ ಮೈಸೂರ ಅರಸನಂತಹ ಊಳಿಗಮಾನ್ಯ ಶಕ್ತಿಗಳ ಪ್ರತಿನಿಧಿಗಳು, ವಸಾಹತುಶಾಹಿಯ ಗುಲಾಮರೇ ಇಂದಿಗೂ ಹೊಸಹೊಸ ರೂಪಗಳಲ್ಲಿ ಗದ್ದುಗೆಯಲ್ಲಿ ಮುಂದುವರಿದಿದ್ದಾರೆ. ಆದ್ದರಿಂದಲೇ ಇತಿಹಾಸದ ಆ ಕಾಲಘಟ್ಟದಲ್ಲಿ ಕ್ರಾಂತಿಕಾರಿ ಪಾತ್ರವಹಿಸಿದ ಟಿಪ್ಪುಸುಲ್ತಾನ್ ನೆನಪು ಇಂದಿಗೂ ನಾಡಿನ ವಿಮೋಚನಾ ಹೋರಾಟದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ. ಆದ್ದರಿಂದಲೇ ಆ ನೆನಪನ್ನು ಸಹ ನಾಶ ಮಾಡಿ ಈ ನಾಡನ್ನು ಕತ್ತಲಲ್ಲಿ ಮುಳುಗಿಸ ಬಯಸುವ ಪ್ರತಿಗಾಮಿ ಶಕ್ತಿಗಳ ವಿರುದ್ಧ ನಿಜವಾದ ದೇಶಪ್ರೇಮಿಗಳು ರಾಜಿರಹಿತ ಸಮರ ಸಾರಬೇಕಿದೆ
(ಮುಂದುವರಿಯುವುದು)







