ಜನಸಾಮಾನ್ಯರ ಪತ್ರಿಕೋದ್ಯಮಿ
ರಾಜಶೇಖರ ಕೋಟಿ ಮತ್ತು ಆಂದೋಲನ ಎರಡೂ ಒಂದೇ ಉಸುರಿಗೆ ನೆನಪು ಬರೋ ಹೆಸರುಗಳು. ಮೈಸೂರು ಭಾಗದ ಜಿಲ್ಲೆಗಳಲ್ಲಿ ನೀವು ಯಾವುದೇ ಹಳ್ಳಿಗೆ ಹೋಗಿ ಆಂದೋಲನದ ಹೆಸರು ಹೇಳಿದ್ರೆ ಕೋಟಿಯವರ ನೆನಪು ಮತ್ತು ಕೋಟಿಯವರ ಹೆಸರು ಹೇಳಿದ್ರೆ ಆಂದೋಲನ ನೆನಪು ಮಾಡಿಕೊಳ್ಳೋ ಐದಾರು ಮಂದಿಯಾದರೂ ಸಿಕ್ಕೇ ಸಿಗುತ್ತಾರೆ. ಅಷ್ಟರಮಟ್ಟಿಗೆ ಕೋಟಿಯವರ ಅಸ್ಮಿತೆ ಆಂದೋಲನದೊಂದಿಗೆ ಬೆರತು ಹೋಗಿದೆ. ತನ್ನ ಕೆಲಸವನ್ನೇ ತನ್ನ ಐಡೆಂಟಿಯಾಗಿ ಪಡೆದುಕೊಳ್ಳುವ ಅಪರೂಪದ ವ್ಯಕ್ತಿಗಳ ಸಾಲಿಗೆ ಕೋಟಿಯವರು ಸೇರುತ್ತಾರೆ.
ಜನರೇ ಕಟ್ಟಿದ ಪತ್ರಿಕೆ ಆಂದೋಲನ ದಿನಪತ್ರಿಕೆ. ಜನರ ವಿಶ್ವಾಸಕ್ಕೆ ನೆಪವಾದವರು ರಾಜಶೇಖರ ಕೋಟಿ. ತಮ್ಮ ಜೀವಿತದ ಕೊನೆಯ ಕ್ಷಣದವರೆಗೂ ಜನರಿಟ್ಟ ನಂಬಿಕೆಗೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕೆಂಬ ಬದ್ಧತೆಯನ್ನು ಉಳಿಸಿಕೊಂಡು ಬಂದವರು ಕೋಟಿಯವರು. ಜನರ ನಡುವೆಯೇ ಬೆಳೆದ ತಮ್ಮ ಪತ್ರಿಕೋದ್ಯಮ ತಂದುಕೊಟ್ಟ ಅಲ್ಪಶ್ರೀಮಂತಿಕೆಯ ಪರಿಣಾಮ ಎ.ಸಿ ಕಾರಿನಲ್ಲಿ ಓಡಾಡಿದರು, ನಂಬಿಕೆಗೆ ಚ್ಯುತಿ ಎಂದು ನೆನಪಾದ ಕೂಡಲೆ ಆ ಎ.ಸಿ ಯಲ್ಲೂ ಬೆವರುವ ಮತ್ತು ಹೆದರುವ ಜೀವಂತಿಕೆ ಉಳಿಸಿಕೊಂಡಿದ್ದ ದೊಡ್ಡ ವ್ಯಕ್ತಿ ಇವರು. ಕೋಟಿಯವರು ಹೀಗಿದ್ದ ಕಾರಣದಿಂದಲೇ ಅವರ ಅಂತಿಮ ದರ್ಶನಕ್ಕೆ ಅವರ ಮನೆಯ ಮುಂದೆ ಸೇರಿದವರಲ್ಲಿ ಬಹುಪಾಲು ಇದ್ದವರು ಶ್ರೀಸಾಮಾನ್ಯರೆ.
ಸಮಾನತೆಯ ಕಲ್ಪನೆಯ ಕೂಸು
ಕೋಟಿಯವರು 1970ರಲ್ಲಿ ಬಲವಾಗಿ ಬೀಸತೊಡಗಿದ ಸಮಾಜವಾದಿ ಚಳವಳಿಯ ಪ್ರಚೋದನೆಯಿಂದ ಮೈಸೂರಿಗೆ ಧಾರವಾಡದಿಂದ ಬಂದವರು. ಜನರ ನಡುವಿನ ದನಿಯಾಗಬಲ್ಲ ಪತ್ರಿಕೆಯ ಮೂಲಕ ಚಳವಳಿಗಳಿಗೆ ಬೆಂಬಲವಾಗುವ ಕನಸು ಕಂಡವರು. ಒಂದೆರಡು ವರ್ಷಗಳಲ್ಲೇ ವಾಸ್ತವ ಮತ್ತು ಕಲ್ಪನೆಗೂ ಇರುವ ಅಂತರವನ್ನು ಹಣಕಾಸು ಮುಗ್ಗಟ್ಟು ತೋರಿಸಿದರೂ, ಚಳವಳಿಯ ಸ್ನೇಹಿತರ ಒತ್ತಾಸೆ ಮತ್ತು ಪ್ರೀತಿಯಿಂದಾಗಿ ಸಹಿಸಿಕೊಳ್ಳುವುದನ್ನು ಮತ್ತು ಕಷ್ಟಗಳನ್ನು ಜೀರ್ಣಿಸಿಕೊಳ್ಳುವುದನ್ನು ಕರಗತ ಮಾಡಿಕೊಂಡವರು. ರೈತ ಚಳವಳಿ, ದಲಿತ ಚಳವಳಿ ಮತ್ತು ಕನ್ನಡ ಭಾಷಾ ಚಳವಳಿಗಳನ್ನು ಕಟ್ಟಿ ಬೆಳೆಸುವಲ್ಲಿ ಪತ್ರಿಕೆಗಳ ಪಾತ್ರ ಏನು ಎಂಬುದನ್ನು ತೋರಿಸಿಕೊಟ್ಟವರು ಕೋಟಿಯವರು.
ಆಂದೋಲನ ಪತ್ರಿಕೆಯ ಆರಂಭಿಕ ದಿನಗಳು ಕುತೂಹಲಕಾರಿಯಾಗಿವೆ. ಸುದ್ದಿಯನ್ನು ಸಂಪಾದಿಸುವುದರ ಜೊತೆಗೆ ಅಕ್ಷರಗಳ ಮೊಳೆಗಳನ್ನು ಜೋಡಿಸಿ ಮುದ್ರಿಸಿ ಸೈಕಲ್ ಮೇಲೆ ಹೇರಿಕೊಂಡು ಮಾರಾಟ ಮಾಡುವ ಕೆಲಸದಲ್ಲಿ ಕೋಟಿಯವರು ತೊಡಗುತ್ತಿದ್ದರು. ಅನೇಕ ಸ್ನೇಹಿತರು ಇವರ ಕೆಲಸಕ್ಕೆ ನೆರವಾಗುತ್ತಿದ್ದರು. ಅದರಲ್ಲೂ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಹುಡುಗರು ರಸ್ತೆಯ ಮೇಲೆ ನಿಂತು ಪತ್ರಿಕೆಯನ್ನು ಮಾರಾಟ ಮಾಡಿದ ಉದಾಹರಣೆಗಳನ್ನು ಕೋಟಿಯವರೇ ಆಗ್ಗಾಗೆ ನೆನೆಯುತ್ತಿದ್ದುದು ಇತ್ತು. ಜೊತೆಗೆ ಈಗ ನಿವೃತ್ತಿಯ ಅಂಚಿನಲ್ಲಿರುವ ಅನೇಕರು ತಾವು ಕಾಲೇಜು ಕಲಿಯುತ್ತಿದ್ದ ವೇಳೆಯಲ್ಲಿ ಪತ್ರಿಕೆ ಮಾರಿದ ವಿಷಯ ಮತ್ತು ಕೋಟಿಯವರ ಕೈಗೆ ಮಾರಾಟದಿಂದ ಬಂದ ಬಿಡಿಗಾಸುಗಳನ್ನು ನೀಡುತ್ತಿದ್ದ ಪ್ರಸಂಗಗಳನ್ನು ನೆನೆದು ಥ್ರಿಲ್ ಆಗುವುದನ್ನು ಅನೇಕ ವೇಳೆ ನಾನು ಗಮನಿಸಿದ್ದೇನೆ. ಇವರ ಕೈಗಳು ಆಂದೋಲನ ಪತ್ರಿಕೆಯನ್ನು ಕೇವಲ ಪತ್ರಿಕೆಯಾಗಿ ಹಿಡಿಯದೇ ಒಂದು ಶಕ್ತಿಯಾಗಿ ಪರಿಭಾವಿಸಿ ಹಿಡಿಯುವುದನ್ನು ಈಗಲೂ ಕಾಣಬಹುದು. ಆಂದೋಲನ ಮತ್ತು ಅದರ ಸಂಪಾದಕರಾದ ಕೋಟಿಯವರ ಶಕ್ತಿಯಿರುವುದು ಇಲ್ಲಿಯೇ. ಜನರ ನಂಬಿಕೆಗೆ ಎಲ್ಲೂ ಚ್ಯುತಿ ತಾರದ ಅವರ ನಡೆಯೇ ಅವರ ಶಕ್ತಿಯಾಗಿತ್ತು.
ಚಳವಳಿಗಳ ದನಿ
ಇದೇ ವರ್ಷದ ಜುಲೈ ತಿಂಗಳಲ್ಲಿ ಕೋಟಿಯವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಅವರ ಮಾಜಿ ಹಾಗೂ ಹಾಲಿ ಉದ್ಯೋಗಿಗಳು ಆಯೋಜಿಸಿದ್ದರು. ಕೋಟಿಯವರು ಎಪತ್ತು ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಇದು ಆಯೋಜನೆಗೊಂಡಿತ್ತು. ನೆರದಿದ್ದವರಲ್ಲಿ ಹೆಚ್ಚಿನವರು ಆಂದೋಲನದ ಮಾಜಿ ಉದ್ಯೋಗಿಗಳೇ! ಮತ್ತು ಇವರಲ್ಲಿ ಬಹುತೇಕರು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಮುಖ್ಯವರದಿಗಾರಂತಹ ಮುಖ್ಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಾಗಿದ್ದರು! ಅಲ್ಲಿ ಎದ್ದು ಕಾಣುತ್ತಿದ್ದದ್ದು ಮಾಲಕ-ಉದ್ಯೋಗಿ ನಡುವಿನ ಸಂಬಂಧಕ್ಕಿಂತ ಗುರು-ಶಿಷ್ಯರ ಸಂಬಂಧವೇ! ಇದು ಆಂದೋಲನವೆಂಬ ಪತ್ರಿಕೆಯ ಶಕ್ತಿಯಾಗಿತ್ತು. ಪತ್ರಿಕೆಯ ಸುದ್ದಿಮನೆ ಪತ್ರಿಕೋದ್ಯಮದ ಜೀವಂತ ಶಾಲೆಯಾಗಿತ್ತು. ಕೋಟಿಯವರು ಅಲ್ಲಿನ ಹೆಡ್ ಮಾಸ್ಟರ್ ಆಗಿದ್ದರು! ಬರೀ ಹೆಡ್ ಮಾಸ್ಟರ್ ಅಲ್ಲ್ಲ, ಮಾತೃಹೃದಯದ ಹೆಡ್ ಮಾಸ್ಟರ್! ಹಾಗಾಗಿಯೇ ಆಂದೋಲನ ಪತ್ರಿಕೆ ಇಲ್ಲಿಯವರೆಗೆ ಹತ್ತಾರು ಅತ್ಯುತ್ತಮ ವೃತ್ತಿಪರ ಪತ್ರಕರ್ತರನ್ನು ರಾಜ್ಯಕ್ಕೆ ಮತ್ತು ದೇಶಕ್ಕೆ ನೀಡಲು ಸಾಧ್ಯವಾಗಿದೆ.
ಮೇಲಿನ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದಿನ ತಮ್ಮ ಮುಜುಗರದ ದನಿಯಲ್ಲಿ ತಾವು ನಡೆದುಬಂದ ಹಾದಿಯನ್ನು ಕೋಟಿಯವರು ಅಂದು ಮೆಲುಕು ಹಾಕಿದ್ದರು. 1980ರ ದಶಕದಲ್ಲಿ ಮೈಸೂರಿನ ಗೆಳೆಯರು ನೀಡಿದ ಸಹಾಯ ಸಹಕಾರಗಳನ್ನು ನೆನೆದರು. ಅಂದು ಪ್ರತಿಯೊಬ್ಬರು ಒಂದೊಂದು ರೂಪಾಯಿಯನ್ನು ತಮ್ಮ ಜೇಬಿನಿಂದ ತೆಗೆದು ನೀಡಿದ ಕಾರಣಕ್ಕೆ ಇಂದಿಗೂ ಪತ್ರಿಕೆ ದನಿಯಿಲ್ಲದವರ ದನಿಯಾಗಿ ಉಳಿದಿದೆ ಎನ್ನುವುದನ್ನು ವಿವರಿಸಿದ್ದರು. ದೇವನೂರ ಮಹಾದೇವ, ಪೋ. ಕೆ. ರಾಮದಾಸ್ ಮುಂತಾದವರ ಕಾಣಿಕೆಯನ್ನು ನೆನೆಯುತ್ತಾ ಇವರ ವಿಶ್ವಾಸಕ್ಕೆ ದ್ರೋಹವಾಗದಂತೆ ಇರುವುದೇ ನನ್ನ ಗುರಿಯಾಗಿದೆ ಎಂದಿದ್ದರು.
ಸುದಿ್ದಯೊಳಗಿನ ರೋಚಕತೆಗೆ ಆದ್ಯತೆ
ಯಾವುದೇ ಸುದ್ದಿಯನ್ನು ಜನರ ಗಮನ ಸೆಳೆಯುವ ಸಲುಾಗಿ ಒಂದಿಷ್ಟು ರೋಚಕತೆಯನ್ನು ಅವಕಾಶವಿದ್ದರೆ ನೀಡಿ ಸುದ್ದಿಯನ್ನು ಪ್ರಕಟಿಸುವ ಪರಿಪಾಠವನ್ನು ನಾನು ರೂಢಿಸಿಕೊಂಡೆನು. ಏಕೆಂದರೆ, ಕೇವಲ ಚಳವಳಿ ಮತ್ತು ಚಳವಳಿಗೆ ಸಂಬಂಧಿಸಿದ ಸುದ್ದಿಗಳು ಮತ್ತು ಉಪದೇಶಗಳು ಸಾಮಾನ್ಯ ಓದುಗರಿಗೆ ಇಷ್ಟವಾಗುವುದು ಕಡಿಮೆ. ಹಾಗಾಗಿ ದಿನನಿತ್ಯದ ಸುದ್ದಿಗಳನ್ನು ಗಮನಸೆಳೆಯುವ ಉದ್ದೇಶದಿಂದ ಮಾತ್ರ ಸೀಮಿತ ರೋಚಕತೆಯ ಚೌಕಟ್ಟಿನೊಂದಿಗೆ ನೀಡಲು ಆರಂಭಿಸಿದ ಮೇಲೆ ಪತ್ರಿಕೆಯ ಪ್ರಸಾರ ಹೆಚ್ಚಿತು. ಇದರ ಪರಿಣಾಮವಾಗಿ ಜಾಹೀರಾತಿನ ಮೂಲಕ ಆದಾಯದ ಪ್ರಮಾಣ ಹೆಚ್ಚಾದ್ದರಿಂದ ಪತ್ರಿಕೆ ಆರ್ಥಿಕವಾಗಿ ಸಬಲಗೊಳ್ಳಲು ಸಾಧ್ಯವಾಯಿತು. ಆದರೆ ಎಲ್ಲೂ ರೋಚಕತೆಗಾಗಿಯೇ ಸುದ್ದಿ ಎನ್ನುವುದು ನನ್ನ ಆಯ್ಕೆಯಾಗಿರಲಿಲ್ಲ ಎಂದು ಕೋಟಿಯವರು ಅಂದು ನುಡಿದಿದ್ದರು. ಇದು ಕೋಟಿಯವರೊಳಗಿದ್ದ ಪತ್ರಿಕೋದ್ಯಮಿಯ ನೈತಿಕತೆಯ ಗಟ್ಟಿತನವನ್ನು ಸಾಬೀತುಪಡಿಸುತ್ತದೆ.
1980ರ ಹಾಗೂ 90ರ ದಶಕವು ಕಾಡುಗಳ್ಳ ವೀರಪ್ಪನ್ ಉಪಟಳ ಹೆಚ್ಚಾಗಿದ್ದ ಸಂದರ್ಭವಾಗಿತ್ತು. ಆತನೊಂದಿಗಿನ ಸಂಘರ್ಷದಲ್ಲಿ ಅನೇಕ ಪೋಲೀಸರು ಮತ್ತು ಅರಣ್ಯ ಇಲಾಖೆ ನೌಕರರು ಸಾವಿಗೀಡಾಗುತ್ತಿದ್ದರು. ಇವುಗಳನ್ನು ಅತ್ಯಂತ ನಿಖರವಾಗಿ ವರದಿ ಮಾಡುವಲ್ಲಿ ಕೋಟಿಯವರು ಸಾಕಷ್ಟು ಆಸಕ್ತಿಯನ್ನು ವಹಿಸಿದ್ದರು. ವೀರಪ್ಪನ್‌ಗೆ ಸಂಬಂಧಿಸಿದ ಸುದ್ದಿಗಳಲ್ಲಿ ಇರುತ್ತಿದ್ದ ರೋಚಕತೆಯನ್ನು ಸುದ್ದಿಯ ಕಾರಣಕ್ಕಾಗಿ ಮಾತ್ರ ಉಳಿಸಿಕೊಳ್ಳುತ್ತಿದ್ದರು. ಆದರೆ ಪ್ರತಿಯೊಂದು ಸುದ್ದಿಯ ಹಿಂದಿನ ಸಂಕೀರ್ಣತೆಯನ್ನು ಆಂದೋಲನ ಪತ್ರಿಕೆ ಕರಾರುವಕ್ಕಾಗಿ ವರದಿ ಮಾಡುತ್ತಿತ್ತು. ಹಾಗಾಗಿಯೇ ಆಂದೋಲನ ಪತ್ರಿಕೆ ತನ್ನ ವಿಶ್ವಾಸಾರ್ಹತೆಯನ್ನು ಯಾವಾಗಲೂ ಉಳಿಸಿಕೊಳ್ಳುತಿತ್ತು.
ಹಳ್ಳಿ ಹಳ್ಳಿಯಲ್ಲೂ ವರದಿಗಾರರ ನೆಟ್‌ವರ್ಕ್
ಆಂದೋಲನ ಪತ್ರಿಕೆಯ ದೊಡ್ಡ ಶಕ್ತಿ ಅದರ ಏಜೆಂಟರೊಂದಿಗಿನ ಸಂಬಂಧದಲ್ಲಿ ಇತ್ತು. ಹತ್ತು ಪ್ರತಿಗಳನ್ನು ಮಾರುವ ಏಜೆಂಟರನ್ನು ಹಾಗೂ ಸಾವಿರ ಪ್ರತಿಗಳನ್ನು ಮಾರುವ ಏಜೆಂಟರು ಇಬ್ಬರನ್ನು ಒಂದೇ ರೀತಿಯ ವಿಶ್ವಾಸದಿಂದ ನೋಡಿಕೊಳ್ಳುವ ಸೌಜನ್ಯ ಕೋಟಿಯವರಿಗಿತ್ತು. ಈ ಕಾರಣದಿಂದಲೇ 80ರ ಮತ್ತು 90ರ ದಶಕದ ಚಳವಳಿಯ ಕಾವು ಸೃಷ್ಟಿಸುತ್ತಿದ್ದ ಬದನವಾಳು ರೀತಿಯ ಘಟನೆಗಳನ್ನು ಎಲ್ಲ ದೃಷ್ಟಿಕೋನಗಳಿಂದ ವಿಶ್ಲೇಷಿಸಿ ವರದಿ ನೀಡಲು ಆಂದೋಲನಕ್ಕೆ ಸಾಧ್ಯವಾಗುತಿತ್ತು. ಏಜೆಂಟ ರೊಂದಿಗಿನ ಸಂಬಂಧದಲ್ಲಿ ತೋರುತ್ತಿದ್ದ ಬದ್ಧತೆಯನ್ನು ಕೋಟಿಯವರು ಜಾಹೀರಾತಿನ ವಿಷಯದಲ್ಲೂ ತೋರುತ್ತಿದ್ದರು. ಯಾವುದೇ ಕಾರಣಕ್ಕೂ ಪತ್ರಿಕೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಅವಕಾಶಗಳನ್ನು ಜಾಹೀರಾತುಗಳಿಗಾಗಿ ಸೃಷ್ಟಿಸಿಕೊಳ್ಳುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ 90ರ ದಶಕದ ಅಂತಿಮ ವರ್ಷಗಳಲ್ಲಿ ಬಲವಾಗಿ ಬೇರುಬಿಡತೊಡಗಿದ ರಿಯಲ್ ಎಸ್ಟೇಟ್ ಮಾಫಿಯಾದ ಪ್ರಭಾವಕ್ಕೆ ಪತ್ರಿಕೆಯಾಗಲೀ ಸಂಪಾದಕರಾದ ಕೋಟಿಯವರಾಗಲೀ ಸಿಲುಕಿಕೊಳ್ಳಲೇ ಇಲ್ಲ. ರಾಜಶೇಖರ ಕೋಟಿಯವರ ಪತ್ರಿಕೋದ್ಯಮ ಇಂದಿಗೂ ಸಮಾನತೆಯ ಆಶಯವುಳ್ಳ ಉದ್ಯಮದ ಸ್ವರೂಪ ಅದರಲ್ಲೂ ಪತ್ರಿಕೋದ್ಯಮದ ಸ್ವರೂಪ ಹೇಗಿರಬೇಕೆಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ವ್ಯಾಪಾರಿ ಚೌಕಟ್ಟಿನ ಮಿತಿಯೊಳಗೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಹೇಗೆ ಜೀವಂತವಿಡಬಹುದು ಮತ್ತು ಪ್ರೋತ್ಸಾಹಿಸಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಆಂದೋಲನ ದಿನಪತ್ರಿಕೆಯ ಯಶಸ್ಸು.