ಕೇರಳದಲ್ಲಿ ತೆರೆದಿದೆ ‘ಜಟಾಯು ಅಡ್ವೆಂಚರ್ ಸೆಂಟರ್’
ಏನೇನಿದೆ ಈ ಹೊಸ ಪ್ರವಾಸಿ ತಾಣದಲ್ಲಿ?

ಪ್ರವಾಸಿಗರ ನೆಚ್ಚಿನ ತಾಣವಾದ ಕೇರಳದಲ್ಲಿ ‘ಜಟಾಯು ಅಡ್ವೆಂಚರ್ ಸೆಂಟರ್’ ತಲೆಎತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 65 ಎಕರೆ ವಿಸ್ತೀರ್ಣದ ಈ ಪಾರ್ಕ್ ನಲ್ಲಿ ರಾಮಾಯಣದಲ್ಲಿ ಬರುವ ಜಟಾಯು ಪಕ್ಷಿಯ 200 ಅಡಿ ಉದ್ದದ ಶಿಲ್ಪಕಲೆಯು ಪ್ರಮುಖ ಆಕರ್ಷಣೆಯಾಗಿದೆ.
ಕೊಲ್ಲಂ ಜಿಲ್ಲೆಯ ಚದಯಮಂಗಲಂ ಗ್ರಾಮದ 1000 ಅಡಿ ಎತ್ತರದ ಬೆಟ್ಟದಲ್ಲಿ ಈ ಪಾರ್ಕ್ ಇದೆ. ಜಟಾಯು ಪಕ್ಷಿಯು ಇದೇ ಪ್ರದೇಶದಲ್ಲಿ ಪ್ರಾಣಬಿಟ್ಟಿತ್ತು ಹಾಗು ಈ ಬೆಟ್ಟದಲ್ಲಿ ಶ್ರೀರಾಮನ ಹೆಜ್ಜೆ ಗುರುತಿಗಳಿವೆ ಎಂಬ ನಂಬಿಕೆಯಿದೆ.
ಜಟಾಯು ಪಕ್ಷಿಯ ಶಿಲ್ಪ ಕಲಾಕೃತಿ ಇಲ್ಲಿನ ಪ್ರಮುಖ ಆಕರ್ಷಣೆಯಾದರೂ ಇಲ್ಲಿ ಅನೇಕ ಸಾಹಸ ಹಾಗು ಮನರಂಜನಾತ್ಮಕ ಕ್ರೀಡೆಗಳಿವೆ. ಕ್ಲೈಂಬಿಂಗ್, ಝಿಪ್ಲಿಂಗ್. ಬೌಲ್ಡರಿಂಗ್, ಬಂಡೆ ಕಲ್ಲುಗಳನ್ನು ಹತ್ತುವುದು, ಆರ್ಚರಿ, ಪೈಂಟ್ ಬಾಲ್ ಹಾಗು ಲೇಸರ್ ಟ್ಯಾಗ್ ಇಲ್ಲಿರುವ ಸಾಹಸ ಕ್ರೀಡೆಗಳಾಗಿವೆ. ಜಟಾಯು ಹಾಗು ರಾವಣನ ನಡುವಿನ ಯುದ್ಧವನ್ನು ಪರದೆಯ ಮೂಲಕ ತೋರಿಸುವ ‘6ಡಿ ಥಿಯೇಟರ್’, ಟೆಲಿಸ್ಕೋಪ್ ಮೂಲಕ ದಟ್ಟ ಮಳೆಕಾಡು ಹಾಗು ಬೆಟ್ಟಗಳ ವೀಕ್ಷಣೆ, ಸಿದ್ಧ ಹೀಲಿಂಗ್ ಗುಹೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
10ರಿಂದ 100 ಮಂದಿಗೆ ಈ ಪಾರ್ಕ್ ಪ್ರವೇಶಕ್ಕೆ ಅವಕಾಶವಿದೆ. ಪ್ರತಿಯೊಬ್ಬ ವ್ಯಕ್ತಿಗೆ ಇಲ್ಲಿನ ಪ್ರವೇಶ ಶುಲ್ಕ 3,500 ರೂ. ಆಗಿದ್ದು, 15ರಿಂದ 20 ಚಟುವಟಿಕೆಗಳು ಇದರಲ್ಲಿ ಒಳಗೊಂಡಿದೆ. ಪಾರ್ಕ್ ನ ಕೆಲ ಭಾಗಗಳಲ್ಲಿ ಇನ್ನೂ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷದ ಎಪ್ರಿಲ್ ನಲ್ಲಿ ಕಾಮಗಾರಿ ಮುಗಿಯಲಿದೆ.