ಭಾರತದ ಚುನಾವಣಾ ರಾಜಕಾರಣಕ್ಕೆ ರೈತರ ಸಮಸ್ಯೆಗಳನ್ನು ತಂದ ಚೌಧರಿ ಚರಣ್‌ಸಿಂಗ್

ಕೃಷಿ ಮತ್ತು ಗ್ರಾಮೀಣ ರಂಗಕ್ಕಿಂತ ಉದ್ಯಮ ಮತ್ತು ನಗರಗಳ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುವುದನ್ನು ಅವರು ವಿರೋಧಿಸಿದರು. ಉದ್ಯಮಗಳ ಬೆಳವಣಿಗೆಗೆ ಸದೃಢವಾದ ಕೃಷಿಯ ಅಗತ್ಯವಿದೆ ಎಂದು ಅವರು ನಂಬಿದ್ದರು. ಕೃಷಿಯೊಂದೇ ಔದ್ಯಮಿಕ ರಂಗದ ಕೆಲಸಗಾರರಿಗೆ ಆಹಾರ ಮತ್ತು ಉದ್ಯಮಿಗಳಿಗೆ ಕಚ್ಚಾ ಸಾಮಗ್ರಿಗಳನ್ನು ಒದಗಿಸಬಲ್ಲದೆಂದು ಅವರು ವಾದಿಸಿದ್ದರು.
ಸ್ವತಂತ್ರಭಾರತದಲ್ಲಿ ಪ್ರಮುಖ ರೈತ ಮುಖಂಡರಲ್ಲಿ ಓರ್ವರಾದ ಚೌಧರಿ ಚರಣ್‌ಸಿಂಗ್ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ರೈತರ ಹಕ್ಕುಗಳಿಗಾಗಿ ಹೋರಾಡಿದವರು ಮತ್ತು ರೈತರ ಹಿತಾಸಕ್ತಿಗಳನ್ನು ಸದಾ ಪ್ರತಿನಿಧಿಸಿದವರು. ರೈತರ ನಾಯಕ ಚೋಟು ರಾಮ್‌ರವರ ಹಾದಿಯಲ್ಲಿ ಮುನ್ನಡೆದ ಚರಣ್‌ಸಿಂಗ್ 1978ರ ಡಿಸೆಂಬರ್ 23ರಂದು ತನ್ನ 76ನೇ ಜನ್ಮದಿನದಂದು ‘ಕಿಸಾನ್ ಟ್ರಸ್ಟ್’ ಸ್ಥಾಪಿಸಿ, ಗ್ರಾಮೀಣ ಜನ ಸಮುದಾಯದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಶ್ರಮಿಸಿದವರು. ಪಶ್ಚಿಮ ಉತ್ತರ ಪ್ರದೇಶದ ರೈತ ಕುಟುಂಬವೊಂದರಲ್ಲಿ ಜನಿಸಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಬಳಿಕ ಕೇಂದ್ರ ಗೃಹ ಸಚಿವರಾಗಿ, ವಿತ್ತ ಸಚಿವರಾಗಿ, ಉಪಪ್ರಧಾನಿಯಾಗಿ ಅಂತಿಮವಾಗಿ ದೇಶದ ಪ್ರಧಾನಿ ಹುದ್ದೆಗೆ ಏರಿದವರು.
ನಮ್ಮ ದೇಶಕ್ಕೆ ಅವರು ನೀಡಿದ ಎರಡು ಬಹುಮುಖ್ಯವಾದ ಕಾಣಿಕೆಗಳನ್ನು ನೆನಪಿಸಿಕೊಳ್ಳಲೇ ಬೇಕಾಗಿದೆ. ಮೊದಲನೆಯದಾಗಿ, ಪಂಡಿತ್ ನೆಹರೂ ಮತ್ತು ಯೋಜನಾ ಆಯೋಗದ ಮೊದಲ ಮುಖ್ಯಸ್ಥರಾದ ಪಿ.ಸಿ ಮಹಾಲನೊಬಿಸ್‌ರವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಗಾಂಧಿ ಮತ್ತು ತನ್ನದೇ ಆದ ರೈತ ತಳಪಾಯದಿಂದ ಮೂಡಿಬಂದ ಅಭಿವೃದ್ಧಿಯ ಪರ್ಯಾಯ ಮಾದರಿಯನ್ನು ಜಾರಿಗೆ ತರಲು ಅವರು ನಡೆಸಿದ ಪ್ರಯತ್ನ. ಎರಡನೆಯದಾಗಿ ಅವರು ರೈತರ ಸಮಸ್ಯೆಗಳನ್ನು ಮೊದಲು ರಾಜ್ಯಮಟ್ಟದಲ್ಲಿ ನಂತರ ರಾಷ್ಟ್ರಮಟ್ಟದಲ್ಲಿ ಭಾರತದ ಚುನಾವಣಾ ರಾಜಕಾರಣಕ್ಕೆ ತಂದರು.
ಚರಣ್ ಸಿಂಗ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗಲೇ, ಭಾರತದ ಭವಿಷ್ಯಕ್ಕೆ ಅಭಿವೃದ್ಧಿಯ ಮಾದರಿ ಯಾವುದಾಗಬೇಕೆಂಬ ಬಗ್ಗೆ ಅವರು ನೆಹರೂರವರ ಜತೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಕೃಷಿ ಮತ್ತು ಗ್ರಾಮೀಣ ರಂಗಕ್ಕಿಂತ ಉದ್ಯಮ ಮತ್ತು ನಗರಗಳ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುವುದನ್ನು ಅವರು ವಿರೋಧಿಸಿದರು. ಉದ್ಯಮಗಳ ಬೆಳವಣಿಗೆಗೆ ಸದೃಢವಾದ ಕೃಷಿಯ ಅಗತ್ಯವಿದೆ ಎಂದು ಅವರು ನಂಬಿದ್ದರು. ಕೃಷಿಯೊಂದೇ ಔದ್ಯಮಿಕ ರಂಗದ ಕೆಲಸಗಾರರಿಗೆ ಆಹಾರ ಮತ್ತು ಉದ್ಯಮಿಗಳಿಗೆ ಕಚ್ಚಾ ಸಾಮಗ್ರಿಗಳನ್ನು ಒದಗಿಸಬಲ್ಲದೆಂದು ಅವರು ವಾದಿಸಿದ್ದರು.
ಚರಣ್ ಸಿಂಗ್ ತನ್ನ ಜಾತಿಗಿಂತ ಮಿಗಿಲಾಗಿ ಓರ್ವ ರೈತನಾಗಿ ತನ್ನ ಅನನ್ಯತೆಯನ್ನು ತನ್ನ ರಾಜಕಾರಣದ ಮುಖ್ಯ ಕಕ್ಷೆಯಾಗಿ ಮಾಡಿದರು. 1939ರಲ್ಲಿ ಸರಕಾರಿ ನೌಕರಿಗಳಲ್ಲಿ ರೈತರ ಮಕ್ಕಳಿಗೆ ರೈತರ ಜಾತಿಯನ್ನು ಪರಿಗಣಿಸದೆ ಶೇ.50ರಷ್ಟು ಮೀಸಲಾತಿ ನೀಡಬೇಕೆಂಬ ವಿಚಾರವನ್ನು ಅವರು ಪ್ರಸ್ತಾಪಿಸಿದ್ದರು. ಓರ್ವ ಕೃಷಿ ಸಚಿವನಾಗಿ ಅವರು 1952ರಲ್ಲಿ ಉತ್ತರಪ್ರದೇಶ ಜಮೀನ್ದಾರಿ ಮತ್ತು ಭೂಸುಧಾರಣಾ ಮಸೂದೆಯನ್ನು ಜಾರಿಗೆ ತಂದರು. ಇದನ್ನು ಅವರು ತನ್ನ ರಾಜಕೀಯ ಬದುಕಿನ ಒಂದು ಮುಖ್ಯ ಸಾಧನೆ ಎಂದು ಪರಿಗಣಿಸಿದ್ದರು.
ನೆಹರೂರವರ ಜಂಟಿ ಹಾಗೂ ಸಹಕಾರಿ ಬೇಸಾಯದ ಪರಿಕಲ್ಪನೆಯ ಕಟು ಟೀಕಾಕಾರನಾಗಿದ್ದ ಚರಣ್‌ಸಿಂಗ್, ಇದನ್ನು ವಿರೋಧಿಸಿ 1959ರಲ್ಲಿ ಕಾಂಗ್ರೆಸ್ ವಾರ್ಷಿಕ ಅಧಿವೇಶನದಲ್ಲಿ ಒಂದು ಗಂಟೆಕಾಲ ಭಾಷಣ ಮಾಡಿದ್ದರು. ಜಂಟಿ ಬೇಸಾಯವನ್ನು ವಿರೋಧಿಸಿ ವಿಶ್ಲೇಷಿಸಿ ಅವರು ‘ಜ್ಯಾಂಟ್ ಫಾರ್ಮಿಂಗ್ ಎಕ್ಸ್ ರೇಡ್: ದಿ ಪ್ರಾಬ್ಲೆಮ್ ಆ್ಯಂಡ್ ಇಟ್ಸ್ ಸೊಲ್ಯೂಶನ್’ ಎಂಬ ಪುಸ್ತಕ ಬರೆದಿದ್ದರು.
1960ರ ಮತ್ತು 1970ರ ದಶಕಗಳಲ್ಲಿ ಮೊದಲು ಯುಪಿಯಲ್ಲಿ ನಂತರ ರಾಷ್ಟ್ರಮಟ್ಟದಲ್ಲಿ ಚರಣ್‌ಸಿಂಗ್ ರೈತರ ರಾಜಕಾರಣದ ಪ್ರತಿನಿಧಿಯಾದರು. 1967ರಲ್ಲಿ ಕಾಂಗ್ರೆಸ್‌ನಿಂದ ದೂರಸರಿದ ಬಳಿಕ, ಅವರು ಉತ್ತರಪ್ರದೇಶದಲ್ಲಿ ಮೊತ್ತಮೊದಲ ಕಾಂಗ್ರೆಸೇತರ ಸರಕಾರ ರಚಿಸಿ ಮುಖ್ಯಮಂತ್ರಿಯಾದರು. ಇತರರ ಜೊತೆಗೂಡಿ 1967ರಲ್ಲಿ ಅವರು ‘ಭಾರತೀಯ ಕಿಸಾನ್‌ದಳ’ (ಬಿಕೆಡಿ) ಸ್ಥಾಪಿಸಿ ಜಮೀನ್ದಾರಿ ನಿರ್ಮೂಲನಾ ಕಾಯ್ದೆಯ ಫಲಾನುಭವಿಗಳಿಗೆ, ವಿಶೇಷವಾಗಿ ಹಿಂದುಳಿದ ಜಾತಿಗಳಿಗೆ ನೆರವಾದರು. ಸ್ವಲ್ಪವೇ ಸಮಯದಲ್ಲಿ ಬಿಕೆಡಿ ರಾಜ್ಯದಲ್ಲಿ ಕಾಂಗ್ರೆಸ್ ಬಳಿಕ ದ್ವಿತೀಯ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಮೂಡಿಬಂತು. 1969ರಲ್ಲಿ ಅದು ಅತ್ಯಧಿಕ ಜನಪ್ರಿಯ ಮತಗಳಿಸಿ, ಯಾವುದೇ ಚುನಾವಣೆಯಲ್ಲಿ ಒಂದು ಕಾಂಗ್ರೆಸೇತರ ಪಕ್ಷ ಗಳಿಸದ, ಅತ್ಯಧಿಕ ಸ್ಥಾನಗಳನ್ನು ಗಳಿಸಿತು. ಬಿಕೆಡಿಯ ಉದಯವು ಉತ್ತರಪ್ರದೇಶದಲ್ಲಿ ಜನಸಂಘ ಮತ್ತು ಅದರ ಹಿಂದೂ ರಾಷ್ಟ್ರೀಯತೆಯ ಕಾರ್ಯಸೂಚಿಯ ಅವನತಿಗೆ ಕಾರಣವಾಯಿತು.
1974ರ ಚುನಾವಣೆಗಳ ಬಳಿಕ, ಚರಣ್‌ಸಿಂಗ್ ರಾಷ್ಟ್ರರಾಜಕಾರಣಕ್ಕೆ ಧುಮುಕಿದರು. ಸ್ವಲ್ಪವೇ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು ಹಾಗೂ ಅವರನ್ನು ಜೈಲಿಗೆ ಕಳುಹಿಸಲಾಯಿತು. ತುರ್ತು ಪರಿಸ್ಥಿತಿಯ ಬಳಿಕ ಜನತಾ ಪಕ್ಷದ ರಚನೆಯಲ್ಲಿ ಅವರು ತುಂಬ ಪ್ರಮುಖ ಪಾತ್ರ ವಹಿಸಿದರು.
1977ರ ಚುನಾವಣೆಗಳಲ್ಲಿ ಬಿಕೆಡಿಯ ಚುನಾವಣಾ ಚಿಹ್ನೆಯನ್ನೇ (ನೇಗಿಲು ಹೊತ್ತ ರೈತ) ಬಳಸಿ ಜನತಾಪಕ್ಷ ಸ್ಪರ್ಧಿಸಿ ಬೃಹತ್ ಬಹುಮತದೊಂದಿಗೆ ಗೆದ್ದಿತು. ಜನತಾಪಕ್ಷ ಅಧಿಕಾರಕ್ಕೆ ಬಂದು ಚರಣ್‌ಸಿಂಗ್ ಕೇಂದ್ರ ಸರಕಾರದ ಒಬ್ಬ ಸಚಿವರಾದ ಕೂಡಲೆ, ಅವರು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಹಲವು ಕ್ರಮಗಳನ್ನು ತೆಗೆದುಕೊಂಡರು. ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ರಾಜಕಾರಣದಲ್ಲಿ ರೈತಾಪಿಜನರ ರಾಜಕೀಕರಣ ನಡೆದು, 1960ರಿಂದ 1980ರ ದಶಕದ ಕೊನೆಯವರೆಗೆ, ರೈತರ ಹಿತಾಸಕ್ತಿಗಳನ್ನು ಕಡೆಗಣಿಸುವುದು ಯಾವುದೇ ಸರಕಾರಕ್ಕೂ ಸಾಧ್ಯವಿಲ್ಲವಾಯಿತು.
ಚರಣ್‌ಸಿಂಗ್‌ರವರು ಗಾಂಧಿ, ದಯಾನಂದ ಸರಸ್ವತಿ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲರಿಂದ ಸ್ಫೂರ್ತಿ ಪಡೆದಿದ್ದರು. ಗಾಂಧಿಯ ಒಬ್ಬ ಅನುಯಾಯಿಯಾಗಿ ಅವರು ಸರಳ ಬದುಕು ನಡೆಸಿ, ಗ್ರಾಮೀಣ ಕೃಷಿರಂಗಕ್ಕೆ ಬದ್ಧರಾಗಿದ್ದುಕೊಂಡು, ಅರ್ಥವ್ಯವಸ್ಥೆಯ ವಿಕೇಂದ್ರೀಕರಣವನ್ನು ಪ್ರತಿಪಾದಿಸಿ ದರು. ದಯಾನಂದ ಸರಸ್ವತಿಯವರಿಂದ ಸ್ಫೂರ್ತಿಪಡೆದ ಅವರು ಜಾತಿ ಪದ್ಧತಿ ಯನ್ನು ಉಗ್ರವಾಗಿ ವಿರೋಧಿಸಿದರು. ಇದಕ್ಕೆ ಒಂದು ಪರಿಹಾರವಾಗಿ ಅವರು ಅಂತರ್ಜಾತಿಯ ವಿವಾಹಗಳನ್ನು ಬೆಂಬಲಿಸಿದರು. ಯಾವುದೇ ಒಂದು ನಿರ್ದಿಷ್ಟ ಜಾತಿಯ ಹೆಸರು ಹೊತ್ತಿರುವ ಶಿಕ್ಷಣ ಸಂಸ್ಥೆಗೆ ಸರಕಾರ ಆರ್ಥಿಕ ನೆರವು ನೀಡುವು ದನ್ನು ನಿಲ್ಲಿಸಬೇಕು ಎಂದರು. ಪಟೇಲರಿಂದ ಅವರು ಒಬ್ಬ ಸಾಮೂಹಿಕ ರೈತ ಮುಖಂಡ ಹಾಗೂ ಓರ್ವ ಕಟ್ಟು ನಿಟ್ಟಿನ ಆಡಳಿತಗಾರನಾಗುವುದನ್ನು ಕಲಿತರು.
ಚರಣ್‌ಸಿಂಗ್‌ರವರಿಗೆ ಅವರದೇ ಆದ ಮಿತಿಗಳಿದ್ದವು. ವಿದ್ಯಾರ್ಥಿ ರಾಜಕಾರಣವನ್ನು ವಿರೋಧಿಸಿದ ಅವರು ಯುಪಿಯಲ್ಲಿ ವಿದ್ಯಾರ್ಥಿ ಸಂಘ ಚುನಾವಣೆಗಳನ್ನು ನಿಷೇಧಿಸಿದ್ದರು. ಸ್ವತ: ಓರ್ವ ಗಾಂಧಿವಾದಿಯಾಗಿದ್ದರೂ, ಸ್ವಾತಂತ್ರ ನಂತರದ ಭಾರತದಲ್ಲಿ ಅವರು ಅಸಹಕಾರ ಮತ್ತು ಸತ್ಯಾಗ್ರಹದ ರಾಜಕಾರಣವನ್ನು ವಿರೋಧಿಸಿದರು. ಆದರೂ, 1980ರಲ್ಲಿ ಪೊಲೀಸರು ಬಾಗ್‌ಪತ್‌ನಲ್ಲಿ ಮೂವರು ಗಂಡಸರನ್ನು ಕೊಂದು ಅವರಲ್ಲೊಬ್ಬರ ಪತ್ನಿಯನ್ನು ಬೀದಿಗಳಲ್ಲಿ ಬೆತ್ತಲೆಗೊಳಿಸಿ ಅವಮಾನಿಸಿದಾಗ, ಅವರು ತನ್ನ ಪಕ್ಷಕ್ಕೆ ಅಸಹಕಾರ ಮತ್ತು ಸತ್ಯಾಗ್ರಹ ಚಳವಳಿ ನಡೆಸುವಂತೆ ಸೂಚನೆ ನೀಡಿದರು. ಹಾಗೆಯೇ, 1970ರ ದಶಕದಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಆಡಳಿತವನ್ನು ವಿರೋಧಿಸುವಲ್ಲಿ ವಿದ್ಯಾರ್ಥಿ ರಾಜಕಾರಣದ ಶಕ್ತಿಯನ್ನು ಗಮನಿಸಿದ ಅವರು ತನ್ನ ನಿಲುವನ್ನು ಬದಲಿಸಿ ಯುಪಿ ಮತ್ತು ಬಿಹಾರ್‌ನ ಹಲವು ವಿದ್ಯಾರ್ಥಿ ನಾಯಕರಿಗೆ ಬೆಂಬಲ ನೀಡಿದರು.
ಇಂದು, ಚರಣ್‌ಸಿಂಗ್‌ರವರ ಕೊಡುಗೆ ಜನರಮನಸ್ಸಿನಿಂದ ಮರೆಯಾಗಿರುವಂತೆ ಕಂಡರೂ, ರಾಷ್ಟ್ರ ರಾಜಕಾರಣದ ಮೇಲೆ ಅವರ ಪ್ರಭಾವ ಇನ್ನೂ ಮುಂದುವರಿದಿದೆ.
ಕೃಪೆ: thewire.in