ಕಾಯಿಲೆಗಿಂತ ಕೆಟ್ಟ ಔಷಧಿ ತ್ರಿವಳಿ ತಲಾಖ್ ಮಸೂದೆ

ಸಂಪೂರ್ಣ ಅನಿವಾರ್ಯವಲ್ಲದ ಯಾವುದೇ ಶಿಕ್ಷೆ ದಬ್ಬಾಳಿಕೆ, ಸರ್ವಾಧಿಕಾರದ ಸ್ವರೂಪ ಹೊಂದಿರುವಂಥದ್ದು, ಎನ್ನುತ್ತಾನೆ ಮಾಂಟೆಸ್ಕೂ. ನಿಜ ಹೇಳಬೇಕೆಂದರೆ, ಬೇರೆ ದಾರಿ ಇಲ್ಲದಾಗ ಮತ್ತು ಅತ್ಯಂತ ಘೋರ ತಪ್ಪುಗಳನ್ನು ಮಾಡಿದಾಗ ಮಾತ್ರ ಕ್ರಿಮಿನಲ್ ಕಾನೂನನ್ನು ಬಳಸಬೇಕು. ಆದರೆ ಸರಿಯಲ್ಲದ ಉದ್ದೇಶಗಳಿಗಾಗಿ ಕ್ರಿಮಿನಲ್ ಕಾನೂನಿನ ಅತಿಯಾದ ಬಳಕೆ ಆಧುನಿಕ ರಾಷ್ಟ್ರಗಳ ಒಂದು ಕಟು ವಾಸ್ತವವಾಗಿದೆ. 1977ರಿಂದ ಇಂಗ್ಲೆಂಡ್‌ನಲ್ಲಿ 3,000 ಹೊಸ ಅಪರಾಧಗಳು ಹುಟ್ಟಿಕೊಂಡಿವೆ, ಮತ್ತು ಅಮೆರಿಕದಲ್ಲಿ ಪ್ರಸ್ತುತ ಸುಮಾರು ಮೂರು ಲಕ್ಷ ಫೆಡರಲ್ ಅಪಾಧ ಪ್ರಕರಣಗಳಿವೆ.
ಭಾರತದ ಬಗ್ಗೆ ಅಂಕಿ ಸಂಖ್ಯೆಗಳು ಲಭ್ಯವಿಲ್ಲ. ಆದರೆ ಪ್ರತೀವರ್ಷ ಕೇಂದ್ರ ಮತ್ತು ರಾಜ್ಯಗಳಲ್ಲಿ ಹೊಸ ಹೊಸ ಕ್ರಿಮಿನಲ್ ಕಾನೂನುಗಳನ್ನು ಮಾಡುತ್ತಲೇ ಇದ್ದೇವೆ. ಇದೀಗ ತ್ರಿವಳಿ ತಲಾಖ್ ಮಸೂದೆಯು ಅತಿ ಅಪರಾಧೀಕರಣದ ಸಾಲಿಗೆ ಇನ್ನೊಂದು ಸೇರ್ಪಡೆ. ತ್ರಿವಳಿ ತಲಾಖ್ ಪ್ರಕರಣಗಳು ಅತಿ ಕಡಿಮೆ, ಮಹತ್ವಪೂರ್ಣವಲ್ಲದ್ದು ಎಂದು ಸುಪ್ರೀಂಕೋರ್ಟ್ ಕೂಡ ಹೇಳಿತ್ತು. 2ಜಿ ಹಗರಣದಂತೆಯೇ, ಮಾಧ್ಯಮಗಳು ತ್ರಿವಳಿ ತಲಾಖ್‌ನ್ನು ಅತಿರಂಜಿತವಾಗಿಸಿವೆ. ಮುಸ್ಲಿಂ ಮಹಿಳೆಯರ ನಿಜವಾದ ಸಮಸ್ಯೆ, ಅವರ ಶಿಕ್ಷಣ ಮತ್ತು ನಿರುದ್ಯೋಗ.
ವೈವಾಹಿಕ ಅಪರಾಧಗಳ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿ. ಒಂದು, ನಾವು ಹಾದರದ ರೂಪದಲ್ಲಿ ವೈವಾಹಿಕ ವಿಶ್ವಾಸದ ಉಲ್ಲಂಘನೆಯನ್ನು ಅಪರಾಧೀಕರಣದಿಂದ ದೂರವಿಡಬೇಕೆಂದು ವಾದಿಸುತ್ತೇವೆ. ಎರಡನೆಯದಾಗಿ, ನಾವು ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಲು, ಕ್ರಿವಿುನಲೈಸ್ ಮಾಡಲು ಸಮರ್ಥರಾಗಿಲ್ಲ.
ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸುತ್ತ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ‘‘ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್‌ನ್ನು ಒಂದು ‘ಪಾಪ’ವೆಂದು ಸಾರಿದೆ’’ ಎಂದು ಹೇಳಿದರು. ಹೀಗೆ ತ್ರಿವಳಿ ತಲಾಖ್ ಮಸೂದೆಯು ಕ್ರಿಮಿನಲ್ ಕಾನೂನಿನ ಮೂಲಕ ಧಾರ್ಮಿಕ ನೈತಿಕತೆಯನ್ನು ಜಾರಿಗೊಳಿಸುತ್ತಿದೆ. ಒಂದು ನಾಗರಿಕ ಕಾನೂನು ವ್ಯವಸ್ಥೆ ಧಾರ್ಮಿಕ ನೈತಿಕತೆಯನ್ನು ಹೇರಕೂಡದು. ಹಾಗೆಯೇ ವಿವೇಕಯುತವಾದ ಕ್ರಿಮಿನಲ್ ಕಾನೂನುಗಳಿರುವ ನಮ್ಮ ದೇಶದೊಂದಿಗೆ ಮುಸ್ಲಿಂ ದೇಶಗಳನ್ನು ಹೋಲಿಸುವುದೂ ಸರಿಯಲ್ಲ. ಆ ದೇಶಗಳಲ್ಲಿ ನಮ್ಮಲ್ಲ್ಲಿರುವ ಹಾಗೆ ಪ್ರೌಢವಾದ ಕ್ರಿಮಿನಲ್ ಕಾನೂನುಗಳಿಲ್ಲ. ಇಸ್ಲಾಮಿಕ್ ಕ್ರಿಮಿನಲ್ ಕಾನೂನಿನ ಪ್ರತೀಕಾರ ರೂಪವಾದ ಶಿಕ್ಷೆಯನ್ನು ಮತ್ತು ಧರ್ಮತ್ಯಾಗ ಹಾಗೂ ಧರ್ಮನಿಂದನೆಗೆ ಇರುವ ಕಲ್ಲುಹೊಡೆದು ಸಾಯಿಸುವ ಅಥವಾ ಕೈಕಾಲುಗಳನ್ನು ಕಡಿಯುವಂತಹ ಶಿಕ್ಷೆಯನ್ನು ನಾವು ನಮ್ಮ ಕಾನೂನಿನ ಒಳಗೆ ಸೇರಿಸಲು ಸಾಧ್ಯವಿಲ್ಲ. ಮರಣ ದಂಡನೆ ಕೂಡ ಅಪರಾಧಗಳನ್ನು ತಡೆಯುವುದಿಲ್ಲವಾದ ಕಾರಣ, ಅಪರಾಧದ ನೆಲೆಯಲ್ಲಿ ಕೂಡ ತ್ರಿವಳಿ ತಲಾಖ್ ಮಸೂದೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಅದೇನಿದ್ದರೂ ಮುಸ್ಲಿಂ ಮತಪಂಡಿತರು ಮುಂದೆ ಬಂದು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪ್ರಗತಿಪರವಾದ ಸುಧಾರಣೆಗಳನ್ನು ತರಬೇಕಾಗಿದೆ.
ಇನ್ನೊಂದು ಕೋನದಿಂದ ಕೂಡ ತ್ರಿವಳಿ ತಲಾಖ್‌ನ ಅಪರಾಧೀಕರಣವು, ಸಂಪ್ರದಾಯವಾದಿ ಹನಫಿ ಮುಸ್ಲಿಂ ಮಹಿಳೆಯರಿಗೆ, ಅವರು ‘ಪಾಪಪೂರಿತ’ವಾದದ್ದೆಂದು ಪರಿಗಣಿಸುವ ಸಂಬಂಧದಲ್ಲಿ ಮುಂದುವರಿಯುವಂತೆ, ಕಾನೂನು ನಿರ್ದೇಶಿಸುತ್ತಿರುವ ಒಂದು ವಿಶಿಷ್ಟ ಪ್ರಕರಣವಾಗಿದೆ. ಇನ್ನೊಂದೆಡೆ, ವ್ಯಕ್ತಿಯೊಬ್ಬ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಸ್ವಾತಂತ್ರವನ್ನು ಹತ್ತಿಕ್ಕುವ ತಥಾಕಥಿತ ‘ಲವ್‌ಜಿಹಾದ್’ ಇದೆ ಮತ್ತು ಮುಸ್ಲಿಂ ಮಹಿಳೆಯರಿಗೆ ದಿಢೀರ್ ತ್ರಿವಳಿ ತಲಾಖ್ ನೀಡಿರುವ ಅದೇ ಪತ್ನಿಪೀಡಕ ಗಂಡನೊಂದಿಗೆ ಸಂಬಂಧ ಮುಂದುವರಿಸುವಂತೆ ಬಲಾತ್ಕರಿಸಿದಂತಾಗುತ್ತದೆ. ಸಂಸತ್ ಮತ್ತು ಸುಪ್ರೀಂಕೋರ್ಟ್ ತ್ರಿವಳಿ ತಲಾಖ್‌ನ್ನು ಅಸಿಂಧು ಎಂದು ಘೋಷಿಸಬಹುದು, ಆದರೆ ಅವುಗಳು, ಆ ಗಂಡಂದಿರು ಅವರ ಪತ್ನಿಯರೊಂದಿಗೆ ಪ್ರೀತಿಯ ಒಂದು ಸಂಬಂಧ ಹೊಂದಿರುವಂತೆ ಒತ್ತಾಯಿಸಲು ಬಲಾತ್ಕರಿಸಲು ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ, ಇಂತಹ ಪ್ರಕರಣಗಳಲ್ಲಿ ಆಯ್ಕೆ ಮಹಿಳೆಯರದ್ದಾಗಿರಬೇಕು.
ದುರದೃಷ್ಟವಶಾತ್ ಸರಕಾರದ ನೀತಿಯಲ್ಲೇ ‘ಅಪರಾಧಗಳು’ ಹುಟ್ಟಿಕೊಳ್ಳುತ್ತವೆ, ಮತ್ತು ಅದರಿಂದ ಕ್ರಿಮಿನಲ್ ಕಾನೂನು ‘ನ್ಯಾಯ’ಕ್ಕಿಂತ ಹೆಚ್ಚಾಗಿ ‘ಅಧಿಕಾರ’ದ ವಿಚಾರವನ್ನು ಪ್ರತಿಫಲಿಸುತ್ತದೆ. ಸರಕಾರವು ತನ್ನ ಅಧಿಕಾರದ ಚುನಾವಣಾ ಆವಶ್ಯಕತೆಗಳಿಂದ ಪ್ರಭಾವಿತವಾಗಿ ಏನನ್ನೂ ಬೇಕಾದರೂ ಅಪರಾಧೀಕರಿಸಲು ಮಾಡಲು ನಿರ್ಧರಿಸಲೂಬಹುದು. ಉದಾಹರಣೆಗೆ, ರೋಮನ್ ಚಕ್ರವರ್ತಿ ಕ್ಲಾಡಿಯಸ್, ತನ್ನ ಸಹೋದರನ ಮಗಳನ್ನೇ ವಿವಾಹವಾಗಲು ಬಯಸಿದಾಗ ರಕ್ತ ಸಂಬಂಧಿ ವಿವಾಹವನ್ನು ಅಪರಾಧ ಎನ್ನುವ ಅಲ್ಲಿಯ ಕಾನೂನಿಗೆ ತಿದ್ದುಪಡಿ ತಂದ. ಯಾವುದೇ ಕೃತ್ಯವನ್ನು ಅಪರಾಧೀಕರಣ ಅದು ದೇಶದ ಹಿತಾಸಕ್ತಿಗೆ ಅನಿವಾರ್ಯ, ಅತ್ಯವಶ್ಯಕ ಎಂದು ತೋರಿಸಿಕೊಡಬೇಕು. ಇತರ ಮಾರ್ಗಗಳ ಮೂಲಕ ಒಂದು ಅಪರಾಧವನ್ನು ತಡೆಯುವುದು ಸಾಧ್ಯವಾಗುವುದಾದಲ್ಲಿ, ಅದನ್ನು ಅಪರಾಧೀಕರಿಸುವ ಸರಕಾರದ ಉದ್ದೇಶಕ್ಕೆ ಸಮರ್ಥನೆ ಇರುವುದಿಲ್ಲ. ಉದಾಹರಣೆಗೆ, ಮಕ್ಕಳು ಅಶ್ಲೀಲ ಚಿತ್ರಗಳನ್ನು ನೋಡದಂತೆ ತಡೆಯುವುದಕ್ಕೆ ಸರಕಾರ ಕ್ರಮ ತೆಗೆದುಕೊಳ್ಳುವುದು ಸಮರ್ಥನೀಯ. ಆದರೆ ಈ ಉದ್ದೇಶ ಈಡೇರಿಸಲು ಫಿಲ್ಟರ್‌ಗಳು ತುಂಬಾ ಪರಿಣಾಮಕಾರಿಯಾಗಿರುವುದರಿಂದ ಈ ಉದ್ದೇಶಕ್ಕಾಗಿ ಕ್ರಿಮಿನಲ್ ಕಾನೂನು ಬಳಸುವ ಅಗತ್ಯವಿರುವುದಿಲ್ಲ.
ಯಾವ ಪತ್ನಿಯ ದೂರನ್ನು ಅವಲಂಬಿಸಿ ಓರ್ವ ಪತಿ ಜೈಲಿಗೆ ಹೋಗಿರುತ್ತಾನೋ, ಆತ ಜೈಲಿನಿಂದ ಶಿಕ್ಷೆ ಮುಗಿಸಿ ಮರಳಿ ಬಂದ ಬಳಿಕ, ಆ ಪತ್ನಿಯನ್ನು ತನ್ನ ಪತ್ನಿಯಾಗಿ ಉಳಿಸಿಕೊಳ್ಳುವ ಸಾಧ್ಯತೆ ಇರುವುದಿಲ್ಲವಾದ್ದರಿಂದ ನರೇಂದ್ರ ಮೋದಿ ಸರಕಾರ ಮುಸ್ಲಿಂ ಮಹಿಳೆಯರಿಗೆ ಬಹಳ ದೊಡ್ಡ ಅಪಕಾರ ಮಾಡುತ್ತಿದೆ. ಮಸೂದೆಯು ಇನ್ನಷ್ಟು ವಿಚ್ಛೇದನಗಳಿಗೆ ಕಾರಣವಾಗಲಿದೆ. ಹೀಗಾಗಿ ತ್ರಿವಳಿ ತಲಾಖ್‌ಗೆ ಸರಕಾರ ತಂದಿರುವ ಪರಿಹಾರವು, ಔಷಧಿಯು ಕಾಯಿಲೆಗಿಂತ ಹೆಚ್ಚು ಕೆಟ್ಟದ್ದಾಗಿದೆ.
ಕೃಪೆ: indianexpress.com