ಗೋವಾದ ಗೋಮಾಂಸ ರಾಜಕಾರಣ
ಗೋವಾದ ಗೋವು ರಾಜಕಾರಣ: ಗೋರಕ್ಷಕರು ಮತ್ತು ಎನ್‌ಜಿಒಗಳು ಅಧಿಕವಾಗಿ ಗೋಮಾಂಸ ಸೇವಿಸುವ ರಾಜ್ಯವು ಉಪವಾಸ ಬೀಳುವಂತೆ ಮಾಡಿದ್ದು ಹೇಗೆ?

ಗೋರಕ್ಷಕರು ಮತ್ತು ಪಶುಕಲ್ಯಾಣ ತಂಡಗಳು ನೀಡುತ್ತಿದ್ದ ಕಿರುಕುಳದ ವಿರುದ್ಧ ಗೋವಾದಲ್ಲಿ ಗೋಮಾಂಸ ಪೂರೈಕೆದಾರರು ಮತ್ತು ವ್ಯಾಪಾರಿಗಳು ನಡೆಸಿದ ನಾಲ್ಕು ದಿನಗಳ ಮುಷ್ಕರವನ್ನು ಅಂತ್ಯಗೊಳಿಸಿದ ಬಳಿಕ ಕೆಲವೇ ದಿನಗಳಲ್ಲಿ ಗೋಮಾಂಸ ಸಾಗಾಟದ ವಾಹನಗಳು ರಾಜ್ಯದೊಳಕ್ಕೆ ನಿಧಾನವಾಗಿ ಬರಲಾರಂಭಿಸಿವೆ. ಆದರೆ, ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಗೋಮಾಂಸ ವಿರೋಧಿ ಗುಂಪುಗಳು ತಮ್ಮನ್ನು ಕೇಳುವವರು ಯಾರೂ ಇಲ್ಲವೆಂದು ಇನ್ನಷ್ಟು ಧೈರ್ಯವಹಿಸುವುದರೊಂದಿಗೆ, ಗೋವಾದಲ್ಲಿ ಗೋಮಾಂಸಕ್ಕೆ ಸಂಬಂಧಿಸಿ ನಡೆಯುವ ಘರ್ಷಣೆ/ಕಾದಾಟ ಇನ್ನಷ್ಟು ಉಗ್ರವಾಗಬಹುದು ಸ್ಪಷ್ಟವಾಗುತ್ತಿದೆ.
ಅಲ್ಲಿ ನಡೆದ ನಾಲ್ಕು ದಿನಗಳ ಮುಷ್ಕರಕ್ಕೆ ಎರಡು ಘಟನೆಗಳು ಕಾರಣವಾಗಿದ್ದವು. ಡಿಸೆಂಬರ್ 25ರಂದು ಗೋವಾದ ರಾಜಧಾನಿ ಪಂಜಿಮ್‌ನಲ್ಲಿ ಪೋಲಿಸರು, ರಾಜ್ಯದೊಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಯಿತೆನ್ನಲಾದ, 13,00ಕಿಲೋ ಗೋಮಾಂಸವನ್ನು ವಶಪಡಿಸಿಕೊಂಡರು. ಒಂದು ವರದಿಯ ಪ್ರಕಾರ, ವಶಪಡಿಸಿಕೊಳ್ಳಲಾದ ಆ ಗೋಮಾಂಸದ ಮೇಲೆ ಫಿನಾಯಿಲ್ ಸುರಿಯಲಾಯಿತ್ತು. ಜನವರಿ 6 ರಂದು 1,500 ಕಿಲೋ ಗೋಮಾಂಸದ ಇನ್ನೊಂದು ಕನ್‌ಸೈನ್‌ಮೆಂಟನ್ನು ಉತ್ತರಗೋವಾದಲ್ಲಿ ವಶಪಡಿಸಿಕೊಳ್ಳಲಾಯಿತು.
ಈ ಘಟನೆಗಳಿಂದ ಗೋವಾದ ಮಾಂಸ ವ್ಯಾಪಾರಿಗಳು ಕ್ರುದ್ಧರಾದರು. ಗೋವಾದ ಮಾಂಸ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮನ್ನಾ ಬೆಪಾರಿ ಹೇಳುವಂತೆ,‘‘ಪೊಲೀಸರಿಗೆ ಅಕ್ರಮ ಸಾಗಟಣೆಯ ದೂರು ಬಂದಿದ್ದರೆ ಅವರು ಸೂಕ್ತ ವಿಚಾರಣೆ ನಡೆಸಿ, ಅಕ್ರಮವೇನೂ ಇಲ್ಲವೆಂದಾದಲ್ಲಿ , ಗೋಮಾಂಸವನ್ನು ತಮಗೆ ಮರಳಿಸಬೇಕಾಗಿತ್ತು. ಇದಕ್ಕೆ ಬದಲಾಗಿ ಎನ್‌ಜಿಒ ಗಳು ಮತ್ತು ಗೋರಕ್ಷಕರು ಫಿನಾಯಿಲ್ ಸಜ್ಜಿತರಾಗಿ ಬಂದು ಅದನ್ನು ಮಾಂಸದ ಮೇಲೆ ಚೆಲ್ಲಿ ಸಂಪೂರ್ಣನಾಶಮಾಡಿ ನಮಗೆ 5ರಿಂದ6 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದರು’’
ಅವರ ವಿರುದ್ಧ ಯಾವುದೇ ಮೊಕದ್ದಮೆ ಹೂಡದೆ ವಾಹನ ಚಾಲಕರ ಮತ್ತು ಪೂರೈಕೆದಾರರ ವಿರುದ್ಧ ಮೊಕದ್ದಮೆಗಳನ್ನು ಹೂಡಲಾಯಿತು.
ಮಾಂಸಹಾರಿಗಳಾದ ಕ್ರಿಶ್ಚಿಯನರು ಬೃಹತ್ ಸಂಖ್ಯೆಯಲ್ಲಿರುವ ಗೋವಾದಲ್ಲಿ ಪ್ರತಿದಿನ 25ರಿಂದ 30ಟನ್ ಗೋಮಾಂಸಕ್ಕೆ ಬೇಡಿಕೆ ಇದೆ.
ಈ ಬೇಡಿಕೆಯನ್ನು ಈಗ ಮುಖ್ಯವಾಗಿ ನೆರೆಯ ಕರ್ನಾಟಕದಿಂದ ಸಾಗಣೆಯಾಗುವ ಗೋಮಾಂಸದಿಂದ ಪೂರೈಸಲಾಗುತ್ತಿದೆ.
ಸ್ಥಳೀಯ ಬೇಡಿಕೆ : ಗೋವಾದಲ್ಲಿ 1978ರಿಂದ ಗೋವಧೆಯನ್ನು ನಿಷೇಧಿಸಲಾಗಿದೆ. ಗೋವಾ ಸರಕಾರ, ಗೋವಾ ಮಾಂಸ ಸಂಕೀರ್ಣ (ಗೋವಾ ಮೀಟ್ ಕಾಂಪ್ಲೆಕ್ಸ್) ಎಂಬ ರಾಜ್ಯ ಸರಕಾರವೇ ನಡೆಸುವ ಕಸಾಯಿಖಾನೆಯನ್ನು ಸ್ಥಾಪಿಸಿದಾಗ ಕೋಣಗಳ ಮತ್ತು ಎತ್ತುಗಳ ವಧೆ ಮಾಡಲು ಅನುಮತಿ ಇರುವ ಕಸಾಯಿಖಾನೆ ಅದೊಂದೇ ಎಂದು ಒಂದು ಕಾನೂನು ಜಾರಿಮಾಡಿತು. ಇದಕ್ಕೂ ಕೆಲವು ಷರತ್ತುಗಳನ್ನು ಪಾಲಿಸಬೇಕಿತ್ತು.
ಗೋವಾ ರಾಜ್ಯದ ಹೈನು ಸಂಖ್ಯೆ ತೀರ ಚಿಕ್ಕದಾಗಿರುವುದರಿಂದ, ಖುರೇಶಿ ಸಮುದಾಯದ ಸುಮಾರು 70 ಮುಸ್ಲಿಂ ವ್ಯಾಪಾರಿಗಳು ರಾಸುಗಳನ್ನು ಕರ್ನಾಟಕದಿಂದ ಗೋವಾಕ್ಕೆ ಸಾಗಿಸುತ್ತಿದ್ದರು. ಹಲವು ಪಶು ಕಲ್ಯಾಣ ಗುಂಪುಗಳು ಅನೇಕ ರಾಸುಗಳುನ್ನು ವಶಪಡಿಸಿಕೊಂಡ ಬಳಿಕ ಕಳೆದ ಅಕ್ಟೋಬರ್‌ನಲ್ಲಿ ಇದು ನಿಂತು ಹೋಯಿತು.
ಕಿರುಕುಳದ ವರ್ಷಗಳು:
ಇತ್ತೀಚಿನ ವರ್ಷಗಳಲ್ಲಿ ಗೋರಕ್ಷಕರಿಂದಾಗಿ ಗೋವಾದ ಗೋಮಾಂಸ ವ್ಯಾಪಾರಿಗಳು ಹತ್ತಾರು ರಾಸುಗಳನ್ನು ಕಳೆದುಕೊಂಡಿದ್ದಾರೆ. ಫಿನಾಯಿಲ್ ಸುರಿದು ಅಥವಾ ಸುಟ್ಟು ಹಾಕಿ ಗೋರಕ್ಷಕರು ನೂರಾರು ಕಿಲೋಗ್ರಾಮ್‌ಗಳಷ್ಟು ಗೋಮಾಂಸವನ್ನು ನಾಶಪಡಿಸಿದ್ದಾರೆ.
ನಾಲ್ಕು ದಿನಗಳ ದಿಢೀರ್ ಮುಷ್ಕರವು, ಪ್ರವಾಸಿಗಳ ಹಾಗೂ ಹಬ್ಬದ ಋತುವಿನ ಪರಾಕಾಷ್ಠೆಯ ದಿನಗಳಲ್ಲಿ ಗೋವಾದ ಸ್ಥಳೀಯ ಮಾರುಕಟ್ಟೆಗಳಲ್ಲಿ ಗೋಮಾಂಸದ ಕೊರತೆಗೆ ಕಾರಣವಾಯಿತು. ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಈ ಹಿಂದೆ ತಳೆದ ನಿಲುವನ್ನೇ ಮುಂದುವರಿಸಿದರು. ರಾಜ್ಯದಲ್ಲಿ ಗೋಮಾಂಸದ ಕಾನೂನು ರೀತ್ಯಾ ಪೂರೈಕೆಯು ಎಂದಿನಂತೆ ಮುಂದುವರಿಯುತ್ತದೆ.
ಗೋಮಾಂಸ ನಿಷೇಧವನ್ನು ಬೆಂಬಲಿಸುವ ಬಿಜೆಪಿ ಕೇಂದ್ರ ಸರಕಾರದ ನಿಲುವು ಮತ್ತು ಗೋವಾದಲ್ಲಿ ಬಿಜೆಪಿಯ ಚುನಾವಣಾ ಒತ್ತಡಗಳ ಬಗ್ಗೆ ಸಮತೋಲನ ಕಾಯ್ದುಕೊಳ್ಳಲು ಪಾರಿಕ್ಕರ್ ಪ್ರಯತ್ನಿಸುತ್ತಿದ್ದಾರೆಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಭಾರೀ ಆಪಾದನೆಗಳು: ಗೋವಂಶ ರಕ್ಷಾ ಅಭಿಯಾನದ ಅಧ್ಯಕ್ಷ ಹನುಮಾನ್ ಪರಬ್, ಮಹಾರಾಷ್ಟ್ರದಲ್ಲಿರುವಂತೆ ಗೋವಾದಲ್ಲಿ ಕೂಡ ಗೋಹತ್ಯೆಯನ್ನು ಸಂರ್ಫೂಣವಾಗಿ ನಿಷೇಧಿಸುವ ಒಂದು ಕಾನೂನು ಮಾಡಬೇಕೆಂದು ಹೇಳುತ್ತಾರೆ. ಮಹಾರಾಷ್ಟ್ರವು 2015ರಲ್ಲಿ ಕೋಣಗಳ ಮತ್ತು ಎತ್ತುಗಳ ಹತ್ಯೆಯನ್ನು ನಿಷೇಧಿಸಿತು. ಗೋವುಗಳ ಹತ್ಯೆಯನ್ನು 1976ರಲ್ಲೇ ನಿಷೇಧಿಸಲಾಗಿತ್ತು. ಈ ಮಧ್ಯೆ, ‘‘ಎನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ’’ದ ಗೌರವಾಧಿಕಾರಿಗಳು ಗೋಮಾಂಸ ವಿರೋಧಿ ಚಳವಳಿಯ ಮುಂಚೂಣಿಯಲ್ಲಿರುವವರು ಗೋವಾದಲ್ಲಿ ಗೋಮಾಂಸ ಮಾಫಿಯವೊಂದು ಕಾರ್ಯಚರಿಸುತ್ತಿದೆ. ನಗದು ವ್ಯವಹಾರದಲ್ಲಿ ತೊಡಗಿದೆ ಮತ್ತು ಈ ವ್ಯವಹಾರದಲ್ಲಿ ಬರುವ ಹಣವನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಗೋಮಾಂಸದ ಮೇಲೆ ಫಿನಾಯಿಲ್ ಎಸೆದಿರುವುದಾಗಿ ತಮ್ಮ ಮೇಲೆ ಮಾಡಿರುವ ಆಪಾದನೆಗಳನ್ನು ಅವರು ಅಲ್ಲಗಳೆದಿದ್ದಾರೆ.
ಗೋಮಾಂಸ ವಿರೋಧಿ ಚಳವಳಿಯ ಒಂದು ಇತಿಹಾಸವನ್ನೇ ಹೊಂದಿರುವ ಗೋವಾದಲ್ಲಿ ಕಳೆದ ಸೆಷ್ಟಂಬರ್‌ನಲ್ಲಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದು ಆರು ತಿಂಗಳುಗಳ ಬಳಿಕ ಗೋಮಾಂಸ ವಿರೋಧಿ ಚಳವಳಿಯು ತೀವ್ರಗೊಂಡಿತು. ಅಕ್ಬೋಬರ್‌ನಲ್ಲಿ ಮೇಲೆ ಹೇಳಲಾದ ಗೌರವಾಧಿಕಾರಿಗಳು ಕಸಾಯಿಖಾನೆಯಲ್ಲಿನ ಕೆಲವು ಪಶುಗಳನ್ನು ವಶಪಡಿಸಿಕೊಂಡರು. ಆ ತಿಂಗಳಲ್ಲಿ ವ್ಯಾಪಾರಿಗಳು ರಾಸುಗಳನ್ನು ಕಳೆೆದುಕೊಂಡು ಅವುಗಳನ್ನು ಅಲ್ಲಿಗೆ ತರುವುದನ್ನೇ ನಿಲ್ಲಿಸಿದರು. ರಾಸುಗಳ ಕೊರತೆಯಿಂದಾಗಿ ಕಸಾಯಿಖಾನೆ ಮುಚ್ಚಲ್ಪಟ್ಟಿತು.
ಈಗ ಕಸಾಯಿಖಾನೆಯನ್ನು ಖಾಸಗೀಕರಣ ಗೊಳಿಸಲಾಗುವುದೆಂದು ಗೋವಾದ ಪಶುಸಂಗೋಪನಾ ಸಚಿವ ವೌವಿನ್ ಗೊಡಿನ್ಹೊ ಹೇಳಿದ್ದಾರೆ. ಆದರೆ ಕಸಾಯಿಖಾನೆಗೆ ಕಳುಹಿಸಲಾಗುವ ಪಶುಗಳ ಸಾಗಣೆಗೆ ಗೋರಕ್ಷಕರು ಅಡ್ಡಿಪಡಿಸುತ್ತಿರುವಾಗ ಖಾಸಗಿ ರಂಗದವರು ಕಸಾಯಿಖಾನೆಯನ್ನು ಕೊಂಡುಕೊಳ್ಳಲು ಮುಂದೆ ಬರುವುದು ಕಷ್ಟಸಾಧ್ಯ. ಇತ್ತ ಕರ್ನಾಟಕ ಬರಲಿರುವ ಚುನಾವಣೆಯಲ್ಲಿ ಬಿಝಿಯಾಗಿರುವಾಗ ಗೋವಾದ ಗೋಮಾಂಸ ರಾಜಕಾರಣ ಇನ್ನಷ್ಟು ತೀವ್ರಗೊಂಡರೆ ಆಶ್ಚರ್ಯವಿಲ್ಲ.
(ಕೃಪೆ: Scroll.in)







