ಗಣಿತದ ಅದ್ಭುತ ಮೇಧಾವಿ 12ರ ಈ ಬಾಲಕ
ಪ್ರಪಂಚೋಧ್ಯ

ಶಾಲೆಯಲ್ಲಿ ಕಲಿಯುತ್ತಿದ್ದಾಗ ಅನೇಕ ಮಂದಿಗೆ ಗಣಿತವೆಂದರೆ ಕಬ್ಬಿಣದ ಕಡಲೆಯಿದ್ದಂತೆ. 20ರವರೆಗಿನ ಮಗ್ಗಿಗಳನ್ನು ಕಂಠಪಾಠ ಮಾಡುವುದೆಂದರೆ ಅದು ತ್ರಾಸದಾಯಕವಾದ ಕೆಲಸವಾಗಿ, ತಲೆಕೆರೆದು ಕೊಳ್ಳುವಂತಾಗುತ್ತಿತ್ತು.
ಆದರೆ ಉತ್ತರಪ್ರದೇಶದ ಸಹಾರನ್‌ಪುರ ಜಿಲ್ಲೆಯ ಕುಗ್ರಾಮವಾದ ನಕುಡ್ ತ್ರಿಪುಡಿಯ 12 ವರ್ಷದ ಬಾಲಕ ಚಿರಾಗ್ ರಥಿಗೆ ಗಣಿತವೆಂದರೆ ನೀರು ಕುಡಿದಷ್ಟು ಸಲೀಸು.
ಎಂಟನೆ ತರಗತಿಯಲ್ಲಿ ಕಲಿಯುತ್ತಿರುವ ಈ ಚೂಟಿ ಬಾಲಕನಲ್ಲಿ 20 ಕೋಟಿ ವರೆಗಿನ ಅಂಕಿಗಳನ್ನು ಕೂಡಿಸಲು, ಗುಣಿಸಲು ಅಥವಾ ಭಾಗಿಸಲು ಹೇಳಿದಲ್ಲಿ, ನೀವು ಕ್ಯಾಲ್ಕುಲೇಟರ್ ಹೊರತೆಗೆದು, ಅಂಕಿಗಳ ಗುಂಡಿಗಳನ್ನು ಒತ್ತುತ್ತಿರುವಂತೆಯೇ, ಆತ ನಿಖರವಾದ ಉತ್ತರ ಹೇಳಿ ಬಿಡುತ್ತಾನೆ.
ಚಿರಾಗ್ ರಥಿ ಈಗ ಇಡೀ ಸಹಾರನ್‌ಪುರ ಜಿಲ್ಲೆಯಲ್ಲಿ ಅದ್ಭುತ ಬಾಲಕ ಹಾಗೂ ಗಣಿತದ ಮೇಧಾವಿಯೆಂದೇ ಪ್ರಸಿದ್ಧನಾಗಿದ್ದಾನೆ. ಆತನ ತಂದೆ ನರೇಂದರ್ ರಥಿ, ಓರ್ವ ದಿನಗೂಲಿ ಕಟ್ಟಡ ನಿರ್ಮಾಣ ಕಾರ್ಮಿಕ. ಚಿರಾಗ್‌ನ ಗಣಿತ ಪಾಂಡಿತ್ಯಕ್ಕೆ ಬೆರಗಾಗಿರುವ ಗಣಿತಜ್ಞರೀಗ ಆತನನ್ನು, ಶಕುಂತಲಾದೇವಿಯಂತಹ ಮಹಾನ್ ಗಣಿತಶಾಸ್ತ್ರಜ್ಞರೊಂದಿಗೆ ಹೋಲಿಕೆ ಮಾಡತೊಡಗಿದ್ದಾರೆ.
ಬಡತನದಲ್ಲೇ ಬೆಳೆದ ಚಿರಾಗ್‌ನ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿರುವ ಶಾಲೆಯು, ಆತನಿಗಾಗಿ ವಿಶೇಷ ಗಣಿತ ಶಿಕ್ಷಕರೊಬ್ಬರನ್ನು ನೇಮಿಸಿದೆ. 12 ವರ್ಷದ ಈ ಪೋರನಿಗೆ, ಅವರು 12ನೇ ತರಗತಿಯವರೆಗಿನ ಗಣಿತವನ್ನು ಬೋಧಿಸುತ್ತಿದ್ದಾರೆ.
ನಾಲ್ಕು ಮಕ್ಕಳ ತಂದೆಯಾದ ನರೇಂದ್ರನ ಆರ್ಥಿಕ ಬಿಕ್ಕಟ್ಟು, ಚಿರಾಗ್‌ನ ಶೈಕ್ಷಣಿಕ ಪ್ರತಿಭೆಯನ್ನು ಮನಗಂಡ ಶಾಲಾಡಳಿತವು ಆತನ ಶಿಕ್ಷಣ ಶುಲ್ಕವನ್ನು ಮನ್ನಾ ಮಾಡಿದೆ ಹಾಗೂ ಪುಸ್ತಕಗಳನ್ನು ಕೊಳ್ಳಲು ಆತನಿಗೆ ಆರ್ಥಿಕ ನೆರವು ನೀಡಿದೆ.
ಅಂಕಿಗಳೊಂದಿಗೆ ಆಟವಾಡುವುದೆಂದರೆ ತನಗೆ ಮೋಜೆಂದು ಚಿರಾಗ್ ಹೇಳುತ್ತಾನೆ. ಗಣಿತದ ಸಮಸ್ಯೆಗಳಿಗೆ ಉತ್ತರ ತನಗೆ ಸಹಜವಾಗಿಯೇ ಬರುತ್ತದೆ. ನಾನು ಯಾವುದೇ ವಿಶೇಷ ತಂತ್ರಗಾರಿಕೆ ಅಥವಾ ಸೂತ್ರವನ್ನು ಬಳಸುತ್ತಿದ್ದೇನೆಂದು ಕೆಲವು ಸಹಪಾಠಿಗಳು ಆರೋಪಿಸುತ್ತಾರೆ. ಆದರೆ ನನ್ನ ಬಳಿ ಅಂತಹದ್ದೇನೂ ಇಲ್ಲವೆಂದು ಚಿರಾಗ್ ಹೇಳಿಕೊಳ್ಳುತ್ತಾನೆ.