13,275 ವರ್ಷ ಜೈಲುಶಿಕ್ಷೆ!
ಪ್ರಪಂಚೋದ್ಯ

ಓರ್ವ ಅಪರಾಧಿಗೆ 10 ವರ್ಷ, 20 ವರ್ಷ ಹೋಗಲಿ 50 ವರ್ಷ ಜೈಲು ಶಿಕ್ಷೆ ನ್ಯಾಯಾಲಯ ವಿಧಿಸಿರುವುದನ್ನು ಕೇಳಿದ್ದೇವೆ. ಆದರೆ ಥಾಯ್ಲೆಂಡ್‌ನ ಕೋರ್ಟೊಂದು ಗೋಲ್‌ಮಾಲ್ ಸ್ಕೀಮ್‌ಗಳ ಮೂಲಕ 40 ಸಾವಿರಕ್ಕೂ ಅಧಿಕ ಮಂದಿಗೆ ಪಂಗನಾಮ ಹಾಕಿದ ವಂಚಕ ನೊಬ್ಬನಿಗೆ ಬರೋಬ್ಬರಿ 13,275 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮೂಲಕ ವಿಚಿತ್ರ ತೀರ್ಪು ನೀಡಿದೆ. 34 ವರ್ಷದ ಥಾಯ್ ಪ್ರಜೆ ಪುಡಿತ್‌ಕಿಟ್ಟಿತ್ರಾಡಿಲೊಕ್ ಎಂಬಾತ ಸುಮಾರು 40 ಸಾವಿರಕ್ಕೂ ಅಧಿಕ ಮಂದಿಯನ್ನು ಮರುಳು ಮಾಡಿ, ಅವರಿಂದ ಒಟ್ಟು 160 ದಶಲಕ್ಷ ಡಾಲರ್ ಮೌಲ್ಯದ ಹಣವನ್ನು ತನ್ನ ಬೇನಾಮಿ ಕಂಪೆನಿಗಳಿಗೆ ಹೂಡಿಕೆ ಮಾಡಿಸಿ, ವಂಚಿಸಿದ್ದನೆಂದು ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ನ್ಯಾಯಾಲಯ 2653 ವಂಚನೆಯ ಪ್ರಕರಣಗಳಲ್ಲಿ ಆತ ದೋಷಿಯೆಂದು ಪರಿಗಣಿಸಿದೆ ಹೀಗಾಗಿ ಪ್ರತಿ ಯೊಂದು ವಂಚನೆ ಪ್ರಕರಣಗಳಲ್ಲಿ ಪುಡಿತ್‌ಗೆ ನೀಡಬೇಕಾದ ಜೈಲುಶಿಕ್ಷೆಯನ್ನು ಲೆಕ್ಕಹಾಕಿದ ನ್ಯಾಯಾಲಯ ಆತನಿಗೆ ಒಟ್ಟು 13,275 ವರ್ಷ ಸೆರೆಮನೆವಾಸ ವಿಧಿಸಿದೆ. ಅಲ್ಲದೆ ಆತನಿಂದ ವಂಚನೆಗೊಳಗಾದವರ ಪೈಕಿ ಗುರುತಿಸಲ್ಪಟ್ಟ 2,653 ಮಂದಿಗೆ ಶೇ.7.5ರಷ್ಟು ಬಡ್ಡಿದರದಲ್ಲಿ 17 ದಶಲಕ್ಷ ಡಾಲರ್ ಹಣವನ್ನು ಮರುಪಾವತಿಸುವಂತೆ ಆದೇಶಿಸಿದೆ.
ತಾನು ನಡೆಸುತ್ತಿರುವ ರಿಯಲ್‌ಎಸ್ಟೇಟ್, ಪ್ರಸಾಧನಾ ಸಾಮಾಗ್ರಿ, ಹಳೆಯಕಾರುಗಳು ಹಾಗೂ ರಫ್ತು ವ್ಯವಹಾರಕ್ಕೆ ಆತ ಅಮಾಯಕರನ್ನು ತನ್ನ ಕಂಪೆನಿಯಲ್ಲಿ ಹಣಹೂಡುವಂತೆ ಮರುಳುಮಾಡುತ್ತಿದ್ದ. ಹೂಡಿಕೆದಾರರಿಗೆ ಹೇರಳವಾದ ಲಾಭದ ಜೊತೆ ಪ್ರೋತ್ಸಾಹಭತ್ತೆಯ ಭರವಸೆ ನೀಡುತ್ತಿದ್ದ ಪುಡಿತ್, ಜಾಸ್ತಿ ಹಣ ಹೂಡಿದವರಿಗೆ ಆಡಳಿತ ಮಂಡಳಿಯ ನೂತನ ಸದಸ್ಯರಾಗುವ ಆಮಿಷವನ್ನೂ ಒಡ್ಡುತ್ತಿದ್ದ. ಕೊನೆಗೂ ಆತನ ವಂಚನೆ ಬಯಲಾಗಿ, ಆತ ಜೈಲು ಸೇರಬೇಕಾಯಿತು.





