ಹೊಸಗನ್ನಡದ ಮುಂಗೋಳಿ ಮುದ್ದಣ
ಇಂದು ಕವಿ ಮುದ್ದಣ ಹುಟ್ಟಿದ ದಿನ

ಮುದ್ದಣ ಕವಿಯ ಭಾಷೆ, ಶೈಲಿ, ದೃಷ್ಟಿಧೋರಣೆಗಳು ಎಲ್ಲವೂ ನವೀನ ಚಿಂತನೆಯ ಫಲ. ಹಳತು ಮತ್ತು ಹೊಸತು ಸಾಹಿತ್ಯಗಳ ಮಧುಮಣಿ ಅವನು. ಕಸ್ತೂರಿ ಕನ್ನಡದ ಗದ್ಯಬ್ರಹ್ಮ ಅವನೆಂದರೆ ತಪ್ಪಾಗಲಾರದು. ‘ನೀರಿಳಿಯದ ಗಂಟಳಲ್ಲಿ ಕಡುಬನ್ನು ತುರುಕಿದಂತೆ’ ಸಾಹಿತ್ಯ ಜನವಿಮುಖವಾಗಬಾರದೆಂಬುದು ಅವನ ದೃಷ್ಟಿ.
ಕವಿ ಮುದ್ದಣನೆಂದು ಪ್ರಸಿದ್ಧನಾದ ನಂದಳಿಕೆಯ ಲಕ್ಷ್ಮೀನಾರಾಯಣಯ್ಯ ಹೊಸಗನ್ನಡ ಸಾಹಿತ್ಯದ ಮುಂಗೋಳಿ ಎಂದು ಗುರುತಿಸಲ್ಪಟ್ಟವನು. ಎರಡು ಯಕ್ಷಗಾನ ಪ್ರಸಂಗಗಳು, ಸಂಪ್ರದಾಯದ ಹಾಡುಗಳು, ಭಾಮಿನಿ ಷಟ್ಪದಿಯಲ್ಲಿ ‘ಶ್ರೀರಾಮ ಪಟ್ಟಾಭಿಷೇಕಂ’ ಕಾವ್ಯ ಬರೆದು ಅದ್ಭುತ ರಾಮಾಯಣಂ ಎಂಬೆರಡು ಗದ್ಯಕಾವ್ಯಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಜರಾಮರವಾದ ಕೀರ್ತಿಯನ್ನು ಪಡೆದವನು. ಬಡತನದ ಬೇಗೆಯಲ್ಲಿ ಬಳಲಿ, ವ್ಯಾಯಾಮ ಶಿಕ್ಷಕನಾಗಿ ತೊಳಲಿ, ಕನ್ನಡ ನಿಡಿ ಪೂಜೆಯಲಿ ತನ್ನನ್ನು ತೊಡಗಿಸಿಕೊಂಡ ಈ ಕವಿ ನಮ್ಮ ನಂದಳಿಕೆಯ ಬಣದಲ್ಲಿ ಅರಳಿದ ನಂದಿ ಬಟ್ಟಲ ಹೂವು. ‘ಕಬ್ಬಿಗರ ಮನೆಯೂಳಿಗದವನೊರ್ವಂ ಕನ್ನಡಿಗಂ!’ ಎಂದು ಹೇಳಿಕೋಡ ಅಪ್ಪಟ ಭಾಷಾಭಿಮಾನಿ. ತನ್ನ ಕೃತಿಗಳು ಹೇಗಾದರೂ ಬೆಳಕು ಕಾಣುವಂತಾಗಲೆಂದು ‘ಚಾವಡಿರಂಗಭಟ್ಟನಾತ್ಮಜೆ ಮಹಾಲಕ್ಷ್ಮೀ’ ಎಂಬ ಗುಪ್ತನಾಮದಿಂದ ಕಾವ್ಯವನ್ನು ಬರೆದು ಮೈಸೂರಿನ ಪ್ರಕಾಶಕರಿಗೆ ಕಳುಹಿಸಿಕೊಟ್ಟ ತ್ಯಾಗಜೀವಿ! ಮನೋರಮೆಯ ಪಾತ್ರದ ಮೂಲಕ ‘ಕನ್ನಡ ಕತ್ತುರಿಯಲ್ತೆ’ ಎಂದು ಹೇಳಿಸಿ, ಆ ಕಸ್ತೂರಿಯ ಕಂಪು ನಿರಂತರ ನಾಡಿನ ಮೂಲೆ ಮೂಲೆಗಳಲ್ಲಿ ಪಸರಿಸುವಂತೆ ಮಾಡಿದ ಮಹಾಕವಿ!
ನಂದಳಿಕೆ ಆಗಿನ ಮದರಾಸು ಪ್ರಾಂತಕ್ಕೆ ಸೇರಿದ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ ಪುಟ್ಟ ಹಳ್ಳಿ. ಅಲ್ಲಿಯ ಮಹಾಲಿಂಗೇಶ್ವರ ದೇವಸ್ಥಾನದ ಪಾಠಾಳಿ ತಿಮ್ಮಯ್ಯನವರು ಮತ್ತು ಅವರ ಧರ್ಮಪತ್ನಿ ಮಹಾಲಕ್ಷ್ಮಮ್ಮನವರ ಹಿರಿಯ ಮಗನಾಗಿ ಲಕ್ಷ್ಮೀ ನಾರಾಯಣನ ಜನನವಾಯಿತು. (24 ಜನವರಿ 1870). ಮಗು ಮುದ್ದು ಮುದ್ದಾಗಿ ಇದ್ದುದರಿಂದಲೋ ಏನೋ ಮುದ್ದಣ ಎಂದು ಕರೆದಿರಬೇಕು. ಬಾಲ್ಯದಲ್ಲಿ ನಂದಳಿಕೆಯ ಪ್ರಾಥಮಿಕ ಶಾಲೆಯಲ್ಲಿ ಮುದ್ದಣನ ವಿದ್ಯಾಭ್ಯಾಸ ನಡೆಯಿತು. ಯಕ್ಷಗಾನ ಆಟ-ಕೂಟಗಳು, ಭೂತಗಳ ಕೋಲ-ದರ್ಶನಗಳು, ಭಜನೆ-ಹರಿಕತೆಗಳು ತುಂಬಿ ತುಳುಕುತ್ತಿದ್ದ ಸಂಸ್ಕೃತಿಯ ಮಡಿಲಲ್ಲಿ ಬಾಲಕ ಮುದ್ದಣ ಬೆಳೆದು ನಿಂತ. ಮುಂದೆ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಉಡುಪಿಗೆ ಬಂದರೂ, ಬಡತನದ ಬವಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಆಗ ಅವನು ಕನ್ನಡ ಶಿಕ್ಷಕ ತರಬೇತಿ ಶಾಲೆಗೆ ಸೇರಬೇಕಾಯಿತು. ಈ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ ಉದ್ಯೋಗ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಇವನ ಕಟ್ಟುಮಸ್ತಾದ ಕಾಯ, ಆಜಾನುಬಾಹು ವ್ಯಕ್ತಿತ್ವಗಳನ್ನು ಕಂಡ ಶಾಲಾ ಮುಖ್ಯೋಪಾಧ್ಯಾಯರು ವ್ಯಾಯಾಮ ಶಿಕ್ಷಕನಾಗೆಂದು ಸೂಚಿಸಿ, ಆ ತರಬೇತಿಗಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಆ ಹೊತ್ತಿಗಾಗಲೇ ಸಂಗೀತದ ರಾಗಗಳನ್ನು ಗುನುಗಿಕೊಂಡು ಪಿಟೀಲುವಾದನದ ಅಭ್ಯಾಸವನ್ನು ಮಾಡಿದ್ದ ಮುದ್ದಣನಿಗೆ ಮದರಾಸಿನಲ್ಲಿ ಇತರ ಭಾಷೆಗಳ ಮೇಲೂ ಪ್ರಭುತ್ವ ಲಭಿಸಿತು. ‘ಚಕ್ರದಾರಿ’ಎಂಬ ಹೆಸರಿನಿಂದ ಕೆಲವು ಲೇಖನಗಳನ್ನು ಬರೆದು ಮಂಗಳೂರಿಗೆ ಪ್ರಕಟವಾಗುತ್ತಿದ್ದ ‘ಸುವಾಸಿನಿ’ ಪತ್ರಿಕೆಗೆ ಕಳುಹಿಸಿದ. ವ್ಯಾಯಾಮ ಶಿಕ್ಷಣ ಮುಗಿಸಿದ ಮುದ್ದಣ ಉಡುಪಿಗೆ ಹಿಂದಿರುಗಿದ. 1889ರಲ್ಲಿ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕನಾಗಿ ಸೇರಿಕೊಂಡ. ಜೊತೆ ಜೊತೆಗೇ ಸಾಹಿತ್ಯದ ಅಂಗಸಾಧನೆಯೂ ಆರಂಭವಾಯಿತು.
ಬೋರ್ಡ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ಮಳಲಿ ಸುಬ್ಬರಾಯ ಎಂಬವರಲ್ಲಿ ಸಂಸ್ಕೃತ-ಕನ್ನಡ ಕಾವ್ಯಾಭ್ಯಾಸಕ್ಕೆ ತೊಡಗಿದ ಮುದ್ದಣ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರಸಂಗವನ್ನು ಬರೆದ. ಇದಕ್ಕೆ ಸಂಸ್ಕೃತ ರತ್ನಾವಳಿ ನಾಟಕವೇ ಪ್ರೇರಣೆ. ಯಕ್ಷಗಾನದಲ್ಲಿ ಇದು ಮೊತ್ತ ಮೊದಲ ಪುರಾಣೇತರ ಕೃತಿ ಎಂಬುದು ಗಮನಾರ್ಹ. ಆನಂತರ ಸ್ಕಂದ ಪುರಾಣದ ಶೂರಪದ್ಮಾಸುರ ಕಾಳಗದ ವಸ್ತುವನ್ನು ಆಧರಿಸಿ ‘ಕುಮಾರ ವಿಜಯ’ವೆಂಬ ಇನ್ನೊಂದು ಯಕ್ಷಗಾನ ಕೃತಿ ಬರೆದ. ಇವುಗಳಿಂದ ಮುದ್ದಣನ ಖ್ಯಾತಿ ಜಿಲ್ಲೆಯಾದ್ಯಂತ ಹರಡಿತು. ಅಷ್ಟರಲ್ಲಿ ಗುರುಗಳಾದ ಮಳಲಿ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗವಾಯಿತು. ಮುದ್ದಣ ಕೂಡ ಕುಂದಾಪುರಕ್ಕೆ ವರ್ಗ ಮಾಡಿಸಿಕೊಂಡ. ಇದೇ ಸುಮಾರಿಗೆ ಅವನಿಗೆ ಕಂಕಣ ಬಲವೂ ಕೂಡಿ ಬಂತು. ಶಿವಮೊಗ್ಗ ಜಿಲ್ಲೆಯ ಕಾಗೇಕೋಡಮಗ್ಗಿಯ ನಾರಾಯಣಪ್ಪವರ ಸುಪುತ್ರಿ ಕಮಲೆಯ ಕೈಹಿಡಿದು ಮುದ್ದಣ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ. ಮುದ್ದಣನ ಲೇಖನಿಯಿಂದ ಮೂಡಿಬಂದುದು ‘ಅದ್ಭುತ ರಾಮಾಯಣ’ ಎಂಬ ಹಳೆಗನ್ನಡ ಶೈಲಿಯ ಗದ್ಯಕಾವ್ಯ. ಸೀತೆಯೇ ಸಹಸ್ರಕಂಠ ರಾವಣನನ್ನು ಸಂಹರಿಸಿದ ಶಾಕ್ತಪಂಥದ ಕಥೆ ಅದು. ಇದರ ಹಸ್ತ ಪ್ರತಿಯನ್ನು ಅನ್ಯಕರ್ತೃಕ ಎಂಬ ಪ್ರಾಚೀನ ಕಾವ್ಯವೆಂದು ಹೇಳಿ ಮೈಸೂರಿನ ಕಾವ್ಯಮಂಜರಿ ಪ್ರಕಟಣಾಲಯಕ್ಕೆ ಕಳುಹಿಸಿದ. ಆ ಮೇಲೆ ಬರೆದ ‘ಶ್ರೀರಾಮ ಪಟ್ಟಾಭಿಷೇಕಂ’ ಕಾವ್ಯವನ್ನು ‘ಮಹಾಲಕ್ಷ್ಮಿಕೃತ’ವೆಂದು ತಿಳಿಸಿ ಅವರಿಗೆ ಕಳುಹಿಸಿದ. ಈ ಎರಡೂ ಕೃತಿಗಳು ಬೆಳಕು ಕಂಡು ಮದರಾಸು ವಿಶ್ವ ವಿದ್ಯಾನಿಲಯದಿಂದ ಪರೀಕ್ಷೆಗಳಿಗೆ ಪಠ್ಯಗಳಾದದ್ದು ಈಗ ಇತಿಹಾಸ. ಆ ಕಾಲಕ್ಕೆ ಪ್ರಕಟವಾಗುತ್ತಿದ್ದ ಬಿ. ವೆಂಕಟಾಚಾರ್ಯರ ಕಾದಂಬರಿಗಳನ್ನು, ಮುದ್ರಾಮಂಜೂಷ ಮುಂತಾದ ಕೃತಿಗಳ ಗದ್ಯಶೈಲಿಯನ್ನೂ ಗಮನಿಸಿದ ಮುದ್ದಣ ವಿನೂತನ ಶೈಲಿಯಲ್ಲಿ ಬರೆಯಬೇಕು ಎಂದು ಸಂಕಲ್ಪ ಮಾಡಿದ. ಇದರ ಫಲವಾಗಿಯೇ ‘ಶ್ರೀರಾಮಾಶ್ವಮೇಧ’ ರಚನೆಯಾಯಿತು. ಹೃದ್ಯವಾದ ಗದ್ಯ, ನಾಟಕೀಯ ಸಂವಾದ, ಕೃತಿಯ ಒಳಗಡೆಯೇ ಮೂಡುವ ಸಹೃದಯ ವಿಮರ್ಶೆ, ಸರಳ ಮತ್ತು ಸಾಂದ್ರವಾದ ಶೈಲಿ ಹೀಗೆ ಮುದ್ದಣನ ರಾಮಾಶ್ವಮೇಧವು ಕನ್ನಡ ಕಾವ್ಯಾಸಕ್ತರಿಗೆ ಹುಚ್ಚು ಹಿಡಿಸಿತು! ಮುದ್ದಣ-ಮನೋರಮೆಯರ ಸಲ್ಲಾಪ ನಾಡಿನಾದ್ಯಂತ ಹೊಸ ಕಂಪನವನ್ನೇ ಉಂಟು ಮಾಡಿತು. ಕಾವ್ಯಾಂಗವಾಗಿಯೇ ಮೂಡುದ ದಂಪತಿಯ ಈ ಸಂಭಾಷಣೆ ಒಂದು ಸೃಜನಶೀಲ ತಂತ್ರವಾಗಿ ಮಿಂಚಿತು. ಸಾಮಾನ್ಯ ಚಿತ್ರವು ಸುವರ್ಣದ ಚೌಕಟ್ಟಿನಿಂದ ಕಂಗೊಳಿಸಿತು. ಹೊಸಗನ್ನಡ ಸಾಹಿತ್ಯಸೌಧಕ್ಕೆ ಈ ಕಾವ್ಯರತ್ನವೇ ಅಡಿಗಲ್ಲಾಯಿತು!
ಮುದ್ದಣ ಕವಿಯ ಭಾಷೆ, ಶೈಲಿ, ದೃಷ್ಟಿಧೋರಣೆಗಳು ಎಲ್ಲವೂ ನವೀನ ಚಿಂತನೆಯ ಫಲ. ಹಳತು ಮತ್ತು ಹೊಸತು ಸಾಹಿತ್ಯಗಳ ಮಧುಮಣಿ ಅವನು. ಕಸ್ತೂರಿ ಕನ್ನಡದ ಗದ್ಯಬ್ರಹ್ಮ ಅವನೆಂದರೆ ತಪ್ಪಾಗಲಾರದು. ‘ನೀರಿಳಿಯದ ಗಂಟಳಲ್ಲಿ ಕಡುಬನ್ನು ತುರುಕಿದಂತೆ’ ಸಾಹಿತ್ಯ ಜನವಿಮುಖವಾಗಬಾರದೆಂಬುದು ಅವನ ದೃಷ್ಟಿ. ಹಳೆಯ ಸುಸಂಸ್ಕೃತ ಸಮಾಸಗಳನ್ನು ಬದಿಗಿಟ್ಟು ಸರಾಗವಾಗಿ ಓದಿಸಿಕೊಂಡು ಹೋಗುವ ಸಾಹಿತ್ಯದ ಕಡೆಗೆ ಅವನ ಲಕ್ಷ. ಕನ್ನಡ ಭಾಷೆಗೊಪ್ಪುವ ತದ್ಭವಗಳನ್ನು ಹೊಸದಾಗಿ ಟಂಕಿಸಿ ‘ನೂತನ ಮಾರ್ಗ ನಿರ್ಮಾಣ’ ಮಾಡುವುದು ಅವನ ಹಂಬಲ. ಈ ಚಿಂತನೆಯಿಂದಾಗಿಯೋ ಕೊಡದಮರಿ, ಮರ್ಬಿಗ, ಆರಾಟ, ಮಾಳೆಯದ ಮನೆ, ಕಣ್ಮಲೆ, ಅಣಿ ಮುಂತಾದ ಹೊಸ ಪದಗಳು ಮುದ್ದಣನ ಕಾವ್ಯಪ್ರವಾಹದೊಳಗೆ ನುಗ್ಗಿ ಬಂದವು. ಸಂಸ್ಕೃತ ಮತ್ತು ಕನ್ನಡಗಳ ಹದವರಿತ ಮಿಶ್ರಣದ ಪರಿಣಾಮವಾಗಿ ‘ಕರ್ಮಣಿರಸದೊಳ್ ಚೆಂಬವಳಮಂ ಕೋದಂತೆ’ ವಾಕ್ಯಗಳು ಸೊಗಸಾಗಿ ಮೂಡಿ ಬಂದವು. ಈ ಸಮತೋಲನ ಪ್ರಜ್ಞೆಯಿಂದಾಗಿ ಹೊಸಕಾಲದ ಕನ್ನಡ ಬರವಣಿಗೆಯು ಹೇಗಿರಬೇಕೆಂಬುದರ ಮಾರ್ಗಸೂಚನೆಯೂ ಆಯಿತೆಂಬುದು ಮಹತ್ವದ ಅಂಶ. ‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಎಂಬ ಮಾತಿನಲ್ಲಿಯೇ ಹೊಸಕಾಲದಲ್ಲಿ ಗದ್ಯಪ್ರಕಾರವೇ ಮುಂಚೂಣಿಯಲ್ಲಿರುತ್ತದೆ ಎಂಬ ಧ್ವನಿಯೂ ಅಡಕವಾಗಿದೆ. ಈ ಹಿನ್ನೆಲೆಯಲ್ಲಿ ಮುದ್ದಣನನ್ನು ಹೊಸಗನ್ನಡದ ಮುಂಗೋಳಿ ಎಂಬುದು ಅರ್ಥಪೂರ್ಣ.
ಹೊಸತನದ ತುಡಿತ ಮುದ್ದಣನ ಕಾವ್ಯದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಶ್ರೀರಾಮಾಶ್ವಮೇಧದಲ್ಲಿ ಮನೋರಮೆಯು ಹೇಳುವ ಮಾತಿನಲ್ಲಿ ಅದು ಸುವ್ಯಕ್ತಿ. ‘ಉಳಿದೊಡಂ ಅಳಿದೊಡಂ ಬಟ್ಟೆದೋರಿಪ ರಸಭರಿತ ಚರಿತಂ’ ಬೇಕೆಂಬುದು ಅವಳ ಬಯಕೆ. ಇಹಪರದ ಉದ್ಘಾರಗತಿಯೆಂಬ ಸಾಂಪ್ರದಾಯಿಕ ಅರ್ಥಕ್ಕಿಂತಲೂ ಇಲ್ಲಿ ಸೂಚಿತವಾಗಿರುವುದು ‘ಮಾನವ ಜೀವನಕ್ಕೆ ದಾರಿ ತೋರುವ’ ಸಾಮಾಜಿಕ ದೃಷ್ಟಿ. ಆಧುನಿಕ ಕಾಲದಲ್ಲಿ ಸಾಹಿತ್ಯ ರೂಪಗಳು ಮುಖ್ಯವಾಗಿ ಪಡೆದುಕೊಳ್ಳಬೇಕಾದ ನೋಟದ ಕಡೆಗೆ ಮುದ್ದಣ ಕವಿಯು ಚಿಂತಿಸಿದ್ದಾನೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಮನುಷ್ಯನ ಬದುಕಿನಲ್ಲಿ ಉಂಟಾಗುವ ನೋವು-ನಲಿವುಗಳಿಗೆ ಸಾಹಿತ್ಯ ಪ್ರತಿಸ್ಪಂದಿಸಬೇಕಾದ ಅಗತ್ಯವಿದೆ ಎಂಬುದು ಅವರ ಅಂತರಂಗದ ಅಭೀಪ್ಸೆಯಾಗಿರಬೇಕು. ‘ಈವೆಗೆಯ ನುಡಿಗಬ್ಬಂ ಪಿಂತಿಲ್ಲ ಮುಂತಿಲ್ಲವೆಂದಾಯ್ತು’ ಎಂಬ ಮನೋರಮೆಯ ಪ್ರತಿಕ್ರಿಯೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಮುದ್ದಣನ ಸಮಗ್ರ ಕಾವ್ಯಧೋರಣೆ ಸ್ಪಷ್ಟವಾಗುತ್ತದೆ.
ಮುದ್ದಣನ ಅಂತರಂಗದಲ್ಲಿ ಕನ್ನಡತನದ ಪ್ರತಿಫಲನವಿದೆ ಎಂಬುದನ್ನು ಮರೆಯಬಾರದು. ಶ್ರೀರಾಮಾಶ್ವಮೇಧದ ಭರತವಾಕ್ಯವೇ ಇದಕ್ಕೆ ಸಾಕ್ಷಿ ಹೇಳುತ್ತದೆ.
ಧರೆಯರೆಯೆ ಜೀವರಾಶಿಗೆ
ಪಿರಿಯಂ ನರನಾದಮಾದನಾತ್ಮಂ ತನ್ನೊಳ್
ದೊರೆಕೊಂಡಿರ್ಪನಮಂತದು
ಪರಿನಿರ್ಮಲಮಾಗೆ ಪೆರ್ಮೆಯಿರ್ಮೆಯ್ವಡೆಗುಂ ‘‘ಯಾವ ಜೀವರಾಶಿಗೂ ಇಲ್ಲದ ಬುದ್ಧಿ ಶಕ್ತಿ ಮನುಷ್ಯನಿಗೆ ಇರುವುದರಿಂದ ಅವನು ಬಹಳ ಹಿರಿಮೆಯನ್ನು ಪಡೆದಿದ್ದಾನೆ. ಆ ಬುದ್ಧಿ ಅತ್ಯಂತ ನಿರ್ಮಲವಾದಲ್ಲಿ ಅವನ ಹಿರಿಮೆ ಇಮ್ಮಡಿಯಾಗುತ್ತದೆ’’ ಈ ವ್ಯಾಖ್ಯೆಯಲ್ಲಿ ನಿರ್ಮಲವಾದ ಮನಸ್ಸು, ಬುದ್ಧಿಗಳಿಂದ ನಿರ್ಮಲ ಬದುಕನ್ನು ಕಟ್ಟಿಕೊಳ್ಳಬಹುದೆಂಬ ಮುದ್ದಣನ ಆಶಯ ಅನಾವರಣಗೊಳ್ಳುತ್ತದೆ. ಅಂತಹ ಉದಾತ್ತ ಹೃದಯವುಳ್ಳ ಕವಿಯು ದೀರ್ಘ ಕಾಲ ಬದುಕಿದ್ದರೆ ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ವೌಲಿಕ ಕೃತಿಗಳು ಸೇರಿಕೊಳ್ಳುತ್ತಿದ್ದವು. ಆದರೆ ಮೂವತ್ತೆರಡು ಕಿರು ಹರೆಯದಲ್ಲೇ ಮುದ್ದಣ ಕ್ಷಯ ರೋಗಕ್ಕೆ ತುತ್ತಾಗಿ ಕೊನೆಯುಸಿರೆಳೆದ! (15 ಫೆಬ್ರವರಿ 1901)
ಓವೋ! ಕಾಲ ಪುರುಷಂಗೆ ಗುಣಮಣಮಿಲ್ಲಂ ಗಡ!!