ಹಜ್ ಸಬ್ಸಿಡಿ: ದೇಶದಲ್ಲಿ ತಾನು ಮಾಡುವ ಧಾರ್ಮಿಕ ವೆಚ್ಚಗಳ ಬಗ್ಗೆ ಶ್ವೇತಪತ್ರ ಪ್ರಕಟಿಸಲು ಸರಕಾರ ಸಿದ್ಧವಿದೆಯೇ?

ಸರಕಾರ ಈ ನಿಟ್ಟಿನಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಮಾಧ್ಯಮಗಳಲ್ಲಿ ನಿಷ್ಪಕ್ಷಪಾತವಾಗಿ ಅಭಿಪ್ರಾಯಗಳನ್ನು ತಿಳಿಸಿ, ಅದು ಮಾಡುವ ವೆಚ್ಚಗಳಿಗೆ ಜನರು ಯಾವುದೇ ಧಾರ್ಮಿಕ ದೃಷ್ಟಿಕೋನ ನೀಡದಂತೆ ನೋಡಿಕೊಳ್ಳಬೇಕು. ಒಂದು ಧಾರ್ಮಿಕ ಯಾತ್ರೆ ಇರಲಿ, ಧಾರ್ಮಿಕ ಉತ್ಸವ ಇರಲಿ, ಧಾರ್ಮಿಕ ಸಭೆ ಇರಲಿ, ಅಥವಾ ಸರಕಾರದ ಅಂಗ ಸಂಸ್ಥೆಗಳ ಮೂಲಕ ಧಾರ್ಮಿಕ ಸ್ಥಳಗಳಿಗೆ ಆರ್ಥಿಕ ನೆರವು ನೀಡುವುದಿರಲಿ; ಯಾವುದಕ್ಕೆ ತಾನು ಎಷ್ಟೆಷ್ಟು ನೀಡಿದ್ದೇನೆಂದು ಅದು ಹೇಳಬೇಕು.
ಈಗಾಗಲೇ ನಮಗೆ ತಿಳಿದಿರುವಂತೆ ಭಾರತ ಸರಕಾರ ಹಜ್‌ಯಾತ್ರೆಗೆ ನೀಡುವ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ. ಅದೇನಿದ್ದರೂ, ಕಳೆದ ಮೂರುವರ್ಷಗಳ ಅವಧಿಯಲ್ಲಿ ಹಜ್‌ಸಬ್ಸಿಡಿ 750 ಕೋಟಿಯಿಂದ 225 ಕೋಟಿ ರೂಪಾಯಿಗೆ ಇಳಿಯಿತು ಎಂಬುದು ಬಹಳ ಮಂದಿಗೆ ತಿಳಿದಿರಲಾರದು. ಆದಾಗ್ಯೂ, ಸರಕಾರದ ಈ ಕ್ರಮವು ವ್ಯರ್ಥ ವೆಚ್ಚವಾಗುತ್ತಿದ್ದ ಮೊತ್ತವನ್ನು ಉಳಿತಾಯ ಮಾಡುವ ಕ್ರಮವೆಂದು ವ್ಯಾಪಕವಾಗಿ ಪ್ರಚಾರಮಾಡಲಾಗುತ್ತಿದೆ, ಅದೇ ವೇಳೆ, ಸರಕಾರದ ಕ್ರಮಕ್ಕೆ ಕೋಮು ಬಣ್ಣನೀಡುವ ಪ್ರಯತ್ನಗಳೂ ನಡೆದಿವೆ; ಇದು ಆತಂಕಕಾರಿ.
ನಾವು ಈ ದೇಶದಲ್ಲಿ ವಿವಿಧ ಧಾರ್ಮಿಕ ವೆಚ್ಚಗಳಿಗಾಗಿ ವ್ಯಯಿಸಲಾಗುತ್ತಿರುವ ಮೊತ್ತಗಳ ಬಗ್ಗೆ ನಿಮ್ಮ ಗಮನ ಸೆಳೆಯ ಬಯಸುತ್ತೇನೆೆ. ಈ ಮೊತ್ತಗಳು ಹೀಗಿವೆ:
2012-13ರಲ್ಲಿ ಪವಿತ್ರ ಅಮರನಾಥ ಯಾತ್ರೆಗೆ 1,256.49ಲಕ್ಷ ರೂಪಾಯಿಗಳನ್ನು ವೆಚ್ಚಮಾಡಲಾಯಿತು.
2014ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳಕ್ಕೆ ಕೇಂದ್ರ ಸರಕಾರ ವ್ಯಯಿಸಿದ ಮೊತ್ತ 1,150 ಕೋಟಿ ರೂ. ಮತ್ತು ಉತ್ತರಪ್ರದೇಶ ಸರಕಾರ ವ್ಯಯಿಸಿದ ಮೊತ್ತ 11ಕೋಟಿ ರೂ. ವಿಪಕ್ಷಗಳು ಕೂಡ ಸರಕಾರ ರೂ. 800ಕೋಟಿಯನ್ನು ದುರುಪಯೋಗಪಡಿಸಿದೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.
ಕಳೆದ ವರ್ಷ ಉಜ್ವೈನಿಯಲ್ಲಿ ನಡೆದ ಸಿಂಹಾಸ್ತ ಮಹಾಕುಂಭಮೇಳಕ್ಕೆ ಮಧ್ಯಪ್ರದೇಶ ಸರಕಾರ 3,400 ಕೋಟಿ ರೂ. ಮತ್ತು ಕೇಂದ್ರ ಸರಕಾರ 100ಕೋಟಿ ರೂ. ವ್ಯಯಿಸಿತ್ತು.
ಬದರಿನಾಥ, ಕೇದಾರನಾಥ, ಕೈಲಾಸ ಮಾನಸ ಸರೋವರ ಮತ್ತು ಇತರ ಯಾತ್ರಾಸ್ಥಳಗಳಿಗೆ ಹೋಗುವ ಯಾತ್ರಿಕರಿಗೆ ನೆರವಾಗಲು ಸರಕಾರಗಳು ಬೃಹತ್ ಮೊತ್ತದ ಹಣವನ್ನು ಖರ್ಚುಮಾಡುತ್ತವೆ. ಹೀಗೆ, ಮಧ್ಯಪ್ರದೇಶ ಸರಕಾರವು ಕೈಲಾಸ ಮಾನಸ ಸರೋವರಕ್ಕೆ ಹೋಗುವ ಪ್ರತೀ ಯಾತ್ರಿಕನಿಗೂ 50,000 ರೂ. ಸಬ್ಸಿಡಿ ನೀಡುತ್ತದೆ.
ಗುಜರಾತ್ ಸರಕಾರವು ತನ್ನ ರಾಜ್ಯದಲ್ಲಿ ‘ಪವಿತ್ರ ಯಾತ್ರಾ ಧಾಮ್ ವಿಕಾಸ್ ಬೋರ್ಡ್’ ಎಂದು ಕರೆಯಲಾಗುವ ಒಂದು ಮಂಡಳಿಯನ್ನು ರಚಿಸಿದೆ. ರಾಜ್ಯದಲ್ಲಿ 338 ಯಾತ್ರಾಸ್ಥಳಗಳ ‘ಅಭಿವೃದ್ಧಿ’ ಇದರ ಉದ್ದೇಶ ಮತ್ತು ಎಲ್ಲ ದೇವಸ್ಥಾನಗಳಲ್ಲಿ ಸರಕಾರ ಬೃಹತ್ ಮೊತ್ತವನ್ನು ವ್ಯಯಿಸುತ್ತದೆ. ಮಂಡಳಿಯ ಈ ವರ್ಷದ ಬಜೆಟ್ ಮೊತ್ತ 10,669 ಲಕ್ಷ ರೂ. ಗುಜರಾತ್ ಸರಕಾರವು ಹಣನೀಡಿ, ಹಿಂದೂ ಧರ್ಮದ ಆಚರಣೆಗಳನ್ನು ಕಲಿಸುವ ಒಂದು ಕೋರ್ಸ್ ನಡೆಸುತ್ತಿದೆ.
ಕಾಶಿ ಮತ್ತು ಅಯೋಧ್ಯೆಯ ಯಾತ್ರಾ ಸ್ಥಳಗಳ ಅಭಿವೃದ್ಧಿಗಾಗಿ ಹಾಲಿ ಉತ್ತರಪ್ರದೇಶ ಸರಕಾರವು, ನವೀಕರಣ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯ ಹೆಸರಲ್ಲಿ, ಈಗಾಗಲೇ ಕಾರ್ಯಕ್ರಮಗಳನ್ನು ಆರಂಭಿ ಸಿದೆ. ಇದಕ್ಕಾಗಿ ಮಂಜೂರಾಗಿರುವ ಮೊತ್ತ 800 ಕೋಟಿ ರೂ.
ವೈಯಕ್ತಿಕ ಆಯ್ಕೆ ಮತ್ತು ಸ್ವಾತಂತ್ರದ ಒಂದು ವಿಷಯವಾಗಿರುವ ಧಾರ್ಮಿಕ ಆಚರಣೆಗಳಲ್ಲಿ ಸರಕಾರ ಮಧ್ಯಪ್ರವೇಶಿಸಕೂಡದು ಎನ್ನುವುದು ನಮ್ಮ ಅಭಿಪ್ರಾಯ. ಸುಪ್ರೀಂ ಕೋರ್ಟ್‌ನ ಒಂದು ತೀರ್ಪು ಹೀಗೆ ಹೇಳುತ್ತದೆ. ‘‘ಮನುಷ್ಯ ಮತ್ತು ದೇವರ ನಡುವಿನ ಸಂಬಂಧವು ಒಬ್ಬ ವ್ಯಕ್ತಿಯ ಒಂದು ಆಯ್ಕೆ. ಅಂತಹ ಒಂದು ಚಟುವಟಿಕೆಗೆ ಸರಕಾರ ನಿಷ್ಠೆತೋರುವುದು ನಿಷೇಧಿಸಲ್ಪಟ್ಟಿದೆ. ಸರಕಾರವನ್ನು ಧರ್ಮದೊಂದಿಗೆ ಬೆರಸುವುದಕ್ಕೆ ಸಾಂವಿಧಾನಿಕವಾಗಿ ಅನುಮತಿ ಇಲ್ಲ.’’
ಭಾರತದ ಸಂವಿಧಾನದ 27ನೇ ಅಧಿನಿಯಮ ಹೀಗೆ ಹೇಳುತ್ತದೆ: ‘‘ಯಾವುದೇ ಧಾರ್ಮಿಕ ಪಂಗಡದ ಅಥವಾ ಧರ್ಮದ ಉಸ್ತುವಾರಿಗಾಗಿ ವ್ಯಯಿಸುವ ಕಾರಣಕ್ಕಾಗಿ ಸಂಗ್ರಹಿಸುವ ವಂತಿಗೆಗೆ ಯಾವುದೇ ತೆರಿಗೆ ನೀಡುವಂತೆ ಯಾವುದೇ ವ್ಯಕ್ತಿಯನ್ನು ಕಡ್ಡಾಯವಾಗಿ ಒತ್ತಾಯಿಸಲಾಗದು.’’
2011ರಲ್ಲಿ ಸುಪ್ರೀಂಕೋರ್ಟ್ ಪ್ರಪುಲ್ ಗೊರಾಡಿಯಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮೊಕದ್ದಮೆಯಲ್ಲಿ, ತೆರಿಗೆದಾರರ ಹಣದಲ್ಲಿ ಸರಕಾರ ನೀಡುವ ಧನಸಹಾಯವು 27ನೇ ಅಧಿನಿಯಮದ ಉಲ್ಲಂಘನೆಯಾಗುತ್ತದೆಯೇ ಎಂಬ ಪ್ರಶ್ನೆಯನ್ನು ಪರಿಶೀಲಿಸಿತು. ತೆರಿಗೆದಾರನ ಹಣದ ಗಣನೀಯ ಪ್ರಮಾಣದ ಮೊತ್ತವನ್ನು ಧಾರ್ಮಿಕ ಚಟುವಟಿಕೆಗಾಗಿ ಬಳಸಿದ್ದಲ್ಲಿ ಮಾತ್ರ ಅದು ಉಲ್ಲಂಘನೆಯಾಗುತ್ತದೆಂದು ಸುಪ್ರೀಂ ಕೋರ್ಟ್‌ನ ಪೀಠ ಘೋಷಿಸಿತು.
ಅದರ ಹೇಳಿಕೆಯಂತೆ: ‘‘ಭಾರತದಲ್ಲಿ ಸಂಗ್ರಹಿಸಲಾದ ಸಂಪೂರ್ಣ ಆದಾಯ ತೆರಿಗೆಯ, ಅಥವಾ ಕೇಂದ್ರೀಯ ಅಬಕಾರಿ ಅಥವಾ ಕಸ್ಟಂ ಅಥವಾ ಮಾರಾಟ ತೆರಿಗೆ ಅಥವಾ ಇನ್ಯಾವುದೇ ತೆರಿಗೆಯ ಸಂಗ್ರಹಿತ ಮೊತ್ತದ ಗಣನೀಯ ಪ್ರಮಾಣದ ಮೊತ್ತವನ್ನು ಯಾವುದೇ ನಿರ್ದಿಷ್ಟ ಧರ್ಮದ ಅಥವಾ ಧಾರ್ಮಿಕ ಗುಂಪಿನ ಉಸ್ತುವಾರಿ ಅಥವಾ ಹಿತರಕ್ಷಣೆಗಾಗಿ ಬಳಸಿದ್ದಲ್ಲಿ ಸಂವಿಧಾನದ 27ನೇ ಅಧಿನಿಯಮವನ್ನು ಉಲ್ಲಘಿಸಿದಂತಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಾರತದಲ್ಲಿ ಸಂಗ್ರಹಿಸಲ್ಪಟ್ಟ ಒಟ್ಟು ಆದಾಯ ತೆರಿಗೆಯ ಶೇ.25 ಧಾರ್ಮಿಕ ಚಟುವಟಿಕೆಗಾಗಿ ಬಳಸಿದಾಗ, ಅದು ನಮ್ಮ ಅಭಿಪ್ರಾಯದಲ್ಲಿ ಸಂವಿಧಾನದ 27ನೇ ಅಧಿನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ’.
ಹಾಗಾಗಿ, ಸರಕಾರ ಹಜ್ ಯಾತ್ರಿಕರಿಗಾಗಿ ವೆಚ್ಚ ಮಾಡುವ ಮೊತ್ತದ ಮೇಲೆ ಮಾತ್ರ ನಾವು ಗಮನ ಹರಿಸಬೇಕೇ ಅಥವಾ ಇತರ ಯಾತ್ರಾಸ್ಥಳಗಳಿಗೆ ಹೋಗುವ ಯಾತ್ರಿಕರಿಗಾಗಿ ವೆಚ್ಚ ಮಾಡುವ ಮೊತ್ತದ ಮೇಲೆ ಕೂಡಾ ನಾವು ಗಮನಹರಿಸಬೇಕೇ ಎಂಬ ಪ್ರಶ್ನೆ ಮೂಡುತ್ತದೆ.
ಸರಕಾರ ಈ ನಿಟ್ಟಿನಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ಮಾಧ್ಯಮಗಳಲ್ಲಿ ನಿಷ್ಪಕ್ಷಪಾತವಾಗಿ ಅಭಿಪ್ರಾಯಗಳನ್ನು ತಿಳಿಸಿ, ಅದು ಮಾಡುವ ವೆಚ್ಚಗಳಿಗೆ ಜನರು ಯಾವುದೇ ಧಾರ್ಮಿಕ ದೃಷ್ಟಿಕೋನ ನೀಡದಂತೆ ನೋಡಿಕೊಳ್ಳಬೇಕು. ಒಂದು ಧಾರ್ಮಿಕ ಯಾತ್ರೆ ಇರಲಿ, ಧಾರ್ಮಿಕ ಉತ್ಸವ ಇರಲಿ, ಧಾರ್ಮಿಕ ಸಭೆ ಇರಲಿ, ಅಥವಾ ಸರಕಾರದ ಅಂಗ ಸಂಸ್ಥೆಗಳ ಮೂಲಕ ಧಾರ್ಮಿಕ ಸ್ಥಳಗಳಿಗೆ ಆರ್ಥಿಕ ನೆರವು ನೀಡುವುದಿರಲಿ; ಯಾವುದಕ್ಕೆ ತಾನು ಎಷ್ಟೆಷ್ಟು ನೀಡಿದ್ದೇನೆಂದು ಅದು ಹೇಳಬೇಕು. ಆದ್ದರಿಂದ ಸರಕಾರ ತಾನು ಧಾರ್ಮಿಕ ಕಾರಣಗಳಿಗಾಗಿ ಮಾಡಿರುವ ಎಲ್ಲ ವೆಚ್ಚಗಳ ಕುರಿತು ಒಂದು ಶ್ವೇತ ಪತ್ರ ಹೊರಡಿಸಬೇಕು. ಆ ಮೂಲಕ ಯಾವ ಧರ್ಮದ ಹಿತರಕ್ಷಣೆಗಾಗಿ, ಪ್ರಮೋಶನ್‌ಗಾಗಿ ಎಷ್ಟು ಖರ್ಚು ಮಾಡುತ್ತಿದೆ ಎಂಬುದು ದೇಶದ ಸಮಗ್ರ ಜನತೆಗೆ ತಿಳಿಯುವಂತಾಗಬೇಕು.
ಕೃಪೆ: TwoCircles.net