ಪಾಕಿಸ್ತಾನದ ಸೃಷ್ಟಿಗೂ ಇಸ್ಲಾಮ್‌ಗೂ ಯಾವುದೇ ಸಂಬಂಧವಿಲ್ಲ: ಮೌಲಾನಾ ಅಬುಲ್ ಕಲಾಂ ಆಝಾದ್
ಭವಿಷ್ಯ ನುಡಿದ ಒಂದು ಐತಿಹಾಸಿಕ ಸಂದರ್ಶನದಲ್ಲಿ ಭಾರತದ ಇಸ್ಲಾಮಿಕ್ ವಿದ್ವ್ವಾಂಸ, ಭಾರತದ ಪ್ರಥಮ ಶಿಕ್ಷಣ ಸಚಿವ ವೌಲಾನ ಅಬುಲ್ ಕಲಾಂ ಆಝಾದ್ (1888-1955), ಹಿಂದೂ-ಮುಸ್ಲಿಮ್ ಬಿಕ್ಕಟ್ಟಿನ ಆಧಾರದಲ್ಲಿ ಪಾಕಿಸ್ತಾನದ ಸೃಷ್ಟಿಯ ವಿರುದ್ಧ ‘‘ದೇಶದಲ್ಲಿ ಹುಟ್ಟಿದ ಒಂದು ರಚನೆ ಆ ದೇಶ ಇರುವವರೆಗೆ ಮಾತ್ರ ಉಳಿಯುತ್ತದೆ ಎಂಬುದನ್ನು ನಾವು ಮರೆಯಬಾರದು.’’ ಎಂದು ಎಚ್ಚರಿಕೆ ನೀಡಿದ್ದರು.
ಪಾಕಿಸ್ತಾನದ ರಚನೆಯಾಗುವ ಸುಮಾರು ಒಂದೂವರೆ ವರ್ಷದ ಮೊದಲು, 1946ರ ಎಪ್ರಿಲ್‌ನಲ್ಲಿ ನೀಡಿದ ಸಂದರ್ಶನವನ್ನು ಆಝಾದ್‌ರವರು ಪಾಕಿಸ್ತಾನ ಸರ್ವಾಧಿಕಾರದಲ್ಲಿ ನಲುಗುತ್ತದೆ ಮತ್ತು ಅದರ ಪೂರ್ವ ಭಾಗ (ಇಂದಿನ ಬಾಂಗ್ಲಾದೇಶ) ಅದರಿಂದ ಪ್ರತ್ಯೇಕಗೊಳ್ಳುತ್ತದೆ ಎಂದು ಭವಿಷ್ಯ ನುಡಿದದ್ದಷ್ಟೇ ಅಲ್ಲ ಇಂದು ನಿಜವಾಗುತ್ತಿರುವ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು. ಆ ಐತಿಹಾಸಿಕ ಸಂದರ್ಶನದಿಂದ ಆಯ್ದ ಭಾಗಗಳು ಇಲ್ಲಿವೆ.
ಪ್ರಶ್ನೆ: ಹಿಂದೂ-ಮುಸ್ಲಿಂ ವಿವಾದ ಎಷ್ಟೊಂದು ತೀವ್ರವಾಗಿದೆಯೆಂದರೆ ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಜನನ ಅನಿವಾರ್ಯ ಅನಿಸುವುದಿಲ್ಲವೇ?
ಆಝಾದ್: ಹಿಂದೂ-ಮುಸ್ಲಿಂ ಸಮಸ್ಯೆಗಳಿಗೆ ಪಾಕಿಸ್ತಾನ ಪರಿಹಾರವಾಗಿದ್ದಲ್ಲಿ ಆಗ ನಾನು ಅದರ ಜನನವನ್ನು ಬೆಂಬಲಿಸುತ್ತಿದ್ದೆ. ಆದರೆ ಅದು ಸೃಷ್ಟಿಸಿರುವ ಕೋಮುದ್ವೇಷ, ಕೋಮುವಾದಿ ರಾಜಕಾರಣ, ಇಸ್ಲಾಂ ಧರ್ಮಕ್ಕೆ ಅಪಾರವಾದ ಹಾನಿ ಮಾಡಿದೆ. ಮುಸ್ಲಿಮರು ಕುರ್‌ಆನ್‌ನಿಂದ ದೂರ ಸರಿದಿದ್ದಾರೆ. ಮುಸ್ಲಿಂ ರಾಜಕಾರಣಿಗಳು ಮನ ನೋಯಿಸುವ, ಆಕ್ಷೇಪಾರ್ಹವಾದ ಭಾಷೆಯನ್ನು ಬಳಸದೇ ಇರುತ್ತಿದ್ದಲ್ಲಿ ಇತರರು ಹಿಂದೂ-ಮುಸ್ಲಿಂ ಕಂದಕವನ್ನು ಇನ್ನಷ್ಟು ಅಗಲಗೊಳಿಸಲು ಬ್ರಿಟಿಷರ ಏಜೆಂಟರಂತೆ ವರ್ತಿಸದೇ ಇರುತ್ತಿದ್ದಲ್ಲಿ ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಏರುತ್ತಿತ್ತು. ಬ್ರಿಟಿಷರ ಪ್ರಭಾವದಿಂದಾಗಿ ನಾವು ಇಸ್ಲಾಮ್ ಧರ್ಮವನ್ನು ಒಂದು ಅನುವಂಶೀಯ ಸಮುದಾಯವಾಗಿ ನೋಡಿದ್ದೇವೆ.
ಭಾರತದ ಮುಸ್ಲಿಮರು ಇಸ್ಲಾಮನ್ನು ಮತ್ತು ಅದರ ಸಂದೇಶವನ್ನು ಶೀತಲೀಕರಿಸಿ ತಮ್ಮ ತಮ್ಮಾಳಗೆ ಹಲವು ಪಂಥಗಳಾಗಿ, ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ. ಅವರು ರಾಜಕಾರಣದ ಧರ್ಮವನ್ನು ಬಯಸುತ್ತಾರೆಯೇ ಹೊರತು ಪವಿತ್ರ ಕುರ್‌ಆನ್‌ನ ಧರ್ಮವನ್ನಲ್ಲ. ಮುಸ್ಲಿಂ ಲೀಗ್‌ನ ನಾಯಕತ್ವ ನಡೆದುಕೊಳ್ಳುವ ರೀತಿ ನೋಡಿದರೆ ಪಾಕಿಸ್ತಾನದಲ್ಲಿ ಇಸ್ಲಾಮ್ ಒಂದು ಅಪರೂಪದ ಸರಕು ಆಗುತ್ತದೆ. ಪಾಕಿಸ್ತಾನವು, ಅದು ಅಸ್ತಿತ್ವಕ್ಕೆ ಬಂದಾಗ, ಧಾರ್ಮಿಕ ಸ್ವರೂಪದ ಘರ್ಷಣೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲಲ್ಲಿ ಅಧಿಕಾರ ಸೂತ್ರ ಹಿಡಿಯುವವರು ಇಸ್ಲಾಂ ಧರ್ಮಕ್ಕೆ ಗಂಭೀರ ಸ್ವರೂಪದ ಹಾನಿ ಉಂಟುಮಾಡುತ್ತಾರೆ ಎಂದು ನನಗೆ ಅನಿಸುತ್ತದೆ. ಅವರ ವರ್ತನೆಯಿಂದಾಗಿ ಪಾಕಿಸ್ತಾನದ ಯುವ ಜನತೆ ಪ್ರತ್ಯೇಕಗೊಂಡು ಧಾರ್ಮಿಕವಲ್ಲದ ಚಳವಳಿಗಳ ಒಂದು ಭಾಗವಾಗಬಹುದು. ಉಲೆಮಾ (ಇಸ್ಲಾಮಿಕ್ ವಿದ್ವಾಂಸರು)ಗಳ ಪಾತ್ರ ಹೆಚ್ಚುತ್ತದೆಯಾದರೂ ಇಸ್ಲಾಮ್ ಧರ್ಮ ಪಾಕಿಸ್ತಾನದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತದೆ.
ಪ್ರಶ್ನೆ: ಆದರೆ ಹಲವು ಉಲೆಮಾಗಳು ಖಾಯಿದೆ ಅಝಮ್(ಎಮ್.ಎ. ಜಿನ್ನಾ)ರವರ ಬೆಂಬಲಿಗರಾಗಿದ್ದಾರಲ್ಲ?
ಆಝಾದ್: ಹಲವು ಉಲೆಮಾಗಳು ಅಕ್ಬರ್ ಚಕ್ರವರ್ತಿ (1542-1605) ಜತೆಗೂ ಇದ್ದರು, ಅವರು ಅವನಿಗಾಗಿ ಒಂದು ಹೊಸ ಧರ್ಮ (ದೀನ್-ಎ-ಇಲಾಹಿ)ವನ್ನು ಆವಿಷ್ಕರಿಸಿ ದರು. ವ್ಯಕ್ತಿಗಳನ್ನು ಚರ್ಚಿಸಬೇಡಿ. ಪ್ರತೀ ಯುಗದಲ್ಲೂ, ಪ್ರತೀ ಕಾಲದಲ್ಲೂ ಇಸ್ಲಾಂ ಧರ್ಮಕ್ಕೆ ಅಗೌರವ ಮತ್ತು ಅವಮಾನ ತಂದ ಉಲೆಮಾಗಳ ಕೃತ್ಯಗಳು ನಮ್ಮ ಇತಿಹಾಸದ ಉದ್ದಕ್ಕೂ ಕಾಣಿಸುತ್ತದೆ.
ಪ್ರಶ್ನೆ: ಪಾಕಿಸ್ತಾನವೊಂದು ವಾಸ್ತವವಾದರೆ (ಅದು ಒಂದು ಪ್ರತ್ಯೇಕ ರಾಷ್ಟ್ರವಾದರೆ) ಅದರಲ್ಲೇನು ತಪ್ಪಿದೆ ವೌಲಾನರವರೇ?
ಆಝಾದ್: ಇಸ್ಲಾಮ್‌ನ ಮಾನದಂಡಗಳ ಪ್ರಕಾರ ಸರಿಯಲ್ಲದ ಒಂದು ಉದ್ದೇಶಕ್ಕಾಗಿ ನೀವು ಇಸ್ಲಾಮ್‌ನ ಹೆಸರನ್ನು ಬಳಸುತಿದ್ದೀರಿ. ಪಾಕಿಸ್ತಾನವು ಮುಸ್ಲಿಮರಿಗೆ ಸರಿ ಎಂದಾಗಿದ್ದಲ್ಲಿ ನಾನು ಅದನ್ನು (ಪಾಕಿಸ್ತಾನ ಒಂದು ಪ್ರತ್ಯೇಕ ದೇಶವಾಗುವುದನ್ನು) ಬೆಂಬಲಿಸುತ್ತಿದ್ದೆ. ಆದರೇ ಭಾರತದಿಂದ ಪಾಕಿಸ್ತಾನ ಪ್ರತ್ಯೇಕಗೊಳ್ಳಬೇಕೆಂಬ ಬೇಡಿಕೆಯಲ್ಲಿಯೇ ನನಗೆ ಸ್ಪಷ್ಟವಾಗಿ ಅಪಾಯಗಳು ಕಾಣಿಸುತ್ತಿವೆ. ವಿಭಜನೆಯ ಕನಿಷ್ಠ ಪರಿಣಾಮಗಳು ಭಾರತವನ್ನಷ್ಟೇ ಬಾಧಿಸುವುದಲ್ಲ ಪಾಕಿಸ್ತಾನವನ್ನೂ ಕೂಡ ಅಷ್ಟೇ ಸಮಾನವಾಗಿ ಬಾಧಿಸುತ್ತದೆ ಎಂದು ನಾನು ಈಗಲೇ ಎಚ್ಚರಿಕೆ ಕೊಡುತ್ತಿದ್ದೇನೆ. ವಿಭಜನೆಯು ಜನತೆಯ ಧರ್ಮವನ್ನು ಆಧರಿಸಿ ನಡೆಯಲಿದೆಯೇ ಹೊರತು ಒಂದು ಪರ್ವತ, ಮರುಭೂಮಿ ಅಥವಾ ನದಿಯಂತಹ ಯಾವುದೇ ಒಂದು ಪ್ರಾಕೃತಿಕ, ನೈಸರ್ಗಿಕ ತಡೆಯನ್ನಾಧರಿಸಿ ನಡೆಯುವುದಿಲ್ಲ. ದ್ವೇಷದಿಂದ ಜನಿಸುವ ಒಂದು ಘಟಕ, ಒಂದು ದೇಶ ಆ ದ್ವೇಷ ಉಳಿಯುವ ತನಕ ಮಾತ್ರ ಉಳಿಯುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ದ್ವೇಷವು ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳನ್ನು ಹದ್ದುಮೀರಿ ಹಾಳುಗೆಡವುತ್ತದೆ. ವಿಭಜನೆಯ ರಾಜಕಾರಣವು ಉಭಯ ದೇಶಗಳ ನಡುವೆ ಒಂದು ತಡೆಗೋಡೆಯಾಗುತ್ತದೆ.
ಭಾರತೀಯ ಮುಸ್ಲಿಮರಿಗೆ ಆಗ ಅವರ ಮುಂದೆ ಮೂರು ಆಯ್ಕೆಗಳಿರುತ್ತವೆ: 1. ಅವರು ಕೊಳ್ಳೆ, ಲೂಟಿ ಮತ್ತು ದೌರ್ಜನ್ಯಗಳಿಗೆ ಬಲಿಪಶುಗಳಾಗುತ್ತಾರೆ ಮತ್ತು ಪಾಕಿಸ್ತಾನಕ್ಕೆ ವಲಸೆ ಹೋಗುತ್ತಾರೆ. ಆದರೆ ಎಷ್ಟು ಮಂದಿ ಮುಸ್ಲಿಮರಿಗೆ ಅಲ್ಲಿ ಆಶ್ರಯ ಸಿಗಲು ಸಾಧ್ಯ?
2. ಅವರು ಕೊಲೆ ಮತ್ತು ಇತರ ಅತಿರೇಕಗಳಿಗೆ ಗುರಿಯಾಗುತ್ತಾರೆ.
3. ಬಡತನ, ರಾಜಕೀಯ ಅತಿರೇಕ ಮತ್ತು ಪ್ರಾದೇಶಿಕ ತಾರತಮ್ಯ ಗಳಿಂದಾಗಿ ಜರ್ಜರಿತರಾಗಿ ಬಹಳಷ್ಟು ಮಂದಿ ಮುಸ್ಲಿಮರು ಇಸ್ಲಾಮ್ ಧರ್ಮ ತ್ಯಜಿಸಲು ನಿರ್ಧರಿಸುತ್ತಾರೆ.
ಮುಸ್ಲಿಮ್ ಲೀಗನ್ನು ಬೆಂಬಲಿಸುವ ಪ್ರಮುಖ ಗಣ್ಯ ಮುಸ್ಲಿಮರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗುತ್ತಾರೆ. ಶ್ರೀಮಂತ ಮುಸ್ಲಿಮರು ಉದ್ಯಮ ಮತ್ತು ವಾಣಿಜ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪಾಕಿಸ್ತಾನದ ಅರ್ಥವ್ಯವಸ್ಥೆಯ ಮೇಲೆ ಏಕಸ್ವಾಮ್ಯ ಸಾಧಿಸುತ್ತಾರೆ. ಆದರೆ ಮೂವತ್ತು ಮಿಲಿಯಕ್ಕಿಂತಲೂ ಹೆಚ್ಚು ಮುಸ್ಲಿಮರು ಭಾರತದಲ್ಲೇ ಉಳಿಯುತ್ತಾರೆ. ಅವರಿಗೆ ಪಾಕಿಸ್ತಾನ ಏನು ಆಶ್ವಾಸನೆ ನೀಡುತ್ತದೆ?
ಜಿನ್ನಾರವರ ಗಮನದಿಂದ ತಪ್ಪಿ ಹೋಗಿರುವ ಇನ್ನೊಂದು ಮುಖ್ಯ ವಿಷಯವೆಂದರೆ ಬಂಗಾಲ. ಬಂಗಾಲವು ಬಾಹ್ಯ ನಾಯಕತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಸ್ವಲ್ಪ ಸಮಯದಲ್ಲೇ ಅದು ಆ ನಾಯಕತ್ವವನ್ನು ತಿರಸ್ಕರಿಸುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ.
ಎಲ್ಲಿಯವರೆಗೆ (ಪಶ್ಚಿಮ ಪಾಕಿಸ್ತಾನದ ನಾಯಕರಾಗಿರುವ) ಜಿನ್ನಾ ಮತ್ತು ಲಿಯಾಕತ್ ಅಲಿ ಬದುಕಿರುತ್ತಾರೋ ಅಲ್ಲಿಯವರೆಗೆ ಪೂರ್ವ ಪಾಕಿಸ್ತಾನ ವಿಶ್ವಾಸ ಕಳೆದುಕೊಳ್ಳುವುದಿಲ್ಲ. ಆದರೆ ಅವರ ಕಾಲಾನಂತರ ಯಾವುದೇ ಸಣ್ಣ ಘಟನೆ ಕೂಡ ಅತೃಪ್ತಿ ಅಸಮಾಧಾನವನ್ನು ಸೃಷ್ಟಿಸುತ್ತದೆ. ಪೂರ್ವ ಪಾಕಿಸ್ತಾನ ಬಹಳ ಸಮಯದವರೆಗೆ ಪಶ್ಚಿಮ ಪಾಕಿಸ್ತಾನದ ಜೊತೆ ಉಳಿಯಲು ಸಾಧ್ಯವೆಂದು ನನಗನ್ನಿಸುವುದಿಲ್ಲ. (1971ರ ಯುದ್ಧದಲ್ಲಿ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯಿತು...)
ಪೂರ್ವ ಪಾಕಿಸ್ತಾನ, ಅದು ಯಾವಾಗಲೇ ಆಗಲಿ, ಪ್ರತ್ಯೇಕಗೊಂಡ ಬಳಿಕ ಪಶ್ಚಿಮ ಪಾಕಿಸ್ತಾನವು ಪ್ರಾದೇಶಿಕ ವೈದೃಶ್ಯಗಳ ಹಾಗೂ ವಿವಾದಗಳ ರಣರಂಗವಾಗಲಿದೆ. ನಿಜವಾದ ಪ್ರಶ್ನೆಯೆಂದರೆ ಖಂಡಿತವಾಗಿಯೂ ಅದು ಧರ್ಮವಲ್ಲ. ಬದಲಾಗಿ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆ. ಜನನದ ಕಾಲದಿಂದಲೇ ಪಾಕಿಸ್ತಾನವು ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸಲಿದೆ ಎಂದು ನನಗನ್ನಿಸುತ್ತದೆ. ಅಸಮರ್ಥ ರಾಜಕೀಯ ನಾಯಕತ್ವವು ಮಿಲಿಟರಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಹೀಗೆ ಹಲವು ಮುಸ್ಲಿಂ ದೇಶಗಳಲ್ಲಿ ಆಗಿದೆ. ಅಲ್ಲದೆ ಭಾರೀ ವಿದೇಶಿ ಸಾಲ, ನೆರೆರಾಷ್ಟ್ರಗಳೊಂದಿಗೆ ಮೈತ್ರಿಯುತ ಸಂಬಂಧಗಳ ಕೊರತೆ, ಸಶಸ್ತ್ರ ಸಂಘರ್ಷಗಳ ಸಾಧ್ಯತೆ, ಆಂತರಿಕ ಆಶಾಂತಿ, ಪ್ರಾದೇಶಿಕ ತಿಕ್ಕಾಟಗಳು, ಪಾಕಿಸ್ತಾನದ ನವ ಶ್ರೀಮಂತರಿಂದ ಹಾಗೂ ಉದ್ಯಮಗಳಿಂದ ರಾಷ್ಟ್ರದ ಸಂಪತ್ತಿನ ಲೂಟಿ, ಇದರ ಪರಿಣಾಮವಾಗಿ ವರ್ಗ ಸಂಘರ್ಷವೊಂದರ ಭಯ ಮತ್ತು ಧರ್ಮದಲ್ಲಿ ಯುವ ಜನತೆಗೆ ಅತೃಪ್ತಿ, ಹತಾಶೆ ಮತ್ತು ಪಾಕಿಸ್ತಾನ ಎಂಬ ಸಿದ್ಧಾಂತದ ಪತನ ಹಾಗೂ ಪಾಕಿಸ್ತಾನವನ್ನು ನಿಯಂತ್ರಿಸಲು ಅಂತಾರಾಷ್ಟ್ರೀಯ ಶಕ್ತಿ (ಪವರ್)ಗಳ ಒಳ ಸಂಚುಗಳು...
ಮುಸ್ಲಿಮರಿಗೆ ಸಂಬಂಧಿಸಿ ನಿಜವಾದ ಪ್ರಶ್ನೆ ಎಂದರೆ ನಂಬಿಕೆ ಮತ್ತು ಪೂಜಾ ಸ್ವಾತಂತ್ರ ಮತ್ತು ಆ ಸ್ವಾತಂತ್ರವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.
ಮುಸ್ಲಿಂ ಇತಿಹಾಸ ಭಾರತದ ಇತಿಹಾಸದ ಒಂದು ಮುಖ್ಯ ಭಾಗ. ಮುಸ್ಲಿಂ ದೊರೆಗಳು ಇಸ್ಲಾಮ್‌ಗಾಗಿ ಬಹಳ ಕೆಲಸ ಮಾಡಿದ್ದಾರೆ ಅಂತ ಅನಿಸುತ್ತದೆಯೇ ನಿಮಗೆ? ಆ ದೊರೆಗಳಿಗೆ ಇಸ್ಲಾಂ ಜನತೆಯೊಂದಿಗೆ ನಾಮಾಂಕಿತ ಸಂಬಂಧವಷ್ಟೇ ಇತ್ತು. ಅವರು ಇಸ್ಲಾಮಿಕ್ ಧರ್ಮ ಬೋಧಕರು (ಪ್ರೀಚರ್ಸ್) ಆಗಿರಲಿಲ್ಲ. ಭಾರತದ ಮುಸ್ಲಿಮರು ಸೂಫಿಗಳಿಗೆ (ಅನುಭಾವಿಗಳಿಗೆ) ಕೃತಜ್ಞರಾಗಿದ್ದಾರೆ ಮತ್ತು ಮುಸ್ಲಿಂ ದೊರೆಗಳು ಹಲವಾರು ಸೂಫಿಗಳನ್ನು ತುಂಬಾ ಕ್ರೂರವಾಗಿ ನಡೆಸಿಕೊಂಡಿದ್ದರು. ಒಂದು ಸಮುದಾಯವಾಗಿ ಮುಸ್ಲಿಮರು ಹೇಡಿಗಳಾಗಿದ್ದಾರೆ. ಅವರಿಗೆ ದೇವರ ಹೆದರಿಕೆ ಇಲ್ಲ. ಬದಲಾಗಿ ಅವರು ಮುನುಷ್ಯರಿಗೆ ಹೆದರುತ್ತಾರೆ. ತಮ್ಮ ಅಸ್ತಿತ್ವಕ್ಕೆ ಬೆದರಿಕೆಗಳಿವೆ ಎಂಬ ಗೀಳು(ಅಬ್ಸೆಶನ್) ಯಾಕೆ ಅವರನ್ನು ಅಷ್ಟೊಂದು ಕಾಡುತ್ತದೆ ಎಂಬುದಕ್ಕೆ ಇದೇ ಕಾರಣ. ಆ ಭಯದ ಗೀಳು ಅವರ ಒಂದು ಕಲ್ಪನೆ ಮಾತ್ರ.
ಇಸ್ಲಾಂ ಧರ್ಮ ಎಂಬುದು ಮನುಷ್ಯರ ಸಮಾನತೆಯನ್ನು ಆಧರಿಸಿ ಶಾಂತಿ ಸ್ಥಾಪಿಸಲು ನೀಡಿರುವ ಒಂದು ಜಾಗತಿಕ ಕರೆ. ಪಾಕಿಸ್ತಾನದ ಸೃಷ್ಟಿಗೂ ಇಸ್ಲಾಮ್‌ಗೂ ಯಾವುದೇ ಸಂಬಂಧವಿಲ್ಲ. ಪ್ರತ್ಯೇಕ ಪಾಕಿಸ್ತಾನ ಆಗಬೇಕೆಂಬುದು ಭಾರತದ ಮುಸ್ಲಿಮರ ರಾಷ್ಟ್ರೀಯ ಗುರಿ ಎಂದು ಹೇಳುತ್ತಿರುವ ಮುಸ್ಲಿಂ ಲೀಗ್‌ನ ಒಂದು ರಾಜಕೀಯ ಬೇಡಿಕೆ. ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅದು (ಪಾಕಿಸ್ತಾನದ ರಚನೆ) ಪರಿಹಾರವಲ್ಲ ಎಂದು ನನಗನ್ನಿಸುತ್ತದೆ.
ಪಾಕಿಸ್ತಾನ ಬೇಕೆಂದು ಹೇಳುವ ಮೂಲಕ ನಾವು ಕಳೆದ 1000 ವರ್ಷಗಳ ಇತಿಹಾಸದಿಂದ ನಮ್ಮ ಕಣ್ಣುಗಳನ್ನು ಬೇರೆಡೆಗೆ ತಿರುಗಿಸುತ್ತಿದ್ದೇವೆ ಮತ್ತು ಮುಸ್ಲಿಮ್ ಲೀಗ್‌ನ ಪದಗಳನ್ನು ಬಳಸಿ ಹೇಳುವುದಾದರೆ, 30 ಮಿಲಿಯಗಳಿಗಿಂತಲೂ ಹೆಚ್ಚು ಮುಸ್ಲಿಮರನ್ನು ‘ಹಿಂದೂ ರಾಜ್’ನ ತೆಕ್ಕೆಗೆ ಎಸೆಯುತ್ತಿದ್ದೇವೆ.
ಹಾಗಾದರೆ ಪಾಕಿಸ್ತಾನವೆಂಬುದು ಮುಸ್ಲಿಮರಿಗೆ ಅಷ್ಟೊಂದು ಅಪಾಯಗಳಿರುವ ವಿಷಯವಾದಲ್ಲಿ ಹಿಂದೂಗಳು ಯಾಕೆ ಅದನ್ನು ವಿರೋಧಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ. ನನಗನ್ನಿಸುವ ಪ್ರಕಾರ ಪ್ರತ್ಯೇಕ ಪಾಕಿಸ್ತಾನದ ಉದಯಕ್ಕೆ ಎರಡು ಕಡೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಒಂದು: ಮುಕ್ತವಾದ ಸಂಘಟಿತವಾದ ಭಾರತವು ಸಾಮ್ರಾಜ್ಯಶಾಹಿ ಕುತಂತ್ರಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಹೆಚ್ಚು ಸಮರ್ಥವಾಗುತ್ತದೆಂದು ನಿಜವಾಗಿಯೂ ಅಂದುಕೊಳ್ಳುತ್ತಿರುವ ಪ್ರಾಮಾಣಿಕ ವ್ಯಕ್ತಿಗಳಿಂದ. ಇನ್ನೊಂದು ವರ್ಗ ಪಾಕಿಸ್ತಾನದ ರಚನೆಯನ್ನು ವಿರೋಧಿಸಲು ಕಾರಣವೆಂದರೆ ಮುಸ್ಲಿಮರು ತಮ್ಮ ಬೇಡಿಕೆಯನ್ನು ಇನ್ನಷ್ಟು ಕಠಿಣ ನಿರ್ಧಾರ ಹೊಂದುವಂತೆ ಅವರನ್ನು ಪ್ರಚೋದಿಸಿ ಅವರಿಂದ ದೂರವಾಗುವುದು. ಭಾರತದ ವಿಭಜನೆ ಮುಸ್ಲಿಮರ ಹಿತಾಸಕ್ತಿಗಳಿಗೆ ಪೂರಕವಾಗುವುದಿಲ್ಲ. ಪಾಕಿಸ್ತಾನ ಆಗಬೇಕೆಂಬ ಬೇಡಿಕೆಯು ಕೋಮು ಸಮಸ್ಯೆಯೊಂದಕ್ಕೆ ರಾಜಕೀಯವಾಗಿ ಸರಿಯಲ್ಲದ ಒಂದು ಪರಿಹಾರ. ಭವಿಷ್ಯದಲ್ಲಿ ಭಾರತವು ವರ್ಗದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೋಮು ವಿವಾದಗಳನ್ನಲ್ಲ ಮತ್ತು ಸಂಘರ್ಷವು ಬಂಡವಾಳ ಮತ್ತು ಶ್ರಮಿಕ ವರ್ಗದ ನಡುವೆ ನಡೆಯುತ್ತದೆ. ಮುಸ್ಲಿಮ್ ಬಂಡವಾಳಶಾಹಿಗಳು ಮತ್ತು ಊಳಿಗಮಾನ್ಯ ವರ್ಗಗಳು ಇಡೀ ಸಮಸ್ಯೆಗೆ ಒಂದು ಕೋಮು ಬಣ್ಣ ನೀಡಿ ಆರ್ಥಿಕ ಪ್ರಶ್ನೆಯನ್ನು ಒಂದು ಧಾರ್ಮಿಕ ವಿವಾದವಾಗಿ ಪರಿವರ್ತಿಸಿದ್ದಾರೆ.
ಇವತ್ತು ಮುಸ್ಲಿಮರು ನಡೆಯುತ್ತಿಲ್ಲ. ಅವರು ಹರಿಯುತ್ತಿದ್ದಾರೆ (ಯೋಚನಾ ಶಕ್ತಿ ಯಿಲ್ಲದ ಒಂದು ಜನಜಂಗುಳಿಯ ಹಾಗೆ). ಸಮಸ್ಯೆ ಎಂದರೆ ಮುಸ್ಲಿಮರು ನಿಧಾನವಾಗಿ ನಡೆಯಲು ಕಲಿತಿಲ್ಲ. ಅವರು ಒಂದೋ ಓಡುತ್ತಾರೆ ಅಥವಾ ಅಲೆಯೊಂದಿಗೆ ತೇಲುತ್ತಾರೆ.
ಪ್ರಶ್ನೆ: ವಿಭಿನ್ನ ಪ್ರವೃತ್ತಿಯ ಹಿಂದೂಗಳು ಮತ್ತು ಮುಸ್ಲಿಮರು ಎಂಬ ಪ್ರತ್ಯೇಕ ಗುಂಪುಗಳು. ಇವರಿಬ್ಬರ ನಡುವೆ ಏಕತೆಯನ್ನು ಸಾಧಿಸುವುದು ಹೇಗೆ?
ಆಝಾದ್: ಇದೊಂದು ಓಬಿರಾಯನ ಕಾಲದ ಚರ್ಚೆ. ಧಾರ್ಮಿಕ ಭಾಷೆಯಲ್ಲಿ ಹೇಳುವುದಾದರೆ ಭಾರತವು ಹಲವು ಸಮುದಾಯದವರಿಗೆ ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಸಿಖ್ಖರು ಮೊದಲಾದವರಿಗೆ ಒಂದು ನೆಲೆಯಾಗಿದೆ. ಭಾರತದ ಮುಸ್ಲಿಮರು ಏಕ ಸಮುದಾಯದವರಲ್ಲ, ಅವರು ತಮ್ಮ ತಮ್ಮಲ್ಲೇ ವಹಾಬಿ, ಸುನ್ನಿ, ಶಿಯಾ ಇತ್ಯಾದಿಯಾಗಿ ಹಲವು ಪಂಥಗಳಾಗಿದ್ದಾರೆ. ನೀವು ಅವರನ್ನು ಅವರ ಹಿಂದೂ ವಿರೋಧಿ ಭಾವನೆಗಳನ್ನು ಕೆದಕುವ ಮೂಲಕ ಒಂದು ಗೂಡಿಸಬಹುದೇ ಹೊರತು ಹೆಸರಿನಲ್ಲಿ ಅಲ್ಲ. ಅವರಿಗೆ ಇಸ್ಲಾಂ ಎಂದರೆ ತಮ್ಮದೇ ಆದ ಪಂಥಕ್ಕೆ ಸಂಪೂರ್ಣ ನಿಷ್ಠೆ ತೋರುವುದು. ಈ ಮೊದಲು ಉಲೆಮಾಗಳು ಇಸ್ಲಾಮನ್ನು ಅದರಲ್ಲಿ ನಂಬಿಕೆ ಇಲ್ಲದವರ ಬಳಿಗೆ ಒಯ್ಯುತ್ತಿದ್ದರು. ಈಗ ಅವರು ಇಸ್ಲಾಂನಲ್ಲಿ ನಂಬಿಕೆ ಇರುವವರಿಂದಲೇ ಇದನ್ನು ದೂರ ಒಯ್ಯುತ್ತಿದ್ದಾರೆ... ಆದರೆ, ಇವತ್ತಿನ ಪರಿಸ್ಥಿತಿ ಹಿಂದೆಂದಿಗಿಂತಲೂ ಹದಗೆಟ್ಟಿದೆ. ಮುಸ್ಲಿಮರು ತಮ್ಮ ಕೋಮುವಾದದಲ್ಲಿ ದೃಢವಾಗಿದ್ದಾರೆ. ಅವರು ಧರ್ಮಕ್ಕಿಂತ ರಾಜಕೀಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ತಮ್ಮ ಐಹಿಕ ಆಕಾಂಕ್ಷೆಗಳನ್ನು ತಮ್ಮ ಧರ್ಮದ ಆಜ್ಞೆಗಳು ಎಂಬಂತೆ ಅನುಸರಿಸುತ್ತಿದ್ದಾರೆ.
ಮೊದಲ ವಿಶ್ವ ಸಮರ ಆರಂಭವಾಗುವ ಮೊದಲೇ ಭಾರತಕ್ಕೆ ಸ್ವಾತಂತ್ರ ದೊರತೇ ತೀರುತ್ತದೆ, ಪ್ರಪಂಚದ ಯಾವ ಶಕ್ತಿಯಿಂದಲೂ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲವೆಂದು ನನಗೆ ಮನವರಿಕೆಯಾಗಿತ್ತು...
ಕೃಪೆ: www.memri.org