150 ಪ್ರಕರಣ ಭೇದಿಸಿದ ಟೈಗರ್ ಇನ್ನಿಲ್ಲ
ಪ್ರಪಂಚೋದ್ಯ

ಉತ್ತರಪ್ರದೇಶದ ಪೊಲೀಸ್ ಪಡೆಯಲ್ಲಿ ಟೈಗರ್ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿತ್ತು. ಟೈಗರ್ ತನ್ನ 14 ವರ್ಷದ ಸೇವಾವಧಿಯಲ್ಲಿ 150 ಪ್ರಕರಣಗಳನ್ನು ಭೇದಿಸಿತ್ತು. ಈ ಟೈಗರ್ ಲ್ಯಾಬ್ರಾಡರ್ ತಳಿಯ ಪೊಲೀಸ್ ನಾಯಿ. ಈ ನಾಯಿ ಇತರ ನಾಯಿಗಳು ಪಡೆಯದ ಅತ್ಯುಚ್ಚ ಶ್ರೇಣಿಯನ್ನು ಪೊಲೀಸ್ ಪಡೆಯಲ್ಲಿ ಪಡೆದುಕೊಂಡಿತ್ತು. ಟೈಗರ್ ಅನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದೆಗ ಮಹತ್ವದ ಪುರಾವೆಗಳನ್ನು ಪತ್ತೆಹಚ್ಚಿ ಪೊಲೀಸರಿಗೆ ನೀಡುತ್ತಿತ್ತು. ಬಯಲು, ಕಾಡು, ನೀರನಲ್ಲಿದ್ದರೂ ಟೈಗರ್ ಸಾಕ್ಷಗಳನ್ನು ಪೊಲೀಸರಿಗೆ ಒದಗಿಸುತ್ತಿತ್ತು. ಇಂತಹ ಅಸಾಧಾರಣ ಕೌಶಲದ ಟೈಗರ್ ಕಳೆದ ಜನವರಿ 17ರಂದು ಕೊನೆಯುಸಿರೆಳೆಯಿತು. ಪೊಲೀಸ್ ಪಡೆಯಲ್ಲಿ ಹಲವು ಪ್ರಕರಣಗಳನ್ನು ಭೇದಿಸಲು ನೆರವಾಗಿದ್ದ ಟೈಗರ್‌ಗೆ ಗೌರವ ಸಲ್ಲಿಸಲು ಪೊಲೀಸ್ ಪಡೆ ನಿರ್ಧರಿಸಿತ್ತು. ಅದಕ್ಕಾಗಿ ಟೈಗರ್ ಅನ್ನು ರಾಷ್ಟ್ರಧ್ವಜದಲ್ಲಿ ಸುತ್ತಿ ಗೌರವ ರಕ್ಷೆಯೊಂದಿಗೆ ದಫನ ಮಾಡಲಾಯಿತು. ಪೊಲೀಸರಿಗೆ ಟೈಗರ್‌ನ ಬಗೆಗಿನ ಅಭಿಮಾನ ಎಷ್ಟಿತ್ತೆಂದರೆ, ಡಿಜಿಪಿ ಅವರ ಕಚೇರಿ ಮುಝಫ್ಫರ್ ನಗರದ ಎಸ್‌ಎಸ್‌ಪಿಗೆ ಕರೆ ಮಾಡಿ ಟೈಗರ್‌ನ ಅಂತಿಮ ಸಂಸ್ಕಾರದ ಬಗ್ಗೆ ವಿಚಾರಿಸಿದೆ ಹಾಗೂ ಚಿತ್ರಗಳನ್ನು ಲಕ್ನೋಗೆ ಕಳುಹಿಸಿಕೊಡುವಂತೆ ಕೋರಿದೆ.