‘ಗಾಂಧಿ ಮತ್ತು ಸರ್ವೋದಯ’
ಇಂದು ಮಹಾತ್ಮಾ ಗಾಂಧಿ ಹಂತಕನ ಗುಂಡಿಗೆ ಬಲಿಯಾದ ದಿನ

ಗಾಂಧಿಯವರಿಗೆ ದೇಶದ ಸ್ವಾತಂತ್ರ್ಯ ಗಂಭೀರ ಆಲೋಚನೆಯಾಗಿ ನೈತಿಕ ಬಾಳುವೆಯಿಂದ ಸಮಾಜದಲ್ಲಿ ತಮ್ಮ ಸರ್ವೋದಯ ವಿಧಾನವನ್ನು ರೂಢಿಸಿಕೊಳ್ಳಬಹುದು ಎಂಬ ಪ್ರಬಲ ನಂಬಿಕೆ ಅವರನ್ನು ಕಾಡಿತ್ತು. ಆದ್ದರಿಂದ, ಅಂಥ ನೈತಿಕ ಜೀವನ ವಿಧಾನವನ್ನು ಗಾಂಧಿ ತಾವೇ ಆದರ್ಶಪ್ರಾಯವಾಗಿ ತಮ್ಮ ನಡವಳಿಕೆಯಲ್ಲೇ ಪ್ರಯೋಗ ಮಾಡಿದರು. ಹೀಗೆ ನುಡಿದಂತೆ ನಡೆದಿದ್ದರಿಂದ ಈ ದೇಶದ ಜನತೆ ಗಾಂಧಿಯೊಂದಿಗೆ ಸ್ವಾತಂತ್ರ್ಯಕ್ಕಾಗಿ ಕೈಜೋಡಿಸಿದರು.
ಗಾಂಧಿಯವರ ಸಾಮಾಜಿಕ ತತ್ವ ಚಿಂತನೆಯನ್ನು ‘ಸರ್ವೋದಯ’ ಎಂದು ಕರೆಯಲಾಗಿದೆ. ಅದರ ಹುಟ್ಟು ಬೀಜರೂಪವಾಗಿ ಕಂಡು ಬಂದದ್ದು ದಕ್ಷಿಣ ಆಫ್ರಿಕಾದಲ್ಲಿಯೇ. ಅವರ ಮಿತ್ರ ಪೊಲ್ಲಾಕ್ ಎಂಬ ಬಿಳಿಯ ಅವರಿಗೆ ಒಂದು ಪುಟ್ಟ ಕೃತಿಯನ್ನು ನೀಡಿ, ರೈಲಿನಲ್ಲಿ ನಿಮ್ಮ ಪ್ರಯಾಣ ಬೇಸರವಿಲ್ಲದೆ ಸಾಗಲಿ ಎಂದಿದ್ದ. (ಆ ಸಮಯದಲ್ಲಿ ಗಾಂಧಿ ಜೊಹಾನ್ಸ್ ಬರ್ಗ್‌ನಿಂದ ಡರ್ಬಾನ್‌ಗೆ ಹೋಗುವವರಿದ್ದರು.) ಕೃತಿಯ ಹೆಸರೇ ಸ್ವಾರಸ್ಯಕರ ವಾಗಿತ್ತು. ಕೃತಿಕಾರ ಜಾನ್ ರಸ್ಕಿನ್ ‘Unto This Last’ ‘ಪುಸ್ತಕವನ್ನು ಎಂದು ಕರೆದಿದ್ದ. ಅಷ್ಟು ಪುಟ್ಟ ಬರಹ ಸಿಡಿ ಮದ್ದಿನಂಥ ಸ್ಫೋಟಕ ಸತ್ಯದ ಆವಿಷ್ಕಾರವನ್ನು ಬಹಳ ಸರಳವಾಗಿ ಮಾಡಿತ್ತು. ರಸ್ಕಿನ್ ಪ್ರತಿಪಾದಿಸಿದ್ದ ತಾತ್ವಿಕ ವಿಷಯ ಸಾಮಾಜಿಕ-ಆರ್ಥಿಕ ಸಿದ್ಧಾಂತ ಬಹಳ ‘ಸತ್ಯ ನಿಷ್ಠವಾಗಿ’ ಓದುಗನಿಗೆ ತಿಳಿದು ಬರುತ್ತಿತ್ತು. ಗಾಂಧೀಜಿ ಆ ಹೊತ್ತಿಗೆ ಭಗವದ್ಗೀತೆಯನ್ನು ತಮ್ಮ ಜೀವನದ ತಾತ್ವಿಕ ಚಿಂತನೆಯ ಮೂಲವೆಂದು ಪರಿಗಣಿಸಿದ್ದರು. ಅದರ ಜೊತೆಗೆ ರಸ್ಕಿನ್‌ನ ಸಮಾನತೆಯ ಪ್ರಮೇಯ ಅವರನ್ನು ಒಟ್ಟಾರೆ ಸರ್ವಜನರ ಸುಖವೇ ಜೀವನದ ಗುರಿಯಾಗಬೇಕೆಂದು ದೃಢವಾಗಿ ನಂಬಿದ್ದ ಒಬ್ಬ ತಾತ್ವಿಕನನ್ನಾಗಿ ಮಾರ್ಪಾಟು ಮಾಡಿತ್ತು. ಗಾಂಧೀಜಿ Unto This Last’ ಓದುತ್ತಾ ಮಾನವ ಬದುಕಿನ ಬಗೆಗೆ ಹೊಸದೃಷ್ಟಿಯ ನಿಲುವನ್ನು ಕಂಡುಕೊಂಡರು. ಜೀವನ ಸಾಗಿಸುವ ಕ್ರಿಯೆ ಆರ್ಥಿಕ ಬೆಂಬಲವನ್ನು ಅಪೇಕ್ಷಿಸುವುದಾದರೆ, ಅದನ್ನು ಗಳಿಸುವುದಕ್ಕಾಗಿ ಮಾಡುವ ಉದ್ಯೋಗಗಳು ವ್ಯಕ್ತಿಗಳಿಗೆ ನಿರ್ವಹಣೆಯ ಸಾಧನವಾಗಬೇಕು. ಆದ್ದರಿಂದ, ಹಣಗಳಿಸುವಲ್ಲಿ ಒಬ್ಬ ನ್ಯಾಯವಾದಿಯ ಸಂಪಾದನೆಯೂ ಹಾಗೂ ಒಬ್ಬ ಕ್ಷೌರಿಕನ ವರಮಾನವೂ ಅವರ ಜೀವನಕ್ಕೆ ಯಾವುದೇ ತಾರತಮ್ಯವಿಲ್ಲದೆ ದೊರೆಯಬೇಕು. ಅಂಥ ಪರಿಸ್ಥಿತಿಯ ಬದುಕು ಸಾಮಾಜಿಕ ಸಮಾನತೆಯನ್ನು ಇಬ್ಬರಿಗೂ ನೀಡಬಲ್ಲದು. ಅಂದರೆ, ರಸ್ಕಿನ್ನನ ಆರ್ಥಿಕ-ಸಮಾನತೆಯ ನಿರೂಪಣೆಯಲ್ಲಿ ಕಾಣಬಹುದಾದ ಅಂಶವೆಂದರೆ, ಜೀವನ ನಿರ್ವಹಣೆ ಎಲ್ಲರಿಗೂ ಅಗತ್ಯವಾಗುವುದರಿಂದ, ಜನತೆ ತಮ್ಮ ಆರ್ಥಿಕ ಗಳಿಕೆಯನ್ನು ಪಡೆಯುವಲ್ಲಿ ಸಮಾನ ಅವಕಾಶಗಳನ್ನು ಹೊಂದಬೇಕು. ರಸ್ಕಿನ್ನನ ಈ ರೀತಿಯ ‘ತಾತ್ವಿಕ ಚಿಂತನೆಯ ಸ್ಫೋಟ’ (ಸಿಡಿಯುವ ಮಾತು) ಆದರ್ಶ ದೃಷ್ಟಿಕೋನದ ಹೇಳಿಕೆ ಎನ್ನಬಹುದಾದರೂ, ಗಾಂಧೀಜಿಗೆ ಅದು ಹೊಸ ವಿಚಾರವನ್ನು ತಿಳಿಸಿಕೊಟ್ಟಿದ್ದಲ್ಲದೆ, ಹೊಸ ಅನುಭವವನ್ನೂ ತಂದಿತು. ಸಮಾನತೆಯ ತತ್ವವನ್ನು ಪ್ರಸ್ತುತ ಸಾಮಾಜಿಕ-ಆರ್ಥಿಕ ನಡವಳಿಕೆಗಳ ಹಿನ್ನೆಲೆಯಲ್ಲಿ ಅರ್ಥೈಸುವ ಸಂದರ್ಭ ಗಾಂಧೀಜಿಗೆ ದೊರೆಯಿತು. ನಿಜವಾಗಿಯೂ, ಜಾನ್ ರಸ್ಕಿನ್ ಗಾಂಧೀಯವರಿಗೆ ಒಬ್ಬ ಸಹ-ಸಾಮಾಜಿಕ ಚಿಂತಕನಾಗಿ ಕಂಡು ಬಂದ. ಅವನ ಚಿಂತನೆ ಗಾಂಧಿಯವರಲ್ಲಿ ಆದರ್ಶದ ಹೊಸ ವಿಚಾರದ ಹೊಳಹನ್ನು ಸರ್ವೋದಯ ಪರಿಕಲ್ಪನೆಯಲ್ಲಿ ಮೂಡಿಸಿತು. ಅದೇ ಅವರ ಕ್ರಿಯಾಶೀಲ ಬದುಕಿನ ಸಾಧನವಾಯ್ತು. ಆ ಪರಿಕಲ್ಪನೆಯ ವಿಚಾರ ಹಾಗೂ ವಿಧಾನಗಳನ್ನು ಕೆಲವರು ‘ಗಾಂಧಿಸಂ’ ಎಂದರು. ಆದರೆ, ಗಾಂಧಿಯವರಾಗಲೀ ಅಥವಾ ಅವರ ಅನುಯಾಯಿಗಳಾಗಲೀ ‘ಗಾಂಧಿಸಂ’ ಪದಪುಂಜವನ್ನು ಒಪ್ಪಲಿಲ್ಲ. ಅವರಿಗೆ ಸರ್ವೋದಯ ಪ್ರಾಯೋಗಿಕ ನಡವಳಿಕೆಯಾಯಿತು; ಸಿದ್ಧಾಂತದ ದೃಷ್ಟಿಯನ್ನು ಗಾಂಧಿ ಕಾರ್ಯಕರ್ತರು ನಂಬಲೇ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾರ್ಕ್ಸ್ ಸಿದ್ಧಾಂತವನ್ನು ವಿಮರ್ಶಿಸುವ ಜನ ‘ಗಾಂಧಿಸಂ’ ಎಂದು ‘ಸರ್ವೋದಯ’ವನ್ನು ಕರೆದಿರಬಹುದು. ಆ ವಿಮರ್ಶೆಗೆ ಇತರರು ಕೂಡ ಒಪ್ಪಿಗೆ ನೀಡಿರಬಹುದೇನೊ. ಒಂದು ಘಟ್ಟದ ಪರಿವರ್ತನೆಯಲ್ಲಿ ಸಮಾಜ ರಾಜ್ಯಸ್ವಾಮ್ಯವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಗಾಂಧಿ ಹಾಗೂ ಮಾರ್ಕ್ಸ್ ಇಬ್ಬರ ವಿಚಾರಗಳಲ್ಲಿ ಸಾಮಾನ್ಯ ಎನ್ನಿಸಿದ್ದರೂ, ಸರ್ವೋದಯವನ್ನು ಆ ಮೂಲಕ ಮಾರ್ಕ್ಸ್‌ನ ಸಿದ್ಧಾಂತಕ್ಕೆ ತಾಳೆಹಾಕುವುದು ಸರಿಕಾಣುವುದಿಲ್ಲವೆಂದು ಗಾಂಧಿವಾದಿ ಗಳು ನಂಬಿದ್ದಾರೆ. ಅಲ್ಲದೆ, ಗಾಂಧಿ ಮತ್ತು ಮಾರ್ಕ್ಸ್ ಇಬ್ಬರ ವಿಚಾರಗಳನ್ನು ಕಾಲ್ಪನಿಕ ಎಂದು ಭಾವಿಸುವುದು ವಿಮರ್ಶ ಕರ ದೃಷ್ಟಿಕೋನವಷ್ಟೆ. ಆ ರೀತಿಯ ವಿಮರ್ಶಾಪಾಂಡಿತ್ಯವೂ ವಸ್ತುನಿಷ್ಠವಾದುದಲ್ಲ. ಗಾಂಧಿಯವರಿಗೆ ದೇಶದ ಸ್ವಾತಂತ್ರ್ಯ ಗಂಭೀರ ಆಲೋಚನೆಯಾಗಿ ನೈತಿಕ ಬಾಳುವೆಯಿಂದ ಸಮಾಜದಲ್ಲಿ ತಮ್ಮ ಸರ್ವೋದಯ ವಿಧಾನವನ್ನು ರೂಢಿಸಿಕೊಳ್ಳಬಹುದು ಎಂಬ ಪ್ರಬಲ ನಂಬಿಕೆ ಅವರನ್ನು ಕಾಡಿತ್ತು. ಆದ್ದರಿಂದ, ಅಂಥ ನೈತಿಕ ಜೀವನ ವಿಧಾನವನ್ನು ಗಾಂಧಿ ತಾವೇ ಆದರ್ಶಪ್ರಾಯವಾಗಿ ತಮ್ಮ ನಡವಳಿಕೆಯಲ್ಲೇ ಪ್ರಯೋಗ ಮಾಡಿದರು. ಹೀಗೆ ನುಡಿದಂತೆ ನಡೆದಿದ್ದರಿಂದ ಈ ದೇಶದ ಜನತೆ ಗಾಂಧಿಯೊಂದಿಗೆ ಸ್ವಾತಂತ್ರ್ಯಕ್ಕಾಗಿ ಕೈಜೋಡಿಸಿದರು. ಅನುಯಾಯಿಗಳಿಗೆ ಅವರ ವಿಧಿ-ವಿಧಾನಗಳು ನೈತಿಕ ಪಾರಮ್ಯದ ನಿಷ್ಠುರ ಮಾದರಿಗಳಾದರೂ, ಗಾಂಧಿಯವರ ಸತ್ಯ ಮತ್ತು ಅಹಿಂಸೆಗಳ ಮೌಲ್ಯಗಳಿಗೆ ಜನತೆ ಒಡ್ಡಿಕೊಂಡಿತು. ಜೊತೆಗೆ ಗಾಂಧಿಯವರು ಪ್ರತಿಪಾದಿಸುತ್ತಿದ್ದ ಅಪರಿಗ್ರಹ, ಬ್ರಹ್ಮಚರ್ಯ ಕಳ್ಳತನ-ವಿರೋಧ ಮತ್ತು ಶಾರೀರಿಕ ವ್ಯಾಯಾಮ ಮುಂತಾದವು ಅವರ ಅನುಯಾಯಿಗಳ ಆಚರಣೆಯಲ್ಲಿ ಅಷ್ಟಾಗಿ ಕಂಡು ಬರದೆ ಗಾಂಧೀಜಿಯ ಕ್ರಿಯಾ ಸಾಧನೆಯ ಬಗ್ಗೆ ಅನುಮಾನ ಹುಟ್ಟಿಸುವಂತಾಗಿದೆ. ಅದಕ್ಕೆ ನಿದರ್ಶನವಾಗಿ ಗಾಂಧಿಯವರ ಆಪ್ತ-ಅನುಯಾಯಿಗಳೇ ತಮ್ಮ ಗುರುವಿನೊಂದಿಗೆ ಜೊತೆ ಹೆಜ್ಜೆ ಇಡಲು ಸಾಧ್ಯವಾಗಿರಲಿಲ್ಲ. ಬಹುಶಃ ಈ ಮಾತನ್ನೇ ಮಾರ್ಕ್ಸಿಸಂ ಸಿದ್ಧಾಂತವನ್ನು ಆಚರಣೆಗೆ ತರುವ ಪ್ರಯತ್ನಗಳ ಬಗ್ಗೆಯೂ ಹೇಳಬಹುದೆನ್ನಿಸುತ್ತದೆ. ಮಾರ್ಕ್ಸ್ ಸಿದ್ಧಾಂತದ ಕಾರ್ಯಾಚರಣೆಗೆ ಸಮಾಜದಲ್ಲಿ ಉಂಟುಮಾಡುವ ವರ್ಗ ವಿರೋಧ ಹೋರಾಟ ಒಂದು ಕ್ರಾಂತಿಯಾಗಿ, ಕೊನೆಯ ಘಟ್ಟದಲ್ಲಿ ಪ್ರಭುತ್ವ (ರಾಜ್ಯ) ನಶಿಸಿ ಅದು ಸಮತಾವಾದದ ಪರಿಕಲ್ಪನೆಯ ಸಮಾಜವನ್ನು ಅಸ್ತಿತ್ವಕ್ಕೆ ತರುತ್ತದೆ ಎಂಬ ಅಚಲ ನಂಬಿಕೆಯೇ ಮಾರ್ಕ್ಸ್‌ನ ಅನುಯಾಯಿಗಳಿಗೆ ಬೆಂಬಲವಾಗಿದೆ.
ಗಾಂಧಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಮೇಲೆ ಏನು ಮಾಡಬೇಕೆಂಬ ಗೊಂದಲ್ಲಿದ್ದರು. ಅವರು ಇಲ್ಲಿಯ ಜನತೆಯನ್ನು ಕಂಡು ಅವರ ಅಭಿಪ್ರಾಯದಂತೆ ತಮ್ಮ ಮುಂದಿನ ನಡೆಯನ್ನು ರೂಪಿಸುವುದು ಆವಶ್ಯಕವಾಗಿತ್ತು. ಅದಕ್ಕನುಗುಣವಾಗಿ ಗಾಂಧಿ ಗೋಪಾಲಕೃಷ್ಣ ಗೋಖಲೆಯಂಥ ಬುದ್ಧಿಜೀವಿ ದೇಶಪ್ರೇಮಿಯನ್ನು ಭೇಟಿ ಮಾಡಿ ಇಲ್ಲಿಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದೇ ಒಂದು ಮಹತ್ತರ ಐತಿಹಾಸಿಕ ಸಂದರ್ಭವಾಗಿತ್ತು. ಗೋಖಲೆಯವರ ಅಭಿಪ್ರಾಯದಂತೆ ಗಾಂಧಿ ದೇಶ ಸಂಚಾರ ಮಾಡುವ ನಿರ್ಧಾರ ಮಾಡಿದರು. ಅಂಥ ಪರ್ಯಟನೆ ಅವರಿಗೆ ವಾಸ್ತವಿಕ ತಿಳುವಳಿಕೆ, ವಿಭಿನ್ನ ವಿಷಯಗಳ ಪರಿಚಯ ಹಾಗೂ ಜನತಾ ಸಂಪರ್ಕದ ಅನುಭವಗಳನ್ನು ನೀಡಿತು. ಬ್ರಿಟಿಷ್ ಮಾದರಿಯ ದಿರಿಸು (ಸೂಟ್ ಮತ್ತು ಬೂಟ್) ಗಾಂಧಿಯವರನ್ನು ಒಬ್ಬ ವಿದೇಶಿಯಂತೆ ಬಿಂಬಿಸಿತ್ತು; ಅವರು ಅದರಿಂದ ಹೊರಬಂದು ಶುದ್ಧ ಭಾರತೀಯ ವಸ್ತ್ರವನ್ನು (ಅದರಲ್ಲಿಯೂ ಕಡು ಬಡವರ ಜೊತೆ ಸಮೀಕರಿಸಿಕೊಳ್ಳಲು), ಅಂದರೆ, ಮೇಲ್ವಸ್ತ್ರ ಎದೆಮುಚ್ಚಿಕೊಳ್ಳಲು ಹಾಗೂ ಮಂಡಿಯವರೆಗಿನ ಧೋತಿಯನ್ನು (ಕಚ್ಚೆ) ಉಡುಬಟ್ಟೆಯಾಗಿ ಸ್ವೀಕಾರ ಮಾಡಿದರು. ಬ್ರಿಟಿಷರ ಆಡಳಿತದಲ್ಲಿ ಬೆನ್ನೆಲುಬಿಲ್ಲದೆ ಬದುಕುತ್ತಿದ್ದ ಜನತೆಗೆ ಕನಿಷ್ಠ ಜೀವನಾವಕಾಶವೂ (ಅವರ ಉತ್ತಮತೆಗಾಗಿ) ದೊರೆಯಲಿಲ್ಲ. ಇವೆಲ್ಲವನ್ನು ಗಮನಿಸಿದ ಗಾಂಧಿಯವರು ಗ್ರಾಮಪುನಾರಚನೆಯ ಮೂಲಕ ಆ ಜನರಿಗೆ ಉತ್ತಮತೆಯನ್ನು ಅವರ ಕಸುಬಿನ ಆಧಾರದ ಮೇಲೆಯೇ (ವೃತ್ತಿಕೌಶಲ) ಸಾಧಿಸಬಹುದೆಂಬ ನಿಶ್ಚಯಭಾವದಿಂದ ತಮ್ಮ (ಗಾಂಧಿ) ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ರೂಪಿಸಿದರು. ಸ್ವಾತಂತ್ರ್ಯದ ಅಗತ್ಯದ ಜೊತೆಗೆ, ಜನತೆ ಸ್ವಾವಲಂಬಿಗಳಾಗಬೇಕೆನ್ನುವ ಗಾಂಧಿ ಚಿಂತನೆ ರಾಷ್ಟ್ರೀಯ ದೃಷ್ಟಿಯ ನಿಲುವಾಗಿತ್ತು. ‘‘ವಿದೇಶಿಯರ ನೊಗಕ್ಕೆ ಕುತ್ತಿಗೆ ಕೊಟ್ಟ ನಾವು ಅದರಿಂದ ಮುಕ್ತವಾಗಲೇಬೇಕು; ಅದಕ್ಕೆ ಪೂರಕ, ಸ್ವಾವಲಂಬನೆಯ ವೃತ್ತಿಯಿಂದ ಉತ್ಪಾದನೆ’’ ಎನ್ನುವ ಅಭಿಪ್ರಾಯವನ್ನು ಗಾಂಧಿ ಜನತೆಗೆ ಮನದಟ್ಟುಮಾಡಿದರು. ಆ ಹೊತ್ತಿಗೆ ಸ್ವಾತಂತ್ರ್ಯದ ಕೂಗು ಎಲ್ಲ ಕಡೆ ಕೇಳಿಸುವಂತಾಯಿತು. ಸಿಂಹನಾದದ ರೀತಿಯ ಲೋಕಮಾನ್ಯ ತಿಲಕರ ಸ್ವಾತಂತ್ರ್ಯದ ಬಗೆಗಿನ ಉದ್ಗಾರ-‘‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು’’-ದೇಶದ ಉದ್ದಗಲ ಜನರ ಮನಸ್ಸಿನ ಮೇಲೆ ಅತಿಯಾದ ಪ್ರಭಾವ ಬೀರುವಂತಾಯಿತು. ಜೊತೆಗೆ ಗಾಂಧಿಯ ಸರಳ ಜೀವನ ಮತ್ತು ನಿಷ್ಕಲ್ಮಶ ಹೃದಯ ಪ್ರೇರಿತ-ಪ್ರೀತಿ ಆ ಕಾಲದ ಪ್ರಭಾವಿ ಜನರ ನಡುವಿನ ನಾಯಕರನೇಕರನ್ನು (ಬುದ್ಧಿಜೀವಿಗಳು, ವ್ಯಾಪಾರಿಗಳು, ನ್ಯಾಯವಾದಿಗಳು ಹಾಗೂ ಎಲ್ಲ ಸಮುದಾಯದ ಯುವ ಪಡೆಯ ನಾಯಕರು) ರಾಷ್ಟ್ರ ಹೋರಾಟಗಾರ ಗಾಂಧಿಯೆಡೆಗೆ ಹೋಗುವಂತೆ ಮಾಡಿತು.
ಇಪ್ಪತ್ತನೆಯ ಶತಮಾನದ ಎರಡನೆಯ ದಶಕದ ಸರಿಸುಮಾರಿನಲ್ಲಿ ಗಾಂಧಿ ಈ ದೇಶಕ್ಕೆ ಹಿಂದಿರುಗಿ (1915) ಮೊದಲ ಕೆಲವು ಸಮಯ ಪ್ರೇಕ್ಷಕನಾಗಿ ಜನತೆಯ ಹಾಗೂ ದೇಶದ ಆತ್ಮ-ಗೌರವ ಕುಸಿದಿರುವುದನ್ನು ಕಂಡು ಕಸಿವಿಸಿಗೊಂಡಿದ್ದರು. ಕ್ರಮೇಣ ರಾಷ್ಟಜೀವನದಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡುವ ಸಂದರ್ಭಗಳು ಅವರ ಮನಸ್ಸನ್ನು ತೀವ್ರವಾಗಿ ತಟ್ಟಿದಾಗ, ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಕಪ್ಪುವರ್ಣೀಯರು ಹಾಗೂ ಭಾರತೀಯ ಕಾರ್ಮಿಕರ ಹಕ್ಕುಬಾಧ್ಯತೆ ಹಾಗೂ ಆತ್ಮಗೌವವನ್ನು ಗಳಿಸಿಕೊಡುವ ಅಹಿಂಸಾತ್ಮಕ ಹೋರಾಟ, ನಿಜವಾಗಿಯೂ, ವಿಶಿಷ್ಟ ರೀತಿಯ ಆತ್ಮಬಲವನ್ನು ತಂದುಕೊಟ್ಟಿತ್ತು. ಆ ಕಾರಣದಿಂದ ಗಾಂಧಿ ನಿಧಾನವಾಗಿ ಹಾಗೂ ಅಚ್ಚಳಿಯದ ಮನೋ ನಿರ್ಧಾರದಿಂದ ದೇಶ ಸ್ವಾತಂತ್ರ್ಯ ಹಾಗೂ ಜನತೆಯ ಏಳಿಗೆಯಲ್ಲಿ ಭಾಗಿಯಾದರು. ಅಂತೆಯೇ ಅವರ ದೃಷ್ಟಿಕೋನ (ಸ್ವಾತಂತ್ರ್ಯದ ಕಲ್ಪನೆಯಾಗಲೀ, ಬ್ರಿಟಿಷರ ಬಗ್ಗೆಯಾಗಲೀ, ಶೋಷಣೆ ಕುರಿತಾಗಲೀ, ಮಹಿಳೆಯರು ಮತ್ತು ಅಸ್ಪಶ್ಯತೆಯ ವಿಚಾರವಾಗಲೀ, ಗ್ರಾಮೋದ್ಯೋಗವಾಗಲೀ)- ಎಲ್ಲದರ ಬಗ್ಗೆಯೂ ಸತ್ಯ-ಅಹಿಂಸೆ ಮತ್ತು ನೈತಿಕ ನಿಷ್ಠೆಯ ಹಿಡಿತದಿಂದ ದೂರ ಉಳಿದಿರಲಿಲ್ಲ. ಇನ್ನು ದೇಶದ ಸ್ವತಂತ್ರ ಆಡಳಿತವು ವಿಕೇಂದ್ರೀಕರಣದ ಆಧಾರದ ಮೇಲೆ ಗ್ರಾಮ ಸಭೆ, ಗ್ರಾಮ ಪಂಚಾಯತ್, ಜಿಲ್ಲೆ ಮೊದಲಾದವುಗಳ ಮೂಲಕ ಜನತೆಯ ರಾಜಕೀಯ ದೃಷ್ಟಿಯನ್ನು ಬೆಳೆಸಿತು. ಜನರಿಗೆ ತಮ್ಮ ಸ್ಥಳಗಳಲ್ಲಿ ಜವಾಬ್ದಾರಿಯಿಂದ ಸ್ಥಳೀಯರ ಆಡಳಿತಕ್ಕೆ ನೆರವಾಗುವ ಪರಿಕಲ್ಪನೆಯನ್ನು ಗಾಂಧಿ ಸ್ಪಷ್ಟವಾಗಿ ತಿಳಿಸಿದರು. ಗ್ರಾಮ ಪುನಾರಚನೆಯ ಕಾರ್ಯಕ್ರಮಗಳಲ್ಲಿ ನೂಲುವ, ನೇಯುವ, ಕಮ್ಮಾರಿಕೆಯ, ಬಡಗಿ ವೃತ್ತಿಯ ಹಾಗೂ ಕೃಷಿ ವೃತ್ತಿಯ ಉತ್ತಮ ತಿಳುವಳಿಕೆಯ ಇನ್ನೂ ಮೊದಲಾದ ವಿಷಯ ಬೋಧನೆಯ ಹೊಸ ಶಿಕ್ಷಣ ಮಾದರಿಯನ್ನು (ನಯೀ ತಾಲೀಂ) ಅವರು ಪ್ರಾಯೋಗಿಕ ವಾಗಿ ನೀಡುವ ಉದ್ದೇಶ ಹೊಂದಿದ್ದರು. ಗಾಂಧಿಯವರ ಹಲವು ವರ್ಷಗಳ ಸತತ ಅಹಿಂಸಾತ್ಮಕ ಹೋರಾಟ ಈ ದೇಶದ ಅನೇಕರ ಮನಸ್ಸಿನಲ್ಲಿ ಗಾಢವಾಗಿ ಉಳಿದಿತ್ತು. ಹಾಗಾಗಿ ಗಾಂಧಿ ತಮ್ಮ ಸತ್ಯ ಮತ್ತು ಅಹಿಂಸೆಯ ಅಸ್ತ್ರವನ್ನು ಇಲ್ಲಿಯೂ ಬ್ರಿಟಿಷ್ ಸರಕಾರದ ವಿರುದ್ಧ ಉಪಯೋಗ ಮಾಡಿಕೊಂಡಾಗ ಪ್ರಭುತ್ವಕ್ಕೆ ಕಸಿವಿಸಿಯಾಯಿತು; ಪೆಟ್ಟು ಬೀಳುವ ಸ್ಥಿತಿ ಬಂದಿತು. ಅದನ್ನು ತಡೆಯುವ ಕಾರ್ಯದಲ್ಲಿ ಕಾನೂನು ಉಲ್ಲಂಘನೆಯ ಆರೋಪ ಗಾಂಧಿ ಮತ್ತು ಅವರ ಅನುಯಾಯಿಗಳ ಮೇಲೆ ಹೇರಲಾಯಿತು. ಗಾಂಧಿ ಜನತೆಯ ಸಾಧಾರಣ ಸಮಸ್ಯೆಗಳಾದ ಉಪ್ಪಿನ ಮೇಲಿನ ತೆರಿಗೆ, ವಿದೇಶಿ ವಸ್ತ್ರ ನಿಷೇಧಕ್ಕೆ ಹೋರಾಟ, ಚಂಪಾರಣ್ಯದಲ್ಲಿ ಸತ್ಯಾಗ್ರಹ (ನೀಲಿ ಬೆಳೆಗಾರರ ಮೇಲಿನ ದೌರ್ಜನ್ಯಕ್ಕೆ ಪ್ರತಿಭಟನೆ) ಮೊದಲಾದ ವಿಚಾರಗಳಿಗೆ ಆದ್ಯತೆ ನೀಡಿ ಸರಕಾರಕ್ಕೆ ಎದುರು ನಿಂತರು. ಅವರನ್ನು ಅನುಸರಿಸಿದ ಹಿಂಬಾಲಕರು ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಗಾಂಧಿಯವರೊಂದಿಗಿದ್ದು ಕಾನೂನು ಭಂಗ ಮಾಡಿದರು. ಅಂದರೆ, ಈ ಘಟನೆಗಳ ಹಿಂದೆ ಎದ್ದು ಕಾಣುವ ವಿಷಯವೇ ಹೋರಾಟ. ಅದು ಗಾಂಧಿಯ ನೇತೃತ್ವದಲ್ಲಿ ಅನಿವಾರ್ಯವಾಗಿಯೇ ಅಹಿಂಸಾತ್ಮಕವಾಗಿತ್ತು. ಹಾಗೆಯೇ 1942ರ ಸಮಯದ ಹೊತ್ತಿಗೆ ಬ್ರಿಟಿಷ್ ಪ್ರಭುತ್ವವು ಭಾರತ ಬಿಟ್ಟು ತೊಲಗಬೇಕೆಂಬ ಹೋರಾಟಕ್ಕೆ ಗಾಂಧಿ ಕರೆಯಿತ್ತರು. ಇಡೀ ದೇಶ ಗಾಂಧಿಯ ಮೈದಾಳಿತು. ಎಲ್ಲ ಕಡೆ ಹೋರಾಟ ಕಾರಣದಿಂದ ಜನರ ಬಂಧನವಾಯಿತು. ದೇಶದ ಎಲ್ಲ ಬಂದೀಖಾನೆಗಳು ಹೋರಾಟಗಾರರಿಂದ ತುಂಬಿ ತುಳುಕಿದವು. ಬ್ರಿಟಿಷ್ ಕಾನೂನು ಮತ್ತು ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಲಿಲ್ಲ. ಪಂಜಾಬ್‌ನಲ್ಲಿ ನಡೆದ ಜಲಿಯನ್ ವಾಲಾಬಾಗ್‌ನ ಗೋಲಿಬಾರ್ ಹತ್ಯಾಕಾಂಡ ಗಾಂಧಿಯವರನ್ನು ಪೂರ್ಣವಾಗಿ ನಲುಗಿಸಿತ್ತು. ಪ್ರಭುತ್ವದ ಇಂಥ ಕಾರ್ಯಾಚರಣೆ ಅತೀವ ಹೇಯವಾಗಿತ್ತು. ಮುಂದಿನ ದಿನಗಳಲ್ಲಿ ಗಾಂಧಿ ಸ್ವಾತಂತ್ರ್ಯ ಹೋರಾಟವನ್ನು ತೀಕ್ಷ್ಣಗೊಳಿಸಿದ್ದಲ್ಲದೆ, ತಾವು ಸಾಯುವವರೆಗೆ ದೇಶದ ನೂರಾರು ಸಮಸ್ಯೆಗಳಿಗೆ ಜನತೆಯಲ್ಲಿ ಹೋರಾಟ ಮಾಡುವ ಮನಸ್ಥಿತಿಯನ್ನು ಉಂಟು ಮಾಡುವ ಏಕೈಕ ನಾಯಕರಾದರು.
ಗಾಂಧೀಜಿ ಈ ರೀತಿಯಲ್ಲಿ ಜನತೆಯ ಎಲ್ಲ ವಿಷಯಗಳಿಗೂ ಸ್ಪಂದಿಸಿ ಎಲ್ಲರಿಗೂ ಬೇಕಾದವರಾಗಿದ್ದರು. ಈ ಬೆಳವಣಿಗೆಯನ್ನು ಅರಿತ ಅವರು ತಮ್ಮ ವಿಚಾರ ಪ್ರಸರಣಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಆಶ್ರಯಿಸಿದರು. ಇಂಗ್ಲಿಷ್‌ನಲ್ಲಿ ‘ಇಂಡಿಯನ್ ಒಪೀನಿಯನ್’ ಪತ್ರಿಕೆ ಗಾಂಧಿಯವರ ದಕ್ಷಿಣ ಆಫ್ರಿಕಾ ಹೋರಾಟ ಕಾಲದಲ್ಲಿ ಆರಂಭವಾಗಿತ್ತು. ಇನ್ನು ಭಾರತದಲ್ಲಿ ‘ಹರಿಜನ’ ಪತ್ರಿಕೆ ಅವರ ಮುಖವಾಣಿಯಾಯಿತು. ಗಾಂಧಿ ತಮ್ಮ ಭಾವನೆ, ಅನಿಸಿಕೆ, ತಾತ್ವಿಕ ಚಿಂತನೆ, ಹೋರಾಟ ಮಾರ್ಗ, ಎಲ್ಲವನ್ನೂ ಹಿಂದಿ, ಗುಜರಾತಿ ಮತ್ತು ಇಂಗ್ಲಿಷ್‌ನಲ್ಲಿ ಪತ್ರಿಕೆಗಳ ಮೂಲಕ ತಿಳಿಸುತ್ತಿದ್ದರು. ಆ ಕಾರಣದಿಂದ ಅವರ ವಿಚಾರದೆಳೆಗಳು ಅನಂತವಾಗಿ ಇಂದಿಗೂ ಅಚ್ಚಿನ ಪ್ರತಿಗಳಲ್ಲಿ ಲಭ್ಯವಾಗಿವೆ. ಹಾಗೆಯೇ ಅವರ ವಿಚಾರಗಳನ್ನು ಪಟ್ಟಿಮಾಡುವುದಾದರೆ, ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳು, ಆರ್ಥಿಕ ವಿಷಯಗಳು, ಅನುಯಾಯಿಗಳಿಗೆ ನೈತಿಕ ಹೊಣೆಗಾರಿಕೆಯ ಸೂತ್ರಗಳು, ಹೋರಾಟ ಮಾರ್ಗದ ವಿಧಿ-ವಿಧಾನ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗೆ ಪರಿಹಾರ, ಹಾಗೆಯೇ ಅಸ್ಪಶ್ಯತೆಯ ಬಗ್ಗೆ ಗಟ್ಟಿ ನಿಲುವಿನ ಖಂಡನೆ ಮತ್ತು ಪರಿವರ್ತನೆಯ ಮಾರ್ಗ, ವಿಭಿನ್ನ ಧಾರ್ಮಿಕರ ನಡುವೆ ಸಾಮರಸ್ಯದ ಅಗತ್ಯ, ಗ್ರಾಮಗಳ ಪುನಾರಚನೆಯಲ್ಲಿ ನೈರ್ಮಲ್ಯದ ಪ್ರಧಾನ ಉದ್ದೇಶ, ನೂಲುವ ಕ್ರಿಯೆಯ ಮಹತ್ವ, ಅಂತೆಯೇ ಯಾರನ್ನೂ ದ್ವೇಷಿಸದಿರುವ ಮನೋಧರ್ಮದ ತಾತ್ವಿಕತೆಯನ್ನು ಯಾವ ಓದುಗನೂ ಗಾಂಧೀಜಿಯ ಬರಹಗಳಲ್ಲಿ ಕಾಣಬಹುದು. ಗಾಂಧಿಯವರು ತಮ್ಮ ವರ್ಧಾ ಮತ್ತು ಸಾಬರಮತಿ ಆಶ್ರಮಗಳಲ್ಲಿ ಎಲ್ಲ ಜಾತಿಯ, ಧರ್ಮಗಳ ಹಾಗೂ ಅಸ್ಪಶ್ಯರನ್ನೂ ಒಳಗೊಂಡಂತೆ ಅನುಯಾಯಿಗಳಿಗೆ ಸಹಬಾಳ್ವೆಯ ತರಬೇತಿ ದೊರೆಯುವಂತೆ ಮಾಡಿದ್ದರು. ಮನುಷ್ಯನ ಅತಿಸಹಜ ಭಾವವೇ ಪ್ರೀತಿಯೆಂದರಿತ ಗಾಂಧಿ ಆಶ್ರಮದ ಎಲ್ಲರಲ್ಲಿಯೂ ಅದರ ಸಿಂಚನದಲ್ಲಿ ಮನಸ್ಸನ್ನು ತೋಯಿಸಿದರು. ನಮಗೆ ಗಾಂಧಿಯುಗದ ಯಾವುದೇ ಹಿರಿತಲೆಯನ್ನು ಕಂಡಾಗ ಬರುವ ಭಾವನೆಯೇ ಪ್ರೀತಿಯ, ಅನುನಯದ, ದ್ವೇಷರಹಿತ, ನಿರ್ದಿಷ್ಟ ಹಾಗೂ ಕರ್ತವ್ಯನಿರತ ವ್ಯಕ್ತಿ ಸ್ವರೂಪಗಳೇ.
ಗಾಂಧಿಯವರ ನಂತರ ಪ್ರಭುತ್ವ ನಡೆಸಿದ ಕಾಂಗ್ರೆಸ್ ಸರಕಾರಗಳು ಸುಮಾರು ಎಪ್ಪತ್ತು ವರ್ಷಗಳಲ್ಲಿ ಅವರನ್ನು ಬ್ರಾಂಡ್ ಮಾಡಿ ಆ ಹೆಸರಿನ ಮರೆಯಲ್ಲಿ ಅವರು ತೀವ್ರವಾಗಿ ವಿರೋಧಿಸುತ್ತಿದ್ದ ರಾಜಕೀಯ ನೀತಿಯನ್ನು ರಾಷ್ಟ್ರ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅನುಸರಣೆ ಮಾಡಿರುವುದು ಸತ್ಯಸ್ಯ ಸತ್ಯ ಎನ್ನುವುದು ಜಗಜ್ಜಾಹೀರು. ಅದಕ್ಕೆ ಕಾರಣಗಳು ಇರುವುದು ನಿಜವಾದರೂ, ರಾಜ್ಯವ್ಯವಸ್ಥೆ ಪೂರ್ಣವಾಗಿ ಗಾಂಧಿಯವರ ಚಿಂತನ ಮಂಥನದ ಪರಿಣಾಮವಾಗಿ ಸರ್ವಜನ ಒಳಿತಿನ ಸಿದ್ಧಾಂತ: ಸರ್ವೋದಯವನ್ನು ಅಪ್ರಸ್ತುತವೆಂದು ಅಥವಾ ಅಸಂಗತವೆಂದೂ ಅನೇಕರು ತಿಳಿದಿರಬಹುದೇನೊ. ಈ ಅನುಮಾನಕ್ಕೆ ನೂರಾರು ಉದಾಹರಣೆಗಳು ದೊರೆಯುತ್ತವೆ. ಗಾಂಧೀಜಿಯ ಗ್ರಾಮಪುನಾರಚನೆಯ ಎಲ್ಲ ಪ್ರಾಯೋಗಿಕ ರೀತಿ-ನೀತಿಗಳು (ಆಡಳಿತ ವಿಕೇಂದ್ರೀಕರಣ, ಗ್ರಾಮ ಸ್ವಪರಿಪೂರ್ಣ ಉತ್ಪಾದನಾ ಘಟಕ, ನೂಲುವ, ನೇಯುವ ಕಾಯಕ, ಗ್ರಾಮ ನೈರ್ಮಲ್ಯ ಧೋರಣೆ, ಬದುಕಿನಾಶ್ರಯದ ವೃತ್ತಿಕಲಿಕೆಯ ಶಿಕ್ಷಣ, ಸ್ಥಳೀಯ ಮಾರುಕಟ್ಟೆಯ ಕೊಂಡು-ಕೊಳ್ಳುವ ಉದ್ದೇಶ, (ಪರಸ್ಪರ ಮಾನವೀಯ ಅವಲಂಬನೆ), ಕುಡಿತ ನಿಷೇಧ-ಇನ್ನೂ ಮುಂತಾದವು ಗಾಂಧಿ ಜೀವನ ದೃಷ್ಟಿಯ ಮೂಲತತ್ವಗಳಾಗಿವೆ. ಒಟ್ಟಿನಲ್ಲಿ, ಸ್ವಾತಂತ್ರ್ಯಾನಂತರ ನಾವೇ ರೂಪಿಸಿಕೊಂಡ ಸರಕಾರಗಳು ಗಾಂಧಿಯ ವಿಚಾರಗಳನ್ನು ಒಂದು ಬಗೆಯ ದಿವ್ಯ ನಿರ್ಲಕ್ಷಕ್ಕೆ ಗುರಿಮಾಡಿವೆ. ಪ್ರಸ್ತುತ ಕೇಂದ್ರ ಸರಕಾರದ ನೇತಾರ ದೇಶದ ಸ್ವಚ್ಛತೆಯನ್ನು ಕುರಿತು ಗಾಂಧಿ ಜಯಂತಿಯ ದಿನ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ನೋಡುಗರಿಗೆ ಗಾಂಧಿ ಮತ್ತೆ ಉಸಿರಾಡಿದರೇ ಎನ್ನಿಸುತ್ತದೆ! ಮಹಾತ್ಮನ ಕಾಲದ ನೈರ್ಮಲ್ಯ ಚಿಂತನೆ ಪ್ರಭುತ್ವದ ನೈರ್ಮಲ್ಯ ಕರ್ಮಚಾರಿಗಳ ಕಾರ್ಯವಾಗಿರದೆ, ಇಡೀ ಗ್ರಾಮ ಹಾಗೂ ನಗರಗಳ ಜನತೆ ಅದನ್ನು ತಮ್ಮ ಶುಚಿತ್ವದ ಕಾರ್ಯವೆಂದು ತಿಳಿಯುವ ಒಂದು ಅವಕಾಶವನ್ನು ಅವರಲ್ಲಿ ಹುಟ್ಟುಹಾಕಿತ್ತು. ಆದರೆ, ಪ್ರಸ್ತುತ ಕಾಲದ ನೈರ್ಮಲ್ಯ ‘ಬ್ರಾಂಡ್ ಮೋದಿ’ಯವರನ್ನು ಜಾಹೀರು ಮಾಡಲು, ‘ಸ್ವಚ್ಛತಾ ದಿವಸ’ ಆರಂಭಿಸಿ ಆ ಕಾರ್ಯಕ್ರಮವನ್ನು ಸರಕಾರಿ ಯಂತ್ರದ ಮುತ್ಸದ್ದಿಗಳು ಹಾಗೂ ಮೋದಿಯವರ ಹತ್ತಿರದ ಅನುಯಾಯಿಗಳು ಪೊರಕೆ ಹಿಡಿದು ಅಲ್ಲಿ-ಇಲ್ಲಿ ಗುಡಿಸಿ ತಳ್ಳುವ ಕಸವಿಲೇವಾರಿ ನೈರ್ಮಲ್ಯ ವಿಧಾನ ಹಾಗೂ ಚಿಂತನೆಯನ್ನು ದೇಶವಾಸಿಗಳ ಉತ್ತಮ ಸ್ವಾಸ್ಥ್ಯದ ಪ್ರಣಾಳಿಕೆ ಎನ್ನುವಂತಾಗಿದೆ. ಅದು ನಿಜವಾಗಿಯೂ ಗಾಂಧಿ ಮಾರ್ಗವೂ ಅಲ್ಲ; ಏಕೆಂದರೆ ನಾಯಕ ಮೋದಿಯವರಾಗಲೀ, ಇನ್ಯಾರೇ ಆಗಲೀ, ಗಾಂಧಿ ಬದುಕಿನ ಆದರ್ಶಗಳ ರೀತಿ-ನೀತಿಗಳಲ್ಲಿ ನಂಬಿಕೆಯಿಲ್ಲವೆಂದು ಹೇಳದಿದ್ದರೂ ಮೌನವಾಗಿಯೇ ಅವುಗಳನ್ನು ಪಕ್ಕಕ್ಕೆ ಸರಿಸುವುದರಲ್ಲಿ ನಿಷ್ಣಾತರಾಗಿದ್ದಾರೆ. ಅಷ್ಟೇ ಅಲ್ಲದೆ ದೇಶ ಜನಸಂಖ್ಯೆಯಲ್ಲಿ ಅಗಾಧವಾಗಿ ಬೆಳೆದಂತೆ, ಸಂಕೀರ್ಣ ಸಮಸ್ಯೆಗಳು ಒಂದು ಇನ್ನೊಂದಕ್ಕೆ ತಳಕು ಹಾಕಿಕೊಂಡಿವೆ. ಹೀಗಿರುವಾಗ ಗಾಂಧಿ ಮತ್ತು ಸರ್ವೋದಯ ಇನ್ನಿತರ ತಾತ್ವಿಕ ಚಿಂತನೆಗಳಂತೆಯೇ ನಿಷ್ಕ್ರಿಯವಾಗಿವೆ ಎಂಬ ಅಭಿಪ್ರಾಯವೂ ಅನೇಕರ ವಾದವಾಗಿದೆ.