ಆಧಾರ್‌ಗೆ ಅಡ್ಡಿಯಾದ 6ನೇ ಬೆರಳು!
ಪ್ರಪಂಚೋದ್ಯ

ಮಹಾರಾಷ್ಟ್ರದ ನಾಶಿಕ್ ನಗರದ ನಿವಾಸಿ ಗುರುದಯಾಳ್ ದಿಲ್‌ಬಗ್ರಾಯ್ ತ್ರಿಕಾ, ಆಧಾರ್ ಕಾರ್ಡ್ ಪಡೆಯುವುದಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಪ್ರತೀ ಸಲವೂ ಆಧಾರ್ ನೋಂದಣಿ ಕೇಂದ್ರಗಳು ಅವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಿವೆ. ಯಾಕೆಂದರೆ ಗುರುದಯಾಳ್ ಅವರ ಬೆರಳಚ್ಚು ಗುರುತುಗಳನ್ನು ಪಡೆಯಲು ಅಧಿಕಾರಿಗಳಿಗೆ ಸಾಧ್ಯವಾಗದೆ ಇರುವುದರಿಂದ ಅವರಿಗೆ ಆಧಾರ್ ನೀಡಲು ನಿರಾಕರಿಸುತ್ತಿದ್ದಾರೆ.
ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವಾಗ, ಅರ್ಜಿದಾರರು ತಮ್ಮ ಎರಡೂ ಕೈಗಳ ಬೆರಳಚ್ಚುಗಳನ್ನು ನೀಡಬೇಕಾಗುತ್ತದೆ ಆದರೆ ಗುರುದಯಾಳ್‌ರ ಎಡಗೈಯಲ್ಲಿ ಆರು ಬೆರಳುಗಳಿವೆ ಮಾತ್ರವಲ್ಲ, ಈ ಹೆಚ್ಚುವರಿ ಬೆರಳು ಹೆಬ್ಬೆರಳಿನ ಜೊತೆ ಅಂಟಿಕೊಂಡಿರುವುದರಿಂದ ಅಧಾರ್ ನೋಂದಣಿ ಮಾಡುವಾಗ ಹೆಬ್ಬೆರಳಿನ ಗುರುತು ಸಂಗ್ರಹಿಸುವುದು ಸಿಬ್ಬಂದಿಗೆ ಕಷ್ಟಕರವಾಗಿದೆ. ತಾನು ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ತನ್ನ ಸಮಸ್ಯೆಯನ್ನು ಹೇಳಿಕೊಂಡರೂ ಯಾವುದೇ ಪ್ರಯೋಜನ ವಾಗಲಿಲ್ಲವೆಂದು ಗುರುದಯಾಳ್ ಹೇಳಿದ್ದಾರೆ.
ಮಾಧ್ಯಮಗಳು, ಸುದ್ದಿಪತ್ರಿಕೆಗಳು ಆಧಾರ್‌ವಂಚಿತ ಗುರುದಯಾಳ್‌ನ ವಿಶಿಷ್ಟ ಪ್ರಕರಣವನ್ನು ವರದಿ ಮಾಡಿದ್ದರಿಂದ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡರು. ಕೊನೆಗೂ ಆತ ಆಧಾರ್‌ಗಾಗಿ ತನ್ನ ಹೆಸರನ್ನು ನೋಂದಣಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ. ನಾಸಿಕ್‌ನ ನೋಂದಣಿ ಕೇಂದ್ರವೊಂದರಲ್ಲಿ ಅಧಿಕಾರಿಗಳ ವಿಶೇಷ ಸೂಚನೆಯಂತೆ ಆತನ ಬೆರಳಚ್ಚುಗಳನ್ನು ದಾಖಲಿಸಲಾಯಿತು.
ಆದಾಗ್ಯೂ ತನ್ನಂತೆ ದೇಶಾದ್ಯಂತ ಇಂತಹ ವೈಕಲ್ಯಗಳಿಂದಾಗಿ ಆಧಾರ್ ಪಡೆಯಲು ಸಾಧ್ಯವಾಗದ ಸಾವಿರಾರು ಮಂದಿಯಿರಬಹುದೆಂದು ಗುರುದಯಾಳ್ ಸಂದೇಹ ವ್ಯಕ್ತಪಡಿಸಿದ್ದಾರೆ ಹಾಗೂ ಇಂತಹ ಪ್ರಕರಣಗಳಲ್ಲಿ ಸರಕಾರವು ತನ್ನ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.