159 ಸಲ ರಕ್ತದಾನ: ಶಬೀರ್ ದಾಖಲೆ
ಪ್ರಪಂಚೋದ್ಯ

ಶ್ರೀನಗರದ ನಿವಾಸಿ 55 ವರ್ಷ ವಯಸ್ಸಿನ ಶಬೀರ್ ಹುಸೈನ್ ಖಾನ್ ಅವರು ಕಾಶ್ಮೀರದ ‘ರಕ್ತ ಮಾನವ’ ಎಂದೇ ಜನಪ್ರಿಯರಾಗಿದ್ದಾರೆ. ಅದಕ್ಕೊಂದು ಕಾರಣವೂ ಇದೆ. ಅವರು ಈತನಕ 159 ಸಲ ರಕ್ತದಾನ ಮಾಡಿದ್ದಾರೆ ಹಾಗೂ ಈ ಉದಾತ್ತಕಾರ್ಯವನ್ನು ಇನ್ನು ಕೂಡಾ ಮುಂದುವರಿಸಲು ಬಯಸಿದ್ದಾರೆ. ‘ಒ ಪಾಸಿಟಿವ್’ ರಕ್ತಗುಂಪಿನವರಾದ ಶಬೀರ್, ತನ್ನ 18ನೆ ವರ್ಷದಿಂದೀಚೆಗೆ ರಕ್ತದಾನ ಮಾಡುತ್ತಿದ್ದರು. 1980ನೇ ಇಸವಿಯಲ್ಲಿ ಅವರ ಸ್ನೇಹಿತನಾದ ಫುಟ್ಬಾಲ್ ಆಟಗಾರರೊಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವವಾಗಿದ್ದ ಆತನನ್ನು ಬದುಕಿಸಲು ಶಬೀರ್ ರಕ್ತದಾನ ಮಾಡಿದ್ದರು. ಅಂದು ಆರಂಭಗೊಂಡ ಶಬೀರ್ ಅವರ ರಕ್ತದಾನದ ಕಾರ್ಯವು, ಈಗಲೂ ಮುಂದುವರಿದಿದೆ. ಕಳೆದ ಗುರುವಾರ ಅವರು 159ನೇ ಬಾರಿಗೆ ರಕ್ತದಾನ ಮಾಡಿದ್ದರು. ಈವರೆಗೆ ಶಬೀರ್ ಎಂದಿಗೂ ತನ್ನ ರಕ್ತದಾನಕ್ಕಾಗಿ ಒಂದು ನಯಾ ಪೈೆ ಹಣವನ್ನು ಕೂಡಾ ಪಡೆದಿಲ್ಲವಂತೆ.
ಕಳೆದ 38 ವರ್ಷಗಳಲ್ಲಿ ಶಬೀರ್, ಒಟ್ಟು 55 ಲೀಟರ್ ರಕ್ತದಾನ ಮಾಡಿದ್ದಾರೆ. ಪ್ರತೀ ಮೂರು ತಿಂಗಳಿಗೊಮ್ಮೆ ತಪ್ಪದೆ ರಕ್ತದಾನ ಮಾಡುತ್ತಿರುವ ಅವರಿಗೆ ತನ್ನ ಈ ಉದಾತ್ತ ಕಾರ್ಯದಿಂದ ಹಲವಾರು ಜೀವಗಳು ಬದುಕುಳಿದಿರುವ ಬಗ್ಗೆ ಸಂತೃಪ್ತಿಯಿದೆ. ರಕ್ತದಾನವನ್ನು ಮುಂದುವರಿಸಿಕೊಂಡು ಹೋಗುವಂತೆ ತನಗೆ ಸ್ನೇಹಿತರು ಹಾಗೂ ವೈದ್ಯರು ಉತ್ತೇಜನ ನೀಡುತ್ತಿದ್ದಾರೆಂದು ಶಬೀರ್ ಹೇಳುತ್ತಾರೆ. 65 ವರ್ಷ ವಯಸ್ಸಿನವರೆಗೂ ರಕ್ತದಾನ ಮಾಡುವುದನ್ನು ಮುಂದುವರಿಸುವುದಾಗಿ ಶಬೀರ್ ಹೇಳುತ್ತಾರೆ.