ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದೆಯೇ?
5, 8ನೇ ತರಗತಿಗಳಲ್ಲಿ ವಿದ್ಯಾರ್ಥಿಗಳ ಅನುತ್ತೀರ್ಣತೆ ಪ್ರಸ್ತಾಪ

ಭಾಗ-1
ಎರಡು ವರ್ಷಗಳ ಸುದೀರ್ಘ ಚರ್ಚೆಯ ಬಳಿಕ ಕಳೆದ ವರ್ಷದ ಆಗಸ್ಟ್‌ನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆಯಾದರೂ, ಅದನ್ನು ಸಂಸದೀಯ ಸ್ಥಾಯಿ ಸಮಿತಿಯ ಪ್ರಸ್ತಾವನೆಗೆ ಒಪ್ಪಿಸಲಾಗಿದೆ. ಬಿಜೆಪಿಯ ರಾಜ್ಯಸಭೆಯ ಸದಸ್ಯರಾದ ಸತ್ಯನಾರಾಯಣ್ ಜಾತಿಯಾ ನೇತೃತ್ವದ ಸಮಿತಿಯು ಫೆಬ್ರವರಿ 9ರಂದು ಸಂಸತ್‌ನ ಉಭಯ ಸದನಗಳಲ್ಲಿ ಅದನ್ನು ಮಂಡಿಸಿತ್ತು. ಕೊನೆಗೂ ಈ ವಿಧೇಯಕಕ್ಕೆ ಅದರ ಹಾಲಿ ರೂಪದಲ್ಲಿ ಅನುಮೋದನೆ ನೀಡಲಾಗಿದೆ.
5 ಹಾಗೂ 8ನೇ ತರಗತಿಗಳ ಮಕ್ಕಳನ್ನು ಒಂದು ವೇಳೆ ಅವರು ನಿರೀಕ್ಷಿತ ಕಲಿಕಾ ಮಾನದಂಡಗಳನ್ನು ಈಡೇರಿಸದೆ ಇದ್ದಲ್ಲಿ ಅವರನ್ನು ಅನುತ್ತೀರ್ಣಗೊಳಿಸುವ ಆಯ್ಕೆಯನ್ನು ಶೀಘ್ರದಲ್ಲೇ ಭಾರತದ ರಾಜ್ಯಗಳು ಹೊಂದಲಿವೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆಯಡಿ ಜಾರಿಗೆ ತರಲಾದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸದಿರುವ ನೀತಿಯನ್ನು ಕೈಬಿಡುವ ಪ್ರಸ್ತಾಪಕ್ಕೆ ಸಂಸದೀಯ ಸ್ಥಾಯಿ ಸಮಿತಿಯು ಅನುಮೋದನೆ ನೀಡಿದೆ. ಪ್ರಾಥಮಿಕ ಶಾಲೆಯಲ್ಲಿ (1ರಿಂದ 8ನೇ ತರಗತಿಗಳು) ಕಲಿಕೆಯಲ್ಲಿ ಕಳಪೆ ನಿರ್ವಹಣೆ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಪದ್ಧತಿಯನ್ನು ನಿಷೇಧಿಸುವ ಈ ನೀತಿಯನ್ನು, ಮಕ್ಕಳು ಶಾಲೆಯನ್ನು ಅರ್ಧದಲ್ಲಿ ತ್ಯಜಿಸದಂತೆ ತಡೆಯುವುದನ್ನು ಖಾತರಿಪಡಿಸುವ ಉದ್ದೇಶದಿಂದ 2009ರಲ್ಲಿ ಜಾರಿಗೆ ತರಲಾಗಿತ್ತು.
ಎರಡು ವರ್ಷಗಳ ಸುದೀರ್ಘ ಚರ್ಚೆಯ ಬಳಿಕ ಕಳೆದ ವರ್ಷದ ಆಗಸ್ಟ್‌ನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆಯಾದರೂ, ಅದನ್ನು ಸಂಸದೀಯ ಸ್ಥಾಯಿ ಸಮಿತಿಯ ಪ್ರಸ್ತಾವನೆಗೆ ಒಪ್ಪಿಸಲಾಗಿದೆ. ಬಿಜೆಪಿಯ ರಾಜ್ಯಸಭೆಯ ಸದಸ್ಯರಾದ ಸತ್ಯನಾರಾಯಣ್ ಜಾತಿಯಾ ನೇತೃತ್ವದ ಸಮಿತಿಯು ಫೆಬ್ರವರಿ 9ರಂದು ಸಂಸತ್‌ನ ಉಭಯ ಸದನಗಳಲ್ಲಿ ಅದನ್ನು ಮಂಡಿಸಿತ್ತು. ಕೊನೆಗೂ ಈ ವಿಧೇಯಕಕ್ಕೆ ಅದರ ಹಾಲಿ ರೂಪದಲ್ಲಿ ಅನುಮೋದನೆ ನೀಡಲಾಗಿದೆ.
5 ಹಾಗೂ 8ನೇ ತರಗತಿಯ ಕೊನೆಗೆ ನಿಯಮಿತವಾದ ಪರೀಕ್ಷೆಗಳನ್ನು ನಡೆಸಲು ಈ ವಿಧೇಯಕವು ರಾಜ್ಯಗಳಿಗೆ ಅವಕಾಶ ನೀಡುತ್ತದೆ. ಒಂದು ವೇಳೆ ಮಗುವು ಪರೀಕ್ಷೆಯಲ್ಲಿ ಅನುತ್ತೀರ್ಣನಾದಲ್ಲಿ ಅವರಿಗೆ ಹೆಚ್ಚುವರಿ ಶಿಕ್ಷಣವನ್ನು ನೀಡಲಾಗುವುದು ಹಾಗೂ ಪರೀಕ್ಷಾ ಫಲಿತಾಂಶದ ಘೋಷಣೆಯ ದಿನಾಂಕದಿಂದ ಎರಡು ತಿಂಗಳುಗಳ ಅವಧಿಯೊಳಗೆ ಮರುಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗುವುದು. ಒಂದು ವೇಳೆ ವಿದ್ಯಾರ್ಥಿಯು ಮರು ಪರೀಕ್ಷೆಯಲ್ಲಿಯೂ ತೇರ್ಗಡೆಯಾಗದಿದ್ದಲ್ಲಿ, ಅದು ಮುಂದಿನ ತರಗತಿಗೆ ಹೋಗುವುದನ್ನು ತಡೆಹಿಡಿಯಲಾಗುವುದು.
ಗಣನೀಯ ಸಂಖ್ಯೆಯ ಶಾಲಾ ಮಕ್ಕಳಲ್ಲಿ ಕಲಿಕಾ ಮಟ್ಟವು ತೀರಾ ಕಳಪೆಯಾಗಿರುವುದು ಸಾರ್ವಜನಿಕ ಹಾಗೂ ಖಾಸಗಿ ವೌಲ್ಯಮಾಪನ ಪರೀಕ್ಷೆಗಳಲ್ಲಿ ಪತ್ತೆಯಾಗಿದೆ. ಇದೊಂದು ಅತ್ಯಂತ ಗಂಭೀರ ಕಳವಳಕ್ಕೆ ಕಾರಣವಾದ ವಿಷಯವೆಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. ಅನುತ್ತೀರ್ಣಗೊಳಿಸದೆ ಇರುವ ನೀತಿಯಿಂದ ಅತ್ಯಂತ ಮಕ್ಕಳಿಗೆ ಕಲಿಯುವ ಅಥವಾ ಶಿಕ್ಷಕರಿಗೆ ಕಲಿಸುವ ಒತ್ತಡವು ಇರುವುದಿಲ್ಲವೆಂಬ ಜನಜನಿತವಾದ ನಂಬಿಕೆಯನ್ನು ಸಮಿತಿಯು ತನ್ನ ವರದಿಯಲ್ಲಿ ಪುನರುಚ್ಚರಿಸಿದೆ. ಹೀಗಾಗಿ ಈ ನೀತಿಯನ್ನು ಬದಲಾಯಿಸುವ ಅಗತ್ಯವಿದೆಯೆಂದು ಅದು ಪ್ರತಿಪಾದಿಸಿದೆ. ಪ್ರಸ್ತಾಪಿತ ತಿದ್ದುಪಡಿಯಿಂದಾಗಿ ವಿದ್ಯಾರ್ಥಿಗಳ ತೇರ್ಗಡೆಯನ್ನು ತಡೆಹಿಡಿಯುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ರಾಜ್ಯಗಳಿಗೆ ಅವಕಾಶ ನೀಡಲಿದೆಯೆಂದು ತಿಳಿಸಿರುವ ಸಮಿತಿಯು, ಈ ಕುರಿತಾಗಿ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಮಾನ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವಂತೆ ಸೂಚನೆ ನೀಡಿದೆ.
ಆದಾಗ್ಯೂ, ಸಮಿತಿಯು ಸಮಾಲೋಚನೆ ನಡೆಸಿದ್ದ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಿಂದ ಈ ಬಗ್ಗೆ ಸಮ್ಮಿಶ್ರ ಪ್ರತಿಕ್ರಿಯೆ ಲಭಿಸಿದೆ. ಇವರಲ್ಲಿ ಕೆಲವರು ವರದಿಯಲ್ಲಿ ಪ್ರಸ್ತಾಪಿಸಿದ ಕೆಲವು ನಿಯಮಗಳನ್ನು ವಿರೋಧಿಸಿದ್ದರೆ, ಇನ್ನು ಕೆಲವರು ಅಂತಿಮ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಕೇವಲ ಎರಡು ತಿಂಗಳ ಕಾಲಾವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಶಾಲಾ ಹಾಜರಾತಿ ಹಾಗೂ ಶಾಲಾಡಳಿತದ ದಕ್ಷತೆಯಂತಹ ಅಂಶಗಳನ್ನು ಕೂಡಾ ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.
ಸಚಿವಾಲಯಗಳು ಹಾಗೂ ರಾಜ್ಯ ಸರಕಾರಗಳು
ತಿದ್ದುಪಡಿಯ ಕುರಿತ ಸಂಪುಟದ ಟಿಪ್ಪಣಿಯನ್ನು ನೀತಿ ಆಯೋಗವು ವಿತ್ತ ಸಚಿವಾಲಯ, ಕಾನೂನು ಹಾಗೂ ಸಾಮಾಜಿಕ ನ್ಯಾಯ ಸಚಿವಾಲಯ, ಮಹಿಳಾ ಹಾಗೂ ಶಿಶುಕಲ್ಯಾಣ ಸಚಿವಾಲಯ, ಕಾರ್ಮಿಕ ಹಾಗೂ ಉದ್ಯೋಗ, ಬುಡಕಟ್ಟು ವ್ಯವಹಾರ ಸಚಿವಾಲಯ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಹಾಗೂ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯಗಳು ಹಾಗೂ ಪ್ರಧಾನಿ ಕಾರ್ಯಾಲಯದ ಜೊತೆ ಹಂಚಿಕೊಂಡಿದೆ.
ಅಸ್ಸಾಂ, ಮೇಘಾಲಯ, ಸಿಕ್ಕಿಂ, ಮಿರೆರಾಂ ಹಾಗೂ ಮಣಿಪುರ ರಾಜ್ಯಗಳ ಸರಕಾರಗಳು ಹೆಚ್ಚು ಕಡಿಮೆ ಈ ಬಗ್ಗೆ ಸಹಮತ ವ್ಯಕ್ತಪಡಿಸಿವೆ.
2015ರ ಆಗಸ್ಟ್‌ನಲ್ಲಿ ಕೇವಲ 6 ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಿದ್ಯಾರ್ಥಿಗಳ ತೇರ್ಗಡೆಯನ್ನು ತಡೆಹಿಡಿಯುವ ಯಾವುದೇ ನೀತಿಯನ್ನು ಜಾರಿಗೆ ತರದಂತೆ ಆಗ್ರಹಿಸಿದ್ದವು. ‘‘ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಶಿಕ್ಷಣದ ಹಕ್ಕು ಕಾಯ್ದೆಯಲ್ಲಿನ ವಿದ್ಯಾರ್ಥಿಗಳ ತೇರ್ಗಡೆಯನ್ನು ತಡೆಹಿಡಿಯುವ ಕುರಿತ ಕಾನೂನಿನಲ್ಲಿ ಬದಲಾವಣೆ ಮಾಡಲು, ಪರಾಮರ್ಶಿಸಲು ಅಥವಾ ಹಿಂಪಡೆಯಲು ಒಲವು ಹೊಂದಿವೆ’’ ಎಂದು ವರದಿ ತಿಳಿಸಿದೆ.
8ನೇ ತರಗತಿಯವರೆಗೆ ವಿದ್ಯಾರ್ಥಿಗಳು ಯಾಂತ್ರಿಕವಾಗಿ ತೇರ್ಗಡೆ ಯಾಗುವುದರಿಂದ 10ನೇ ತರಗತಿಯಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ ಅನಿಲ್ ಸ್ವರೂಪ್ ಅಭಿಪ್ರಾಯಿಸಿದ್ದಾರೆ.
ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ (ಎನ್‌ಸಿಆರ್‌ಟಿ)
ಶಾಲಾಪಠ್ಯ ಕುರಿತ ದೇಶದ ಅತ್ಯುನ್ನತ ಸಲಹಾ ಸಂಸ್ಥೆಯಾದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ (ಎನ್‌ಸಿಆರ್‌ಟಿ) ಸಂಸ್ಥೆಯು, ಸಮಗ್ರ ವೌಲ್ಯಮಾಪನದ ಅಗತ್ಯವನ್ನು ಪ್ರತಿಪಾದಿಸಿತ್ತು. ಈ ವ್ಯವಸ್ಥೆಯಡಿ ಮಾತ್ರವಲ್ಲದೆ ಶಿಕ್ಷಣದ ಹಕ್ಕುಕಾಯ್ದೆಯು ಪ್ರತಿಪಾದಿಸಿರುವಂತೆ, ಒಂದು ಮಗುವಿನ ಶೈಕ್ಷಣಿಕ ಪ್ರಗತಿಯನ್ನು ಏಕೈಕ ವರ್ಷಾವಧಿಯ ಪರೀಕ್ಷೆಯಲ್ಲಿ ಅಳೆಯುವ ಬದಲು, ವರ್ಷವಿಡೀ ಅದನ್ನು ಪರಿಶೀಲನೆಗೊಳಪಡಿಸಬೇಕೆಂದು ಅದು ಅಭಿಪ್ರಾಯಿಸಿದೆ.
ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಆಯೋಗವು 5 ಹಾಗೂ 8ನೇ ತರಗತಿಯ ಮಕ್ಕಳ ಕಲಿಕೆಯ ವೌಲ್ಯಮಾಪನವನ್ನು ಬೆಂಬಲಿಸಿತ್ತಾದರೂ, ಅವರ ತೇರ್ಗಡೆಗೆ ತಡೆ ವಿಧಿಸುವುದನ್ನು ವಿರೋಧಿಸಿತ್ತು.
‘‘5ನೇ ತರಗತಿಯ ಮಗುವಿನಲ್ಲಿ ಆತ್ಮವಿಶ್ವಾಸ ಮೂಡಿದಾಗ ಅದಕ್ಕೆ ಮರುಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಮತ್ತು ಅದು 8ನೇ ತರಗತಿಗೆ ತಲುಪುವ ತನಕವೂ ಎಷ್ಟು ಸಲ ಬೇಕಾದರೂ ಪರೀಕ್ಷೆಗೆ ಬರೆಯಲು ಅವಕಾಶ ನೀಡಬೇಕು’’ ಎಂದು ಆಯೋಗವು ಸಲಹೆ ನೀಡಿದೆ. ಇನ್ನು 8ನೇ ತರಗತಿಯ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವ ಬದಲು ಆತನಿಗೆ/ಆಕೆಗೆ ಎರಡು ವರ್ಷಗಳ ಕಾಲ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬೇಕೆಂದು ಅದು ವಾದಿಸಿತ್ತು.
ಕಾಯ್ದೆಯ ಅನುಷ್ಠಾನವನ್ನು ಜಾರಿಗೊಳಿಸದೆ ಇರುವ, ಶಾಲೆಗಳಲ್ಲಿ ಮೂಲ ಸೌಕರ್ಯದ ನ್ಯೂನತೆಗಳು ಹಾಗೂ ಶಿಕ್ಷಣ ಅಲಭ್ಯತೆಗೆ ಸಂಬಂಧಿಸಿದ ದೂರುಗಳನ್ನು ತಾನು ಸ್ವೀಕರಿಸಿರುವುದಾಗಿ ಆಯೋಗವು ಸ್ಥಾಯಿ ಸಮಿತಿಗೆ ತಿಳಿಸಿತ್ತು.
ಪ್ರಾಥಮಿಕ ಶಿಕ್ಷಣ ಮಟ್ಟದಲ್ಲಿ ಸಮಗ್ರ ಹಾಗೂ ನಿರಂತರ ವೌಲ್ಯ ಮಾಪನವನ್ನು ಜಾರಿಗೊಳಿಸಲು ಹಾಗೂ ಬಲಪಡಿಸಲು, ಪ್ರತಿಯೊಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಶಿಕ್ಷಕರಿಗೆ ತರಬೇತಿ ನೀಡಲು ಸಂಯೋಜಿತ ಪ್ರಯತ್ನಗಳನ್ನು ನಡೆಸುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಮಿತಿಯು ಶಿಫಾರಸು ಮಾಡಿತ್ತು.
ಕೃಪೆ: scroll.in