ಡಿ.ಸಿ.ತಮ್ಮಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ: ಆರ್.ಧ್ರುವನಾರಾಯಣ್

ಮದ್ದೂರು, ಫೆ.21: ತಾಲೂಕಿನಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರ ವಿರೋಧಿ ಅಲೆಯಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಂಸದ ಆರ್.ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಸಂಬಂಧ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮಣ್ಣ ಅವರನ್ನು ಸೋಲಿಸುವುದೇ ಕ್ಷೇತ್ರದ ಮುಖಂಡರ ಗುರಿಯಾಗಿದೆ ಎಂದರು. ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲಿಸುವ ಮೂಲಕ ಡಿ.ಸಿ.ತಮ್ಮಣ್ಣ ಅವರನ್ನು ಸೋಲಿಸುವುದಾಗಿ ಮುಖಂಡರು ಮುಖ್ಯ ಗುರಿಯಾಗಿಟ್ಟುಕೊಂಡಿದ್ದಾರೆ ಎಂದು ಅವರು ಹೇಳಿದರು.
ಸಮಾಜದ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಜಾರಿಗೊಳಿಸಿದ್ದು, ಜನರು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಶಾಸಕರಾದ ಮಧು ಜಿ.ಮಾದೇಗೌಡ, ಕಲ್ಪನಾ ಸಿದ್ದರಾಜು, ಡಾ.ಮಹೇಶ್‍ಚಂದ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಟಿಕೆಟ್‍ಗಾಗಿ ಮನವಿ ಸಲ್ಲಿಸಿದರು. ವೀಕ್ಷಕರಾದ ಹನುಮಂತಪ್ಪ, ಮನ್ಸೂರ್ ಅಲಿಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಇತರ ಮುಖಂಡರು ಉಪಸ್ಥಿತರಿದ್ದರು.