ಹುಲಿ ಸಂರಕ್ಷಿತಾರಣ್ಯದಲ್ಲಿ ಅರಣ್ಯ ಸಂಪತ್ತಿನ ಲೂಟಿ: ಅರಣ್ಯಾಧಿಕಾರಿಗಳೇ ಶಾಮೀಲು; ಆರೋಪ
.jpg)
ಚಿಕ್ಕಮಗಳೂರು, ಮಾ.2: ಜಿಲ್ಲೆಯ ಭ್ರದಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಅರಣ್ಯ ಸಂಪತ್ತು ಹಾಡು ಹಗಲೇ ಮರಗಳ್ಳರ ಪಾಲಾಗುತ್ತಿದ್ದರೂ ಕ್ರಮವಹಿಸಬೇಕಾದ ಅರಣ್ಯ ಇಲಖಾಧಿಕಾರಿಗಳು ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಕಣ್ಮುಚ್ಚಿ ಕುಳಿತ್ತಿದ್ದಾರೆಂದು ಪರಿಸರ ಪ್ರೇಮಿಗಳು, ವನ್ಯ ಜೀವಿ ಹೋರಾಟಗಾರರು ಆರೋಪಿಸಿದ್ದಾರೆ.
ಜಿಲ್ಲೆಯ ಶೃಂಗೇರಿ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಬಾಳೆಹೊನ್ನೂರು ಹೋಬಳಿ ಹೆಬ್ಬೆ ವನ್ಯಜೀವಿ ಅರಣ್ಯ ವಲಯದಲ್ಲಿ ಭಾರೀ ಬೆಲೆ ಬಾಳುವ ಮರಗಳ್ಳರು ಪ್ರತಿದಿನ ಹಗಲು ರಾತ್ರಿಯನ್ನದೇ ರಾಜಾರೋಷವಾಗಿ ಕಡಿದು ಸಾಗಿಸುತ್ತಿದ್ದಾರೆ. ಇಲ್ಲಿನ ಅರಣ್ಯದಲ್ಲಿರುವ ಬೀಟೆ, ಹೊನ್ನೆ, ತೇಗದ ಮರಗಳೂ ಸೇರಿದಂತೆ ಕಾಡು ಜಾತಿಯ ಬೆಲೆ ಬಾಳುವ ಮರಗಳು ಮರಗಳ್ಳರ ಪಾಲಾಗುತ್ತಿವೆ. ಈ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಗಸ್ತು ತಿರುಗುತ್ತಿದ್ದರೂ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಈ ದಂಧೆ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದರೂ ಅರಣ್ಯ ಸಿಬ್ಬಂದಿ ಗಮನಕ್ಕೆ ಬರುತ್ತಿಲ್ಲ. ಇಲಾಖಾಧಿಕಾರಿಗಳು ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯ ಪರಿಸರ ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಒಂದು ವಾರದಲ್ಲಿ ಇಲ್ಲಿನ ಅರಣ್ಯದಲ್ಲಿ ನೂರಾರು ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಲಾಗಿದೆ. ಬೀಟೆ, ತೇಗ, ಹೊನ್ನೆ, ನೇರಳೆ, ಹಲಸು ಮತ್ತಿತರ ಕಾಡು ಮಗಳನ್ನು ಕಡಿದಿರುವುದಕ್ಕೆ ಸಾಕ್ಷಿಯಾಗಿ ಮರದ ಬಡ್ಡೆಗಳೇ ಸಾಕ್ಷಿ. ಪ್ರತಿದಿನ ಈ ಭಾಗದಲ್ಲಿ ಬೆಲೆ ಬಾಳುವ ಮರಗಳು ಕಣ್ಮರೆಯಾಗುತ್ತಿವೆ. ಶೃಂಗೇರಿ ಅರಣ್ಯ ವಲಯ ವ್ಯಾಪ್ತಿಯ ಇಲಾಖಾಧಿಕಾರಿಗಳೇ ಅರಣ್ಯ ಸಂಪತ್ತಿನ ಲೂಟಿಯಲ್ಲಿ ಶಾಮೀಲಾಗಿದ್ದಾರೆಂದು ಸ್ಥಳೀಯ ಗ್ರಾಮಸ್ಥರು ಬೊಟ್ಟು ಮಾಡುತ್ತಿದ್ದು, ಶೃಂಗೇರಿ ಅರಣ್ಯ ಇಲಾಖೆಯ ಅರಣ್ಯಾಧಿಕಾರಿಗಳು ಅರಣ್ಯ ಸಿಬ್ಬಂದಿಗಳಿಂದಲೇ ಮರಗಳನ್ನು ಕಡಿಸಿದ್ದಾರೆ. ಹೀಗೆ ಕಡಿದ ಮರಗಳನ್ನು ಮನೆಗಳ ನಿರ್ಮಾಣ, ಪೀಠೋಪಕರಣಗಳ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಈ ಹುಲಿ ಯೋಜನೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹುಲಿ, ಚಿರತೆ, ಜಿಂಕೆ, ಕಾಡಾನೆ, ಕಾಡು ಕೋಣ ಸೇರಿದಂತೆ ಅಪರೂಪದ ವನ್ಯಜೀವಿಗಳಿವೆ. ಪ್ರತಿನಿತ್ಯ ಅರಣ್ಯ ಲೂಟಿಕೋರರು ಕಾಡಿನಲ್ಲಿ ತಿರುಗುವುದರಿಂದ ಹಾಗೂ ಮರಗಳ ಮಾರಣಹೋಮದಿಂದಾಗಿ ಈ ವನ್ಯಜೀವಿಗಳ ಸ್ವಚ್ಚಂದ ಬದುಕಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಕಾಡುಗಳ್ಳರ ಹಾವಳಿಯಿಂದಾಗಿ ಅರಣ್ಯಕ್ಕೆ ಬೆಂಕಿ ಬೀಳುವ ಸಾಧ್ಯತೆಯೂ ಹೆಚ್ಚಿದ್ದು ಸಂಬಂಧಿಸಿದ ಹಿರಿಯ ಅರಣ್ಯಾಧಿಕಾರಿಗಳು ಇತ್ತ ಗಮನ ಹರಿಸಿ ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಸೂಕ್ತ ಕ್ರಮ ವಹಿಸಬೇಕು. ಕಳೆದ ಒಂದು ವಾರದಿಂದ ಮರಗಳನ್ನು ಕಡಿದು ಸಾಗಿಸಿರುವ ಮರಗಳ್ಳರನ್ನು ಶೀಘ್ರ ಬಂಧಿಸಿ, ಇಲಾಖಾಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ತನಿಖೆ ನಡೆಸಬೇಕೆಂದು ಹುಲಿ ಯೋಜನೆ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಪರಿಸರ ಹೋರಾಟಗಾರರು ಆಗ್ರಹಿಸಿದ್ದಾರೆ.