ಖಾಲಿಸ್ತಾನ ಅಧ್ಯಕ್ಷನ ಕೈರುಚಿ ಸವಿದ ಆ ಕ್ಷಣ...
ಪತ್ರಕರ್ತರೊಬ್ಬರ ನೆನಪಿನಾಳದಿಂದ...

ಅವರ ವರ್ತನೆಯನ್ನು ನೋಡಿದಾಗ ಅಷ್ಟೊಂದು ಪ್ರಬಲ ಚಳವಳಿಯ ನೇತೃತ್ವ ವಹಿಸಿದ್ದ ವ್ಯಕ್ತಿ ಎನ್ನುವ ಯಾವ ಪುರಾವೆಯೂ ಸಿಗಲಿಲ್ಲ. ಅರುವತ್ತರ ಆಸುಪಾಸಿನ ಆಜಾನುಬಾಹು, ಬೂದುಬಣ್ಣದ ರುಮಾಲು ಹಾಗೂ ಬಿಳಿ ನಿಲುವಂಗಿಯೊಂದಿಗೆ ಪ್ರತ್ಯಕ್ಷವಾಗಿದ್ದರು. ಆ ಏಕಾಂಗಿ ವ್ಯಕ್ತಿ ಕಳೆದುಹೋದ ಕಾರಣದ ಫ್ಯಾಂಟಸಿಯನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದರು.
ಕೆನಡಾ ಪ್ರಧಾನಿ ಜೆಸ್ಟಿನ್ ತ್ರುದೇವ್ ಭಾರತ ಭೇಟಿಯ ರಾಜತಾಂತ್ರಿಕ ಸಾಧನೆ ಹಾಗೂ ವೈಫಲ್ಯಗಳ ಬಗ್ಗೆ ಇನ್ನೂ ಸ್ಪಷ್ಟಚಿತ್ರಣ ಸಿಕ್ಕಿಲ್ಲ. ಆದರೆ ಇದು ರಾಜಪ್ರಭುತ್ವಕ್ಕಿಂತ ಹೆಚ್ಚಾಗಿ ಗೊಂದಲದ ಗೂಡಾಗಿಯೇ ಬಿಂಬಿತವಾಗಿದೆ. ಅನಪೇಕ್ಷಿತ ಪರಿಣಾಮ ಮಾತ್ರ ದೊಡ್ಡದು ಹಾಗೂ ಸ್ಪಷ್ಟ. ಸುದೀರ್ಘ ಕಾಲದಿಂದ ಮರೆಯಾಗಿದ್ದ ಖಾಲಿಸ್ತಾನದ ಭೂತ ಮಾತ್ರ ಪಂಜಾಬಿಗಳ ನೆನಪಿನಂಗಳದಲ್ಲಿ ಮತ್ತೆ ತಲೆಯೆತ್ತಿದೆ.
ಕೆ- ಶಬ್ದವನ್ನು ನೆನಪಿಸಿಕೊಂಡ ತಕ್ಷಣ (ಸಾಮಾನ್ಯವಾಗಿ ಕಾಶ್ಮೀರ ಎಂಬ ಅರ್ಥವಲ್ಲ) ಸಹಜವಾಗಿಯೇ 22 ವರ್ಷಗಳ ಹಿಂದಿನ ನೆನಪಿನಾಳಕ್ಕೆ ಇಳಿಯಬೇಕಾಗುತ್ತದೆ. ಖಾಲಿಸ್ತಾನದ ಮೂಲ ಹಾಗೂ ಪ್ರಧಾನ ಪ್ರತಿಪಾದಕ ಡಾ.ಜಗಜೀತ್ ಸಿಂಗ್ ಚೌಹಾನ್ ಅವರ ಲಂಡನ್ ಅಡಗುದಾಣದಲ್ಲಿ ಅವರ ಭೇಟಿಯ ಸುತ್ತ ಹೊರಳುತ್ತದೆ.
ಗಡಿರಾಜ್ಯದಲ್ಲಿ ಎಡೆಬಿಡದ ಚಟುವಟಿಕೆಯಿಂದ ಇದ್ದ ಚೌಹಾಣ್ ಬಗೆಗಿನ ಕಥೆಗಳನ್ನು ಓದುತ್ತಾ ಕೇಳುತ್ತಾ ಬೆಳೆದವರೇ ಹೆಚ್ಚು. ಖಾಲಿಸ್ತಾನದ ಕಾಲ್ಪನಿಕ ಸರಕಾರದ ಸ್ವಯಂಘೋಷಿತ ಅಧ್ಯಕ್ಷ ತಲೆಮರೆಸಿಕೊಂಡು ಬ್ರಿಟನ್ ರಾಜಧಾನಿಯನ್ನು ಕೇಂದ್ರ ಸ್ಥಾನವಾಗಿ ಮಾಡಿಕೊಂಡಿದ್ದರು.
ಹೋಶಿಯಾರ್‌ಪುರದ ತಾಂಡ ಎಂಬಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಚೌಹಾಣ್, ಪಂಜಾಬ್ ರಾಜಕೀಯಕ್ಕೆ ಧುಮುಕಿ, ಸಚಿವರಾಗಿ, ಉಪಸ್ಪೀಕರ್ ಆಗಿ 1970ರ ದಶಕದಲ್ಲಿ ವಿಧಾನಸಭೆಯಲ್ಲಿ ಮಿಂಚಿದವರು. ಇದು ಚೌಹಾಣ್ ಅವರು ಪ್ರತ್ಯೇಕತಾವಾದ ಚಳವಳಿಯಲ್ಲಿ ಗುರುತಿಸಿಕೊಳ್ಳುವ ಮತ್ತು ಇಂಗ್ಲೆಂಡ್‌ಗೆ ವಲಸೆ ಹೋಗುವ ಮುನ್ನ.
1984ರ ವೇಳೆಗೆ ಅವರು ಸಿಕ್ಖ್ ಪ್ರತ್ಯೇಕತಾವಾದದ ಅಗ್ರಗಣ್ಯ ನಾಯಕರಾಗಿ, ಭಾರತ ವಿರೋಧಿ ಪ್ರಚಾರದ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡರು. ಚೌಹಾಣ್ ನಂಬಲಸಾಧ್ಯ ಕಾರ್ಯತಂತ್ರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವ ಕೌಶಲ ಕರಗತ ಮಾಡಿಕೊಂಡಿದ್ದರು. ಒಂದು ಹಂತದಲ್ಲಿ ಇವರು ಖಾಲಿಸ್ತಾನ ಪಾಸ್‌ಪೋರ್ಟ್, ಡಾಲರ್‌ಗಳನ್ನು ಬಿಡುಗಡೆ ಮಾಡಿದ್ದಲ್ಲದೆ, ಸಚಿವ ಸಂಪುಟವನ್ನು ಕೂಡಾ ನೇಮಕ ಮಾಡಿದ್ದರು. ಭಾರತ ವಿರೋಧಿ ಪ್ರಚಾರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಎಷ್ಟರ ಮಟ್ಟಿಗೆ ಕೆರಳಿಸಿತ್ತು ಎಂದರೆ, ಬ್ರಿಟನ್‌ನ ಅಂದಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರನ್ನು ಚೌಹಾಣ್‌ಗೆ ಆಶ್ರಯ ನೀಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಈ ಕಡತ ಇಂದು ಬ್ರಿಟಿಷ್ ಪ್ರಾಚ್ಯ ಸಂಗ್ರಹಾಲಯದಲ್ಲಿ ವರ್ಗೀಕೃತ ದಾಖಲೆಯಾಗಿದೆ. ಚೌಹಾಣ್ ಹೊರ ಜಗತ್ತಿಗೆ ಹಾಗೂ ಪಂಜಾಬ್‌ನಲ್ಲಿ ತಮ್ಮನ್ನು ಅಷ್ಟರಮಟ್ಟಿಗೆ ವೈಭವೀಕರಿಸಿಕೊಂಡಿದ್ದರು.
ಏಕಾಂಗಿ ಹೋರಾಟಗಾರ
ಪಂಜಾಬ್ ರಾಜ್ಯವನ್ನು ಒಂದೂವರೆ ದಶಕದ ಕಾಲ ಕೆಂಡದುಂಡೆಯಾಗಿ ಮಾಡಿದ್ದ ಈ ಪ್ರತ್ಯೇಕತಾ ಹೋರಾಟ 1992ರ ಬಳಿಕ ಅವನತಿ ಕಂಡಿತು. ಶಾಂತಿ ಮತ್ತೆ ನೆಲೆಸಿತು. ಆದರೆ ಚೌಹಾಣ್ ಬಗೆಗೆ ಪತ್ರಕರ್ತರಿಗೆ ಇದ್ದ ಕುತೂಹಲ ಮಾತ್ರ ಇಂದಿಗೂ ಕಳೆಗುಂದಿಲ್ಲ.
1996ರಲ್ಲಿ ನನಗೆ ಬ್ರಿಟನ್‌ಗೆ ನಾಲ್ಕು ತಿಂಗಳ ಅವಧಿಯ ಮಾಧ್ಯಮ ಫೆಲೋಶಿಪ್‌ಗೆ ತೆರಳುವ ಅವಕಾಶ ಬಂದಾಗ ಮತ್ತೆ ಆ ಅವಕಾಶದ ಗವಾಕ್ಷಿ ತೆರೆದುಕೊಂಡಿತು. ಲಂಡನ್‌ನಲ್ಲಿ ಕೆಲಸ ಮಾಡಿದ್ದ ಹಿರಿಯ ಪೊಲೀಸ್ ಅಧಿಕಾರಿಯ ಸಂಪರ್ಕ ಅಸ್ತ್ರವನ್ನು ಬಳಸಿಕೊಂಡು ಭಾರತೀಯ ಹೈಕಮಿಷನ್‌ನಲ್ಲಿ ರಾಜತಾಂತ್ರಿಕನ ವೇಷದಲ್ಲಿದ್ದ ಗುಪ್ತಚರ ವಿಭಾಗದ ಅಧಿಕಾರಿ, ಚೌಹಾಣ್ ಸಂಪರ್ಕವನ್ನು ಹಂಚಿಕೊಂಡಿದ್ದರು.
ಮರುದಿನ ನಾನು ಇಂಗ್ಲೆಂಡ್‌ನಿಂದ ಕರೆ ಮಾಡಿ, ಚಂಡಿಗಡದ ಪತ್ರಕರ್ತ ಎಂದು ಪರಿಚಯಿಸಿಕೊಂಡು ಡಾ.ಚೌಹಾಣ್ ಭೇಟಿಗೆ ಮನವಿ ಮಾಡಿದೆ. ದೃಢ ಹಾಗೂ ಗಡಸುಧ್ವನಿಯಲ್ಲಿ ‘‘ನಿಮಗೆ ಪರ್ವಾನಾ ಮತ್ತು ಖುಲ್ಲರ್ ಗೊತ್ತೇ?’’ ಎಂಬ ಪ್ರಶ್ನೆ ಆ ಕಡೆಯಿಂದ ಬಂತು. ಅವರಿಬ್ಬರು ಪಂಜಾಬ್‌ನ ಹಿರಿಯ ಪತ್ರಕರ್ತರು. ಆ ಪ್ರಶ್ನೆ ಬಂದದ್ದು ನನ್ನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಸಲುವಾಗಿ.
ದೃಢೀಕರಣ ಪೂರ್ಣವಾದ ಬಳಿಕ, ಪಂಜಾಬಿಯಲ್ಲಿ, ‘‘ನಾನು ಚೌಹಾಣ್ ಮಾತನಾಡುತ್ತಿದ್ದೇನೆ. ನೀವು ಬಿಡುವಿದ್ದಾಗ ಯಾವಾಗಲಾದರೂ ಬನ್ನಿ’’ ಎಂಬ ಮುಕ್ತ ಆಹ್ವಾನ ನೀಡಿದರು. ಅಷ್ಟು ಕ್ಷಿಪ್ರವಾಗಿ ಖಾಲಿಸ್ತಾನದ ಅಧ್ಯಕ್ಷರ ಭೇಟಿಗೆ ಅವಕಾಶ ಸಿಕ್ಕಿದ್ದು ನಿಜಕ್ಕೂ ಅಚ್ಚರಿ ತಂದಿತು.
ಕಥೆಗೆ ತಿರುವು
ಭೇಟಿಗೆ ಅವಕಾಶ ಸಿಕ್ಕಿದ ಒಂದು ಗಂಟೆಯಲ್ಲಿ ನಾನು ಲಂಡನ್‌ನ ಆಕರ್ಷಕ ಅಪಾರ್ಟ್‌ಮೆಂಟ್ ಒಂದರಲ್ಲಿ ಚೌಹಾಣ್ ಜತೆಗಿದ್ದೆ. ಅವರ ವರ್ತನೆಯನ್ನು ನೋಡಿದಾಗ ಅಷ್ಟೊಂದು ಪ್ರಬಲ ಚಳವಳಿಯ ನೇತೃತ್ವ ವಹಿಸಿದ್ದ ವ್ಯಕ್ತಿ ಎನ್ನುವ ಯಾವ ಪುರಾವೆಯೂ ಸಿಗಲಿಲ್ಲ. ಅರುವತ್ತರ ಆಸುಪಾಸಿನ ಆಜಾನುಬಾಹು, ಬೂದುಬಣ್ಣದ ರುಮಾಲು ಹಾಗೂ ಬಿಳಿ ನಿಲುವಂಗಿಯೊಂದಿಗೆ ಪ್ರತ್ಯಕ್ಷವಾಗಿದ್ದರು. ಆ ಏಕಾಂಗಿ ವ್ಯಕ್ತಿ ಕಳೆದುಹೋದ ಕಾರಣದ ಫ್ಯಾಂಟಸಿಯನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದರು.
ಆದರೆ ಚೌಹಾಣ್ ತಮ್ಮ ಸಾರ್ವಜನಿಕ ಸಂಪರ್ಕದ ಕೌಶಲವನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಪಂಜಾಬಿ ಆತ್ಮೀಯತೆಯೊಂದಿಗೆ ಅನೌಪಚಾರಿಕ ಧಾಟಿಯಲ್ಲಿ ಮೊದಲು ಊಟ ಮಾಡೋಣ ಎಂದು ಕರೆದರು. ಸಂಕೋಚದಿಂದ ಸುಮ್ಮನಿದ್ದ ನನ್ನನ್ನು ಅಕ್ಷರಶಃ ಎಳೆದುಕೊಂಡು ಅಡುಗೆಮನೆಯತ್ತ ಕರೆದೊಯ್ದು ಒಂದು ಬೌಲ್‌ನಲ್ಲಿ ರೆಫ್ರಿಜರೇಟರ್‌ನಿಂದ ತೆಗೆದ ತಿನಸುಗಳನ್ನು ಹಾಕಿಕೊಟ್ಟರು. ಕೆಲ ನಿಮಿಷಗಳಲ್ಲಿ ತಣ್ಣಗಾಗಿದ್ದ ದಾಲ್ ಬಿಸಿ ಮಾಡಿದರು. ಆ ವೇಳೆಗೆ ಸಿದ್ಧಪಡಿಸಿದ್ದ ಚಪಾತಿ ಬಿಸಿ ಮಾಡಿದೆ. ಖಾಲಿಸ್ತಾನ ಅಧ್ಯಕ್ಷ ನನಗಾಗಿ ಊಟ ಸಿದ್ಧಪಡಿಸಿದರು.
ಆದರೆ ರಸವತ್ತಾದ ಘಳಿಗೆ ಆ ನಂತರದ್ದು. ಅವರ ಲ್ಯಾಂಡ್‌ಲೈನ್ ಫೋನ್ ಗುನುಗಿದಾಗ ನಾವು ಆಗಷ್ಟೇ ಊಟ ಮುಗಿಸಿದ್ದೆವು. ‘‘ಹಲೋ ಸಾಹಿಬ್’’ ಎಂದು ಚೌಹಾಣ್ ಸಂಬೋಧಿಸಿದರು. ಇದರ ಜತೆಗೆ ಅವರ ಹೆಸರನ್ನೂ ಸೇರಿಸಿ ಪರಿಚಿತರೊಂದಿಗೆ ಆತ್ಮೀಯವಾಗಿ ದೊಡ್ಡ ಧ್ವನಿಯಲ್ಲಿ ಮಾತನಾಡಿದರು. ಮುಂದಿನ ಕೆಲ ನಿಮಿಷಗಳವರೆಗೆ ಪಂಜಾಬ್‌ನ ಸ್ಥಿತಿಗತಿ ಬಗ್ಗೆ ಮಾತನಾಡಿದರು. ಅದರೆ ಅವರು ಮಾತನಾಡುತ್ತಿದ್ದ ಗುಪ್ತಚರ ವಿಭಾಗದ ಅಧಿಕಾರಿಯೇ ನನಗೆ ಅವರ ಸಂಪರ್ಕವನ್ನು ನೀಡಿದವರು ಎನ್ನುವುದು ಚೌಹಾಣ್‌ಗೆ ತಿಳಿದಿರಲಿಲ್ಲ.
ಬೀಳ್ಕೊಳ್ಳುವ ಮುನ್ನ ಅವರ ಕೊನೆಯ ಆಸೆ ಏನೆಂದು ಕೇಳಿದೆ. ಒಂದು ಕ್ಷಣ ಚೌಹಾಣ್ ಮೌನವಾದರು. ಬಳಿಕ ‘‘ಬಸ್ ಪಂಜಾಬ್ ಜಾಕೆ ಮರ್ನಾ ಚಹೂನಾ’’ (ನಾನು ಪಂಜಾಬ್‌ನಲ್ಲೇ ಸಾಯಲು ಇಚ್ಛಿಸುತ್ತೇನೆ) ಎಂದು ಗದ್ಗತವಾಗಿ ಹೇಳುತ್ತಿದ್ದಾಗ ಕಣ್ಣಂಚಲ್ಲಿ ನೀರು ಜಿನುಗಿತ್ತು. 2001ರಲ್ಲಿ ಅವರ ಇಚ್ಛೆಗೆ ಅನುಮತಿ ಸಿಕ್ಕಿತು. ಭಾರತ ಸರಕಾರದ ಜತೆಗಿನ ಹಿಂಬಾಗಿಲ ಮಾತುಕತೆಯಿಂದಾಗಿ ಅವರು ಭಾರತಕ್ಕೆ ಮರಳಲು ಸಾಧ್ಯವಾಯಿತು. ಇದು ಖಾಲಿಸ್ತಾನ ಕನಸಿನ ಸಾವಿಗೆ ಇನ್ನೊಂದು ಪುರಾವೆ.
ವರ್ಷಗಳ ಬಳಿಕ ನನಗೆ ಆಕಸ್ಮಿಕವಾಗಿ ಮತ್ತೊಮ್ಮೆ ಚೌಹಾಣ್ ಭೇಟಿಯಾದರು. ಈ ಬಾರಿ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ. ನಾನು ಭೇಟಿ ಮಾಡಿದಾಗ ಇದ್ದ ಇಂಥ ಸೈದ್ಧಾಂತಿಕ ಗತವೈಭವದ ಸಣ್ಣ ಕುರುಹು ಕೂಡಾ ಅವರಲ್ಲಿ ಕಾಣುತ್ತಿರಲಿಲ್ಲ. ಮಂದಿರದ ಮುಖ್ಯದ್ವಾರದ ಬಳಿಯ ಎಸ್‌ಜಿಪಿಸಿ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿ ಕರೆಯಲು ಬಯಸಿದ್ದರು. ಆದರೆ ಕಿರಿಯ ಎಸ್‌ಜಿಪಿಸಿ ಸಿಬ್ಬಂದಿಯೊಬ್ಬ ಅವರ ಬಗ್ಗೆ ತಿಳಿಯದೇ, ‘‘ಪ್ರಾರ್ಥನೆ ಮಾಡಿ ಮತ್ತು ಹೊರಗೋಗಿ’’ ಎಂದು ನಿಷ್ಠುರವಾಗಿ ಹೇಳಿದ. ಖಾಲಿಸ್ತಾನ ಹೋರಾಟದ ಮುಂಚೂಣಿ ನಾಯಕನಾಗಿ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದ ಚೌಹಾಣ್‌ಗೆ ಬಂದೊದಗಿನ ದುಃಸ್ಥಿತಿ ಅದು. ಚೌಹಾಣ್ 2007ರಲ್ಲಿ ಎಲೆಮರೆಯ ಕಾಯಿಯಾಗಿಯೇ ಕೊನೆಯುಸಿರೆಳೆದರು.ಅಷ್ಟಕ್ಕೂ ಚೌಹಾಣ್ ಅವರ ಫೋನ್ ನಂಬರ್ ನನಗೆ ನೀಡಿದ್ದ ಗುಪ್ತಚರ ವಿಭಾಗದ ಅಧಿಕಾರಿ ಅಜಿತ್ ಧೋವಲ್. ಇದೀಗ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ!
ಕೃಪೆ: hindustantimes.com