ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ: ಅಧಿಕಾರವಿಹೀನತೆಯೇ ಮಾನದಂಡವಾಗಬೇಕು
ಅ-ಪ್ರಾಬಲ್ಯ (ನಾನ್ ಡಾಮಿನೆನ್ಸ್)ದಿಂದಾಗಿ ಬರುವ ಅಧಿಕಾರವಿಹೀನತೆಯೇ ಅಲ್ಪಸಂಖ್ಯಾತ ಸ್ಥಾನಮಾನ ಪರಿಗಣನೆಗೆ ಒಂದು ಪ್ರಮುಖ ಮಾನದಂಡವಾಗಬೇಕು.
ರಾಜ್ಯಕ್ಕೆ ಸುಮಾರು ಅರ್ಧ ಡಝನ್ ಮುಖ್ಯಮಂತ್ರಿಗಳನ್ನು ನೀಡಿರುವ ಮತ್ತು ಶಾಸನ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಚುನಾಯಿಸುವ ಸ್ಥಿತಿಯಲ್ಲಿರುವ ಒಂದು ಸಮುದಾಯವನ್ನು ‘ಅ-ಪ್ರಾಬಲ್ಯದಿಂದಾಗಿ ಅಧಿಕಾರವಿಹೀನ’ವೆಂದು ಪರಿಗಣಿಸುವುದು ಸಾಧ್ಯವೇ?
ಲಿಂಗಾಯಿತ ಮತ್ತು ವೀರಶೈವ ಲಿಂಗಾಯತ (ಬಸವ ತತ್ವದಲ್ಲಿ ನಂಬಿಕೆಯುಳ್ಳ) ಪ್ರತ್ಯೇಕ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಸರ್ವಾನುಮತದ ತೀರ್ಮಾನ ಕೈಗೊಳ್ಳುವುದರೊಂದಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ಹೋರಾಟ ಒಂದು ಹಂತಕ್ಕೆ ಬಂದು ನಿಂತಿದೆ. ಚೆಂಡು ಈಗ ಕೇಂದ್ರ ಸರಕಾರದ ಅಂಗಳದಲ್ಲಿದೆ. ಈ ಹಂತದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನದ ಹಿಂದು-ಮುಂದು ಕುರಿತು ಒಂದು ಸೈದ್ಧಾಂತಿಕ ವಿಶ್ಲೇಷಣೆಯ ಪ್ರಯತ್ನ ಇಲ್ಲಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಇದುವರೆಗಿನ ಚರ್ಚೆಯು, ಯಜಮಾನಿಕೆ ನಡೆಸುವ ಮೇಲ್ವರ್ಗದ ಹಿತಾಸಕ್ತಿ ಮತ್ತು ರಾಜಕೀಯ ಅಧಿಕಾರದ ಚುನಾವಣಾ ಲಾಭ ನಷ್ಟಗಳ ಸುತ್ತವೇ ಗಿರಕಿ ಹೊಡೆದಿದೆ. ವಿಶಿಷ್ಟ ಅಸ್ಮಿತೆ ಹೊಂದಿ ಅದನ್ನು ರಕ್ಷಿಸುವ ಬಗ್ಗೆ ಕಾಳಜಿ ಹೊಂದಿದ ಒಂದು ಸಮುದಾಯವು ನಾಗರಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ಪಡೆಯುವ ಕಷ್ಟಗಳ ಬಗ್ಗೆ ಆ ಚರ್ಚೆ ನಡೆಯಲಿಲ್ಲ
ಅ-ಪ್ರಾಬಲ್ಯ
‘ಅಲ್ಪಸಂಖ್ಯಾತ’ ಎಂಬ ಪದದ ವ್ಯಾಖ್ಯಾನ ನೀಡಿದಾತ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಉಪ ಆಯೋಗದ ವಿಶೇಷ ಸಲಹೆಗಾರ ಫ್ರಾನ್ಸಿಸ್ಕೊ ಕ್ಯಾಪೊಟೋರ್ಟಿ. ಆತನ ವ್ಯಾಖ್ಯಾನದ ಪ್ರಕಾರ ಅ-ಪ್ರಾಬಲ್ಯ ಸ್ಥಾನಮಾನ ಹೊಂದಿರುವ ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಒಂದು ಗುಂಪು ಮತ್ತು ದೇಶದ ಉಳಿದ ಜನಸಂಖ್ಯೆಗಿಂತ ಭಿನ್ನವಾದ ಜನಾಂಗೀಯ ಧಾರ್ಮಿಕ ಅಥವಾ ಭಾಷಾ ಲಕ್ಷಣಗಳನ್ನು ಹೊಂದಿರುವವರು ಅಲ್ಪಸಂಖ್ಯಾತರು. ಅಲ್ಲದೆ ತಮ್ಮ ಸಂಸ್ಕೃತಿ, ಪರಂಪರೆಗಳು, ಧರ್ಮ ಅಥವಾ ಭಾಷೆಯನ್ನು ರಕ್ಷಿಸಲು ಒಗ್ಗಟ್ಟಾಗಿ ನಿಲ್ಲುವವರು ಅವರು.
ಲಿಂಗಾಯತ ಧರ್ಮಕ್ಕೆ ಸಂಬಂಧಿಸಿ ವರದಿ ನೀಡಿರುವ ಆಯೋಗವು ಈ ನಿಟ್ಟಿನಲ್ಲಿ ಎಲ್ಲ ಅಂಶಗಳನ್ನು ಗಮನಿಸಿದಂತೆ ಕಾಣುವುದಿಲ್ಲ. ಲಿಂಗಾಯತರ ಪ್ರತ್ಯೇಕ ಧರ್ಮದ ವಿಷಯದಲ್ಲಿ ಗಮನಿಸಬೇಕಾದ ಕೆಲವು ಅಂಶಗಳು ಹೀಗಿವೆ: ಮೊದಲನೆಯದಾಗಿ ಭಾರತವು ಒಂದು ಹೊಸ ರಾಷ್ಟ್ರ-ಪ್ರಭುತ್ವ. ಆದರೆ ಒಂದು ಹಳೆಯ ನಾಗರಿಕತೆ ಎಂಬುದನ್ನು ಗಮನಿಸಬೇಕು ಎರಡನೆಯದಾಗಿ, ಸಿಂಧೂ ಜನಸಮುದಾಯದ ಶೇ. 82 ಸಮುದಾಯವು ಶ್ರೇಣೀಕೃತ ಜಾತಿಗಳಲ್ಲಿ ವಿಭಜನೆಗೊಂಡಿದೆ. ಆದ್ದರಿಂದ, ಅಂತರ್-ಧಾರ್ಮಿಕ ವ್ಯತ್ಯಾಸಗಳು ಹಾಗೂ ಸಮಾನತೆಗಳು ಒಂದು ಸಮುದಾಯವನ್ನು ಅಲ್ಪಸಂಖ್ಯಾತವೆಂದು ಪರಿಗಣಿಸಲು ಒಂದು ಮಾನದಂಡವಾಗಕೂಡದು. ಬದಲಾಗಿ, ಅ-ಪ್ರಾಬಲ್ಯದಿಂದಾಗಿ ಬರುವ, ಉಂಟಾಗುವ ಅಧಿಕಾರ ವಿಹೀನತೆಯೇ ಮಾನದಂಡವಾಗಬೇಕು. ಇದರ ಪ್ರಕಾರ ಅಮೆರಿಕದಲ್ಲಿ ಯಹೂದಿಗಳು ಅಲ್ಪಸಂಖ್ಯಾತರಲ್ಲ. ಹಾಗೆಯೇ ಫೆಲೆಸ್ತೀನಿ ಅಧಿಕಾರದ ನಿಯಂತ್ರಣದಲ್ಲಿರುವ ಫೆಲೆಸ್ತೀನಿಯರು ಕೂಡ ಅಲ್ಪಸಂಖ್ಯಾತರಲ್ಲ. ಅಂತಿಮವಾಗಿ ಅಲ್ಪಸಂಖ್ಯಾತ ಅನ್ನಿಸಿಕೊಳ್ಳಬೇಕಾದರೆ ಒಂದು ಸಮುದಾಯಕ್ಕೆ ವಿಶಿಷ್ಟವಾದ ಜನಾಂಗೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಲಕ್ಷಣಗಳಿರಬೇಕು.
ಇಂತಹ ಸಾರ್ವಕಾಲಿಕ ವಿಶ್ವಾತ್ಮಕ ವ್ಯಾಖ್ಯಾನಗಳು ಎಲ್ಲ ನಿರ್ದಿಷ್ಟ ಸನ್ನಿವೇಶ ಗಳಿಗೂ ಅನ್ವಯವಾಗದಿರಬಹುದು. ಆದರೆ ರಾಜ್ಯಕ್ಕೆ ಸುಮಾರು ಅರ್ಧ ಡಝನ್ ಮುಖ್ಯಮಂತ್ರಿಗಳನ್ನು ನೀಡಿರುವ ಮತ್ತು ಶಾಸನ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಶಾಸಕರನ್ನು ಚುನಾಯಿಸುವ ಸ್ಥಿತಿಯಲ್ಲಿರುವ ಒಂದು ಸಮುದಾಯವನ್ನು ‘ಅ-ಪ್ರಾಬಲ್ಯದಿಂದಾಗಿ ಅಧಿಕಾರವಿಹೀನ’ವೆಂದು ಪರಿಗಣಿಸುವುದು ಸಾಧ್ಯವೇ? ಅಲ್ಲದೆ, ಹಿಂದೂ ಸಮುದಾಯದ ಇತರ ಜನತೆಯಿಂದ ಅದು ತುಂಬಾ ವಿಶಿಷ್ಟವೆಂದು ಕಾಣಿಸುತ್ತಿಲ್ಲ. ವಿಶೇಷ ರೀತಿಯ ರಕ್ಷಣೆ ಅಗತ್ಯವಿರಲು ಅದು ಯಾವುದೇ ಕಿರುಕುಳ ಅಥವಾ ಶೋಷಣೆಯಿಂದ ಬಳಲುತ್ತಲೂ ಇಲ್ಲ. ರಾಷ್ಟ್ರದ ಮಣ್ಣಿನಲ್ಲಿ ಹಾಗೂ ಸಂಸ್ಕೃತಿಯಲ್ಲಿ ಅದು ಬಲವಾಗಿ ಬೇರೂರಿರುವುದೇ ಅದನ್ನೊಂದು ದಮನಿತ ಅಥವಾ ಶೋಷಿತ ಸಮುದಾಯವೆಂದು ಪರಿಗಣಿಸಲು ಅಸಾಧ್ಯವಾಗುವಂತೆ ಮಾಡಲು ಸಾಕಾಗುತ್ತದೆ.
ವಂಚಿತರು
ಪ್ರತ್ಯೇಕ ಧರ್ಮದ ಬೇಡಿಕೆ ಸಲ್ಲಿಸಿದ ನಾಯಕರಲ್ಲಿ ಯಾರೂ ಕೂಡ ತಮ್ಮ ಸಮುದಾಯಕ್ಕೆ ಸಮಾನ ಹಕ್ಕುಗಳನ್ನು ಹಾಗೂ ನ್ಯಾಯವನ್ನು ಪಡೆಯುವಲ್ಲಿ ಅವಕಾಶಗಳಿಂದ ವಂಚಿತವಾಗಿರುವ ಯಾವುದೇ ಉದಾಹರಣೆಗಳನ್ನು ನೀಡಿಲ್ಲ. ಲಿಂಗಾಯತ ನಂಬಿಕೆಗಳು ಶಿವನ ಭಕ್ತಿಯನ್ನು ಆಧರಿಸಿವೆ. ಲಿಂಗಾಯತ ಎಂಬುದು ಜಾತಿ ಆಧಾರಿತ ಸಾಮಾಜಿಕ ಶ್ರೇಣಿ ವ್ಯವಸ್ಥೆಯ ವಿರುದ್ಧ ಒಂದು ಚಳವಳಿಯಾಗಿ ಮತ್ತು ವೇದಗಳ ಅಧಿಕಾರದ ನಿರಾಕರಣೆ ಹಾಗೂ ಪುನರ್ಜನ್ಮ ಮತ್ತು ಕರ್ಮಸಿದ್ಧಾಂತದ ನಿರಾಕರಣೆಯಾಗಿ ಮೂಡಿಬಂದ ಒಂದು ಧರ್ಮ.
ಆದ್ದರಿಂದ, ಜನತೆಯ ನಂಬಿಕೆ ಮತ್ತು ಆಚರಣೆಗಳನ್ನು ನಡೆಸಲು ಸರಕಾರ ನೆರವಾಗಬೇಕು. ಇದು ಆಡಳಿತಕ್ಕೆ ಸಂಬಂಧಿಸಿದ ವಿಷಯ. ಆದರೆ ಕೆಲವು ಸಮುದಾಯಗಳಿಗೆ ಅವುಗಳ ಹಕ್ಕುಗಳನ್ನು ಹಾಗೂ ಅವಕಾಶಗಳನ್ನು ಹತ್ತಿಕ್ಕುವ ಅಥವಾ ವಂಚಿಸುವ ಪ್ರಯತ್ನಗಳು ನಡೆದಾಗ ಮಾತ್ರ ಸರಕಾರ ಮಧ್ಯಪ್ರವೇಶಿಸಬೇಕು.
ವೇಷ ಮರೆಮಾಚುವುದು
ಬಹಳ ಸಂದರ್ಭಗಳಲ್ಲಿ ಅಧಿಕಾರ ಅಥವಾ ಸಂಪನ್ಮೂಲಗಳ ಮೇಲೆ ಬಲಾಢ್ಯರಿಗೆ ಮೇಲ್ವರ್ಗದವರಿಗೆ ಇರುವ ಸರ್ವಸ್ವಾಮ್ಯ ದಿಂದಾಗಿಯೇ ಅಲ್ಪಸಂಖ್ಯಾತ ಸ್ಥಾನಮಾನ ಅಥವಾ ಒಂದು ಹೊಸ ರಾಜ್ಯ ಬೇಕೆಂಬ ಬೇಡಿಕೆಗಳು ಕೇಳಿಬರುತ್ತವೆ. ಇದನ್ನು ಮರೆಮಾಚಲು ಸೈದ್ಧಾಂತಿಕ ವ್ಯತ್ಯಾಸಗಳು ಹಾಗೂ ಉಪಭಾಷೆಗಳು ನೆಪವಾಗುತ್ತವೆ. ಕರ್ನಾಟಕದ ಈ ನಿರ್ದಿಷ್ಟ ಪ್ರಕರಣದಲ್ಲಿ ಸಿದ್ದರಾಮಯ್ಯ ಸರಕಾರ ಮಾಹಿತಿ ಹಕ್ಕು ಕಾಯ್ದೆಯಂತಹ ಕಾಯ್ದೆಗಳಿಂದ ತಮ್ಮ ಸಂಸ್ಥೆಗಳಿಗೆ ವಿನಾಯಿತಿ ಪಡೆಯಬಯಸುವ ವರ್ಗಗಳಿಂದ ಪ್ರಭಾವಿತವಾಗಬಾರದಿತ್ತು. ಪ್ರತಿಸ್ಪರ್ಧಿ ಮತ ಬ್ಯಾಂಕ್ ಮೇಲೆ ಹೊಂಚು ದಾಳಿ ನಡೆಸುವುದು ಕೂಡ ಒಂದು ಪ್ರಬಲಕಾರಣವಾಗಬಾರದಿತು.