ಸಿಜೆಐ ವಾಗ್ದಂಡನೆಗೆ ವಿಪಕ್ಷ ಪ್ರಸ್ತಾವ; ಪ್ರಕ್ರಿಯೆ ಹೇಗೆ ಗೊತ್ತೇ?

ನ್ಯಾಯಮೂರ್ತಿಗಳ ವಾಗ್ದಂಡನೆ ವಿಧಿವಿಧಾನಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಭಾರತದ ಮುಖ್ಯ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ಪ್ರಸ್ತಾವನೆ ಪರಿಗಣನೆಗೆ ಬರುತ್ತಿರುವುದು ಇದೇ ಮೊದಲು. ಕಾನೂನು ತಜ್ಞರ ಪ್ರಕಾರ, ಇದು ಗುರುತು ಹಾಕದ ವಿಭಾಗ.
ಭಾರತದ ಮುಖ್ಯ ನ್ಯಾಯಮೂರ್ತಿ ವಿರುದ್ಧ ರಾಜ್ಯಸಭೆಯಲ್ಲಿ ವಾಗ್ದಂಡನೆ ನಿಲುವಳಿಯನ್ನು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಲು ನಿರ್ಧರಿಸಿವೆ.
ವಿರೋಧ ಪಕ್ಷಗಳ ಗುಂಪು ಸಂಸತ್ತಿನಲ್ಲಿ ವಾಗ್ದಂಡನೆ ನಿಲುವಳಿ ಮಂಡಿಸಲು ಈಗಾಗಲೇ 67 ರಾಜ್ಯಸಭಾ ಸದಸ್ಯರ ಸಹಿ ಸಂಗ್ರಹ ಮಾಡಿದೆ. ನಿಲುವಳಿ ಸೂಚನೆ ಮಂಡಿಸಲು ಕೇವಲ 50 ಮಂದಿಯ ಸಹಿ ಸಾಕು.
ನ್ಯಾಯಮೂರ್ತಿಗಳ ವಾಗ್ದಂಡನೆ ವಿಧಿವಿಧಾನಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಭಾರತದ ಮುಖ್ಯ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ಪ್ರಸ್ತಾವನೆ ಪರಿಗಣನೆಗೆ ಬರುತ್ತಿರುವುದು ಇದೇ ಮೊದಲು. ಕಾನೂನು ತಜ್ಞರ ಪ್ರಕಾರ, ಇದು ಗುರುತು ಹಾಕದ ವಿಭಾಗ.
ವಾಗ್ದಂಡನೆ ಏಕೆ?
ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವಾಗ್ದಂಡನೆ ಮೂಲಕ ಮಾತ್ರ ಪದಚ್ಯುತಗೊಳಿಸಲು ಸಾಧ್ಯ. ಸಂವಿಧಾನದ 124 (4) ವಿಧಿ, ನ್ಯಾಯಾಧೀಶರ ವಾಗ್ದಂಡನೆಗೆ ಮಾರ್ಗಸೂಚಿಗಳನ್ನು ನೀಡಿದೆ. ಇದರ ಅನ್ವಯ ಅಸಮರ್ಥತೆ ಅಥವಾ ದುರ್ನಡತೆ ಸಾಬೀತಾದಲ್ಲಿ ಮಾತ್ರ ವಾಗ್ದಂಡನೆಗೆ ಅವಕಾಶವಿದೆ.
ವಾಗ್ದಂಡನೆ ಪ್ರಕ್ರಿಯೆ ವಿಧಿವಿಧಾನ ಏನು?
♦ ವಾಗ್ದಂಡನೆ ನಿಲುವಳಿಯನ್ನು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮಂಡಿಸಬಹುದು.
♦ ಇದನ್ನು ಮಂಡಿಸಬೇಕಾದರೆ, ಕನಿಷ್ಠ 50 ರಾಜ್ಯಸಭಾ ಸದಸ್ಯರ ಅಥವಾ 100 ಲೋಕಸಭಾ ಸದಸ್ಯರ ಸಹಿ ಬೇಕಾಗುತ್ತದೆ. ಇದಾದ ಬಳಿಕ, ನಿಲುವಳಿ ಸೂಚನೆಯನ್ನು ಸದನದ ಅಧ್ಯಕ್ಷಾಧಿಕಾರಿಗೆ ನೀಡಲಾಗುತ್ತದೆ ಅಂದರೆ ಲೋಕಸಭೆಯ ಸ್ಪೀಕರ್ ಅಥವಾ ರಾಜ್ಯಸಭಾಧ್ಯಕ್ಷರಿಗೆ ನೀಡಲಾಗುತ್ತದೆ.
♦ ಪ್ರಶ್ನಾರ್ಹ ನ್ಯಾಯಮೂರ್ತಿಯ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಅಧ್ಯಕ್ಷಾಧಿಕಾರಿ ಮೂರು ಮಂದಿಯ ಸಮಿತಿ ರಚಿಸುತ್ತಾರೆ. ಈ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ಒಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಒಬ್ಬರು ಖ್ಯಾತ ನ್ಯಾಯಶಾಸ್ತ್ರಜ್ಞರು ಇರುತ್ತಾರೆ.
♦ ಸಮಿತಿ ತನ್ನ ಶಿಫಾರಸನ್ನು ಸಂಸತ್ತಿಗೆ ಸಲ್ಲಿಸುತ್ತದೆ.
♦ ಈ ವಿಷಯವನ್ನು ಎಲ್ಲಿ ವಾಗ್ದಂಡನೆ ನಿಲುವಳಿ ಮಂಡಿಸಲಾಗಿದೆಯೋ ಆ ಸದನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ. ನಿಲುವಳಿಯನ್ನು ಮತಕ್ಕೆ ಹಾಕಲಾಗುತ್ತದೆ. ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಬಂದಲ್ಲಿ, ಇದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ. ಆ ಬಳಿಕ ರಾಷ್ಟ್ರಪತಿಗಳು ನ್ಯಾಯಮೂರ್ತಿಯ ಪದಚ್ಯುತಿಗೆ ಆದೇಶ ಹೊರಡಿಸುತ್ತಾರೆ.
ಭಾರತದಲ್ಲಿ ಯಾವುದೇ ನ್ಯಾಯಾಧೀಶರನ್ನು ವಾಗ್ದಂಡನೆಗೆ ಗುರಿಪಡಿಸಲಾಗಿದೆಯೇ?
ವಾಗ್ದಂಡನೆ ಪ್ರಕ್ರಿಯೆಯನ್ನು ಈ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆರಂಭಿಸಲಾಗಿತ್ತು. ಆದರೆ ಯಾವ ನ್ಯಾಯಮೂರ್ತಿಯನ್ನೂ ಇದುವರೆಗೆ ಪದಚ್ಯುತಗೊಳಿಸಿಲ್ಲ.
♦ 2016ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ನಾಗಾರ್ಜುನ ರೆಡ್ಡಿ ವಿರುದ್ಧ ವಾಗ್ದಂಡನೆ ವಿಧಿಸಲು ವಿಫಲ ಪ್ರಯತ್ನ ನಡೆದಿತ್ತು. ದಲಿತ ಸಿವಿಲ್ ನ್ಯಾಯಾಧೀಶರೊಬ್ಬರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ಜಾತೀಯವಾಗಿ ನಿಂದಿಸಿದ ಆರೋಪದಲ್ಲಿ ವಾಗ್ದಂಡನೆ ನಿಲುವಳಿ ಪ್ರಸ್ತಾವ ಸಲ್ಲಿಸಲಾಗಿತ್ತು.
♦ 2015ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಕೆ.ಗಂಗೆಲ್ ವಿರುದ್ಧ ಗ್ವಾಲಿಯರ್ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶೆ ಲೈಂಗಿಕ ಹಲ್ಲೆ ಆರೋಪ ಹೊರಿಸಿದ್ದರು. ಇದಾದ ಬಳಿಕ 58 ಮಂದಿ ರಾಜ್ಯಸಭಾ ಸದಸ್ಯರು ಇವರ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸಿದ್ದರು. ತನಿಖೆ ನಡೆಸಲು ನೇಮಕ ಮಾಡಿದ್ದ ಸಮಿತಿ ಗಂಗೆಲ್ ಮೇಲಿನ ಆರೋಪವನ್ನು ಅಲ್ಲಗಳೆದಿತ್ತು.
♦ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ವಿರುದ್ಧ 58 ಮಂದಿ ರಾಜ್ಯಸಭಾ ಸದಸ್ಯರು ವಾಗ್ದಂಡನೆ ನಿಲುವಳಿ ಮಂಡಿಸಿದ್ದರು. ಭ್ರಷ್ಟಾಚಾರ ಹಾಗೂ ಮೀಸಲಾತಿ, ದೇಶದ ಪ್ರಗತಿಗೆ ಅವಕಾಶ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿ ತೀರ್ಪು ನೀಡಿದ್ದು ಇದಕ್ಕೆ ಕಾರಣ. ವಾಗ್ದಂಡನೆ ನೋಟಿಸ್ ಬಳಿಕ ನ್ಯಾಯಮೂರ್ತಿಗಳು ತಮ್ಮ ತೀರ್ಪಿನ ವಿವಾದಾತ್ಮಕ ಅಂಶವನ್ನು ಕಿತ್ತುಹಾಕಿದ್ದರು.
♦ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರಾ ಸೆನ್ 2011ರಲ್ಲಿ ರಾಜ್ಯಸಭೆಯಿಂದ ವಾಗ್ದಂಡನೆಗೆ ಒಳಗಾದ ಮೊತ್ತಮೊದಲ ನ್ಯಾಯಾಧೀಶ ಎನಿಸಿದ್ದಾರೆ. ಲೋಕಸಭೆಯಲ್ಲಿ ನಿಲುವಳಿಯನ್ನು ಚರ್ಚೆಗೆ ತೆಗೆದುಕೊಳ್ಳುವ ಮುನ್ನ ಅವರು ರಾಜೀನಾಮೆ ನೀಡಿದರು. ಇವರ ಮೇಲಿದ್ದ ಪ್ರಮುಖ ಆರೋಪವೆಂದರೆ ಅನುದಾನ ದುರ್ಬಳಕೆ.
♦ ಸಿಕ್ಕಿಂ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ಡಿ.ದಿನಕರನ್ ವಿರುದ್ಧ 2011ರಲ್ಲಿ ವಾಗ್ದಂಡನೆ ನಿಲುವಳಿಯನ್ನು ಮಂಡಿಸಲಾಗಿತ್ತು. ಅವರ ವಿರುದ್ಧ 16 ಆರೋಪಗಳಿದ್ದವು. ಇವುಗಳಲ್ಲಿ ಕಚೇರಿಯ ದುರ್ಬಳಕೆ, ಭೂಕಬಳಿಕೆ ಮತ್ತು ಭ್ರಷ್ಟಾಚಾರ ಕೂಡಾ ಸೇರಿದ್ದವು. ವಾಗ್ದಂಡನೆ ನಿಲುವಳಿಯನ್ನು ಮುಂದಕ್ಕೆ ಕಳುಹಿಸುವ ಮುನ್ನವೇ ದಿನಕರನ್ ರಾಜೀನಾಮೆ ನೀಡಿದ್ದರು.
♦ 1993ರಲ್ಲಿ, ನ್ಯಾಯಮೂರ್ತಿ ವಿ.ರಾಮಸ್ವಾಮಿ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಆಗ ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ರಾಮಸ್ವಾಮಿಯವರು ವಾಗ್ದಂಡನೆ ಪ್ರಕ್ರಿಯೆ ಚಾಲನೆಗೆ ಗುರಿಯಾದ ಮೊತ್ತಮೊದಲ ಹೈಕೋರ್ಟ್ ನ್ಯಾಯಾಧೀಶ ಎನಿಸಿಕೊಂಡಿದ್ದರು. ಕಚೇರಿಯಲ್ಲಿ ಬೇಕಾಬಿಟ್ಟಿ ವೆಚ್ಚ ಮಾಡಿದ್ದರು ಎನ್ನುವುದು ಇವರ ಮೇಲಿನ ಆರೋಪವಾಗಿತ್ತು. ಆದರೆ ಸಾಕಷ್ಟು ಮತಗಳ ಕೊರತೆಯಿಂದ ನಿರ್ಣಯಕ್ಕೆ ಸೋಲು ಉಂಟಾಯಿತು.
ಸಿಜೆಐ ಪದಚ್ಯುತಿಗೆ ವಿಧಾನ ಏನು?
ಅಧಿಕಾರದಲ್ಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡಿಸಿದ ನಿದರ್ಶನಗಳು ಇದುವರೆಗೆ ಇಲ್ಲ. ಈ ಸೂಚನೆಯನ್ನು ಅಧ್ಯಕ್ಷಾಧಿಕಾರಿ ಹೇಗೆ ಮುಂದುವರಿಸುತ್ತಾರೆ ಎನ್ನುವುದು ಕುತೂಹಲದ ಅಂಶ. ಸುಪ್ರೀಂಕೋರ್ಟ್‌ನ ಎರಡನೇ ಗರಿಷ್ಠ ಸೇವಾಜೇಷ್ಠತೆ ಹೊಂದಿರುವ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಸಮಿತಿ ರಚಿಸುತ್ತಾರೆಯೇ? ಸಿಜೆಐ ವಿರುದ್ಧದ ಆರೋಪಗಳನ್ನು ತನಿಖೆ ನಡೆಸುವ ಸಮಿತಿಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇರುತ್ತಾರೆಯೇ? ಇದುವರೆಗೂ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಕೃಪೆ: theprint.in