ಜೆಎನ್‌ಯು ಹೊಸ ಪ್ರವೇಶಾತಿ ನೀತಿಯಿಂದಾಗಿ ಭಾರೀ ಸಾಮಾಜಿಕ ಅನ್ಯಾಯ

ಮೀಸಲಾತಿಯಿಂದಾಗಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುತ್ತದೆಂಬುದು 2007ರಲ್ಲಿ ಜಾರಿಗೆ ಬಂದ ಒಬಿಸಿ ಮೀಸಲಾತಿಯಿಂದ ಸಾಬೀತಾಗಿದೆ. ಕೆಲವೇ ವರ್ಷಗಳಲ್ಲಿ ವಿವಿಯಲ್ಲಿ ಒಬಿಸಿ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರವನ್ನೂ ದಾಟಿತ್ತು. ಆದರೆ ಈಗ ವಿವಿಯ ಮೀಸಲಾತಿ ವಿರೋಧಿ ಕ್ರಮಗಳಿಂದಾಗಿ ಸಮಾಜದ ಕೆಳಸ್ತರದ ವಿದ್ಯಾರ್ಥಿಗಳು ಪಡೆಯುತ್ತಿದ್ದ ಸವಲತ್ತುಗಳಿಗೆ ಹೊಡೆತ ಬಿದ್ದಂತಾಗಿದೆ. ವಿವಿಯ ಕ್ಯಾಂಪಸ್‌ನಲ್ಲಿ ದಲಿತ ಬಹುಜನ ವಿದ್ಯಾರ್ಥಿಗಳ ದನಿ ಅಡಗಿಸುವ ಪ್ರಯತ್ನ ನಡೆದಿದೆ.
ಎಂ. ಜಗದೀಶ್ ಕುಮಾರ್‌ರವರನ್ನು ನೂತನ ಕುಲಪತಿ(ವೈಸ್ ಚಾನ್ಸಲರ್)ಯಾಗಿ ನೇಮಿಸುವ ಮೂಲಕ ಬಿಜೆಪಿ ಸರಕಾರವು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್‌ಯು) ಉಸ್ತುವಾರಿ ವಹಿಸಿಕೊಂಡಂದಿನಿಂದ, ಅದು ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯವನ್ನು ‘‘ರಾಷ್ಟ್ರ ವಿರೋಧಿಗಳ ಒಂದು ಅಡಗುದಾಣ’’ವೆಂದು ಅದಕ್ಕೊಂದು ಕೆಟ್ಟ ಹೆಸರು ನೀಡಿದೆ. ಈ ವಿವಿಗೆ ಅದು ನೀಡಿರುವ ಇತರ ಹೊಡೆತಗಳಲ್ಲಿ ಅದರ ಜಾತ್ಯತೀತ ಹಾಗೂ ಪುರೋಗಾಮಿ ಚಾರಿತ್ರವನ್ನು ಅಳಿಸುವ ಪ್ರಯತ್ನ, ಈಗಾಗಲೇ ನಡೆಯುತ್ತಿರುವ ಖಾಸಗೀಕರಣ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸುವುದು ಮತ್ತು ಈಗಾಗಲೇ ಸಂಕುಚನಗೊಳಿಸುತ್ತಿರುವ ಅದರ ಪ್ರಜಾಸತ್ತಾತ್ಮಕ ಹಾಗೂ ಭಿನ್ನಮತೀಯ ಅವಕಾಶವನ್ನು ಮತ್ತಷ್ಟು ಕಡಿಮೆ ಮಾಡುವುದು ಸೇರಿವೆ. ಆದರೆ ಇವೆಲ್ಲವುಗಳಿಗಿಂತಲೂ ಅತ್ಯಂತ ಹೆಚ್ಚು ಕೆಟ್ಟದಾದ ಹಸ್ತಕ್ಷೇಪವೆಂದರೆ, ಮೀಸಲಾತಿಗಳನ್ನು ಕಡಿತಗೊಳಿಸುವ ಮತ್ತು ಆ ಮೂಲಕ ಸಾಮಾಜಿಕ ನ್ಯಾಯವನ್ನು ನಿರಾಕರಿಸಲು ಅದು ಮಾಡಿರುವ ಪ್ರಯತ್ನ ಇದರ ಪರಿಣಾಮವಾಗಿ ಅವಕಾಶ ವಂಚಿತ ವರ್ಗಗಳ ಭವಿಷ್ಯ ಮಸುಕಾದಂತೆ ಕಾಣುತ್ತಿದೆ.
ಮೀಸಲಾತಿಗಳು ಮತ್ತು ಸಾಮಾಜಿಕ ನ್ಯಾಯಕ್ಕೆ ಹೊಡೆತ ನೀಡುವ ಪ್ರಯತ್ನಗಳ ಹಿಂದೆ ಕುಲಪತಿಗಳು ವಿವಿಯ ಮೇಲೆ ಹೇರಿರುವ ಹೊಸ ಪ್ರವೇಶಾತಿ ನೀತಿಯಿದೆ. ಈ ನೀತಿಯ ನಿಬಂಧನೆಗಳನ್ನು ತಳ್ಳಿ ಹಾಕದೆ ಇದ್ದಲ್ಲಿ ಅದು ಸಾಮಾಜಿಕ ಅಂಚಿನಲ್ಲಿರುವ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಯಲ್ಲಿ ಪ್ರವೇಶ ಸಿಗದಂತೆ ತಡೆಯುತ್ತದೆ. ಹೊಸ ನೀತಿಯಲ್ಲಿ ಪ್ರವೇಶ ಪ್ರಕ್ರಿಯೆಯು ಸಂದರ್ಶನ-ಕೇಂದ್ರಿತವಾಗಿದೆ. ಪ್ರವೇಶ ಪರೀಕ್ಷೆಗಳಲ್ಲಿ ಸಿಗುವ ಉತ್ತಮ ಅಂಕಗಳು ಅಭ್ಯರ್ಥಿಗಳನ್ನು ಸಂದರ್ಶನಕ್ಕಷ್ಟೇ ಅರ್ಹಗೊಳಿಸುತ್ತವೆ; ಆ ಅಂಕಗಳಿಗೆ ಅಂತಿಮ ಆಯ್ಕೆಯಲ್ಲಿ ಯಾವುದೇ ಕಿಮ್ಮತ್ತಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿ, ಆತ ಯಾವುದೇ ಹಿನ್ನ್ನೆಲೆಯಿಂದ ಬಂದಿರಲಿ, ಸಂದರ್ಶನಕ್ಕೆ ಆಯ್ಕೆಯಾಗಬೇಕಾದರೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ. 50 ಅಂಕ ಪಡೆದಿರಲೇಬೇಕು. ಸಂದರ್ಶನದಲ್ಲಿ ಆತನಿಗೆ ಸಿಗುವ ಅಂಕಗಳೇ ಆತನಿಗೆ ಪ್ರವೇಶ ಸಿಗುವಲ್ಲಿ ನಿರ್ಣಾಯಕವಾಗುತ್ತದೆ. ಇಷ್ಟೇ ಅಲ್ಲದೆ ಹೊಸ ಪ್ರವೇಶಾತಿ ನೀತಿಯು ಎಂ. ಫಿಲ್ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಇರುವ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿದೆ. ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೇವಲ 159 ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗಿದೆ; ಕಳೆದ ವರ್ಷ ಈ ಸಂಖ್ಯೆ 970 ಇತ್ತು.
ಹೊಸ ಕುಲಪತಿ ಕುಮಾರ್, ಹೊಸ ಪ್ರವೇಶಾತಿ ನೀತಿಯು 2016 ಮೇ 5ರಂದು ಯುಜಿಸಿಯ ಗಜೆಟ್‌ನಲ್ಲಿ ಪ್ರಕಟವಾದ ನಿಯಮಗಳನ್ನಾಧರಿಸಿದೆ ಎಂದಿದ್ದಾರೆ. ಆದರೆ ಯುಜಿಸಿ ಗಜೆಟ್ ಎನ್ನುವುದು ಕೇವಲ ಒಂದು ಮಾರ್ಗದರ್ಶಿ ಮಾತ್ರ ಮತ್ತು ಕುಲಪತಿಯಾಗಿ ಅವರು ಅದನ್ನು ಒಪ್ಪಲೂಬಹುದು ಅಥವಾ ನಿರಾಕರಿಸಲೂಬಹುದು. ಹೊಸ ನೀತಿಯ ವಿರುದ್ಧ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಖ್ಯಾತ ವಿದ್ವಾಂಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಕುಲಪತಿಗಳು ಅವರೆಲ್ಲರ ವಾದಕ್ಕೆ ಕಿವುಡಾಗಿದ್ದಾರೆ. ಈ ಲೇಖನ ಬರೆಯುವ ವೇಳೆಗೆ ವಿದ್ಯಾರ್ಥಿಗಳ ಪ್ರತಿಭಟನೆ ಮೂರನೇ ವಾರಕ್ಕೆ ಕಾಲಿಟ್ಟಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡಿರುವ ವಿದ್ಯಾರ್ಥಿಗಳು ‘ಎಸ್ಸಿ/ಎಸ್ಟಿ/ಒಬಿಸಿ/ಪಿಡಬ್ಲೂಡಿ’(ಪರ್ಸನ್ಸ್ ಬಿದ್ ಡಿಸ್‌ಎಬಿಲಿಟೀಸ್) ಎಂಬ ಒಂದು ಹೊಸ ವೇದಿಕೆಯನ್ನು ಉದ್ದೇಶಿಸಿ, ವೇದಿಕೆಯು ಹೊಸ ಪ್ರವೇಶಾತಿ ನೀತಿಯನ್ನು ಭಾರತದ ಸಂವಿಧಾನದ ಮೇಲೆ ನಡೆದಿರುವ ಒಂದು ‘ದಾಳಿ’ ಎಂದು ಹೇಳಿದೆ. ಅದು ಹೇಗೆ ಮೀಸಲಾತಿಗೆ ಸಂಬಂಧಿಸಿದ ಸಾಂವಿಧಾನಿಕ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲೇಖಿಸುತ್ತದೆ ಎಂಬುದಕ್ಕೆ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ: ‘‘2017-18ರಲ್ಲಿ ಎಂ. ಫಿಲ್/ಪಿಎಚ್‌ಡಿ ಪ್ರವೇಶಾತಿಯಲ್ಲಿ ನಿಜವಾಗಿ ನೀಡಬೇಕಾದ ಶೇ. 15 ಮೀಸಲಾತಿಯ ಬದಲು ಎಸ್ಸಿ ವರ್ಗಕ್ಕೆ ಶೇ. 1.3, ಎಸ್ಟಿ ವರ್ಗಕ್ಕೆ ಶೇ. 7.5 ಬದಲು ಶೇ. 0.6, ಒಬಿಸಿಗಳಿಗೆ ಶೇ. 27 ಬದಲು ಶೇ. 8.2 ಮತ್ತು ಪಿಡಬ್ಲೂಡಿಗೆ ಶೇ. 3 ಬದಲು ಶೇ. 0.3 ನೀಡಲಾಗಿದೆ.’’
ಶಿಕ್ಷಣದ ಅವಕಾಶ/ಸೌಲಭ್ಯ, (ನಿರ್ದಿಷ್ಟವಾಗಿ ಫುಲೆ-ಅಂಬೇಡ್ಕರ್ ಪರಂಪರೆಯಲ್ಲಿ) ವಿಮೋಚನೆಯ ಒಂದು ಹಾದಿ. ‘ಸ್ಲೇವರಿ’ (1873) ಎಂಬ ಬರಹದಲ್ಲಿ ಫುಲೆ ವಾದಿಸಿದಂತೆ, ಬ್ರಾಹ್ಮಣರು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಮುಖ್ಯಕಾರಣ: ಅವರು ಶೂದ್ರರಿಗೆ ಶಿಕ್ಷಣ ಸಿಗದಂತೆ ನೋಡಿಕೊಂಡದ್ದು. ಹಾಗಾದರೆ ಜೆಎನ್‌ಯುವಿನ ಹೊಸ ಪ್ರವೇಶಾತಿ ನೀತಿ ಆ ಹಳೆಯ ವ್ಯವಸ್ಥೆಯ ಮರುಸ್ಥಾಪನೆಯಲ್ಲವೇ?
ಪ್ರಾತಿನಿಧ್ಯ ಮತ್ತು ರಾಷ್ಟ್ರೀಯತ್ವ
ವಿಶ್ವ ವಿದ್ಯಾನಿಲಯದ ಹೊಸ ಪ್ರವೇಶಾತಿ ನೀತಿಯನ್ನು ಸಮಾಜದ ಕೆಳವರ್ಗಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಒಡ್ಡಲಾಗಿರುವ ಒಂದು ಬೆದರಿಕೆ ಎಂದು ಪರಿಗಣಿಸಿದ್ದಾರೆ. ಆದರೂ ಕೂಡ ಬ್ರಾಹ್ಮಣ-ಪ್ರಾಬಲ್ಯವಿರುವ ಕಾರ್ಪೊರೇಟ್ ಮಾಧ್ಯಮಗಳು ಅವರ ಪ್ರತಿಭಟನೆಯನ್ನು ಬಹುಪಾಲು ಕಡೆಗಣಿಸಿವೆ.
ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಅವರಲ್ಲೊಬ್ಬ ಹೇಳಿದ: ‘‘ಮೀಸಲಾತಿ ಎಂಬುದು ಒಂದು ಟಾನಿಕ್. ನನಗೆ ಅದು ಸಿಗದೇ ಇರುತ್ತಿದ್ದಲ್ಲಿ ನನಗೆ ಜೆಎನ್‌ಯು ಸೇರುವ ಅವಕಾಶವೇ ಸಿಗುತ್ತಿರಲಿಲ್ಲ.’’
ಅಂಬೇಡ್ಕರ್, ಜಾತಿ ವ್ಯವಸ್ಥೆಯ ಬಗ್ಗೆ ಅತ್ಯಂತ ಸಮರ್ಥವಾಗಿ ಬರೆದ ಸಿದ್ಧಾಂತಿಗಳಲ್ಲೊಬ್ಬರು. ‘‘ಜಾತಿ-ಆಧಾರಿತ ಸಮಾಜದ ಒಂದು ಪರಿಣಾಮವೆಂದರೆ, ಅಲ್ಲಿ ಎಂದಿಗೂ ಬಹುಸಂಖ್ಯಾತರು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದಿಲ್ಲ’’ ಎಂದು ಅಂಬೇಡ್ಕರ್ ಹೇಳಿದ್ದರು. ಖ್ಯಾತ ಅರ್ಥಶಾಸ್ತ್ರಜ್ಞ ಸುಖದಿವೋ ಥೋರಟ್ ಅಂಬೇಡ್ಕರ್‌ರವರ ಈ ಕಾಳಜಿಯನ್ನು ಪುನರುಚ್ಚರಿಸಿದ್ದಾರೆ. ನೌಕರಿ, ಶಿಕ್ಷಣ ಮತ್ತು ಶಾಸನ ಸಭೆಗಳಲ್ಲಿ ತಾರತಮ್ಯದ ವಿರುದ್ಧ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ರಕ್ಷಣೆ ನೀಡುವುದೇ ಮೀಸಲಾತಿ ನೀತಿಯ ಉದ್ದೇಶವೆಂದು ಥೋರಟ್ ‘‘ವೈ ಪ್ರಿಜುಡಿಸ್ ಅಗೈನ್ಸ್‌ಟ್ ದಿ ರಿಸರ್ವೇಶನ್ ಪಾಲಿಸಿ’’ ಎಂಬ ತನ್ನ ಇತ್ತೀಚಿನ ಲೇಖನದಲ್ಲಿ ಬರೆದಿದ್ದಾರೆ.
ಜೆಎನ್‌ಯುವಿನ ಅಧ್ಯಾಪಕ ವೃಂದದಲ್ಲಿ ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲವಾದ ಕಾರಣ, ಪ್ರವೇಶಾತಿ ಸಂದರ್ಶನಗಳಲ್ಲಿ ಈ ವರ್ಗಗಳ ವಿರುದ್ಧ ತಾರತಮ್ಯ ಎಸಗಲಾಗುತ್ತಿದೆ. ಇದನ್ನು ಬಗೆಹರಿಸಲು, ಬಹುಜನ ಮತ್ತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಸಂದರ್ಶನಕ್ಕೆ ಈಗ ನೀಡಲಾಗುತ್ತಿರುವ ಶೇ. 30 ಅಂಕಗಳನ್ನು 10-15 ಶೇಕಡಾಕ್ಕೆ ಇಳಿಸಬೇಕೆಂದು ಹಕ್ಕೊತ್ತಾಯ ಸಲ್ಲಿಸುತ್ತಾ ಬಂದಿವೆ. ಈ ಕುರಿತು ರಚಿಸಲಾದ ಸಮಿತಿಗಳು ಸಂದರ್ಶನಕ್ಕೆ ನೀಡುವ ಶೇಕಡಾವಾರು ಕ್ರಮಾಂಕವನ್ನು ಕಡಿಮೆ ಮಾಡುವಂತೆ ಹೇಳಿವೆಯಾದರೂ, ಪರಿಸ್ಥಿತಿ ಬದಲಾಗಿಲ್ಲ.
ಮೀಸಲಾತಿಯಿಂದಾಗಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುತ್ತದೆಂಬುದು 2007ರಲ್ಲಿ ಜಾರಿಗೆ ಬಂದ ಒಬಿಸಿ ಮೀಸಲಾತಿಯಿಂದ ಸಾಬೀತಾಗಿದೆ. ಕೆಲವೇ ವರ್ಷಗಳಲ್ಲಿ ವಿವಿಯಲ್ಲಿ ಒಬಿಸಿ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರವನ್ನೂ ದಾಟಿತ್ತು. ಆದರೆ ಈಗ ವಿವಿಯ ಮೀಸಲಾತಿ ವಿರೋಧಿ ಕ್ರಮಗಳಿಂದಾಗಿ ಸಮಾಜದ ಕೆಳಸ್ತರದ ವಿದ್ಯಾರ್ಥಿಗಳು ಪಡೆಯುತ್ತಿದ್ದ ಸವಲತ್ತುಗಳಿಗೆ ಹೊಡೆತ ಬಿದ್ದಂತಾಗಿದೆ. ವಿವಿಯ ಕ್ಯಾಂಪಸ್‌ನಲ್ಲಿ ದಲಿತ ಬಹುಜನ ವಿದ್ಯಾರ್ಥಿಗಳ ದನಿ ಅಡಗಿಸುವ ಪ್ರಯತ್ನ ನಡೆದಿದೆ. ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬ ಹೇಳಿದ: ‘‘ಹೊಸ ಪ್ರವೇಶಾತಿ ನೀತಿಯಿಂದಾಗಿ ಅಸಂಖ್ಯ ಏಕಲವ್ಯರು ತಮ್ಮ ಹೆಬ್ಬೆರಳುಗಳನ್ನು ಕಳೆದುಕೊಳ್ಳುವಂತಾಗಿದೆ.’’
ಕೃಪೆ: countercurrents