ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಕರ ಮೀಸಲಾತಿ

ಅಲಹಾಬಾದ್ ಹೈಕೋರ್ಟಿನ ತೀರ್ಪನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದ ನಂತರ, ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಸಹಮತಿ ಸೂಚಿಸಿದ ಮೇಲೆ ಯುಜಿಸಿಯ ಆದೇಶ ಹೊರಬಿದ್ದಿದೆ. ತೀರ್ಪು ನ್ಯಾಯಯುತವಾದದ್ದು. ಯುಜಿಸಿಯ ಆದೇಶವೂ ಭಾಗಶಃ ನ್ಯಾಯಯುತವಾದದ್ದು. ಆದರೆ, ಕೇಂದ್ರ ಸರಕಾರವು ಪರಿಶಿಷ್ಟರ ಹಾಗೂ ಹಿಂದುಳಿದವರ ಪರವಾದ ಕಾಳಜಿಯನ್ನು ಗ್ರಹಿಸದೆ ಮಾರ್ಚ್ 5, 2018ರ ಆದೇಶ ಹೊರಡಿಸಿದೆ.
ದಿಲ್ಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯ, ದಿಲ್ಲಿ ವಿಶ್ವವಿದ್ಯಾನಿಲಯ ಸೇರಿದಂತೆ ಉತ್ತರದ ಕೆಲ ರಾಜ್ಯಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ)ವು ಮಾರ್ಚ್ 5, 2018ರಂದು ಹೊರಡಿಸಿದ ಆದೇಶದ ವಿರುದ್ಧ ಅವರ ಪ್ರತಿಭಟನೆ. ಆ ಆದೇಶವು, ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಲು ವಿಶ್ವವಿದ್ಯಾನಿಲಯಗಳಲ್ಲಿ ವಿಷಯವಾರು ಮತ್ತು ವೃಂದವಾರು ರೋಸ್ಟರ್ ಪದ್ಧತಿಯ್ನು ಪಾಲಿಸುವಂತೆ ನಿರ್ದೇಶಿಸುತ್ತದೆ.
ಯುಜಿಸಿಯಿಂದ ಅನುದಾನ ಪಡೆಯುತ್ತಿರುವ ಸುಮಾರು 41 ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳಿಗೆ ಈ ಆದೇಶವು ಅನ್ವಯವಾಗುತ್ತದೆ. ವಿಶ್ವವಿದ್ಯಾನಿಲಯವನ್ನು ಒಂದು ಘಟಕ ಎಂದು ಪರಿಗಣಿಸುವ ಬದಲು ಪ್ರತೀ ವಿಭಾಗವನ್ನು ಅಥವಾ ವಿಷಯ(ಸಬ್ಜೆಕ್ಟ್)ವನ್ನು ಒಂದು ಘಟಕವೆಂದು ಪರಿಗಣಿಸಿ ಪ್ರತ್ಯೇಕವಾಗಿ ರೋಸ್ಟರ್ ಅನುಸರಿಸಿ ಎಲ್ಲಾ ವಿಷಯಗಳಲ್ಲಿ ಪರಿಶಿಷ್ಟರಿಗೆ ಮತ್ತು ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆನ್ನುವುದು ಅಲಹಾಬಾದ್ ಉಚ್ಚನ್ಯಾಯಾಲಯದ ಎಪ್ರಿಲ್ 2017ರ ಆದೇಶ. ವಿಶ್ವವಿದ್ಯಾನಿಲಯವನ್ನು ಒಂದು ಘಟಕ ಎಂದು ಪರಿಗಣಿಸಿ ನಿರ್ದಿಷ್ಟ ವೃಂದದ ಹುದ್ದೆಗಳನ್ನು ಗುಂಪುಗೂಡಿಸಿ ಮೀಸಲಾತಿ ನೀಡಿದ್ದರಿಂದ ಕೆಲ ವಿಭಾಗಗಳಲ್ಲಿ ಮಾತ್ರ ದಲಿತ ಮತ್ತು ಹಿಂದುಳಿದವರಿಗೆ ಪ್ರಾತಿನಿಧ್ಯ ಸಿಕ್ಕಿ ಇತರ ವಿಭಾಗಗಳಲ್ಲಿ ಪ್ರಾತಿನಿಧ್ಯ ಇಲ್ಲದಿರುವುದನ್ನು ನ್ಯಾಯಾಲಯವು ಗಮನಿಸಿದೆ. ಸಾಮಾನ್ಯವಾಗಿ ಕಲಾ ವಿಭಾಗಗಳ ವಿಷಯಗಳಲ್ಲಿ ಪರಿಶಿಷ್ಟರಿಗೆ ಕೊಂಚ ಪ್ರಾತಿನಿಧ್ಯ ಸಿಕ್ಕಿದೆ. ವಿಜ್ಞಾನ ವಿಷಯಗಳ ವಿಭಾಗಗಳಲ್ಲಿ ಪ್ರಾತಿನಿಧ್ಯ ಅತ್ಯಂತ ಅತೃಪ್ತಿಕರ.
ಇಂತಹ ಆದೇಶ ಎಂದೋ ಬರಬೇಕಿತ್ತು. ತಡವಾಗಿಯಾದರೂ ಬಂದಿದೆ. ಅಲಹಾಬಾದ್ ಹೈಕೋರ್ಟಿನ ತೀರ್ಪನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದ ನಂತರ, ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ಸಹಮತಿ ಸೂಚಿಸಿದ ಮೇಲೆ ಯುಜಿಸಿಯ ಆದೇಶ ಹೊರಬಿದ್ದಿದೆ. ತೀರ್ಪು ನ್ಯಾಯಯುತವಾದದ್ದು. ಯುಜಿಸಿಯ ಆದೇಶವೂ ಭಾಗಶಃ ನ್ಯಾಯಯುತವಾದದ್ದು. ಆದರೆ, ಕೇಂದ್ರ ಸರಕಾರವು ಪರಿಶಿಷ್ಟರ ಹಾಗೂ ಹಿಂದುಳಿದವರ ಪರವಾದ ಕಾಳಜಿಯನ್ನು ಗ್ರಹಿಸದೆ ಮಾರ್ಚ್ 5, 2018ರ ಆದೇಶ ಹೊರಡಿಸಿದೆ.
ವಿಶ್ವವಿದ್ಯಾನಿಲಯದ ಎಲ್ಲಾ ಪ್ರಾಧ್ಯಾಪಕ ಹುದ್ದೆಗಳನ್ನು ಗುಂಪುಗೂಡಿಸಿ ಮೀಸಲಾತಿ ನೀಡುವುದನ್ನು ನ್ಯಾಯಾಲಯ ತಳ್ಳಿಹಾಕಿದೆ. ಹಾಗೆಯೇ, ಎಲ್ಲಾ ಸಹ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಗುಂಪುಗೂಡಿಸುವುದನ್ನೂ ಕೂಡ. ಇದು ಪರಿಶಿಷ್ಟರ ಹಾಗೂ ಹಿಂದುಳಿದವರ ಪರವಾದ ವೈಜ್ಞಾನಿಕವಾದ ತೀರ್ಪು. ಆದರೆ, ಪರಿಶಿಷ್ಟರು ಮತ್ತು ಹಿಂದುಳಿದವರು ಅದನ್ನು ವಿರೋಧಿಸುತ್ತಿದ್ದಾರೆ. ವಿರೋಧಿಸಲು ಕಾರಣವೂ ಇದೆ.
ಕೇಂದ್ರ ಸರಕಾರದ 200 ಬಿಂದುಗಳ ರೋಸ್ಟರ್ ಪದ್ಧತಿಯನ್ನು ಅಳವಡಿಸಿ ನೇಮಕಾತಿ ನಡೆಸಿದರೆ ಪರಿಶಿಷ್ಟರು ಮತ್ತು ಹಿಂದುಳಿದವರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಾರದು ಎನ್ನುವ ಆತಂಕ ಇದಕ್ಕೆ ಕಾರಣ. ಅವರ ಆತಂಕ ಸರಿಯಾಗಿದೆ. ಮಾರ್ಚ್ 5, 2018ರ ಯುಜಿಸಿಯ ಆದೇಶ ಅನುಸರಿಸಿ ಮಧ್ಯಪ್ರದೇಶದ ಇಂದಿರಾ ಗಾಂಧಿ ಗಿರಿಜನ ವಿಶ್ವವಿದ್ಯಾನಿಲಯವು ಒಟ್ಟು 52 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟನೆ ಹೊರಡಿಸಿದೆ. ಅದರಲ್ಲಿ ಯಾವುದೇ ಹುದ್ದೆ ಪರಿಶಿಷ್ಟರಿಗೆ ಮೀಸಲಾಗಿಲ್ಲ! ಹಿಂದುಳಿದವರಿಗೆ ಒಂದು ಹುದ್ದೆ ಮಾತ್ರ ಮೀಸಲಾಗಿದೆ!
ಕರ್ನಾಟಕ ಹೈಕೋರ್ಟಿನ ತೀರ್ಪುಗಳ ಇತಿಹಾಸ
ಎಪ್ರಿಲ್ 2017ರಲ್ಲಿ ಹೊರಬಿದ್ದ ಅಲಹಾಬಾದ್ ಉಚ್ಚನ್ಯಾಯಾಲಯದ ತೀರ್ಪು ಹೊಸದೇನಲ್ಲ. ಕರ್ನಾಟಕದ ಮಟ್ಟಿಗೆ ಇಂತಹ ತೀರ್ಪುಗಳಿಗೆ ಬಲುದೊಡ್ಡ ಇತಿಹಾಸವಿದೆ. ಡಾ. ಎಲ್. ಕೃಷ್ಣಾ ವಿರುದ್ಧ ಕರ್ನಾಟಕ ಸರಕಾರ ಮತ್ತು ಡಾ. ರಾಜಕುಮಾರ್ ವಿರುದ್ಧ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಎಂಬ ಕರ್ನಾಟಕ ಹೈಕೋರ್ಟಿನ ತೀರ್ಪುಗಳು ಪರಿಶಿಷ್ಟರ ಪರವಾಗಿವೆ. ಜೂನ್, 1984ರಲ್ಲಿ ಡಾ. ಎಲ್. ಕೃಷ್ಣಾ ವಿರುದ್ಧ ಕರ್ನಾಟಕ ಸರಕಾರ ತೀರ್ಪಿನಲ್ಲಿ ಉಪನ್ಯಾಸಕ ಹುದ್ದೆಗಳಿಗೆ ವಿಷಯವಾರು ಮೀಸಲಾತಿ ಅಳವಡಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಇದು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕೈಗೊಂಡ ಉಪನ್ಯಾಸಕರ ನೇಮಕಾತಿಯಾಗಿತ್ತು. ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ, ಹೈಕೋರ್ಟಿನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಅದನ್ನು ಅನುಸರಿಸಿ 28.01.1987ರಂದು ರಾಜ್ಯ ಸರಕಾರ ಆದೇಶ ಹೊರಡಿಸಿತು.
ಈ ಮಧ್ಯೆ, ಡಾ. ರಾಜಕುಮಾರ್ ವಿರುದ್ಧ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಕೇಸಿನ ತೀರ್ಪು ಜೂನ್, 1990ರಲ್ಲಿ ಹೊರಬಿತ್ತು. ಇದೊಂದು ಐತಿಹಾಸಿಕ ತೀರ್ಪು. ಕರ್ನಾಟಕ ಹೈಕೋರ್ಟಿನ ಮೂವರು ನ್ಯಾಯಮೂರ್ತಿಗಳಾದ ಎಂ. ರಾಮಾ ಜೋಯಿಸ್, ಎಸ್. ಆರ್. ಮೂರ್ತಿ, ಎಂ. ರಾಮಕೃಷ್ಣರವರು ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವಿವಿಧ ವಿಷಯಗಳಲ್ಲಿ ಪ್ರಾಧ್ಯಾಪಕ, ರೀಡರ್ ಮತ್ತು ಉಪನ್ಯಾಸಕರ ಬಹುಹುದ್ದೆಗಳಿರುವೆಡೆ ಮೀಸಲಾತಿಯು ವಿಷಯವಾರು ಮತ್ತು ವೃಂದವಾರು ಆಗಿರತಕ್ಕದ್ದು, ಒಂದೇ ಹುದ್ದೆ ಇರುವ ವಿಭಾಗಗಳ ಪ್ರಾಧ್ಯಾಪಕ ಅಥವಾ ರೀಡರ್ ಅಥವಾ ಉಪನ್ಯಾಸಕ ಹುದ್ದೆಗಳನ್ನು ಮಾತ್ರ ಪ್ರತ್ಯೇಕವಾಗಿ ಗುಂಪುಗೂಡಿಸಿ ಅವುಗಳಿಗೂ ರೋಸ್ಟರ್ ಅಳವಡಿಸಲು ನಿರ್ದೇಶಿಸಿತು. ನ್ಯಾಯಮೂರ್ತಿಗಳಾದ ಎಂ. ರಾಮಕೃಷ್ಣರವರು ಪರಿಶಿಷ್ಟರು. ಎಪ್ರಿಲ್ 2017ರ ಅಲಹಾಬಾದ್ ಹೈಕೋರ್ಟಿನ ತೀರ್ಪಿನಲ್ಲೂ ಈ ಕೇಸಿನ ಉಲ್ಲೇಖವಿದೆ.
ಬಿಹಾರ ರಾಜ್ಯದ ಹೋಮಿಯೋಪತಿ ಇಲಾಖೆಯ ಉಪನಿರ್ದೇಶಕ ಹುದ್ದೆಯ ಮೀಸಲಾತಿ ಕುರಿತ ಚಕ್ರಧರ್ ಪಾಸ್ವಾನ್ ಕೇಸಿನಲ್ಲಿ ಹುಟ್ಟಿಕೊಂಡ ಏಕ ಹುದ್ದೆಗಳಿಗೆ ಮೀಸಲಾತಿ ಸಲ್ಲದು ಎಂಬ ವಾದದ ಕೆಲ ತೀರ್ಪುಗಳನ್ನು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕ ಮತ್ತಿತರ ಏಕ ಹುದ್ದೆಗಳಿಗೆ ವಿಸ್ತರಿಸುವ ಕುಟಿಲ ಪ್ರಯತ್ನಗಳು ಜರುಗಿದವು. ಪ್ರಾಧ್ಯಾಪಕ ಹುದ್ದೆಗಳು ಏಕಹುದ್ದೆಗಳೆಂದು ಅಥವಾ ಪ್ರತಿ ಪ್ರಾಧ್ಯಾಪಕ ಹುದ್ದೆಗೆ ಕೃತಕವಾಗಿ ವಿಶೇಷಣ ಅಥವಾ ತಜ್ಞತೆಗಳನ್ನು ತಗಲಿಸಿ ಅವು ಏಕಹುದ್ದೆಗಳು ಎಂಬ ವ್ಯಾಖ್ಯಾನಗಳು ನಡೆದು ದಲಿತರನ್ನು ಪ್ರಾಧ್ಯಾಪಕ ಹುದ್ದೆಗಳಿಂದ ದೂರವಿಡಲಾಯಿತು. 1993ರಲ್ಲಿ ರಾಜ್ಯದ ವಿಶ್ವವಿದ್ಯಾನಿಲಯವೊಂದು ಶಿಕ್ಷಕರ ನೇಮಕಾತಿಗೆ ಪ್ರಕಟನೆ ಹೊರಡಿಸಿತು. ಇಂಗ್ಲಿಷ್ ವಿಷಯದ ಪ್ರಾಧ್ಯಾಪಕ ಕೇಡರಿನ ಏಕ ಹುದ್ದೆಯನ್ನು ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದರ ವಿರುದ್ದ ದಲಿತ ಪರ ಚಿಂತಕರೆನಿಸಿಕೊಂಡವರು ಹೈಕೋರ್ಟಿನಲ್ಲಿ ಪ್ರಶ್ನಿಸಿದರು. ಅದು ಆಶ್ಚರ್ಯಕರ. ಪರಿಶಿಷ್ಟರಿಗೆ ಮೀಸಲಾದ ಹುದ್ದೆಯ ವಿರುದ್ದ ಕೋರ್ಟ್ ಮೆಟ್ಟಿಲೇರಿದವರು ಇಂದಿಗೂ ಸಾರ್ವಜನಿಕ ಸಭೆಗಳಲ್ಲಿ ದಲಿತೋದ್ಧಾರ ಕುರಿತು ಭಾಷಣ ಮಾಡುುದು ಈ ಕಾಲದ ವ್ಯಂಗ್ಯ.
ಸರಕಾರದ ಅಪಾಯಕಾರಿ ಆದೇಶ
1990ರ ಸುಮಾರಿಗೆ ರಾಜ್ಯದಲ್ಲಿ ಕೆಲ ಹೊಸ ವಿಶ್ವವಿದ್ಯಾನಿಲಯ ಗಳು ಅಸ್ತಿತ್ವಕ್ಕೆ ಬಂದವು. 1987ರ ಆದೇಶದಂತೆ ವಿಷಯವಾರು ಮತ್ತು ವೃಂದವಾರು ಮೀಸಲಾತಿ ಪಾಲಿಸಲಾಗುತ್ತಿತ್ತು. ಅದು ಕೆಲವರ ಕಣ್ಣುರಿಗೆ ಕಾರಣವಾಯಿತು. ಆಗ 22.2.1994ರಲ್ಲಿ ಸರಕಾರದ ಆದೇಶ ಹೊರಬಿತ್ತು. ಅದರ ಸಾರಾಂಶವೆಂದರೆ, ವಿಷಯವಾರು ಮೀಸಲಾತಿ ಪಾಲಿಸುವುದರಿಂದ ಹೊಸ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕ ಮತ್ತು ರೀಡರ್ ಕೇಡರಿನ ಹೆಚ್ಚಿನ ಹುದ್ದೆಗಳು ಪರಿಶಿಷ್ಟರ ಪಾಲಾಗುತ್ತಿವೆ. ಆದ್ದರಿಂದ ಪರಿಶಿಷ್ಟರಿಗೆ ಕಡಿಮೆ ಪ್ರಾತಿನಿಧ್ಯ ಕೊಡುವ ಸಲುವಾಗಿ ಎಲ್ಲ ಪ್ರಾಧ್ಯಾಪಕ ಮತ್ತು ರೀಡರ್ ಹುದ್ದೆಗಳನ್ನು ಗುಂಪುಗೂಡಿಸಿ ಮೀಸಲಾತಿ ನೀಡುವಂತೆ ಸೂಚಿಸಲಾಯಿತು. ಇದು ಅಪಾಯಕಾರಿ ಆದೇಶ ಹಾಗೂ ಪರಿಶಿಷ್ಟರ ವಿರೋಧಿ ಆದೇಶ. ಅದಾಗಲೇ, 1990ರಲ್ಲಿ ಬಂದಿದ್ದ ಡಾ. ರಾಜಕುಮಾರ್ ವಿರುದ್ಧ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಮೊಕದ್ದಮೆಯ ತೀರ್ಪಿಗೆ ಸರಕಾರದ 1994ರ ಆದೇಶ ವ್ಯತಿರಿಕ್ತವಾಗಿದೆ.
ಕೆಲ ವಿಶ್ವವಿದ್ಯಾನಿಲಯಗಳ ಹಲವು ವಿಭಾಗಗಳಲ್ಲಿ ಪರಿಶಿಷ್ಟರಿಗೆ ಶೂನ್ಯ ಪ್ರಾತಿನಿಧ್ಯವಿದೆ. ಇತ್ತೀಚಿನ ದಶಕಗಳಲ್ಲಷ್ಟೇ ಪರಿಶಿಷ್ಟರು ವಿಜ್ಞಾನದ ವಿಷಯಗಳು, ಇಂಜಿನಿಯರಿಂಗ್ ವಿಜ್ಞಾನದ ವಿಷಯಗಳು ಮತ್ತಿತರ ತಜ್ಞ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಾ ಮೊದಲ ತಲೆಮಾರಿನ ಡಾಕ್ಟರೇಟ್ ಪದವೀಧರರಾಗಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿದಾರರಾಗುತ್ತಿದ್ದಾರೆ. ಅಂತಹವರಿಗೆ ನ್ಯಾಯಯುತ ಪ್ರಾತಿನಿಧ್ಯ ಸಿಗಬೇಕಾದರೆ ವಿಷಯವಾರು ಮತ್ತು ವೃಂದವಾರು ಮೀಸಲಾತಿ ನೀಡುವುದು ಸರಿಯಾದ ಕ್ರಮ. ಒಂದು ವಿಷಯದ ಮೆರಿಟ್ ಅಥವಾ ಪ್ರತಿಭೆಯನ್ನು ಮತ್ತೊಂದು ವಿಷಯದ ಮೆರಿಟ್‌ಗೆ ಹೋಲಿಸಲಾಗುವುದಿಲ್ಲ. ಎಲ್ಲಾ ವಿಷಯಗಳ ಹುದ್ದೆಗಳನ್ನು ಗುಂಪುಗೂಡಿಸಿ ಮೀಸಲಾತಿ ಅಳವಡಿಸಿದಾಗ ಈ ಸಮಸ್ಯೆ ಉದ್ಬವಿಸುತ್ತದೆ.
ರೋಸ್ಟರ್ ಹೇಗಿರಬೇಕು?
ಬಹುಮುಖ್ಯವಾಗಿ ರೋಸ್ಟರ್‌ಗೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಯೂ ಇದೆ. ನಮ್ಮ ರಾಜ್ಯದಲ್ಲಿ ನೇರ ನೇಮಕಾತಿಗೆ 100 ಬಿಂದುಗಳ ರೋಸ್ಟರ್ ಇದೆ. ಇದು ಸೂಕ್ತವಾಗಿದೆ. ಉತ್ತರದ ಕೆಲ ರಾಜ್ಯಗಳಲ್ಲಿ 200 ಬಿಂದುಗಳ ರೋಸ್ಟರ್ ಇದೆ. ವಿಶ್ವವಿದ್ಯಾನಿಲಯಗಳ ಪ್ರತಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಿರುವುದಿಲ್ಲ. ಕೇಂದ್ರ ಸರಕಾರದ ಹಲವಾರು ಇಲಾಖೆಗಳ ಅಗಾಧ ಸಂಖ್ಯೆಯ ಹುದ್ದೆಗಳಿಗಾಗಿ ‘ತಯಾರು’ ಮಾಡಲಾದ 200 ರೋಸ್ಟರ್ ಬಿಂದುಗಳು ವಿಶ್ವವಿದ್ಯಾನಿಲಯಗಳಿಗೆ ಸೂಕ್ತವೆನಿಸುವುದಿಲ್ಲ. ಒಂದು ಪ್ರತ್ಯೇಕವಾದ ನ್ಯಾಯೋಚಿತವಾದ ಕಡಿಮೆ ಬಿಂದುಗಳ, ಉದಾಹರಣೆಗೆ, 10 ರಿಂದ 20 ಬಿಂದುಗಳ ರೋಸ್ಟರ್ ಅನ್ನು ಅಭಿವೃದ್ಧಿ ಪಡಿಸಬೇಕಿದೆ. ನ್ಯಾಯಾಲಯದ ಅಭಿಪ್ರಾಯವೂ ಇದೇ ಆಗಿದೆ. ಈಗ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪರಿಶಿಷ್ಟರು ಮತ್ತು ಹಿಂದುಳಿದವರಿಗಿರುವ ಆತಂಕವೆಂದರೆ, ವಿಷಯವಾರು ಮೀಸಲಾತಿ ನೀಡಿದಲ್ಲಿ, ಒಂದು ನೇಮಕಾತಿಯಲ್ಲಿನ ಮೀಸಲಿನ ಹುದ್ದೆಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿವೆ ಎಂಬುದು. ಅವರ ಆತಂಕ ಸರಿಯಾಗಿದೆ. ಇದಕ್ಕಿರುವ ಪರಿಹಾರವೆಂದರೆ ರೋಸ್ಟರಿನ ಪರಿಷ್ಕರಣೆ. ಅದು ಪರಿಶಿಷ್ಟರ ಪರವಾಗಿರಬೇಕು. ನಮ್ಮ ರಾಜ್ಯದ ರೋಸ್ಟರ್ ಪದ್ಧತಿ ಸರಿಯಿದೆ.
ಒಟ್ಟಾರೆಯಾಗಿ, ವಿಷಯವಾರು ರೋಸ್ಟರ್ ಅಳವಡಿಸಬೇಕೆನ್ನುವ ನ್ಯಾಯಾಲಯದ ಆದೇಶವು ನ್ಯಾಯಯುತವಾಗಿದೆ. ಆದರೆ, ಕೇಂದ್ರ ಸರಕಾರದ ರೋಸ್ಟರ್ ಪದ್ಧತಿ ನ್ಯಾಯಯುತವಾಗಿಲ್ಲ. ಯುಜಿಸಿಯ ಮಾರ್ಚ್ 5, 2018ರ ಪತ್ರದಲ್ಲಿ ವಿಶ್ವವಿದ್ಯಾನಿಲಯಗಳು ರೋಸ್ಟರ್ ಪದ್ಧತಿಯನ್ನು ತಯಾರು ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹುದ್ದೆಗಳನ್ನು ಮೀಸಲಿಡಬೇಕು ಎಂದು ನಿರ್ದೇಶನ ನೀಡಿರುವುದು ಅಸ್ಪಷ್ಟವಾಗಿದೆ. ವಿಶ್ವವಿದ್ಯಾನಿಲಯಗಳು ರೋಸ್ಟರ್ ಅನ್ನು ತಯಾರು ಮಾಡಲಾಗುವುದಿಲ್ಲ. ರೋಸ್ಟರ್ ಅನ್ನು ಅಳವಡಿಸಿಕೊಳ್ಳಬಹುದಷ್ಟೇ. ಪ್ರತಿ ಸಬ್ಜೆಕ್ಟಿನಲ್ಲೂ ಪರಿಶಿಷ್ಟರಿಗೆ ಪ್ರಾತಿನಿಧ್ಯ ನೀಡುವ ಸಕಾರಾತ್ಮಕ ರೋಸ್ಟರ್ ಪದ್ಧತಿಯ ತುರ್ತು ಅಗತ್ಯವಿದೆ. ಪರಿಶಿಷ್ಟರಿಗೆ ಎಲ್ಲ ವಿಷಯಗಳಲ್ಲಿ, ವಿಭಾಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕಿದೆ. ಪರಿಶಿಷ್ಟರ ಜನಪ್ರತಿನಿಧಿಗಳು ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಪರಿಹಾರ ಕಂಡುಕೊಳ್ಳುವಲಿ್ಲ ಪ್ರಮುಖ ಪಾತ್ರ ವಹಿಸಬೇಕಿದೆ.







