‘ದಾಲ್ಮಿಯ-ಕೆಂಪು ಕೋಟೆ’ ಚರ್ಚೆ: ಕೇಳಬೇಕಾಗಿರುವ ಕೆಲವು ಪ್ರಶ್ನೆಗಳು

ಭಾಗ-2
ಸದ್ಯ ಲಭ್ಯವಾಗಿರುವ ದಾಖಲೆಗಳನ್ನು ಗಮನಿಸಿದಾಗ, ಈ ಯೋಜನೆಯನ್ನು ವಿನ್ಯಾಸಗೊಳಿಸಿದ ರೀತಿಯನ್ನು ಕಂಡಾಗ ಈ ಅಂಶವು ಯೋಜನೆಯ ಭಾಗವಾಗಿರುವಂತೆ ಕಾಣುವುದಿಲ್ಲ. ಒಪ್ಪಂದದಲ್ಲಿ ಉಲ್ಲೇಖಿಸಲಾಗಿರುವ ಕಾಲಾವಕಾಶವು ಅತ್ಯಂತ ಕಡಿಮೆಯಾಗಿದೆ. ಇದು ಚಿಂತೆಗೀಡುಮಾಡುತ್ತದೆ. ಸ್ಮಾರಕದ ಜೀರ್ಣೋದ್ಧಾರವು 0-12 ತಿಂಗಳಲ್ಲಿ ನಡೆಯಬೇಕೆಂದರೆ ಯಾವ ಸಂರಕ್ಷಣಾ ವಾಸ್ತುಶಿಲ್ಪಿ ಕೂಡಾ ಒಪ್ಪುವುದಿಲ್ಲ. ಇನ್ನು ಸ್ಮಾರಕದ ಸ್ವಚ್ಛತೆಯನ್ನೂ ಅಲ್ಪ ಸಮಯದಲ್ಲಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಇವೆಲ್ಲ ಸೂಕ್ಷ್ಮ ಕೆಲಸಗಳು. ಅಂಕಣಕಾರ ಮುಕುಲ್ ಕೇಶವನ್ ತಮ್ಮ ಇತ್ತೀಚಿನ ಅಂಕಣದಲ್ಲಿ ಬರೆದಿರುವಂತೆ, ಹೊಸದಿಲ್ಲಿಯ ಹುಮಾಯೂನನ ಸಮಾಧಿಯ ಉದ್ಯಾನವನ್ನು ದೈಹಿಕವಾಗಿ ಜೀರ್ಣೋದ್ಧಾರಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದಕ್ಕೂ ಮೊದಲು ಆಘಾ ಖಾನ್ ಟ್ರಸ್ಟ್ ಎರಡು ವರ್ಷಗಳ ಕಾಲ ಅದರ ಸಂಶೋಧನೆ ನಡೆಸಿತ್ತು. ಅವರ ಕೆಲಸದ ಜಾಗರೂಕತೆ ಮತ್ತು ಸೂಕ್ಷ್ಮತೆ ಅಂತಿಮ ಪ್ರತಿಫಲದಲ್ಲಿ ಕಾಣುತ್ತಿತ್ತು.
ಪರಂಪರೆಯನ್ನು ದತ್ತು ಪಡೆಯಿರಿ ಯೋಜನೆಯಲ್ಲಿ ಅರ್ಜಿದಾರರಿಗೆ ತಮ್ಮ ಆರ್ಥಿಕ ದೃಢತೆಗೆ ಸಾಕ್ಷಿ ಒದಗಿಸಲು ಸೂಚಿಸಲಾಗಿದೆಯೇ ಹೊರತು ಹೆಚ್ಚೇನೂ ಕೇಳಲಾಗಿಲ್ಲ. ಉದಾಹರಣೆಗೆ, ಈ ಕ್ಷೇತ್ರದ ತಜ್ಞರ ಜೊತೆ ಜೊತೆಗಾರಿಕೆ ಮಾಡಿಕೊಳ್ಳುವುದು ಅರ್ಜಿ ಸಲ್ಲಿಸಲು ಅರ್ಹತೆಯಾಗಿಲ್ಲ. ಯೋಜನೆಯ ಮೇಲುಸ್ತುವಾರಿ ನೋಡಿಕೊಳ್ಳಲು ಸಂಸ್ಥೆಗಳನ್ನು ಆಯ್ಕೆ ಮಾಡುವ ಬಿಡ್‌ಗಳನ್ನು ಆರಿಸುವ ಓವರ್‌ಸೈಟ್ ಆ್ಯಂಡ್ ವಿಶನ್ ಸಮಿತಿಯಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳೇ ತುಂಬಿ ಹೋಗಿದ್ದಾರೆ. ಸಂರಕ್ಷಣೆ ಅಥವಾ ಪಾರಂಪರಿಕ ತಾಣಗಳ ಬಗ್ಗೆ ಜ್ಞಾನ ಹೊಂದಿರುವ ತಜ್ಞರು, ಈ ಬಿಡ್‌ಗಳನ್ನು ರೂಪಿಸುವ ಅಥವಾ ವೌಲ್ಯಮಾಪನ ಮಾಡುವ ಸಮಿತಿಯ ಮುಖ್ಯ ಭಾಗವಾಗಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪಾರಂಪರಿಕ ತಾಣಗಳ ಸಂರಕ್ಷಣೆ ಮತ್ತು ವ್ಯಾಖ್ಯಾನ ಗಣನೀಯವಾಗಿ ಜನಪ್ರಿಯತೆ ಪಡೆದುಕೊಂಡಿದೆ. ಬಹಳಷ್ಟು ಪ್ರತಿಷ್ಠಾನಗಳು, ಎನ್‌ಜಿಒಗಳು, ಸಂರಕ್ಷಣಾ ವಾಸ್ತುಶಿಲ್ಪಿಗಳು, ಹಾಗೂ ಪ್ರದರ್ಶನ ವಿನ್ಯಾಸಕಾರರು ಬಹುತೇಕವಾಗಿ ಖಾಸಗಿ ಕ್ಷೇತ್ರದಲ್ಲಿ (ಅರಮನೆಗಳು, ಪಾರಂಪರಿಕ ಹೊಟೇಲ್‌ಗಳು, ಖಾಸಗಿ ವಸ್ತುಸಂಗ್ರಹಾಲಯಗಳು ಮತ್ತು ತಾತ್ಕಾಲಿಕ ಪ್ರದರ್ಶನಗಳು) ಸಿಗುವ ಅವಕಾಶಗಳನ್ನು ಬಳಸಿ ತಾವೂ ಅತ್ಯುನ್ನತ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಸಮನಾಗಿ ಕೆಲಸ ಮಾಡಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮತ್ತು ಹಲವಾರು ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ. ತಜ್ಞರು ಲಭ್ಯವಿದ್ದಾರೆ ಆದರೆ ಈ ಪ್ರಕ್ರಿಯೆಯಲ್ಲಿ ಅವರನ್ನು ಹೊರಗಿಡಲಾಗಿದೆ. ಈ ಯೋಜನೆಯಲ್ಲಿ ವೃತ್ತಿಪರ ಎಂದು ಕರೆಸಿಕೊಳ್ಳಬಹುದಾದ ಒಂದು ಸಂಸ್ಥೆ ಭಾಗಿಯಾಗಿದ್ದರೆ ಅದು ಭಾರತೀಯ ಪುರಾತತ್ವಶಾಸ್ತ್ರ ಇಲಾಖೆೆ. ಈ ಇಲಾಖೆೆಯ ಅಡಿಯಲ್ಲಿ ಕೆಂಪು ಕೋಟೆಯು ಒಂದು ಶತಮಾನಕ್ಕೂ ಅಧಿಕ ಕಾಲವಿತ್ತು. ರಾಷ್ಟ್ರೀಯ ಸ್ಮಾರಕಗಳ ನಿರ್ವಹಣೆಯನ್ನು ಮಾಡುವುದು ಸರಕಾರದ ಕರ್ತವ್ಯ ಎಂದು ಹೇಳುವವರು ಇಷ್ಟು ವರ್ಷ ಪುರಾತತ್ವ ಇಲಾಖೆೆಯ ಅಡಿಯಲ್ಲಿದ್ದ ಕೆಂಪು ಕೋಟೆಯ ಸ್ಥಿತಿ ಏನಾಗಿದೆ ಎಂಬುದನ್ನು ಒಮ್ಮೆ ಗಮನಿಸಬೇಕು. ಕೋಟೆಯೊಳಗಿನ, ನ್ಯಾಯದ ತಕ್ಕಡಿ ಅಥವಾ ಜಾಲಿಯಿರುವ ತಸ್ಬಿಹ್ ಖಾನಾ ಅಥವಾ ಧ್ಯಾನದ ಕೋಣೆಯತ್ತ ಒಮ್ಮೆ ನೋಡುವ. ಕೊನೆಯ ಮೊಗಲ್ ದೊರೆ ಬಹದೂರ್ ಷಾ ಝಫರ್ ಇಲ್ಲಿನ ಪರದೆಗೆ ವಿರುದ್ಧವಾಗಿ ಕುಳಿತಿರುವ ಭಾವಚಿತ್ರವನ್ನು ಇಲ್ಲಿ ನೇತು ಹಾಕಲಾಗಿದೆ.
ಈ ಚಿತ್ರದಲ್ಲಿ ಪ್ರತಿಯೊಂದು ಅಮೃತಶಿಲೆಯ ಹೂಗಳ ಪ್ರತಿ ದಳವೂ ತಮ್ಮ ಸ್ಥಾನದಿಂದ ಕದಲಿದಂತೆ ಭಾಸವಾಗುತ್ತದೆ. ಆಶ್ಚರ್ಯವೆಂದರೆ, 1857ರಲ್ಲಿ ಸಿಪಾಯಿ ದಂಗೆ ನಡೆದ ಸಮಯದಲ್ಲಿ ಬ್ರಿಟಿಷರು ಈ ಕೋಟೆಯನ್ನು ಲೂಟಿಗೈದ ಸಂದರ್ಭದಲ್ಲೂ ಈ ಜಾಲಿಗೆ ಯಾವ ಹಾನಿಯೂ ಸಂಭವಿಸಿರಲಿಲ್ಲ. ಆದರೆ ಸ್ವತಂತ್ರ ಭಾರತದಲ್ಲಿ ಮಾತ್ರ ಅದನ್ನು ಸರಿಯಾಗಿ ನೋಡಿಕೊಳ್ಳುವವರು ಯಾರೂ ಇರಲಿಲ್ಲ. 2014ರ ಹೊತ್ತಿಗೆ ಮುಖ್ಯ ಜಾಲಿಯ ಅರ್ಧ ಭಾಗ ಕಾಣೆಯಾಗಿತ್ತು ಮತ್ತು 2016ರ ಸುಮಾರಿಗೆ ಅಲ್ಲಿದ್ದ ಪರದೆಯು ಸಂಪೂರ್ಣವಾಗಿ ನಾಶವಾಯಿತು. ಇಂದು ಕೆಂಪು ಕೋಟೆಯ ಒಳಾಂಗಣ ಮಳಿಗೆಗಳು ಇರುವ ಪೀಠದ ಕಂಬದ ಮೇಲೇರಲು ಪ್ರವಾಸಿಗರಿಗೆ ಅವಕಾಶ ನಿರಾಕರಿಸಲಾಗಿದೆ. ಈ ನಿರ್ಬಂಧವನ್ನು ಕೋಟೆಯ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡಲು ಹಾಕಲಾಗಿದೆಯೇ ಅಥವಾ ಅದರ ಆಘಾತಕಾರಿ ಸ್ಥಿತಿಯನ್ನು ಮರೆಮಾಚಲು ಹಾಕಲಾಗಿದೆಯೇ ಎಂಬುದೇ ಸಂಶಯಾಸ್ಪದವಾಗಿದೆ.
ಇದೇ ವೇಳೆ, ಜಾಲಿಗೆ ಅಪರಾಧಿ ಉದ್ದೇಶದಿಂದ ಮಾಡಲಾಗಿರುವ ಹಾನಿಯ ಬಗ್ಗೆ ಯಾವ ತನಿಖೆಯೂ ನಡೆದಿಲ್ಲ, ಶಿಕ್ಷೆಯೂ ಆಗಿಲ್ಲ ಮತ್ತು ಅದನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ. ವಾಸ್ತವದಲ್ಲಿ, ಪುರಾತತ್ವ ಇಲಾಖೆೆ ಈ ಜಾಲಿಯನ್ನು ಸರಿಪಡಿಸಲು ಹೋಗದಿರುವುದಕ್ಕೆ ನಾವು ಕೃತಜ್ಞರಾಗಿರಬೇಕು. ಯಾಕೆಂದರೆ ಆ ಕೆಲಸ ಇಲಾಖೆೆಯ ಸಾಮರ್ಥ್ಯವನ್ನು ಮೀರಿದ್ದಾಗಿದೆ. ಕೊನೆಯ ಬಾರಿ ಪುರಾತತ್ವ ಇಲಾಖೆೆ ಕೆಂಪು ಕೋಟೆಯ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಅದರ ಕೆಲಸ ಎಷ್ಟು ಕಳಪೆ ಹಾಗೂ ತಾಣಕ್ಕೆ ಹಾನಿಯುಂಟು ಮಾಡುವಂತಿತ್ತೆಂದರೆ ಕಾಳಜಿಯುಳ್ಳ ನಾಗರಿಕರ ಗುಂಪು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿ ಈ ಜೀರ್ಣೋದ್ಧಾರ ಕಾರ್ಯಕ್ಕೆ ತಡೆ ನೀಡುವಂತೆ ಕೋರಿತ್ತು. 2003ರಲ್ಲಿ ನಡೆದ ಈ ಘಟನೆಯ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿ ಸರಕಾರದಲ್ಲಿ ಸಂಸ್ಕೃತಿ ಸಚಿವರಾಗಿದ್ದ ಜಗ್‌ಮೋಹನ್ ಅವರು ಸ್ಮಾರಕದ ಜೀರ್ಣೋದ್ಧಾರಕ್ಕೆ ಆದೇಶ ನೀಡಿದ್ದರು.
ಪುರಾತತ್ವ ಇಲಾಖೆೆಯ ಅಸ್ವಸ್ಥತೆ ಅಥವಾ ಆಲಸ್ಯದ ಬಗ್ಗೆ ಚರ್ಚಿಸಲು ಸಾಕಷ್ಟು ಸಮಯಾವಕಾಶದ ಅಗತ್ಯವಿದೆ. ಅದಕ್ಕೆ ತನ್ನ ಅಧೀನದಲ್ಲಿರುವ ಎಲ್ಲ ಸ್ಮಾರಕಗಳನ್ನು ಒಬ್ಬಂಟಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂಬುದಂತೂ ಸ್ಪಷ್ಟವಾಗಿದೆ. ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ 2017ರಲ್ಲಿ ಜಾರಿಗೆ ತಂದಿರುವ ‘ಪರಂಪರೆಯನ್ನು ದತ್ತು ಪಡೆಯಿರಿ’ ಯೋಜನೆಯಲ್ಲಿ ಸರಕಾರವು ಅನುಮೋದಿಸಿರುವ ನೂರಾರು ದತ್ತು ಸ್ವೀಕಾರ ಪ್ರಸ್ತಾವಗಳ ಪೈಕಿ ದಾಲ್ಮಿಯ ಭಾರತ್-ಕೆಂಪು ಕೋಟೆ ಒಂದಾಗಿದೆಯಷ್ಟೇ. ಇನ್ನು, ಸಫ್ದರ್‌ಜಂಗ್ ಸಮಾಧಿಯನ್ನು ಭಾರತೀಯ ಟ್ರಾವೆಲ್ ಕಾರ್ಪೊರೇಶನ್, ಜಂತರ್ ಮಂತರ್‌ನ್ನು ಎಸ್‌ಬಿಐ ಪ್ರತಿಷ್ಠಾನ, ಕುತುಬ್ ಮಿನಾರ್ ಮತ್ತು ಅಜಂತಾ ಗುಹೆಗಳನ್ನು ಯಾತ್ರಾ ಆನ್‌ಲೈನ್ ದತ್ತು ಪಡೆದುಕೊಂಡಿದೆ. ಬದಲಾವಣೆ ಅಗತ್ಯವಾಗಿತ್ತು. ಆದರೆ ಆ ಬದಲಾವಣೆ ಇದುವೇಯೇ? ಎಲ್ಲವೂ ಒಳ್ಳೆಯದಾಗಲಿದೆ ಎಂದು ಭರವಸೆಯಿಡೋಣ; ಕೆಟ್ಟದ್ದನ್ನೂ ನಿರೀಕ್ಷಿಸೋಣ.
ಕೃಪೆ: scroll.in