ರಮಝಾನ್: ಇದೇ ಅಂತರಂಗ ಶುದ್ಧಿ...ಇದೇ ಬಹಿರಂಗ ಶುದ್ಧಿ...

ಸರಳ ಆಹಾರ ಸೇವನೆ ಉಪವಾಸದ ಪ್ರಧಾನ ಗುಣವಾಗಿದೆ. ಹಗಲಿಗಷ್ಟೇ ಅಲ್ಲ, ರಾತ್ರಿಗೂ ಇದು ಅನ್ವಯವಾಗಬೇಕು. ಹಸಿದವರು ನಮಗೆ ಹಗಲು ಮಾತ್ರವಲ್ಲ, ಇಫ್ತಾರ್ ಸಮಯದಲ್ಲೂ ನೆನಪಾಗಬೇಕು. ಮುಖ್ಯವಾಗಿ ಇಫ್ತಾರ್‌ನ ಹೆಸರಿನಲ್ಲಿ ಇಂದು ನಡೆಯುತ್ತಿರುವ ಆಹಾರದ ದುಂದುವೆಚ್ಚ ನಿಲ್ಲಬೇಕು.
‘‘ರಮಝಾನ್‌ನಲ್ಲಿ ಅದೆಷ್ಟೋ ಉಪವಾಸಿಗರಿದ್ದಾರೆ. ಅವರಿಗೆ ಹಸಿವು, ಬಾಯಾರಿಕೆ ಹೊರತುಪಡಿಸಿ ಇನ್ನೇನೂ ಸಿಗದು. ಎಷ್ಟೋ ರಾತ್ರಿ ನಮಾಝ್ ನಿರ್ವಹಿಸುವವರಿದ್ದಾರೆ. ಅವರಿಗೆ ರಾತ್ರಿ ಜಾಗರಣೆಯನ್ನು ಹೊರತು ಪಡಿಸಿ ಇನ್ನೇನೂ ಸಿಗದು’’
ಪ್ರವಾದಿ ಮುಹಮ್ಮದ್(ಸ)
ರಮಝಾನ್ ತಿಂಗಳು ಮತ್ತೊಮ್ಮೆ ಆಗಮಿಸಿದೆ. ಮನುಷ್ಯ ತನ್ನನ್ನು ತಾನು ಮರು ನವೀಕರಿಸಿಕೊಳ್ಳುವುದಕ್ಕಾಗಿ ಸಿಕ್ಕಿದ ಅವಕಾಶವೇ ರಮಝಾನ್ ತಿಂಗಳು. ಕ್ರೈಸ್ತ, ಯಹೂದಿಗಳಲ್ಲೂ ಉಪವಾಸ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ. ಇಸ್ಲಾಂ ಧರ್ಮದಲ್ಲಿ ಅದು ಇನ್ನಷ್ಟು ಅರ್ಥಪೂರ್ಣವಾಗಿ ಮುಂದುವರಿದಿದೆ. ಪವಿತ್ರ ಕುರ್‌ಆನ್ ಅವತೀರ್ಣಗೊಂಡ ತಿಂಗಳು ರಮಝಾನ್ ಆಗಿದೆ ಎಂದು ಮುಸ್ಲಿಮರು ನಂಬುತ್ತಾರೆ. ಕುರ್‌ಆನ್ ಇಸ್ಲಾಮ್‌ನ ತಳಹದಿಯಾಗಿರುವುದರಿಂದ, ಅದರ ಅನುಷ್ಠಾನಕ್ಕಾಗಿ ರಮಝಾನ್ ತಿಂಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ರಮಝಾನ್ ಎಂದರೆ ಕೇವಲ ಉಪವಾಸವಲ್ಲ. ದಾನ, ಝಕಾತ್, ಸಹನೆ, ಕರುಣೆ, ಸತ್ಕರ್ಮ, ನಮಾಝ್ ಎಲ್ಲವೂ ಈ ತಿಂಗಳಲ್ಲಿ ಪ್ರಾಧಾನ್ಯ ಪಡೆಯುತ್ತದೆ. ಸತ್ಯ ವಿಶ್ವಾಸಿಯಾಗಲು ಒಬ್ಬ ಮನುಷ್ಯನಿಗೆ ಅಗತ್ಯವಿರುವ ವ್ಯಕ್ತಿತ್ವವನ್ನು ಈ ತಿಂಗಳು ರೂಪಿಸುತ್ತದೆ.
ಬಸವಣ್ಣ ‘ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ’ಯ ಕುರಿತಂತೆ ತಮ್ಮ ವಚನದಲ್ಲಿ ಹೇಳುತ್ತಾರೆ. ರಮಝಾನ್ ಉಪವಾಸ ಮನುಷ್ಯನ ಅಂತರಂಗ ಮತ್ತು ಬಹಿರಂಗ ಎರಡನ್ನೂ ಶುದ್ಧೀಕರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಮನುಷ್ಯನ ಒಳಹೊರಗನ್ನು ಶುದ್ಧೀಕರಿಸುವ ಮಹತ್ತರ ಪಾತ್ರವನ್ನು ವಹಿಸುತ್ತದೆ. ಭೌತಿಕ ಮತ್ತು ಅಭೌತಿಕವಾಗಿ ಮನುಷ್ಯನನ್ನು ಪರಿವರ್ತಿಸುವ ಉದ್ದೇಶವನ್ನು ಇದು ಹೊಂದಿದೆ. ಈ ಸಂದರ್ಭದಲ್ಲಿ ಮನುಷ್ಯನನ್ನು ಮನುಷ್ಯನಿಗೆ ಇನ್ನಷ್ಟು ಹತ್ತಿರವಾಗಿಸುತ್ತಾ ಆ ಮೂಲಕ ದೇವರಿಗೆ ಹತ್ತಿರವಾಗಿಸಲಾಗುತ್ತದೆ. ಇಲ್ಲಿ ಉಪವಾಸ ಬಿರುಕು ಬಿಟ್ಟ ಮನುಷ್ಯ ಸಂಬಂಧಗಳನ್ನು ಮರು ಜೋಡಿಸುವ ಪ್ರಯತ್ನವನ್ನು ಮಾಡುತ್ತದೆ. ಉಪವಾಸ ವ್ರತವನ್ನು ಆಚರಿಸಿದವ ಆ ಮೂಲಕ ಇನ್ನೊಬ್ಬ ಮನುಷ್ಯನ ಸಂಕಟಗಳನ್ನು ಅರ್ಥ ಮಾಡಿಕೊಳ್ಳುತ್ತಾ, ತನ್ನನ್ನು ತಾನು ಅರಿತುಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ. ತನ್ನನ್ನು ಅರಿತುಕೊಳ್ಳುತ್ತಾ ಹೋದಂತೆಯೇ ಆತ ದೇವರಿಗೆ ಹತ್ತಿರವಾಗುತ್ತಾನೆ.
ಸರಳಬದುಕು:
ಹಗಲಿಡೀ ಅನ್ನಾಹಾರ ತೊರೆದಾಕ್ಷಣ ರಮಝಾನ್ ಉಪವಾಸ ನೆರವೇರಿಸಿದಂತಾಗುವುದಿಲ್ಲ. ರಮಝಾನ್ ತಿಂಗಳ ರಾತ್ರಿಗಳಿಗೂ ಅದರದೇ ಆದ ಮಹತ್ವವಿದೆ. ಉಪವಾಸದಿಂದ ಬಡವರ ಹಸಿವನ್ನು ನಾವೂ ಅನುಭವಿಸಿದಂತಾಗುತ್ತದೆ ಎಂದು ಹೇಳುತ್ತೇವಾದಾರೂ, ಅನೇಕ ಸಂದರ್ಭದಲ್ಲಿ ನಮ್ಮದು ಹಸಿವಿನ ಅಣಕ ಮಾತ್ರವಾಗಿರುತ್ತದೆ. ರಮಝಾನ್‌ನ ಉಪವಾಸ ಅನುಭವಿಸುವವರಿಗೂ, ಅನ್ನಾಹಾರವಿಲ್ಲದೆ ಹಸಿವಿನಿಂದ ಇರುವ ಬಡವರಿಗೂ ವ್ಯತ್ಯಾಸವಿದೆ. ಇಂತಹ ಬಡವರ ಹಸಿವಿನಲ್ಲಿ ಅವಮಾನವೂ ಜೊತೆಗೂಡಿರುತ್ತದೆ. ರಮಝಾನ್ ಉಪವಾಸಗೈಯುವ ನಾವು ಹಗಲಲ್ಲಿ ಕಠೋರ ಹಸಿವನ್ನು ಅನುಭವಿಸಬಹುದಾದರೂ, ಬಡವ ಅನುಭವಿಸುವ ಅಪಮಾನ, ಕೀಳರಿಮೆಗಳನ್ನು ಅನುಭವಿಸಲಾಗುವುದಿಲ್ಲ. ಯಾಕೆಂದರೆ ರಾತ್ರಿಯಾದಾಕ್ಷಣ ನಮಗೆ ಹೊಟ್ಟೆ ತುಂಬಾ ಅನ್ನಾಹಾರ ದೊರೆಯುವ ಭರವಸೆಯಿದೆ. ವಿಶ್ವಾದ್ಯಂತ ಹಸಿವಿನಿಂದಿರುವ ಕೋಟ್ಯಂತರ ಮಂದಿಗೆ ಆ ಭರವಸೆಯಿರುವುದಿಲ್ಲ. ಈ ಕಾರಣದಿಂದಲೇ ಹಗಲಿಡೀ ಹಸಿವಿನಿಂದಿದ್ದು, ಸಂಜೆ ಇಫ್ತಾರ್ ಸಮಯದಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವುದು, ಆಹಾರವನ್ನು ದುಂದುವೆಚ್ಚ ಗೈಯುವುದು ರಮಝಾನ್‌ಗೆ ಮಾಡುವ ಅವಮಾನವಾಗಿದೆ. ಇದು ಹಸಿವಿನ ಅಣಕವಾಗಿದೆ. ಸರಳ ಆಹಾರ ಸೇವನೆ ಉಪವಾಸದ ಪ್ರಧಾನ ಗುಣವಾಗಿದೆ. ಹಗಲಿಗಷ್ಟೇ ಅಲ್ಲ, ರಾತ್ರಿಗೂ ಇದು ಅನ್ವಯವಾಗಬೇಕು. ಹಸಿದವರು ನಮಗೆ ಹಗಲು ಮಾತ್ರವಲ್ಲ, ಇಫ್ತಾರ್ ಸಮಯದಲ್ಲೂ ನೆನಪಾಗಬೇಕು. ಮುಖ್ಯವಾಗಿ ಇಫ್ತಾರ್‌ನ ಹೆಸರಿನಲ್ಲಿ ಇಂದು ನಡೆಯುತ್ತಿರುವ ಆಹಾರದ ದುಂದುವೆಚ್ಚ ನಿಲ್ಲಬೇಕು. ರಮಝಾನ್ ಪೂರ್ವದಲ್ಲಿ ದೈನಂದಿನ ಆಹಾರದ ವೆಚ್ಚಕ್ಕಿಂತ ರಮಝಾನ್‌ನ ತಿಂಗಳ ಆಹಾರದ ೆಚ್ಚ ಇಳಿಮುಖವಾಗಬೇಕು.
ಅಂತರಂಗ ಶುದ್ಧಿ:
ದುಷ್ಕರ್ಮಗಳಿಂದ ದೂರವಿರದೆ ನಾವು ಉಪವಾಸಗೈದರೆ, ಅದರಿಂದ ನಮಗೆ ಹಸಿವು ಬಾಯಾರಿಕೆಗಳಲ್ಲದೆ ಇನ್ನೇನೂ ಲಾಭವಿಲ್ಲ ಎಂದು ಪ್ರವಾದಿ ಮುಹಮ್ಮದ್(ಸ) ಅವರು ಹೇಳುತ್ತಾರೆ. ಉಪವಾಸವೆನ್ನುವುದು ಆಹಾರಕ್ಕಷ್ಟೇ ಅಲ್ಲ, ಅದು ನಮ್ಮ ಇತರ ಕೃತಿಗಳಿಗೂ ಸಂಬಂಧಿಸಿದೆ. ನಾವು ನೋಡುವ ನೋಟಗಳಲ್ಲಿ, ಆಡುವ ಮಾತಿನಲ್ಲಿ, ಕೇಳುವ ಶಬ್ದಗಳಲ್ಲೂ ಉಪವಾಸವನ್ನು ಅಳವಡಿಸಿಕೊಳ್ಳಬೇಕಾಗಿದೆ. ಆಹಾರವನ್ನು ದೂರವಿರಿಸಿದಂತೆ, ಕೆಟ್ಟ ಮಾತುಗಳಿಂದ ದೂರವಿರಬೇಕು. ಕೆಟ್ಟದನ್ನು ನೋಡುವುದರಿಂದ ದೂರವಿರಬೇಕು. ಕೇಳುವುದರಿಂದಲೂ ದೂರವಿರಬೇಕು. ಅದು ನಮ್ಮ ಅಂತರಂಗವನ್ನು ಶುಚಿಗೊಳಿಸುವುದಕ್ಕೆ ಸಹಾಯ ಮಾಡುತ್ತದೆ. ದೇವರಿಗಾಗಿ ನಾವು ಮಾಡುವ ಆರಾಧನೆಗಳು ನಮ್ಮನ್ನು ಬಡವರಿಗೆ, ಅನಾಥರಿಗೆ ಹತ್ತಿರವಾಗಿಸಬೇಕು. ರಮಝಾನ್ ತಿಂಗಳೆಂದರೆ ದಾನಗಳ ತಿಂಗಳು ಎಂಬ ಮಾತಿದೆ. ಹೆಚ್ಚು ಹೆಚ್ಚು ದಾನ ನೀಡಬೇಕು. ಹಾಗೆಯೇ ನಮ್ಮ ಸಂಪತ್ತಿನಲ್ಲಿರುವ ಬಡವರ ಹಕ್ಕನ್ನು ಅವರಿಗೆ ಪಾವತಿಸಬೇಕು. ನಮ್ಮೆಲ್ಲ ಸಿಟ್ಟು, ದುರಹಂಕಾರ, ಹೆಮ್ಮೆಗಳು ಹಸಿವಿನ ಬೆಂಕಿಯಲ್ಲಿ ಬೂದಿಯಾಗಬೇಕು. ಇಷ್ಟಲ್ಲದೆ, ನಮ್ಮ ಉಪವಾಸ ಬರೇ ಬಾಯಾರಿಕೆೆ, ಹಸಿವಿನಲ್ಲಷ್ಟೇ ಮುಕ್ತಾಯವಾದೀತು. ನಮ್ಮ ರಾತ್ರಿಯ ನಮಾಝ್‌ಗಳು ಜಾಗರಣೆಯಲ್ಲಷ್ಟೇ ಕೊನೆಗೊಂಡೀತು. ಮನುಷ್ಯ ಇಂದು ಆಧುನಿಕ ತಂತ್ರಜ್ಞಾನಗಳ ಕೈಗೊಂಬೆಯಾಗಿದ್ದಾನೆ. ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ತಾಣಗಳಲ್ಲಿ ಮೈಮರೆತಿದ್ದಾನೆ. ಆಧುನಿಕ ದಿನಗಳಲ್ಲಿ ಒಬ್ಬ ಮನುಷ್ಯ ಇಂತಹ ಸಾಮಾಜಿಕ ತಾಣಗಳ ಚಟದಿಂದ ಒಂದು ತಿಂಗಳ ಮಟ್ಟಿಗಾದರೂ ದೂರವಿದ್ದರೆ ಅದು ಆತನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗುಣಾತ್ಮಕ ಪರಿಣಾಮ ಬೀರಬಹುದು. ಯುವ ತಲೆಮಾರು ಈ ಉಪಾಸದ ಕುರಿತಂತೆಯೂ ಚಿಂತಿಸಬೇಕು.
ಬೇಡುವವರ ತಿಂಗಳು:
ರಮಝಾನ್ ತಿಂಗಳನ್ನು ಕೆಲವರು ‘ಬೇಡುವವರ ತಿಂಗಳು’ ಎಂದು ವ್ಯಂಗ್ಯವಾಡುವುದಿದೆ. ಯಾಕೆಂದರೆ ಬೀದಿಗಳಲ್ಲಿ ದಾನಕ್ಕಾಗಿ ಭಿಕ್ಷೆಬೇಡುವವರ ದೊಡ್ಡ ದಂಡು ಇಳಿಯುತ್ತದೆ. ಮನೆ ಮನೆಗೆ ಇವರು ದಾಳಿಯಿಡುತ್ತಾರೆ. ‘ಪಡೆಯುವ ಕೈಗಳಿಗಿಂತ ಕೊಡುವ ಕೈಗಳು ಶ್ರೇಷ್ಠವಾದುದು’ ಎಂದು ಪ್ರವಾದಿಯವರು ಹೇಳುತ್ತಾರೆ. ಝಕಾತ್ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಇಂತಹ ಭಿಕ್ಷೆ ಬೇಡುವವರ ಸಂಖ್ಯೆ ಇಳಿಮುಖವಾಗುತ್ತದೆ. ಇವುಗಳ ನಡೆವೆಯೂ ದಾನಕ್ಕಾಗಿ ಮನೆ ಮುಂದೆ ನಿಲ್ಲುವವರ ಕುರಿತಂತೆ ಗರಿಷ್ಠ ತಾಳ್ಮೆಯನ್ನು ವ್ಯಕ್ತಪಡಿಸಬೇಕಾದುದು ನಮ್ಮ ಕರ್ತವ್ಯವಾಗಿದೆ. ಯಾಕೆಂದರೆ ರಮಝಾನ್ ತಿಂಗಳೆಂದರೆ ನಿಜವಾದ ಅರ್ಥದಲ್ಲೂ ಬೇಡುವವರ ತಿಂಗಳೇ ಆಗಿದೆ. ಈ ಜಗತ್ತಿನ ಸರ್ವ ಮನುಷ್ಯರು ಸೃಷ್ಟಿಕರ್ತನ ಬಳಿ ಕ್ಷಮೆಗಾಗಿ ಬೇಡುವ ತಿಂಗಳು. ಕರುಣೆಗಾಗಿ ಬೇಡುವ ತಿಂಗಳು. ರಮಝಾನ್ ತಿಂಗಳಲ್ಲೂ ಎಲ್ಲರೂ ಒಂದು ಅರ್ಥದಲ್ಲಿ ಭಿಕ್ಷುಕರೇ.
ರಮಝಾನ್ ತರಬೇತಿಯ ತಿಂಗಳು. ಇಲ್ಲಿ ನಾವು ಗಳಿಸಿಕೊಂಡದ್ದನ್ನು ಉಳಿದ ತಿಂಗಳಲ್ಲಿ ಖರ್ಚು ಮಾಡಬೇಕಾಗಿದೆ. ಅಂದರೆ, ಈ ತಿಂಗಳಲ್ಲಿ ನಾವು ನಮ್ಮದಾಗಿಸಿಕೊಂಡ ಅಧ್ಯಾತ್ಮ ಶಕ್ತಿಯನ್ನು ಉಳಿದ ದಿನಗಳಲ್ಲಿ ವ್ಯಯ ಮಾಡಬೇಕು. ರಮಝಾನ್ ನಮಗೆ ಕಲಿಸಿಕೊಟ್ಟ ದಾನ, ಧರ್ಮ, ಸಹನೆ, ಕರುಣೆ ಇವೆಲ್ಲವೂ ಉಳಿದ ದಿನಗಳಲ್ಲಿ ಜಾರಿಗೆ ಬರುವಂತಾಗಬೇಕು. ಅದುವೇ ನಾವು ರಮಝಾನ್‌ಗೆನೀಡುವ ಅತಿ ದೊಡ್ಡ ಗೌರವವಾಗಿದೆ.
ಉಪವಾಸದ ಕುರಿತಂತೆ ಗಾಂಧೀಜಿ
♦ ಉಪವಾಸ ಮತ್ತು ಪ್ರಾರ್ಥನೆ ನನ್ನ ಧರ್ಮದ ಸಾಮಾನ್ಯ ಕಟ್ಟಳೆಗಳು
♦ ಜ್ಞಾನ ಮತ್ತು ಪ್ರಾಯಶ್ಚಿತಕ್ಕಾಗಿ ಉಪವಾಸ ಮಾಡುವುದು ಪುರಾತನ ಅಭ್ಯಾಸ
♦ ಕರ್ತವ್ಯವೆಂದು ಭಾವಿಸಿ ಮಾಡುವ ಶುದ್ಧ ಉಪವಾಸವೇ ಒಂದು ಪುರಸ್ಕಾರ
♦ ಉಪವಾಸ ಎನ್ನುವುದು ಆದಮ್‌ನಷ್ಟೇ ಪ್ರಾಚೀನ ಸಂಪ್ರದಾಯ. ಅದನ್ನು ಸ್ವಶುದ್ಧೀಕರಣಕ್ಕಾಗಿ ಆಚರಿಸಲಾಗುತ್ತದೆ ಅಥವಾ ಕೆಲವೊಂದು ಬಾರಿ ಉದಾತ್ತವಾಗಿಯೂ ಆಚರಿಸಲಾಗುತ್ತದೆ.
♦ ಸಂಪೂರ್ಣ ಉಪವಾಸವು ತನ್ನ ಸಂಪೂರ್ಣ ಮತ್ತು ಅಕ್ಷರಶಃ ನಿರಾಕರಣೆಯಾಗಿದೆ. ಅದು ಅತ್ಯಂತ ಶುದ್ಧ ಪ್ರಾರ್ಥನೆ.
♦ ಪ್ರಾಮಾಣಿಕ ಉಪವಾಸ ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ. ಅದು ದೇಹವನ್ನು ಶಿಲುಬೆಗೇರಿಸುವ ಮೂಲಕ ಆತ್ಮವನ್ನು ಮುಕ್ತಗೊಳಿಸುತ್ತದೆ.
♦ ಉಪವಾಸವನ್ನು ಕೋಪದಿಂದ ಆಚರಿಸಲು ಸಾಧ್ಯವಿಲ್ಲ. ಕೋಪವೆಂಬುದು ಅಲ್ಪಕಾಲದ ಹುಚ್ಚುತನ.
♦ ಎಲ್ಲ ಉಪವಾಸಗಳು ಮತ್ತು ಪ್ರಾಯಶ್ಚಿತಗಳು ಸಾಧ್ಯವಾದಷ್ಟು ರಹಸ್ಯವಾಗಿರಬೇಕು.
♦ ಹೊರಜಗತ್ತನ್ನು ನೋಡಲು ಕಣ್ಣುಗಳಿದ್ದಂತೆ ನಮ್ಮಳಗೆ ನೋಡಲು ಉಪವಾಸವಿದೆ.
♦ ವ್ಯಕ್ತಿಯೊಬ್ಬ ಉಪವಾಸ ಆಚರಿಸುವಾಗ ಆತನ ನೆರವಿಗೆ ಬರುವುದು ಆತ ಕುಡಿಯುವ ಲೀಟರ್‌ಗಟ್ಟಲೆ ನೀರಲ್ಲ, ದೇವರು.
♦ ಇತರ ಎಲ್ಲ ಕಾರ್ಯಗಳ ಜೊತೆಗೆ ನಾನು ಆಚರಿಸುವ ಉಪವಾಸವು ನನ್ನನ್ನು ಸಮಾನ ಮತ್ತು ನಿಸ್ವಾರ್ಥ ಪ್ರೀತಿ ಪಡೆಯಲು ಅರ್ಹಗೊಳಿಸುತ್ತದೆ.
♦ ನನ್ನ ಉಪವಾಸವು ದೇವರು ಮತ್ತು ನನ್ನ ನಡುವಿನ ವ್ಯವಹಾರವಾಗಿದೆ.
♦ ಸರಿಪಡಿಸಲಾಗದ ಸಮಸ್ಯೆಯೊಂದು ಎದುರಾದರೆ ಆ ಸಮಯದಲ್ಲಿ ಉಪವಾಸ ಆಚರಿಸಬೇಕು ಮತ್ತು ಪ್ರಾರ್ಥನೆ ಮಾಡಬೇಕು ಎಂದು ನನ್ನ ಧರ್ಮ ಸೂಚಿಸುತ್ತದೆ.