ಶೇ.69ರಷ್ಟು ಅಪೂರ್ಣವಾಗಿರುವ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೊಳಿಸಿದ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರಿಂದ ಇತ್ತೀಚೆಗೆ ನಡೆದ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್ ವೇ ಯೋಜನೆಯ ಮೊದಲ ಹಂತದ ಉದ್ಘಾಟನೆಗೆ ಎಷ್ಟೊಂದು ಅಬ್ಬರದ ಪ್ರಚಾರ ನೀಡಲಾಗಿತ್ತೆಂದರೆ ಉಭಯ ನಗರಗಳ ನಡುವೆ ಕ್ಷಿಪ್ರ ಪ್ರಯಾಣಕ್ಕಾಗಿ ತಮ್ಮ ಕಾಯುವಿಕೆ ಕೊನೆಗೂ ಅಂತ್ಯಗೊಂಡಿತು ಎಂದು ಹೆಚ್ಚಿನವರು ಭಾವಿಸಿ ಧನ್ಯರಾಗಿದ್ದರು. ಅಸಲಿ ವಿಷಯವೇನೆಂದರೆ 82 ಕಿ.ಮೀ. ಉದ್ದದ ಈ ಯೋಜನೆಯ ಶೇ.90ರಷ್ಟು ಭಾಗ ಸಂಚಾರಕ್ಕೆ ಇನ್ನಷ್ಟೇ ತೆರೆದುಕೊಳ್ಳಬೇಕಿದೆ. ಯೋಜನೆಯ ಶೇ.31ರಷ್ಟು ಭಾಗ ಮಾತ್ರ ಪೂರ್ಣಗೊಂಡಿದ್ದು, ಶೇ.69ರಷ್ಟು ಕಾಮಗಾರಿ ಬಾಕಿಯಿದೆ. ಮೋದಿಯವರು 8.36 ಕಿ.ಮೀ.ಉದ್ದದ ಯೋಜನೆಯ ಸಣ್ಣಭಾಗವನ್ನು ‘ಲೋಕಾರ್ಪಣೆ’ ಮಾಡಿ ಕೃತಾರ್ಥರಾಗಿದ್ದಾರೆ. ಅವರ ಕಾರ್ಯಕ್ರಮದ ಪ್ರಚಾರ ಎಷ್ಟೊಂದು ವ್ಯವಸ್ಥಿತವಾಗಿತ್ತೆಂದರೆ ಇಡೀ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದೆ ಎಂದೇ ಹೆಚ್ಚಿನವರು ತಿಳಿದಿದ್ದಾರೆ.
7,500 ಕೋ.ರೂ.ಒಟ್ಟು ವೆಚ್ಚದ ಯೋಜನೆಯ ಪೈಕಿ ಮೊದಲ ಹಂತವಾದ,841 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಿಲ್ಲಿಯ ನಿಝಾಮುದ್ದೀನ್ ಸೇತುವೆಯಿಂದ ದಿಲ್ಲಿ-ಉತ್ತರ ಪ್ರದೇಶ ಗಡಿಯವರೆಗಿನ 8.36 ಕಿ.ಮೀ. ಉದ್ದದ ರಸ್ತೆ ಮಾತ್ರ ಉದ್ಘಾಟನೆಗೊಂಡಿದೆ. ಅಲ್ಲಿಂದಾಚೆಗೆ ವಾಹನ ಚಾಲಕರು ರಾಷ್ಟ್ರೀಯ ಹೆದ್ದಾರಿ 34ರ ಇಕ್ಕಟ್ಟಾದ ಚತುಷ್ಪಥದಲ್ಲಿಯೇ ಕಷ್ಟದಿಂದ ಸಾಗಬೇಕಿದೆ. ಮೊದಲ ಹಂತವು 18 ತಿಂಗಳುಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿದೆ ಎಂದೂ ಮೋದಿ ಉದ್ಘಾಟನೆ ವೇಳೆ ಹೇಳಿಕೊಂಡಿದ್ದರು. ವಾಸ್ತವದಲ್ಲಿ ಮೋದಿಯವರೇ 30 ತಿಂಗಳುಗಳ ಹಿಂದೆ,2015 ಡಿಸೆಂಬರ್‌ನಲ್ಲಿ ಯೋಜನೆಯ ಶಿಲಾನ್ಯಾಸವನ್ನು ನೆರವೇರಿಸಿದ್ದರು!
ಉ.ಪ್ರ.ಗಡಿಯಿಂದ ದಸನಾ,ದಸನಾದಿಂದ ಹಾಪುರ್ ಮತ್ತು ದಸನಾದಿಂದ ಮೀರತ್‌ವರೆಗಿನ ಹಸಿರು ಪಟ್ಟಿಯ ಹಂತ ಸೇರಿದಂತೆ ಆರು ಪಥಗಳ ಈ ಎಕ್ಸ್‌ಪ್ರೆಸ್ ವೇ ಯೋಜನೆಯ ಮೂರು ಹಂತಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಿವೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಆರ್.ಪಿ.ಸಿಂಗ್ ಹೇಳಿರುವಂತೆ ಈವರೆಗೆ ಈ ಯೋಜನೆಯ ಶೇ.31ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಮೊದಲ ಹಂತ ಸಂಪೂರ್ಣವಾಗಿ ನಿರ್ಮಾಣಗೊಂಡಿದೆ. ಎರಡನೇ ಹಂತ ಶೇ.15ರಷ್ಟು ಪೂರ್ಣಗೊಂಡಿದೆ. ಮೂರು ಮತ್ತು ನಾಲ್ಕನೇ ಹಂತಗಳು ಶೇ.60 ಮತ್ತು ಶೇ.3ರಷ್ಟು ಪೂರ್ಣಗೊಂಡಿವೆ. ಅಂದರೆ ಮೋದಿಯವರು ‘ಸಿದ್ಧ ಎಕ್ಸ್‌ಪ್ರೆಸ್ ವೇ’ ಅನ್ನು ಲೋಕಾರ್ಪಣೆಗೊಳಿಸಿದಾಗ ಒಟ್ಟು ಯೋಜಿತ ಮಾರ್ಗದ ಶೇ.31ರಷ್ಟು,ಅಂದರೆ ಕೇವಲ 25.57 ಕಿ.ಮೀ.ಉದ್ದದ ರಸ್ತೆ ಸಿದ್ಧಗೊಂಡಿತ್ತು ಮತ್ತು ಶೇ.69ರಷ್ಟು ಕಾಮಗಾರಿಗೆ ಇನ್ನಷ್ಟೇ ಚಾಲನೆ ದೊರೆಯಬೇಕಿದೆ.
ಸಿದ್ಧಗೊಂಡಿರುವ ಎಕ್ಸ್‌ಪ್ರೆಸ್ ವೇ ಪೈಕಿ ಹೆಚ್ಚಿನ ಭಾಗ 1ರಿಂದ 3ನೇ ಹಂತಕ್ಕೆ ಸೇರಿದೆ. ಇದು ಲೇನ್ ವಿಸ್ತರಣೆಗಳು ಮತ್ತು ಸರ್ವಿಸ್ ಮಾರ್ಗ ನಿರ್ಮಾಣವನ್ನು ಒಳಗೊಂಡಿದೆ. ಸಂಪೂರ್ಣವಾಗಿ ಹಸಿರು ಪಟ್ಟಿಯಲ್ಲಿರುವ ಏಕೈಕ ಮತ್ತು ಅತ್ಯಂತ ಉದ್ದದ್ದಾಗಿರುವ ನಾಲ್ಕನೇ ಹಂತವು ಕೇವಲ ಶೇ.3ರಷ್ಟು ಪೂರ್ಣಗೊಂಡಿದೆ. ಈ ಹಂತಕ್ಕೆ ಭೂಸ್ವಾಧೀನ ಬಲು ದೊಡ್ಡ ಅಡಚಣೆಯಾಗಿದೆ.
ಭೂಸ್ವಾಧೀನಕ್ಕೆ ಸಂಬಂಧಿಸಿ ಹಲವು ವಿವಾದಗಳಿದ್ದು,ಬಗೆಹರಿಯಲು ತಿಂಗಳುಗಳೇ ಬೇಕಾಗಬಹುದು ಮತ್ತು ಅನಂತರವೇ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. ಭೂಸ್ವಾಧೀನ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳುತ್ತದೆ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದರು. ಸಮಗ್ರ ಯೋಜನೆಯು ಮಾರ್ಚ್,2019ರೊಳಗೆ ಪೂರ್ಣಗೊಳ್ಳಲ್ಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇನೋ ಘೋಷಿಸಿದ್ದಾರೆ. ಆದರೆ ಇಂತಹುದೊಂದು ಸಾಧ್ಯತೆ ಸ್ವತಃ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೇ ಕಂಡು ಬರುತ್ತಿಲ್ಲ!