ಹೊರಗಿನವನಾಗಿರುವುದರಿಂದ ನಾನು ಟಾರ್ಗೆಟ್ ಆಗಿದ್ದೇನೆ -ಸಂಸ್ಕೃತ ವಿದ್ವಾಂಸ ಶೆಲ್ಡನ್ ಪೊಲಾಕ್

ಭಾಗ-2
ಜೆಎನ್‌ಯು ವಿದ್ಯಾರ್ಥಿ ಚಳವಳಿಯ ಅಹವಾಲಿಗೆ, ಪಿಟಿಷನ್‌ಗೆ ನಾನು ಸಹಿ ಹಾಕಿದ್ದೇ ನನ್ನ ವಿರುದ್ಧ ನಡೆಯುವ ಎಲ್ಲ ಪ್ರತಿಭಟನೆಗಳಿಗೆ ಕಾರಣ. ವಿದ್ಯಾರ್ಥಿಗಳ ಪ್ರತಿಭಟಿಸುವ ಹಕ್ಕಿಗಾಗಿ ನನ್ನ ಬಳಿ ಬರುವ ಎಲ್ಲಾ ಪಿಟಿಷನ್‌ಗಳಿಗೂ ನಾನು ಸಹಿ ಹಾಕುತ್ತೇನೆ. ಅವರು ವಿದ್ಯಾರ್ಥಿಗಳು. ಅವರಿಗೆ ಏನು ಬೇಕಾದರೂ ಹೇಳುವ ಹಕ್ಕು ಇದೆ, ಪ್ರತಿಯೊಂದು ಘೋಷಣೆಯನ್ನೂ ಕೂಗುವ ಹಕ್ಕು ಇದೆ. ಇದು ಒಂದು ಸ್ವತಂತ್ರ ದೇಶ. ನಾನು ಕೇವಲ ಒಬ್ಬ ವಿದ್ವಾಂಸ. ನಾನು ಧಾರ್ಮಿಕ ಕೆಲಸಗಳನ್ನು ಮಾಡುವುದಿಲ್ಲ ನಾನೆಂದೂ ಹಿಂದೂ ಧರ್ಮದ ಬಗ್ಗೆ ಬರೆಯುವುದಿಲ್ಲ. ನಾನು ಯಾವತ್ತೂ ಹಿಂದೂಯಿಸಂ ಎಂಬ ಶಬ್ದವನ್ನೇ ಬಳಸಿಲ್ಲ.
♦ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಶೃಂಗೇರಿ ಮಠವೊಂದನ್ನು ಕಟ್ಟಿದಿರಿ ಎಂಬ ಆಪಾದನೆಯನ್ನು ನಿಮ್ಮ ಮೇಲೆ ಹೊರಿಸಲಾಗಿದೆ.
ಪೊಲಾಕ್: ನಾನು ಕಚೇರಿಯಲ್ಲಿ ಕೂತಿದ್ದಾಗ ಅಮೆರಿಕದಲ್ಲಿ ಶೃಂಗೇರಿಮಠ ಸಮಿತಿಯ ಮೂವರು ಸದಸ್ಯರು ನನ್ನ ಬಳಿ ಬಂದು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಆದಿಶಂಕರ ಪೀಠ ಸ್ಥಾಪಿಸಲು ನಮಗೆ ನೆರವಾಗಬೇಕೆಂದು ಬೇಡಿಕೊಂಡರು. ನಾನು ಆ ಬಗ್ಗೆ ಹೆಚ್ಚು ಉತ್ಸಾಹ ಹೊಂದಿರಲಿಲ್ಲ ಮತ್ತು ಇಲ್ಲಿ ಪ್ರಶ್ನೆಗಳನ್ನು ಕೇಳುವುದರ ಹೊರತಾಗಿ ಬೇರೆ ಯಾವುದೂ ಪವಿತ್ರವಲ್ಲ ಎಂದು ಅವರಿಗೆ ಹೇಳಿದೆ. ಸಸ್ಯಾಹಾರಿ ಹಾಗೂ ಮದ್ಯ ಸೇವಿಸದ ಒಬ್ಬ ಪ್ರಾಧ್ಯಾಪಕನ ಹೆಸರು ಸೂಚಿಸುವಂತೆ ಅವರು ನನಗೆ ಹೇಳಿದರು. ಆಗ ನಾನು ‘‘ಅವರು ಹಾಗಿರಬೇಕು, ಹೀಗಿರಬೇಕು ಎಂದು ನೀವು ಷರತ್ತು ವಿಧಿಸುವಂತಿಲ್ಲ, ಡಿಕ್ಟೇಟ್ ಮಾಡುವಂತಿಲ್ಲ. ಒಂದು ಸೆಕ್ಯುಲರ್ ವಿಶ್ವವಿದ್ಯಾನಿಲಯದಲ್ಲಿ ಇದೊಂದು ವಿಮರ್ಶಾತ್ಮಕವಾದ ಐತಿಹಾಸಿಕ ಮತ್ತು ವಿದ್ವತ್ಪೂರ್ಣವಾದ ಹುದ್ದೆಯಾಗಿರುತ್ತದೆ.’’ ಎಂದು ಹೇಳಿದೆ. ಆಗ ನಾನು ಇದನ್ನು ಹಣಕ್ಕಾಗಿ ಮಾಡುತ್ತಿದ್ದೇನೆಂದು ನನ್ನ ಮೇಲೆ ಆಪಾದನೆ ಹೊರಿಸಿ ಒಂದು ಅಪಪ್ರಚಾರ ಆರಂಭವಾಯಿತು. ನಾನೇನು ಹೇಳಲಿ? ಒಳ್ಳೆಯ ಕೆಲಸ ಮಾಡಿದವರಿಗೆ ಶಿಕ್ಷೆ ಕಾದಿರುತ್ತದೆ. ಭಾರತದಲ್ಲಿ ಈಗ ಇರುವ ಸಂಸ್ಕೃತಿಯ ರಾಜಕಾರಣದಿಂದಾಗಿ ಎಲ್ಲ ಧಾರ್ಮಿಕ ಸಮುದಾಯಗಳಿಂದ ಬರುವ ಹಣವನ್ನು ಸ್ವೀಕರಿಸುವುದು ಅಮೆರಿಕದ ವಿಶ್ವವಿದ್ಯಾನಿಲಯಗಳಿಗೆ ಕಷ್ಟವಾಗುತ್ತದೆ ಯಾಕೆಂದರೆ ಈ ಹಣವನ್ನು ಪಡೆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಶ್ನಿಸುವ ಹಕ್ಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂಬ ಭಾವನೆ ಇಲ್ಲಿ ಬೆಳೆಯುತ್ತಿದೆ, ತೀವ್ರವಾಗುತ್ತಿದೆ.
♦ ಆದ್ದರಿಂದ ನಿಮ್ಮನ್ನು ಟೀಕಿಸುವ ರಾಜೀವ್ ಮಲ್ಹೋತ್ರ ಅವರ ಪುಸ್ತಕ ‘ಬ್ಯಾಟಲ್ ಫಾರ್ ಸಂಸ್ಕೃತ್’ ಕೇವಲ ಒಂದು ಇದು ವಿವಾದಾಸ್ಪದ ಪುಸ್ತಕವೇ?
ಪೊಲಾಕ್: ಅದು ಏನಿದೆಯೋ ಅದೇ. ಈಗ ತುಂಬಾ ಸಿಟ್ಟು ಮತ್ತು ಸ್ವಪ್ರೀತಿ, ತಮ್ಮ ಅಹಂಗೆ ಏಟು ಬಿದ್ದಿದೆ ಎಂಬ ಭಾವನೆ ಇದೆ. ಈಗ ಭಾರತದಲ್ಲಿ ವಿದ್ವಾಂಸರಿಗೆ ತುಂಬಾ ಕಷ್ಟವಾಗಿದೆ. ಈ ಅಸ್ಪಷ್ಟ ವಾತಾವರಣದಲ್ಲಿ ಸಿಟ್ಟಿನಿಂದ ಪ್ರೇರಿತರಾದ ಜನರೊಂದಿಗೆ ಒಂದು ಮುಕ್ತ ಹಾಗೂ ಸ್ವತಂತ್ರವಾದ ಚರ್ಚೆಯನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ನಾನು ಒಂದು ಟಾರ್ಗೆಟ್ ಆಗಿದ್ದೇನೆ. ಯಾಕೆಂದರೆ ಒಳಗಿರುವ ಎಲ್ಲದರ ಬಗ್ಗೆ ನಾನು ಧೈರ್ಯವಾಗಿ ಮಾತನಾಡುತ್ತೇನೆ. ಅಮೆರಿಕದಲ್ಲಿ ನನ್ನ ಹಾಗಿನ ಇತರ ಸರಣಿಗಳಿವೆ: ಲೈಬ್ರರಿ ಆಫ್ ಅರೇಬಿಕ್‌ಲಿಟರೇಚರ್, ವಿದೇಶಿಯರು ನಡೆಸುವ ಲೈಬ್ರೆರಿ ಆಫ್ ಚೈನೀಸ್ ಹುಮ್ಯಾನಿಟೀಸ್. ಈ ಬಗ್ಗೆ ಅಬುಧಾಬಿ ಮತ್ತು ಬೀಜಿಂಗ್‌ನಲ್ಲಿ ಜನರಿಗೆ ಸಂತೋಷ ಇದೆ; ಬೇರೇನೂ ಇಲ್ಲ. ಹೀಗಿರುವಾಗ ಒಂದು ಶ್ರೇಷ್ಠ ಸಂಸ್ಕೃತಿಯಾಗಿರುವ ಭಾರತಕ್ಕೆ ಅಷ್ಟೊಂದು ಹೆದರಿಕೆ ಯಾಕೆ? ಜೆಎನ್‌ಯು ವಿದ್ಯಾರ್ಥಿ ಚಳವಳಿಯ ಅಹವಾಲಿಗೆ, ಪಿಟಿಷನ್‌ಗೆ ನಾನು ಸಹಿ ಹಾಕಿದ್ದೇ ನನ್ನ ವಿರುದ್ಧ ನಡೆಯುವ ಎಲ್ಲ ಪ್ರತಿಭಟನೆಗಳಿಗೆ ಕಾರಣ. ವಿದ್ಯಾರ್ಥಿಗಳ ಪ್ರತಿಭಟಿಸುವ ಹಕ್ಕಿಗಾಗಿ ನನ್ನ ಬಳಿ ಬರುವ ಎಲ್ಲಾ ಪಿಟಿಷನ್‌ಗಳಿಗೂ ನಾನು ಸಹಿ ಹಾಕುತ್ತೇನೆ. ಅವರು ವಿದ್ಯಾರ್ಥಿಗಳು. ಅವರಿಗೆ ಏನು ಬೇಕಾದರೂ ಹೇಳುವ ಹಕ್ಕು ಇದೆ, ಪ್ರತಿಯೊಂದು ಘೋಷಣೆಯನ್ನೂ ಕೂಗುವ ಹಕ್ಕು ಇದೆ. ಇದು ಒಂದು ಸ್ವತಂತ್ರ ದೇಶ. ನಾನು ಕೇವಲ ಒಬ್ಬ ವಿದ್ವಾಂಸ. ನಾನು ಧಾರ್ಮಿಕ ಕೆಲಸಗಳನ್ನು ಮಾಡುವುದಿಲ್ಲ ನಾನೆಂದೂ ಹಿಂದೂ ಧರ್ಮದ ಬಗ್ಗೆ ಬರೆಯುವುದಿಲ್ಲ. ನಾನು ಯಾವತ್ತೂ ಹಿಂದೂಯಿಸಂ ಎಂಬ ಶಬ್ದವನ್ನೇ ಬಳಸಿಲ್ಲ.
♦ ಬಾಬರಿ ಮಸೀದಿ ಧ್ವಂಸದ ಬಳಿಕ ನೀವು ರಾಮಾಯಣ ಮತ್ತು ರಾಜಕೀಯ ಕಲ್ಪನೆಯ ಕುರಿತು ಒಂದು ಪ್ರಬಂಧ ಬರೆದಿದ್ದೀರಿ. ಅಭಿಜಾತವಾದಿಯಾಗಿ ಭಾರತದ ಮಹಾಕಾವ್ಯಗಳು ಜನರ ಸಾಮೂಹಿಕ ಪ್ರಜ್ಞೆಯನ್ನಾಧರಿಸಿ ಉಳಿದಿವೆ, ಉಳಿಯುತ್ತವೆ ಎಂದು ಅನ್ನಿಸುವುದಿಲ್ಲವೇ ನಿಮಗೆ? ಪಾಶ್ಚಾತ್ಯ ಮಹಾಕಾವ್ಯಗಳು ಈ ನಿಟ್ಟಿನಲ್ಲಿ ಭಾರತೀಯ ಮಹಾಕಾವ್ಯಗಳಂತಲ್ಲ.
ಪೊಲಾಕ್: ಹೌದು. ನೀವು ರಾಮಾಯಣವನ್ನು ವರ್ಜಿಲ್ ಮಹಾಕವಿಯ ಈನಿಡ್‌ನಂತೆ ಪರಿಗಣಿಸಲು ಸಾಧ್ಯವಿಲ್ಲ. ಈನಿಡ್ ಸತ್ತು ಹೋಗಿದೆ. ಯಾರು ಕೂಡ ಈಗ ಯುನೂಸ್‌ನನ್ನು ಪೂಜಿಸುವುದಿಲ್ಲ. ಅವನ ಗೌರವಾರ್ಥವಾಗಿ ರೋಮ್ ನಗರದ ಬೀದಿಗಳಲ್ಲಿ ಮೆರವಣಿಗೆಗಳು ನಡೆಯುವುದಿಲ್ಲ, ಗ್ರೀಸ್‌ನಲ್ಲಿರುವ ಅಖಿಲಸ್‌ನ ಜನ್ಮಸ್ಥಳ ನೋಡಲು ಯಾರೂ ಹೋಗುವುದಿಲ್ಲ. ಆದರೆ ಭಾರತೀಯರ ಹೃದಯಗಳಲ್ಲಿ ರಾಮಾಯಣ ಜೀವಂತವಾಗಿದೆ.
♦ ಭವಿಷ್ಯದಲ್ಲಿ ಭಾರತದಲ್ಲಿ ಸಂಸ್ಕೃತದ ಸ್ಥಾನಮಾನ ಹೇಗಿರಬೇಕು ಎನ್ನುತ್ತೀರಿ ನೀವು?
ಪೊಲಾಕ್: ಭಾರತೀಯ ಅಭಿಜಾತ ಕೃತಿಗಳ ಅಧ್ಯಯನಕ್ಕೆ ಒಂದು ಸಂಸ್ಥೆ ಇರಬೇಕು. ಅಲ್ಲಿ ಭಾಷಾ ಅಧ್ಯಯನವೇ ಸಂಸ್ಥೆಯ ಕೇಂದ್ರ ಕಾಳಜಿಯಾಗಬೇಕು ಮತ್ತು ಭಾರತದಲ್ಲಿರುವ ಅತ್ಯುತ್ತಮ ವಿದ್ವಾಂಸರಿಂದ ಅಲ್ಲಿ ಬೋಧನೆ ನಡೆಯಬೇಕು.
♦ ಈಗ ನೀವು ಯಾವುದರ ಅಧ್ಯಯನ ನಡೆಸುತ್ತಿದ್ದೀರಿ?
ಪೊಲಾಕ್: ನಾನೀಗ ‘ವಾಟ್ ಚೈನಾ ಆ್ಯಂಡ್ ಇಂಡಿಯನ್ ವನ್ಸ್‌ವೇರ್: ದಿ ಪಾಸ್ಟ್ ದ್ಯಾಟ್ ಮೇ ಶೇಪ್ ದಿ ಗ್ಲೋಬಲ್ ಫ್ಯೂಚರ್’ ಎಂಬ ಅಧ್ಯಯನವನ್ನು ಮುಗಿಸುತ್ತಿದ್ದೇನೆ. ಇದು ಭಾರತ ಮತ್ತು ಚೀನಾದ ಕ್ರಿ.ಶ. 1800ಕ್ಕಿಂತ ಹಿಂದಿನ ಇತಿಹಾಸಗಳನ್ನು ಪರಿಶೀಲಿಸುತ್ತದೆ ಮತ್ತು ಇವೆರಡು ಒಂದಕ್ಕೊಂದು ತೀರಾ ಭಿನ್ನವಾದ ಪ್ರಪಂಚಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ. ಈ ಹಿಂದೆ ಎಂದೂ ಭಾರತದಲ್ಲಿ ಚೀನಾದ ತುಲನಾತ್ಮಕ ಇತಿಹಾಸದ ಅಧ್ಯಯನ ನಡೆದಿಲ್ಲ. ನಾನು ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ದ ಸಂಪಾದಕನಾಗಿ ಮುಂದುವರಿದಿದ್ದೇನೆ ಯಾಜ್ಞ ವಲ್ಕನ ಧರ್ಮಶಾಸ್ತ್ರವನ್ನು ನಾವು ಹೊರತರುತ್ತಿದ್ದೇವೆ. ಅಲ್ಲದೆ ಅಕ್ಬರ್ ನಾಮಾ ಸರಣಿಯನ್ನು ನಾವು ಪ್ರಕಟಿಸುತ್ತಿದ್ದೇವೆ. ಹರ್ಷ ಚಕ್ರವರ್ತಿಯ ಜೀವನ ಚರಿತ್ರೆಯಾಗಿರುವ ‘ಹರ್ಷ ಚರಿತ್ರ’ದ ಹೊಸ ಮೊದಲ ಅನುವಾದವನ್ನು ನಾನು ಸಂಪಾದಿಸುತ್ತಿದ್ದೇನೆ. ಇದನ್ನು ರಾಬರ್ಟ್ ಹ್ಯೂಕ್ ಸ್ಟೆಡ್ಟ್ ಇಂಗ್ಲಿಷ್‌ಗೆ ಅನುವಾದಿಸುತ್ತಾರೆ. ನೂರು ಹತ್ತು ವರ್ಷಗಳ ಹಿಂದೆ ಇಂಗ್ಲಿಷ್‌ಗೆ ಅನುವಾದಗೊಂಡ ‘ಹರ್ಷ ಚರಿತ್ರ’ದ ಅನುವಾದ ಆಮೇಲೆ ಎಂದೂ ಆಗಿಲ್ಲ. ನನಗೆ ತುಂಬಾ ಪ್ರಿಯವಾದ ಭರ್ತೃಹರಿ (ಮುನ್ನೂರು ಪದ್ಯಗಳು), ‘ಅಮರು ಶತಕ’ದ (ನೂರು ಪದ್ಯಗಳು) ಒಂದು ಹೊಸ ಆವೃತ್ತಿಯನ್ನು ನಾನು ಸಂಪೂರ್ಣಗೊಳಿಸಿದ್ದೇನೆ ಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ರುದ್ರಭಟ್ಟ ಬರೆದ ನಾಯಿಕ-ಭೇದ ಎಂಬ ಸ್ತ್ರೀ ಪಾತ್ರಗಳ ಕುರಿತಾದ ಒಂದು ಪಠ್ಯವನ್ನು ನಾನು ಮರು ಸಂಪಾದಿಸಿದ್ದೇನೆ ಮತ್ತು ಅದರ ಬಗ್ಗೆ ಗೋಪಾಲ ಭಟ್ಟ ಬರೆದಿರುವ ಏಕೈಕ ಟೀಕೆಯನ್ನು ನಾನು ಸಂಪಾದಿಸಿದ್ದೇನೆ. (ದಲಿತ ಇತಿಹಾಸದ ಕುರಿತಾದ ಒಂದು ಪತ್ರಾಗಾರವಲ್ಲದೆ) ನಾವು ಒಂದು ಅಂಬೇಡ್ಕರ್ ಪತ್ರಾಗಾರವನ್ನು, ಪ್ರಾಚ್ಯಾಗಾರವನ್ನು ಕೂಡಾ ಕೊಲಂಬಿಯಾದಲ್ಲಿ ಆರಂಭಿಸುತ್ತಿದ್ದೇವೆ. ಇದರಲ್ಲಿ ಜನತಾ, ಬಹಿಷ್ಕೃತ್ ಭಾರತ್, ಪ್ರಬುದ್ಧ ಭಾರತ್, ಸಮತಾ ಎಂಬ ಪತ್ರಿಕೆಗಳೂ ಸೇರಿದಂತೆ ಅಂಬೇಡ್ಕರ್‌ರವರ ಪತ್ರಿಕೋದ್ಯಮ ರಂಗದ ಡಿಜಿಟಲ್ ದಾಖಲೆಗಳನ್ನು ಸಂಗ್ರಹಿಸಿ ಇಡಲಿದ್ದೇವೆ.
ಕೃಪೆ: indianexpress.com