ಮೋದಿ ಸರಕಾರದ ಎರಡು ಹೊಸ ಅಪಾಯಕಾರಿ ಪ್ರಸ್ತಾವಗಳು -ಯಶವಂತ್ ಸಿನ್ಹಾ

ಹಲವು ವಿಷಯಗಳಲ್ಲಿ ಈ ದೇಶದ ಜನರಿಗೆ ಮೋದಿ ಸರಕಾರದಲ್ಲಿ ವಿಶ್ವಾಸವಿಲ್ಲ, ನಂಬಿಕೆ ಇಲ್ಲ. ನಾನಿಲ್ಲಿ ಉಲ್ಲೇಖಿಸಿರುವ ಮೋದಿ ಸರಕಾರದ ಎರಡು ಪ್ರಸ್ತಾವಗಳು ಜನರಿಗೆ ಸರಕಾರದ ಮೇಲಿರುವ ಅನುಮಾನಗಳನ್ನು ಇನ್ನಷ್ಟು ಬಲಪಡಿಸುತ್ತವೆ. ಜನರು ಆದಷ್ಟು ಬೇಗ ಇವೆರಡು ಪ್ರಸ್ತಾವಗಳನ್ನೂ ಮೊಳಕೆಯಲ್ಲಿ ಚಿವುಟಬೇಕೆಂದು ನಾನು ದೇಶದ ಜನತೆಯನ್ನು ಒತ್ತಾಯಪೂರ್ವಕವಾಗಿ ವಿನಂತಿಸುತ್ತೇನೆ.
2018ರ ಎಪ್ರಿಲ್ 28ರ ನನ್ನ ಬ್ಲಾಗ್‌ನಲ್ಲಿ, ವೀಕ್ಷಕರು ಟಿವಿ ಕಾರ್ಯಕ್ರಮಗಳನ್ನು ನೋಡುವಾಗ ವೀಕ್ಷಕರ ಆಯ್ಕೆಗಳನ್ನು, ಫ್ರಿಫರೆನ್ಸ್ ಗಳನ್ನು ಮಾನಿಟರ್ ಮಾಡಲು ಟಿವಿ ಸೆಟ್‌ಆಪ್ ಬಾಕ್ಸ್‌ಗಳಲ್ಲಿ ಚಿಪ್‌ವೊಂದನ್ನು ಇರಿಸಲು ಮೋದಿ ಸರಕಾರ ಯೋಜನೆ ರೂಪಿಸುತ್ತಿದೆ ಎಂದು ನಾನು ಹೇಳಿದ್ದೆ.
ಇದು ನಮ್ಮ ಮನೆಗಳ ಖಾಸಗಿತನದ ಮೇಲೆ ದಾಳಿ ನಡೆಸಿ ನಮಗೆ ತಿಳಿಯದಂತೆ ಅಥವಾ ನಮ್ಮ ಒಪ್ಪಿಗೆ ಇಲ್ಲದೆ, ನಮ್ಮ ಬಗ್ಗೆ ಮಾಹಿತಿ ಸಂಗ್ರಹಿಸುವ ಒಂದು ಅನಿಷ್ಟ ಯೋಚನೆ, ಯೋಜನೆ ಇರಬಹುದೆಂದೂ ನಾನು ಹೇಳಿದ್ದೆ. ಆ ಬಳಿಕ ಸಾಕಷ್ಟು ಸಮಯ ಕಳೆದಿದೆಯಾದರೂ ಇಷ್ಟರವರೆಗೆ ಸರಕಾರದಿಂದ ನನ್ನ ಹೇಳಿಕೆಗೆ ಸಂಬಂಧಿಸಿ ಯಾವುದೇ ವಿವರಣೆಯಾಗಲಿ, ಪ್ರತಿಕ್ರಿಯೆಯಾಗಲಿ ಬಂದಿಲ್ಲ.
ಕಳೆದ ಕೆಲವು ದಿನಗಳಲ್ಲಿ ಸರಕಾರ ಇನ್ನೂ ಎರಡು ಹಾನಿಕಾರಕವಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಕಟಿಸಿದೆ. ಮೊದಲನೆಯದು ಸಾಮಾಜಿಕ ಜಾಲತಾಣ ಮತ್ತು ಸುಳ್ಳು ಸುದ್ದಿಗೆ ಸಂಬಂಧಿಸಿದ್ದು ಮತ್ತು ಎರಡನೆಯದು ಹೊಸತಾಗಿ ನೌಕರಿಗೆ ಆಯ್ಕೆಯಾಗಿರುವ ನಾಗರಿಕ ಸೇವಾ ಆಭ್ಯರ್ಥಿಗಳಿಗೆ ಸೇವೆಗಳು (ಸರ್ವಿಸಸ್) ಮತ್ತು ಹುದ್ದೆಗಳ (ಕೇಡರ್)ನ್ನು ನೀಡುವುದಕ್ಕೆ ಸಂಬಂಧಿಸಿದ್ದು. ನಾನು ಪ್ರತಿದಿನ ಬೆಳಗ್ಗೆ ಓದುವ ಹಲವು ವರ್ತಮಾನ ಪತ್ರಿಕೆಗಳಲ್ಲಿ ಕೇವಲ ಒಂದು ಪತ್ರಿಕೆಯಲ್ಲಿ ಮಾತ್ರ ಪ್ರಕಟವಾದ ಒಂದು ಚಿಕ್ಕ ಸುದ್ದಿಯ ಪ್ರಕಾರ, ದೇಶದ ಎಲ್ಲ 716 ಜಿಲ್ಲೆಗಳಲ್ಲಿ ಒಂದು ಸಾಮಾಜಿಕ ಮಾಧ್ಯಮ ಸಂಪರ್ಕ ಕೇಂದ್ರ ಅಥವಾ ಒಂದು ಸೋಶಿಯಲ್ ಮೀಡಿಯಾ ಕಮ್ಯುನಿಕೇಶನ್ ಹಬ್ ತೆರೆಯಲು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನಿರ್ಧರಿಸಿದೆ.

ಈ ಹಬ್ ( ಕೇಂದ್ರಗಳಲ್ಲಿ ಆನ್‌ಲೈನ್ ಮಾಹಿತಿ (ಕಂಟೆಂಟ್) ಅನ್ನು ಮಾನಿಟರ್ ಮಾಡುವ ಮಂದಿಯನ್ನು ನೇಮಿಸಲಾಗುತ್ತದೆ. ಸುಳ್ಳು ಸುದ್ದಿ ಹರಡುವ ಪತ್ರಕರ್ತರನ್ನು ಶಿಕ್ಷಿಸಲು ಇಂತಹದೇ ಒಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತೆಗೆದುಕೊಂಡಾಗ ಪ್ರಧಾನಿಯವರನ್ನು ಹಾಡಿ ಹೊಗಳಿದ್ದು ನಿಮಗೆ ನೆನಪಿರಬಹುದು. ಈಗ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಮಾನಿಟರಿಂಗ್ ವ್ಯವಸ್ಥೆಯು ಹೆಚ್ಚಿನ/ ಬಹುಪಾಲು ಭಾರತೀಯ ಭಾಷೆಗಳಲ್ಲಿ ಮತ್ತು ವಿದೇಶಿ ಭಾಷೆಗಳಲ್ಲಿರುವ ವಿಷಯವನ್ನು ಓದಿ, ಸಾಂದರ್ಭೀಕರಿಸಿ ಪ್ರತಿಕ್ರಿಯಿಸಲು ಸಮರ್ಥವಾಗಿರುತ್ತದೆ ಮತ್ತು ಗ್ರಾಹಕ ಸಂಬಂಧ ಮ್ಯಾನೇಜ್‌ಮೆಂಟ್ ದತ್ತಾಂಶಗಳನ್ನು ಗ್ರಾಹಕರ ಸಾಮಾಜಿಕ ಮಾಹಿತಿ/ ಫ್ರೊಫೈಲ್‌ನೊಂದಿಗೆ ಏಕತ್ರಗೊಳಿಸಿ ಗ್ರಾಹಕರ 360-ಡಿಗ್ರಿ ನೋಟವನ್ನು ಪಡೆಯುತ್ತದೆ.
ಗ್ರಾಹಕರ/ ಗಿರಾಕಿಗಳ ನಿಷ್ಠೆ ಮತ್ತು ಗತ ವರ್ತನೆಯ ಆಧಾರದಲ್ಲಿ ಅವರ ಪ್ರತಿಕ್ರಿಯೆಗಳನ್ನು ವೈಯಕ್ತೀಕರಿಸಿ( ಪರ್ಸನಲೈಸ್ ಮಾಡಿ) ಒಂದು ವಿಷಯಕ್ಕೆ ಎಷ್ಟು ಮಂದಿ ಅನುಯಾಯಿಗಳಿದ್ದಾರೆ ಎಂಬಂತಹ ಮೂಲಭೂತವಾದ ಸಂಗತಿಗಳನ್ನು ಪ್ರಭಾವಗಳನ್ನು ಗುರುತಿಸಲು ಅದು ಸಚಿವಾಲಯಕ್ಕೆ (ಸರಕಾರಕ್ಕೆ) ನೆರವಾಗುತ್ತದೆ. ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟರ್ಸ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್ ) ಮೂಲಕ ಈ ಇಡೀ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ.
ಪ್ರತಿಯೊಂದು ಜಿಲ್ಲೆಯಲ್ಲಿರುವ ಬಿಇಸಿಐಎಲ್ ಮೀಡಿಯಾ ಕೇಂದ್ರಗಳು ಪ್ರಾದೇಶಿಕ ಮೀಡಿಯಾ ಮತ್ತು ಸ್ಥಳೀಯ ಘಟನೆಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಸಂಗ್ರಹಿಸುತ್ತವೆ ಮತ್ತು ಸ್ಥಳೀಯ ವರ್ತಮಾನ ಪತ್ರಿಕೆಗಳು ಕೇಬಲ್ ಚಾನೆಲ್‌ಗಳು, ಎಫ್‌ಎಮ್ ಸ್ಟೇಶನ್‌ಗಳು ಹಾಗೂ ಪ್ರಮುಖ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮಾನಿಟರ್ ಮಾಡುತ್ತವೆ ಮತ್ತು ದಿನವೊಂದರ ಕನಿಷ್ಠ ಆರು ವರದಿಗಳನ್ನು ಸರಕಾರಕ್ಕಾಗಿ ಸಿದ್ಧಪಡಿಸುತ್ತವೆ. ಒಟ್ಟಿನಲ್ಲಿ, ಸಂಪರ್ಕ ಮತ್ತು ಮಾಹಿತಿ ಸಚಿವಾಲಯವು ಮೀಡಿಯಾದಲ್ಲಿ, ನಡೆಯುವ ಎಲ್ಲದರ ಮೇಲೂ ಕಾಣಿಸುವುದಲ್ಲದೆ ವಿಷಯ (ಕಂಟೆಂಟ್) ವನ್ನೂ ಮಾನಿಟರ್ ಮಾಡಲು ಕೂಡ ಸಮರ್ಥವಾಗುತ್ತದೆಂಬುದು ಇವೆಲ್ಲವುಗಳಿಂದ ಸ್ಪಷ್ಟವಾಗುತ್ತದೆ.

ಅಂದರೆ, ಸರಕಾರದ ಪರ ಇಲ್ಲದ ಏನೇ ಇದ್ದರೂ ಅದು ತಕ್ಷಣ ಸರಕಾರದ ಗಮನಕ್ಕೆ ಬರುತ್ತದೆ ಮತ್ತು ಮೀಡಿಯಾ ಅಥವಾ ಸೋಶಿಯಲ್ ಮೀಡಿಯಾದಲ್ಲಿರುವ ತನ್ನ ವಿರುದ್ಧವಾಗಿರುವ ಎಲ್ಲ ಶಕ್ತಿಗಳ ವಿರುದ್ಧ ದಂಡನಾಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಸಾಧ್ಯವಾಗುತ್ತದೆ. ಇದು ಭಾರೀ ಅಪಾಯಕಾರಿ ಎಂದು ಬಾಹ್ಯನೋಟಕ್ಕೇ ಗೊತ್ತಾಗುತ್ತದೆ. ಯಾಕೆಂದರೆ, ಆಗ ಸರಕಾರವು ನಮ್ಮ ಎಲ್ಲ ಕ್ರಿಯೆಗಳ ಮೇಲಷ್ಟೇ ಅಲ್ಲ, ನಮ್ಮ ಭವಿಷ್ಯದ ಯೋಚನೆಗಳನ್ನು ಕೂಡ ಮಾನಿಟರ್ ಮಾಡುತ್ತಿರುತ್ತದೆ. ಒಂದು ಸರಕಾರ ವಹಿಸಬೇಕಾದ ಪಾತ್ರವೇ ಇದು? ಪ್ರಜ್ಞಾವಂತ ನಾಗರಿಕರು ಈ ಕುರಿತು ತುರ್ತಾಗಿ ಚಿಂತಿಸಿ, ಚರ್ಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಭಾರತ ಸರಕಾರದ ಸಚಿವಾಲಯಗಳಿಗೆ ಕಳುಹಿಸಲಾಗಿರುವ ಇನ್ನೊಂದು ಇಷ್ಟೇ ಹಾನಿಕಾರಕವಾದ ಪ್ರಸ್ತಾವವು, ಐಎಎಸ್ ಮತ್ತು ಇತರ ನಾಗರಿಕ ಸೇವೆಗಳಿಗೆ (ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀೀರ್ಣರಾದ ಅಭ್ಯರ್ಥಿಗಳಿಗೆ) ಸೇವಾ ವರ್ಗವನ್ನು ಹಂಚುವುದಕ್ಕೆ, ನೀಡುವುದಕ್ಕೆ ಸಂಬಂಧಿಸಿದೆ. ಈ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ ಲಭಿಸಿರುವ ರ್ಯಾಂಕ್‌ಗಳನ್ನಾಧರಿಸದೆ, ಅವರಿಗೆ ನಡೆಸಲಾಗುವ ಬುನಾದಿ (ಫೌಂಡೇಶನ್) ಕೋರ್ಸ್‌ನಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಐಎಎಸ್, ಐಪಿಎಸ್ ಅಥವಾ ಇತರ ಸೇವಾರಂಗವನ್ನು ಅಲಾಟ್ ಮಾಡಬೇಕೆಂಬುದು ಈಗ ಸರಕಾರದ ಯೋಜನೆ. ಹೀಗೆ ಮಾಡಿದಲ್ಲಿ, ಕಳೆದ 70 ವರ್ಷಗಳಿಂದ ನಡೆದುಕೊಂಡು ಬಂದಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಂಕ ಗಳಿಸಿದ ರ್ಯಾಂಕ್ ಅಮುಖ್ಯವಾಗಿ ಮೂರು ತಿಂಗಳ ಕೋರ್ಸ್‌ನಲ್ಲಿ ಅಭ್ಯರ್ಥಿಯ ರ್ಯಾಂಕ್ ಎಷ್ಟು ಎಂಬುದೇ ಮುಖ್ಯವಾಗಿ ಬಿಡುತ್ತದೆ.
ಸೇವಾಂಗವನ್ನು ಹಂಚುವ, ಅಲಾಟ್‌ಮಾಡುವ ಪರೀಕ್ಷೆಯ ರ್ಯಾಂಕ್ ಆಧಾರದ ಬದಲಾಗಿ, ಆಟೋಮ್ಯಾಟಿಸಿಟಿಯ ಬದಲಾಗಿ, ಆಯ್ಕೆ ಸಮಿತಿಯ ನಿರ್ಧಾರ, ಡಿಸ್‌ಕ್ರಿಶನ್ ಮುಖ್ಯವಾಗುತ್ತದೆ ಹಾಗೂ ಏಕೈಕ ಮಾನದಂಡವಾಗುತ್ತದೆ. ಒಬ್ಬ ಅಭ್ಯರ್ಥಿಯ ಬಗ್ಗೆ ಯುಪಿಎಸ್‌ಸಿ ಪರೀಕ್ಷೆಯಿಂದ ತಿಳಿಯದ ಇನ್ನೇನನ್ನು ಮೂರು ಅಥವಾ ನಾಲ್ಕು ತಿಂಗಳ ಫೌಂಡೇಶನ್ ಕೋರ್ಸ್‌ನಿಂದ ತಿಳಿಯಲು ಸಾಧ್ಯ? ಸಂಪೂರ್ಣವಾಗಿ ವಸ್ತು ನಿಷ್ಠವಾದ, ಇಂಪರ್ಸನಲ್ ಆದ ಯುಪಿಎಸ್‌ಸಿಯ ಪ್ರಕ್ರಿಯೆಗೆ ಬದಲಾಗಿ ಈ ಕೋರ್ಸ್‌ನ ಮೂಲಕ ಬಹಳಷ್ಟು ವಸ್ತು ನಿಷ್ಠತೆಯನ್ನು ನಾವು ಆಯ್ಕೆಯ, ಸೇವಾರಂಗದ ಹಂಚಿಕೆಯ ಪ್ರಕ್ರಿಯೆಯಲ್ಲಿ ತೂರುತ್ತಿದ್ದೇವೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಗಳಿಸಿದಾತನ ಬದಲು 285ನೇ ರ್ಯಾಂಕ್ ಗಳಿಸಿದಾತ ಐಎಎಸ್‌ಗೆ ಅರ್ಹ ಎಂದರೆ ಹೇಗೆ? ಈತ ಫೌಂಡೇಶನ್ ಕೋರ್ಸ್‌ನಲ್ಲಿ ಮೇಲುಗೈ ಸಾಧಿಸಿದ್ದಾನೆ ಎಂದು ಸಮರ್ಥಿಸಿಕೊಳ್ಳಬಹುದೇ?
ಈಗ ಹಲವು ವಿಷಯಗಳಲ್ಲಿ ಈ ದೇಶದ ಜನರಿಗೆ ಮೋದಿ ಸರಕಾರದಲ್ಲಿ ವಿಶ್ವಾಸವಿಲ್ಲ, ನಂಬಿಕೆ ಇಲ್ಲ. ನಾನು ಮೇಲೆ ಉಲ್ಲೇಖಿಸಿರುವ ಮೋದಿ ಸರಕಾರದ ಎರಡು ಪ್ರಸ್ತಾವಗಳು ಜನರಿಗೆ ಸರಕಾರದ ಮೇಲಿರುವ ಅನುಮಾನಗಳನ್ನು ಇನ್ನಷ್ಟು ಬಲಪಡಿಸುತ್ತವೆ. ಜನರು ಆದಷ್ಟು ಬೇಗ ಇವೆರಡು ಪ್ರಸ್ತಾವಗಳನ್ನೂ ಮೊಳಕೆಯಲ್ಲಿ ಚಿವುಟಬೇಕೆಂದು ನಾನು ದೇಶದ ಜನತೆಯನ್ನು ಒತ್ತಾಯಪೂರ್ವಕವಾಗಿ ವಿನಂತಿಸುತ್ತೇನೆ.
ಕೃಪೆ: ndtv.com







