ಯೋಗಿ ಜೈಲಲ್ಲಿ ಕೊಳೆಯುತ್ತಿರುವ ದಲಿತ ಬಾಲಕರು
ಭಾಗ-2
ಆಧಾರ್ ಕಾರ್ಡ್ ವಿವರಗಳ ಪ್ರಕಾರ ಈ ಮೂವರೂ ಬಾಲಕರು ಇನ್ನೂ ಬಾಲ್ಯಾವಸ್ಥೆಯಲ್ಲಿರುವವರು. ಆದಾಗ್ಯೂ ಎಫ್‌ಐಆರ್‌ನಲ್ಲಿ ಪೊಲೀಸರು ಮಕ್ಕಳು ಹಾಗೂ ವಯಸ್ಕರ ಮೇಲೆ ಸಮಾನ ಆರೋಪಗಳನ್ನು ಹೊರಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 15 ಸೆಕ್ಷನ್‌ಗಳಡಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 147, 149 (ದೊಂಬಿ ಮತ್ತು ಕುಚೋದ್ಯ ಯತ್ನ), ಸೆಕ್ಷನ್ 332 (ಸರಕಾರಿ ಅಧಿಕಾರಿ ಮೇಲೆ ದಾಳಿ), ಸೆಕ್ಷನ್ 353, 336, 345, 307 (ಹತ್ಯೆ ಯತ್ನ), ಸೆಕ್ಷನ್ 395 (ಡಕಾಯಿತಿ), ಸೆಕ್ಷನ್ 504 (ಶಾಂತಿಭಂಗ), ಸೆಕ್ಷನ್ 120 ಬಿ (ಅಪರಾಧ ಪಿತೂರಿ) ಮತ್ತು ಸೆಕ್ಷನ್ 427. ಇದರ ಜತೆಗೆ ಗಂಭೀರ ಅಪರಾಧ ಆರೋಪಗಳಾದ ದಂಡಸಂಹಿತೆ (ತಿದ್ದುಪಡಿ) ಕಾಯ್ದೆ-1932ರ ಸೆಕ್ಷನ್ 7 ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆ ಕಾಯ್ದೆ- 1984 (4)ರ ಅನ್ವಯವೂ ಬಾಲಕರ ಮೇಲೆ ದೂರು ದಾಖಲಿಸಲಾಗಿದೆ.
ಒಂದೇ ರೀತಿಯ ಸೆಕ್ಷನ್‌ಗಳ ಅನ್ವಯ ಹೇಗೆ ಬಾಲಕರನ್ನು ಬಂಧಿಸಲಾಗಿದೆ ಎನ್ನುವುದು ಕುಟುಂಬದವರ ಪ್ರಶ್ನೆ.
ಬಾಲಕರ ಪರವಾಗಿ ಹೋರಾಡುತ್ತಿರುವ ವಕೀಲ ಸತೀಶ್ ಕುಮಾರ್, ‘‘12 ವರ್ಷದ ಬಾಲಕರ ಮೇಲೆ ಕೂಡಾ ಸೆಕ್ಷನ್ 120 (ಬಿ) ಮತ್ತು 307ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇಂಥ ಪುಟ್ಟ ಬಾಲಕರು ಅಪರಾಧ ಪಿತೂರಿಯ ಭಾಗವಾಗಲು ಸಾಧ್ಯವೇ? ಎಲ್ಲ ಬಾಲಕರ ಮೇಲೂ ಒಂದೇ ರೀತಿಯ ಸೆಕ್ಷನ್‌ಗಳ ಅನ್ವಯ ದೂರು ದಾಖಲಿಸಿರುವುದು ನೋಡಿದರೆ, ಸೂಕ್ತ ತನಿಖೆ ನಡೆಸದೆ ಅಥವಾ ಸತ್ಯಾಂಶ ಅರಿಯದೆ ದಲಿತ ಸಮುದಾಯದವರನ್ನು ಹುಡುಕಿ ಬಂಧಿಸಿದ್ದಾರೆ. ಯಾರು ಗಲಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತನಿಖೆ ನಡೆಸಬೇಕಾದದ್ದು ಪೊಲೀಸರ ಕರ್ತವ್ಯ. ಆದರೆ ಅವರು ಬೇಕಾಬಿಟ್ಟಿಯಾಗಿ ದಲಿತರನ್ನು ಬಂಧಿಸಿದ್ದಾರೆ’’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘‘ಕೆಳಹಂತದ ನ್ಯಾಯಾಲಯದಲ್ಲಿ ಬಾಲಕರಿಗೆ ನ್ಯಾಯ ಸಿಗದು’’ ಎಂದು ಸತೀಶ್ ಹೇಳುತ್ತಾರೆ. ಬಿಜೆಪಿ ಹಾಗೂ ಆರೆಸ್ಸೆಸ್, ಪೊಲೀಸರು ಹಾಗೂ ನ್ಯಾಯಾಲಯದ ಜತೆ ಶಾಮೀಲಾಗಿ ಅಮಾಯಕ ಜನರ ವಿರುದ್ಧ ಸಂಚು ಹೂಡಿದ್ದಾರೆ
‘‘ಕೆಳ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಗೆ 14 ದಿನಗಳ ಅವಧಿ ನೀಡಿದೆ. ಹಾಗಾಗಬಾರದು. ಏಕೆಂದರೆ, ಒಬ್ಬ ಕೈದಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕಾದರೆ, ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಮೊದಲು ತಿರಸ್ಕರಿಸಬೇಕು. ಆದರೆ ವಿಚಾರಣೆಗೇ 14 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದಾದರೆ, ನ್ಯಾಯವ್ಯವಸ್ಥೆ ಕೂಡಾ ನಿಷ್ಪಕ್ಷಪಾತವಾಗಿಲ್ಲ ಎಂಬುದು ಅರ್ಥ. ಪರಿಣಾಮವಾಗಿ, ದಲಿತರನ್ನು ಸಾಧ್ಯವಾದಷ್ಟೂ ಕಾಲ ಜೈಲಿನಲ್ಲಿ ಇಡುವ ಹುನ್ನಾರ’’ ಎಂದು ಆಪಾದಿಸುತ್ತಾರೆ. ‘‘ಜಾಮೀನು ಅರ್ಜಿ ತಿರಸ್ಕೃತಗೊಂಡರೆ, ಆದೇಶದ ಪ್ರತಿಯನ್ನು ಪಡೆಯಲು ಒಂದು ವಾರ ಕಾಲಾವಕಾಶ ಇರುತ್ತದೆ. ಇದು ಮೇಲ್ಮನವಿ ಸಲ್ಲಿಕೆಯನ್ನು ಮತ್ತಷ್ಟು ವಿಳಂಬ ಮಾಡುತ್ತದೆ. ಅಧಿಕಾರಿಗಳು ಕೆಲಸ ಮಾಡುವುದು ನೋಡಿದರೆ, ಆರೆಸ್ಸೆಸ್ ಮತ್ತು ಬಜರಂಗದಳದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಸ್ಪಷ್ಟ’’ ಎನ್ನುವುದು ಅವರ ಅಭಿಮತ.
‘‘ಪೊಲೀಸರು ಎಫ್‌ಐಆರ್‌ನಲ್ಲಿ ಬಾಲಕರ ಜಾತಿಯನ್ನು ನಮೂದಿಸಿದ್ದಾರೆ. ಇದು ವಿಚಿತ್ರ’’ ಎಂದು ಅವರು ಹೇಳುತ್ತಾರೆ. ಸತೀಶ್ ಹೇಳುವ ಪ್ರಕಾರ, ‘‘ಬಂಧಿಸಲ್ಪಟ್ಟ ಬಾಲಕರು ಬಡಕುಟುಂಬದವರು ಹಾಗೂ ನ್ಯಾಯಾಲಯಕ್ಕೆ ಬರುವಷ್ಟು ಹಣವೂ ಅವರಲ್ಲಿಲ್ಲ.’’
‘‘ದಲಿತರು ಮತ್ತು ಅಲ್ಪಸಂಖ್ಯಾತರು ನ್ಯಾಯಾಲಯದಲ್ಲಿ ನ್ಯಾಯ ಪಡೆಯುವುದಿಲ್ಲ. ಅದು ಮೇಲ್ವರ್ಗದವರ ಜಾಮೀನು ಅರ್ಜಿಯಾಗಿದ್ದರೆ, ನ್ಯಾಯಾಲಯ ರಾತ್ರೋ ರಾತ್ರಿ ಆದೇಶ ನೀಡುತ್ತಿತ್ತು ಎನ್ನುವುದು ನನ್ನ ನಂಬಿಕೆ. ಆದರೆ ದಲಿತರನ್ನು ಸಮಾನವಾಗಿ ಪರಿಗಣಿಸುತ್ತಿಲ್ಲ. ಇಷ್ಟಾಗಿಯೂ ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಜನ ತಪ್ಪುಮಾಡಬಹುದು. ಆದರೆ ಸಂವಿಧಾನ ತಪ್ಪುಮಾಡಲಾಗದು. ಮೇಲಿನ ಹಂತದ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸವಿದೆ’’ ಎನ್ನುತ್ತಾರವರು.
ಸಾಮಾಜಿಕ ಕಾರ್ಯಕರ್ತ ಮತ್ತು ದಲಿತ ಮುಖಂಡ ಸುಶೀಲ್ ಗೌತಮ್ ಹೇಳುವಂತೆ, ‘‘ನನ್ನ ಅನಿಸಿಕೆಯಂತೆ ಬ್ರಿಟಿಷರಾಗಲೀ, ರಾಜ ಮಹಾರಾಜರಾಗಲೀ ಈ ರೀತಿ ವರ್ತಿಸಿಲ್ಲ. ನಿಯತವಾಗಿ ಗೂಂಡಾಗಿರಿ ಮಾಡುವವರ ಮೇಲೆ ವಿಧಿಸುವ ಸೆಕ್ಷನ್‌ಗಳ ಅನ್ವಯ ಇವರ ಮೇಲೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಎಪ್ರಿಲ್ 2ರಂದು ಭುಗಿಲೆದ್ದ ಹಿಂಸಾಚಾರದಲ್ಲಿ ಮೇಲ್ವರ್ಗದವರೂ ಪಾಲ್ಗೊಂಡಿದ್ದಾರೆ. ಅವರನ್ನೂ ಸ್ಥಳದಲ್ಲೇ ಪೊಲೀಸರು ಬಂಧಿಸಿದ್ದರು. ಆದರೆ ಬಿಜೆಪಿ ಒತ್ತಡದಿಂದಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ’’
‘‘ಮೇಲ್ವರ್ಗದವರನ್ನು ಬಿಡುಗಡೆ ಮಾಡುವುದು ಹಾಗೂ ದಲಿತ ಬಾಲಕರನ್ನು ಕಂಬಿಗಳ ಹಿಂದೆ ಎರಡು ತಿಂಗಳಿಗೂ ಅಧಿಕ ಕಾಲ ಇಡುವುದು, ಆಡಳಿತ ವ್ಯವಸ್ಥೆಯ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಇವೆಲ್ಲವೂ ದಲಿತರ ರಾಜಕೀಯ ಹಾಗೂ ಸಾಮಾಜಿಕ ಚಳವಳಿಯನ್ನು ಒಡೆಯುವ ಹುನ್ನಾರ. ಮನುವಾದಿ ನ್ಯಾಯವ್ಯವಸ್ಥೆ ಕೂಡಾ ಇದರಲ್ಲಿ ಶಾಮೀಲಾಗಿದೆ.’’
ಗೌತಮ್ ಪ್ರಕಾರ, ‘‘ದಲಿತರು ಮತ್ತು ಅವರ ಮುಖಂಡರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಇದರಿಂದಾಗಿ ಅವರು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವುದು ಅಸಾಧ್ಯ. ಬಾಬಾಸಾಹೇಬ್ ಭಾವಚಿತ್ರದ ಟಿ-ಶರ್ಟ್ ಧರಿಸಿದವರನ್ನು ಬಂಧಿಸಲಾಗಿದೆ. ಯೋಗಿಯವರ ಪೊಲೀಸರಲ್ಲಿ ಅಂಬೇಡ್ಕರ್ ಬಗ್ಗೆ ಎಷ್ಟು ದ್ವೇಷ ಇದೆ ಎನ್ನುವುದು ಇದರಿಂದ ವೇದ್ಯವಾಗುತ್ತದೆ.’’
ಮೀರತ್ ಜಿಲ್ಲಾ ಅಪರಾಧ ವಿಭಾಗದ ಎಸ್ಪಿಶಿವರಾಮ್ ಯಾದವ್ ಅವರನ್ನು ‘ದ ವೈರ್’ ಪ್ರಶ್ನಿಸಿದಾಗ, ‘‘ಈ ಮೊದಲು ನಿರ್ಮಿಸಿದ ಎಸ್‌ಐಟಿ ಎಲ್ಲರನ್ನೂ ಬಂಧಿಸಿದೆ. ಇದೀಗ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇನೆ. ತನಿಖೆ ಪ್ರಗತಿಯಾದಂತೆಲ್ಲ ಸತ್ಯಾಂಶ ತಿಳಿಯುತ್ತದೆ.’’ ಎನ್ನುತ್ತಾರೆ.
ದಲಿತ ಬಾಲಕರನ್ನು ಬಂಧಿಸಿ, ಅಪರಾಧ ಪಿತೂರಿ, ಕೊಲೆ ಯತ್ನ ಮತ್ತು ಇತರ ಆರೋಪಗಳನ್ನು ಹೊರಿಸಿದ ಬಗ್ಗೆ ಮಾತನಾಡಿದ ಅವರು, ‘‘ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಅಮಾಯಕರು ಎಂದು ಕಂಡುಬಂದಲ್ಲಿ ಅಥವಾ ತಪ್ಪಾಗಿ ಬಂಧಿಸಲಾಗಿದೆ ಎಂದು ಸ್ಪಷ್ಟವಾದಲ್ಲಿ ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಜಾಮೀನು ಅಥವಾ ನ್ಯಾಯ ಒದಗಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ನಾವು ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಮತ್ತು ಅಮಾಯಕರು ನ್ಯಾಯ ಪಡೆಯಲಿದ್ದಾರೆ’’ ಎನ್ನುತ್ತಾರೆ.
ಕೃಪೆ: thewire.in