ದಲಿತರ ಧ್ವನಿಯಾಗಿದ್ದ ‘ಪಂಚಮ’ ಪತ್ರಿಕೆಗೆ ಸಂಪುಟ ರೂಪ
♦ 70ರ ದಶಕದಲ್ಲಿ ದಲಿತ ಚಳವಳಿಗೆ ಶಕ್ತಿ ತುಂಬಿದ್ದ ಪತ್ರಿಕೆ ♦500 ಪುಟಗಳಲ್ಲಿ ಸಂಪುಟ ♦ 4 ರಿಂದ 5 ಲಕ್ಷ ರೂ.ವೆಚ್ಚ

ದಲಿತರ ಒಡಲಿಂದ ಬಂದ, ದಲಿತರೇ ಹೊರತಂದ ಮೊದಲ ಪತ್ರಿಕೆ ಎಂಬ ಹಿರಿಮೆಗೆ ಪಾತ್ರವಾಗಿರುವ ಹಾಗೂ ದಲಿತ ಚಳವಳಿಗೆ ಹುರುಪು ತುಂಬಿದ್ದ ‘ಪಂಚಮ’ ಪತ್ರಿಕೆಯನ್ನು ಸಂಪುಟ ರೂಪದಲ್ಲಿ ಹೊರತರಲು ಕನಾಟರ್ಕ ಸಾಹಿತ್ಯ ಅಕಾಡಮಿ ಮುಂದಾಗಿದೆ.
1970ರ ದಶಕದಲ್ಲಿ ದಲಿತ ಚಳವಳಿಗಳಿಗೆ ಚೈತನ್ಯ ಶಕ್ತಿಯಾಗಿತ್ತು. ಆರ್ಥಿಕ ಮುಗ್ಗಟ್ಟಿನ ನಡುವೆಯೂ ದಲಿತರ ನೋವು-ನಲಿವು, ಹೋರಾಟಗಳು, ಪ್ರತಿಭಟನೆಗಳು ಸೇರಿದಂತೆ ಹಲವು ಸಂದೇಶಗಳನ್ನು ಹೊತ್ತು ತರುತ್ತಿತ್ತು. ಮೈಸೂರು ಭಾಗದಲ್ಲಿ ದಲಿತ ಚಳವಳಿಗೆ ದಾರಿ ದೀಪವಾಗಿತ್ತು ಹಾಗೂ ಹಲವು ಹೋರಾಟಗಳಿಗೆ ಮುನ್ನುಡಿಯನ್ನು ‘ಪಂಚಮ ಪತ್ರಿಕೆ’ ಬರೆದಿತ್ತು.
ಅಲ್ಲದೆ, 70ರ ದಶಕದಲ್ಲಿ ಈ ಪತ್ರಿಕೆ ದಲಿತ ಸಂಘಟನೆಗಳಿಗೆ ಸಂಬಂಧಿಸಿದ ಬೇರೆ, ಬೇರೆ ಪತ್ರಿಕೆಗಳ ಹುಟ್ಟಿಗೆ ಕಾರಣವಾಯಿತು. ಆದರೆ ಆ ಯಾವುದೇ ಪತ್ರಿಕೆಗಳು ಪಂಚಮ ಪತ್ರಿಕೆ ಮಾಡಿದ ಸಾಹಸ ಮಾಡಲು ಸಾಧ್ಯವಾಗಿರಲಿಲ್ಲ. ಆದುದರಿಂದಾಗಿ, ಚಾರಿತ್ರಿಕ ನೆಲೆಯಿಂದ ಮತ್ತು ದಾಖಲಾತಿಯ ದೃಷ್ಟಿಯಿಂದ ಪತ್ರಿಕೆಗಳನ್ನು ‘ಸ್ಕಾನ್’ ಮಾಡಿ ಅಥವಾ ಇದ್ದ ಸ್ಥಿತಿಯಲ್ಲಿಯೇ ಮುದ್ರಿಸುವ ಕೆಲಸಕ್ಕೆ ಅಕಾಡಮಿ ಕೈ ಹಾಕಿದೆ.
ದಲಿತರು ತಮ್ಮ ಬಗ್ಗೆ ಮತ್ತು ಸಮಾಜದ ಬಗ್ಗೆ ವೈಜ್ಞಾನಿಕವಾಗಿ ವಿವೇಚಿಸುವಂತೆ ಮಾಡುವ ಉದ್ದೇಶವಿಟ್ಟುಕೊಂಡು, ಎಲ್ಲ ಬಗೆಯ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಬೌದ್ಧಿಕ ದಬ್ಬಾಳಿಕೆಯ ವಿರುದ್ಧ, ಶೋಷಣೆಯ ವಿರುದ್ಧ ದಲಿತರಲ್ಲಿ ಜಾಗೃತಿ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಹಾಗೂ ವಿವಿಧ ವಿಚಾಧಾರೆಗಳನ್ನು, ಸಿದ್ಧಾಂತಗಳನ್ನು ದಲಿತರಿಗೆ ತಲುಪಿಸಿ ವಿಚಾರವಂತರನ್ನಾಗಿ ಮಾಡುವ ಸಲುವಾಗಿ ಖಾಸಗಿ ಪ್ರಸಾರಕ್ಕಾಗಿ ಪ್ರಕಟವಾಗುತ್ತಿದ್ದ ‘ಶೋಷಿತ’ ಪತ್ರಿಕೆಯು 1976ರಲ್ಲಿ ಅಧಿಕೃತವಾಗಿ ‘ಪಂಚಮ’ ಪತ್ರಿಕೆಯಾಗಿ ಬದಲಾಯಿತು.
ಕರ್ನಾಟಕದ ದಲಿತ ಚಳವಳಿಯ ಸ್ಮರಣೆಯೊಂದಿಗೆ ಅಂದು ಆ ಪತ್ರಿಕೆಯ ಆಶಯ ಏನಾಗಿತ್ತು? ಕಾಲ ಕಾಲಕ್ಕೆ ಪತ್ರಿಕೆ ಆಶಯಗಳು ಹೇಗೆ ಬದಲಾದವು? ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪತ್ರಿಕೆಯನ್ನು ಹೇಗೆ ಓದುಗರಿಗೆ ತಲುಪಿಸಲಾಗುತ್ತಿತ್ತು ಸೇರಿದಂತೆ ಹಲವು ವಿಷಯಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಜೊತೆಗೆ, ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಲಿ ಎಂಬ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಈ ಪತ್ರಿಕೆಯನ್ನು ಸಂಪುಟ ರೂಪದಲ್ಲಿ ಹೊರ ತರಲು ಮುಂದಾಗಿದೆ.
►ಯಾವ ಅನುದಾನ ಬಳಕೆ?
ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪ ಯೋಜನೆಯಡಿ ಅಕಾಡಮಿಯಲ್ಲಿರುವ ಅನುದಾನವನ್ನು ಪಂಚಮ ಪತ್ರಿಕೆಯ ಸಂಪುಟ ರಚನೆಗೆ ಬಳಸಿಕೊಳ್ಳುವ ಚಿಂತನೆ ನಡೆದಿದೆ. ಎರಡು ಸಂಪುಟಗಳಲ್ಲಿ ಪತ್ರಿಕೆಯನ್ನು ಹೊರತರುವ ಆಲೋಚನೆ ಮಾಡಲಾಗಿದ್ದು, ಪ್ರತಿ ಸಂಪುಟ ಅಂದಾಜು 400ರಿಂದ 450 ಪುಟಗಳನ್ನು ಒಳಗೊಳ್ಳಲಿದೆ. ಇದಕ್ಕೆ 4ರಿಂದ 5 ಲಕ್ಷ ರೂ. ವೆಚ್ಚವಾಗುವ ಸಾಧ್ಯತೆಯಿದೆ.
►ಆರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ:
70 ರ ದಶಕದ ಕಾಲಘಟ್ಟದಲ್ಲಿ ಪ್ರಕಟವಾಗಿದ್ದ ಪಂಚಮ ಪತ್ರಿಕೆಯನ್ನು ಪುನರ್ ಮುದ್ರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಪತ್ರಿಕೆಯಲ್ಲಿ ಕೆಲಸ ಮಾಡಿದವರನ್ನು ಸಲಹಾ ಸಮಿತಿಗೆ ನೇಮಿಸಲಾಗಿದೆ. ಇದುವರೆಗೆ ಪತ್ರಿಕೆಯ ಶೇ. 60ರಷ್ಟು ಪ್ರತಿಗಳು ಸಿಕ್ಕಿದ್ದು, ಬಾಕಿ ಇರುವ ಶೇ. 40ರಷ್ಟು ಪ್ರತಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮುಂದಿನ 6-7 ತಿಂಗಳಲ್ಲಿ ಸಂಪುಟ ಮುದ್ರಣಗೊಳ್ಳುವ ನಿರೀಕ್ಷೆಯಿದೆ ಎಂದು ಅಕಾಡಮಿ ಅಧ್ಯಕ್ಷ ಪ್ರೊ.ಅರವಿಂದ ಾಲಗತ್ತಿ ವಾರ್ತಾಭಾರತಿಗೆ ತಿಳಿಸಿದ್ದಾರೆ.
►ಸಲಹಾ ಸಮಿತಿಯಲ್ಲಿ ಯಾರಿದ್ದಾರೆ?:
ಸಂಪುಟ ಹೊರತರುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಿಕೆಗಾಗಿ ದುಡಿದವರೊಂದಿಗೆ ಅಕಾಡಮಿ ಸಮಾಲೋಚನೆ ನಡೆಸಿದೆ. ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸಂಪುಟ ಹೊರತರುವ ನಿಟ್ಟಿನಲ್ಲಿ ಸಂಪಾದಕ ಮಂಡಳಿ ರಚನೆ ಮಾಡಿದ್ದು, ಅದರಲ್ಲಿ ರಾಮದೇವ್‌ರಾಕೆ, ಡಾ.ತುಕಾರಾಂ ಮತ್ತು ಮೈಸೂರು ವಿವಿ ಅಂಬೇಡ್ಕರ್ ಪೀಠದ ನಿರ್ದೇಶಕ ನರೇಂದ್ರ ಕುಮಾರ್ ಇದ್ದಾರೆ. ಅಲ್ಲದೆ, ಪಂಚಮದ ಸಂಪಾದಕರಾಗಿದ್ದ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ, ಮಳ್ಳೂರು ನಾಗರಾಜು ಹಾಗೂ ಹಿರಿಯ ಸಾಹಿತಿ, ಚಿಂತಕ ದೇವನೂರ ಮಹಾದೇವ ಸೇರಿದಂತೆ 8 ಜನರ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಸಲಹಾ ಸಮಿತಿಯ ಎಲ್ಲರನ್ನೂ ಒಂದೇ ಕಡೆ ಸೇರಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹ ಮಾಡಿ, ಅದನ್ನು ಬರಹದ ಮೂಲಕ ಸಂಪುಟದಲ್ಲಿ ಸೇರ್ಪಡೆ ಮಾಡಲಾಗುತ್ತದೆ.
ಕರ್ನಾಟಕದಲ್ಲಿ 1970ರ ದಶಕದಲ್ಲಿ ದಲಿತ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಅಂದಿನ ಸಂದರ್ಭದಲ್ಲಿ ವೆುಸೂರು ಭಾಗದಿಂದ ಆರಂಭವಾದ ಪಂಚಮ ಪತ್ರಿಕೆ ದಲಿತ ಚಳವಳಿಗೆ ಮತ್ತಷ್ಟು ಶಕ್ತಿಯನ್ನು ನೀಡಿದೆ. ಆದರೆ, ಇದೀಗ ಪತ್ರಿಕೆ ಹರಿದು ಹಂಚಿಹೋಗಿದ್ದು, ಅದನ್ನು ಸಂಗ್ರಹ ಮಾಡುವುದು ಕಷ್ಟವಾಗಿದೆ. ಅದು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಲಿ, ಹೊಸ ಚಳವಳಿಗಳನ್ನು ಹುಟ್ಟಿ ಹಾಕಲಿ ಎಂಬ ಉದ್ದೇಶದಿಂದ ಹಲವು ಚಳವಳಿಗಾರರ ಮನೆಗಳಿಗೆ ಭೇಟಿ ನೀಡಿ ಪತ್ರಿಕೆ ಸಂಪಾದನೆ ಮಾಡಿ, ಎರಡು ಸಂಪುಟಗಳಲ್ಲಿ ಪ್ರಕಟಿಸಲು ಮುಂದಾಗಿದ್ದೇವೆ.
-ಪ್ರೊ.ಅರವಿಂದ ಮಾಲಗತ್ತಿ,
ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡಮಿ
70ರ ದಶಕದಲ್ಲಿ ದಲಿತ ಚಳವಳಿಗೆ ಪ್ರೋತ್ಸಾಹ ನೀಡುತ್ತಾ, ದಲಿತರಲ್ಲಿ ಜಾಗೃತಿ ಮೂಡಿಸುತ್ತಿದ್ದ ಪಂಚಮ ಪತ್ರಿಕೆಯನ್ನು ಇಂದಿನ ಯುವಪೀಳಿಗೆಗೆ ಮಾದರಿಯನ್ನಾಗಿ ತೋರಿಸುವ ಉದ್ದೇಶದಿಂದ ಸಂಪುಟ ಮಾಡುತ್ತಿರುವುದು ಶ್ಲಾಘನೀಯ. ಅದರಲ್ಲಿ ನಾನು ತೊಡಗಿಸಿಕೊಂಡಿರುವುದು ಸಂತಸವಾಗುತ್ತಿದೆ. ಇಂದಿನ ಯುವ ಪೀಳಿಗೆಯಲ್ಲಿ ಮರೆಯಾಗು ತ್ತಿರುವ ಚಳವಳಿಯ ಉತ್ಸಾಹವನ್ನು ಮರು ನಿರ್ಮಾಣ ಮಾಡಬೇಕಿದೆ
-ಸಿದ್ದಲಿಂಗಯ್ಯ, ದಲಿತ ಕವಿ









