ಇಮ್ಮಡಿ ರಾಜಕುಮಾರ ರಾಜಾರಾಮ್ ಯಾರು?
ಅವರ ಸ್ಮಾರಕವಾಗಿ ಫ್ಲಾರೆನ್ಸ್ ನಗರದಲ್ಲಿ ಯಾಕಾಗಿ ಒಂದು ಸ್ಮಾರಕವಿದೆ?

ಫ್ಲಾರೆನ್ಸ್ ನಗರದ ಕೇಂದ್ರ ಭಾಗದಿಂದ ಆಚೆ ಉದ್ದವಾದ ಒಂದು ಹಸಿರು ಸ್ಥಳವಿದೆ. ಅದೇ ಕ್ಯಾಸೀನ್ ಪಾರ್ಕ್. ಫ್ಲಾರೆನ್ಸ್ ನಗರ ನಿವಾಸಿಗಳ ಜನಪ್ರಿಯ ತಾಣವಾಗಿರುವ ಆ ಪಾರ್ಕ್‌ನಲ್ಲಿ ಕ್ರೀಡೆಗೆ ಬೇಕಾಗುವ ಮೈದಾನಗಳಿವೆ. ನಡೆದಾಡಲು ನೆರಳಿರುವ ಕಾಲುದಾರಿಗಳಿವೆ. ಆದರೆ ಪ್ರವಾಸಿಗಳು ಅಲ್ಲಿಗೆ ಬರುವುದು ಬಹಳ ಕಡಿಮೆ. ಇದಕ್ಕೆ ಬದಲಾಗಿ ಅವರು ಬೊಬೊಲಿ ಗಾರ್ಡನ್ಸ್‌ಗೆ ಹೋಗುತ್ತಾರೆ.
ಆದರೆ ಕ್ಯಾಸೀನ್ ಪಾರ್ಕ್ ಓರ್ವ ಪ್ರಸಿದ್ಧ ಪ್ರವಾಸಿಯನ್ನು ಗೌರವಿಸಿದೆ. ಆ ಪ್ರವಾಸಿ 150 ವರ್ಷಗಳ ಹಿಂದೆ ಫ್ಲಾರೆನ್ಸ್‌ಗೆ ಭೇಟಿ ನೀಡಿದ್ದ ಒಬ್ಬ ಭಾರತೀಯ ರಾಜಕುಮಾರ. ಪಾರ್ಕ್‌ನ ಮೂಲೆಯೊಂದರಲ್ಲಿ ಆತನ ಜ್ಞಾಪಕಾರ್ಥವಾಗಿ ನಿರ್ಮಿಸಿದ ಒಂದು ಸ್ಮಾರಕವಿದೆ. ಸ್ಮಾರಕವಿರುವ ಸ್ಥಳದಲ್ಲಿ 1870ರ ನವೆಂಬರ್ 31ರಂದು ಕೊಲ್ಹಾಪುರದ ರಾಜಕುಮಾರ ಇಮ್ಮಡಿ ರಾಜಾರಾಮ್‌ನನ್ನು ಚಿತೆಯಲ್ಲಿಟ್ಟು ಶವಸಂಸ್ಕಾರ ಮಾಡಲಾಯಿತು.
ಮಹತ್ವಾಕಾಂಕ್ಷೆಯ ಪ್ರಯಾಣ
16ನೆ ವಯಸ್ಸಿನಲ್ಲಿ (1866) ಇಮ್ಮಡಿ ರಾಜಾರಾಮ್ ಸಿಂಹಾಸನವನ್ನೇರಿದ. ಬಳಿಕ ಸ್ವಲ್ಪವೇ ಸಮಯದಲ್ಲಿ ಪ್ರಶಂಸಾರ್ಹವಾದ ಒಂದು ಪ್ರಯಾಣವನ್ನಾರಂಭಿಸಿದ. ಜಗತ್ತಿಗೆ ತಾನೊಬ್ಬ ಆಧುನಿಕ ದೊರೆ ಎಂದು ತನ್ನನ್ನು ಪರಿಚಯಿಸಿಕೊಂಡು ಬ್ರಿಟಿಷ್ ದ್ವೀಪಗಳ ಪ್ರವಾಸದ ಬಳಿಕ ಆತ ಯೂರೋಪ್ ಖಂಡದ ಮೂಲಕ ಬಂದು ದೀರ್ಘ ಪ್ರಯಾಣ ಕೈಗೊಳ್ಳಬೇಕಾಗಿತ್ತು.
ಫ್ರಾಂಕೋ ಪ್ರುಶಿಯನ್ ಯುದ್ಧದಿಂದಾಗಿ ಫ್ರಾನ್ಸ್‌ನ ಮೂಲಕ ಹಾದು ಹೋಗುವ ಮಾರ್ಗದಲ್ಲಿ ಅಡಚಣೆ ಉಂಟಾಗಿತ್ತು. ಆದ್ದರಿಂದ ರಾಜಾರಾಮ್ ಬೆಲ್ಜಿಯಂ ಮೂಲಕ ಜರ್ಮನಿಗೆ ಹೋಗಿ ಅಲ್ಲಿಂದ ಉತ್ತರ ಇಟಲಿಗೆ ಹೋದ. ಆಲ್ಫ್ ಪರ್ವತ ಶ್ರೇಣಿಯನ್ನು ತಲುಪುವ ವೇಳೆಗೆ ಆತ ಇಂಗ್ಲಿಷ್‌ನಲ್ಲಿ ಬರೆದ ಮತ್ತು ಆತನ ಮರಣಾನಂತರ ಪ್ರಕಟವಾದ ಆತನ ದಿನಚರಿ ಸಂಕ್ಷಿಪ್ತವಾಗಿದೆ ಹಾಗೂ ಬೆಟ್ಟಗಳ ಇಟಾಲಿಯನ್ ಬದಿಯಲ್ಲಿರುವ ಬೋಲ್ಸಾನೋದಲ್ಲಿ ದಿಢೀರನೆ ಕೊನೆಗೊಳ್ಳುತ್ತದೆ.
ರಾಜಕುಮಾರ ತನಗೆ ‘‘ಸ್ವಲ್ಪ ಮಟ್ಟಿಗೆ ಸಂಧಿವಾತ’’ ಬಂದಿದೆ ಎಂದಷ್ಟೇ ಹೇಳಿದ್ದ. ಆದರೆ ನಿಜವಾಗಿ ಆತನಿಗೆ ಗಂಭೀರ ಸ್ವರೂಪದ ಕಾಯಿಲೆಯೇ ಬಂದಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಆತನನ್ನು ಫ್ಲಾರೆನ್ಸ್‌ಗೆ ಒಯ್ಯಲಾಯಿತು. ನವೆಂಬರ್ 30ರಂದು ಆತ ತೀರಿಕೊಂಡ. ಇಟಾಲಿಯನ್‌ರಿಗೆ ಆತನ ಸಾವು ಒಂದು ಸಮಸ್ಯೆಯನ್ನು ಸೃಷ್ಟಿಸಿತು. ಆಗ ಫ್ಲಾರೆನ್ಸ್ ನಗರ ಹೊಸತಾಗಿ ಅಸ್ತಿತ್ವಕ್ಕೆ ಬಂದಿದ್ದ ಇಟಲಿ ಸಾಮ್ರಾಜ್ಯದ (ಕಿಂಗ್‌ಡಮ್ ಆಫ್ ಇಟಲಿಯ) ರಾಜಧಾನಿಯಾಗಿತ್ತು. ಮುಂದಿನ ವರ್ಷದವರೆಗೆ, ಅಂದರೆ ರೋಮ್ ನಗರವು ದೇಶದ ಸರಕಾರದ ರಾಜಧಾನಿಯಾಗುವವರೆಗೆ, ಫ್ಲಾರೆನ್ಸ್‌ಗೆ ರಾಜಧಾನಿಯ ಸ್ಥಾನಮಾನವಿತ್ತು.
ರಾಜತಾಂತ್ರಿಕತೆಯ ಪ್ರಶ್ನೆ
ಪರದೇಶದ ಹಾಗೂ ಸಾಯುತ್ತಿರುವ ದೊರೆಗೆ ಅಭ್ಯಾಗತನಾಗಿರುವುದು ಒಂದು ದೇಶಕ್ಕೆ (ಇಟಲಿಗೆ) ರಾಜತಾಂತ್ರಿಕ ಮಹತ್ವವಿರುವ ಮತ್ತು ಸಾರ್ವಜನಿಕ ಆಸಕ್ತಿ ಇರುವ ಒಂದು ಘಟನೆಯಾಗಿತ್ತು. ಆದ್ದರಿಂದ ಆ ದೊರೆಗೆ ಸೂಕ್ತವಾದ ಅಂತ್ಯ ಸಂಸ್ಕಾರ ನಡೆಸುವುದು ಅನಿವಾರ್ಯವಾಗಿತ್ತು. ಆದರೆ, ರಾಜಾರಾಮ್‌ನ ರಾಜಪರಿವಾರದವರು ಆತನಿಗೆ ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಬೇಕು. ಆತನ ಶವವನ್ನು ಚಿತೆಯ ಮೇಲಿಟ್ಟು ದಹಿಸಬೇಕೆಂದು ಒತ್ತಾಯಿಸಿದರು. ಅಲ್ಲಿಯ ಆರ್ನೊ ನದಿಯ ದಡದಲ್ಲಿ ಆತನ ಶವಸಂಸ್ಕಾರ ನಡೆಸಬೇಕೆಂದು ಆಗ್ರಹಿಸಿದರು. ಅಲ್ಲಿಯ ಕೆಥೊಲಿಕ್ ಚರ್ಚ್ ಶವದಹನವನ್ನು ವಿರೋಧಿಸಿತು. ಫ್ಲಾರೆನ್ಸ್‌ನ ನಗರಾಡಳಿತ ಶವದಹನವನ್ನು ಕಟ್ಟುನಿಟ್ಟಾಗಿ ನಿಷೇಧಿಸಿತ್ತು. ಆದರೆ, ರಾಜಾರಾಮ್‌ನ ಪರಿವಾರದವರು, ಸ್ಥಳೀಯ ಬ್ರಿಟಿಷ್ ರಾಯಭಾರಿಯ ಬೆಂಬಲ ಪಡೆದು, ತಮ್ಮ ವಾದದಲ್ಲಿ ಗೆದ್ದರು. ಪರಿಣಾಮವಾಗಿ ಅವರ ಪರವಾಗಿ ನಿಷೇಧವನ್ನು ಮುರಿದು, ಶವದಹನಕ್ಕೆ ವಿಶೇಷ ಅನುಮತಿ ನೀಡಲಾಯಿತು.
ಕೊಲ್ಹಾಪುರದ ರಾಜಕುಟುಂಬಕ್ಕೆ, ಸರಿಯಾದ ಸಂಸ್ಕಾರದ ನಿಯಮಗಳನ್ನು ಅನುಸರಿಸಲಾಗಿದೆ ಎಂದು ಮನವರಿಕೆ ಮಾಡಿಸಲು, ಫ್ಲಾರೆನ್ಸ್ ನಗರಾಡಳಿತ ಹಿಂದೂ ರೀತ್ಯಾ ಶವಸಂಸ್ಕಾರಕ್ಕೆ ಏರ್ಪಾಡು ಮಾಡಿದ್ದಷ್ಟೇ ಅಲ್ಲದೆ, ಭಾರತಕ್ಕೆ ಕಳುಹಿಸಲಿಕ್ಕಾಗಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳ ಬಗ್ಗೆ ವಿವರವಾದ ಒಂದು ವರದಿಯನ್ನೂ ಸಿದ್ಧಪಡಿಸಿತು. ರಾಜಾರಾಮ್ ಉಳಿದುಕೊಂಡಿದ್ದ ಹೊಟೇಲ್‌ನಿಂದ ಆತನ ಶವವನ್ನು ಒಂದು ಸಾರೋಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದ ಕ್ಯಾಸೀನ್‌ನ ತುದಿಯಲ್ಲಿದ್ದ ಒಂದು ತೆರೆದ ಬಯಲಿಗೆ ಕೊಂಡು ಹೋಗಲಾಯಿತೆಂದು ಆ ವರದಿ ಹೇಳುತ್ತದೆ. ಅಲ್ಲಿ ಆತನ ಶವವನ್ನು ಸಕಲ ರಾಜಮರ್ಯಾದೆಯೊಂದಿಗೆ ದಹಿಸಿ, ಭಾರತಕ್ಕೆ ಕಳುಹಿಸಲಿಕ್ಕಾಗಿ ಸ್ವಲ್ಪ ಬೂದಿಯನ್ನು ಉಳಿಸಿಕೊಳ್ಳಲಾಯಿತು.
ಫ್ಲಾರೆನ್ಸ್‌ನಲ್ಲಿ ನಡೆದ ರಾಜಾರಾಮ್‌ನ ಅಂತ್ಯಸಂಸ್ಕಾರ ಆ ನಗರದ ಸ್ಮರಣೀಯ ಘಟನೆಯಾಯಿತು.
ರಾಜಕುಮಾರ ಮರಣ ಹೊಂದಿದ ಎರಡು ವರ್ಷಗಳೊಳಗಾಗಿ ನಗರಾಡಳಿತವು ಸ್ಮಾರಕವೊಂದನ್ನು ನಿರ್ಮಿಸಿದರು. ಬ್ರಿಟಿಷ್ ಕಲಾವಿದ ಚಾರ್ಲ್ಸ್ ಫ್ರಾನ್ಸಿಸ್ ಫುಲ್ಲರ್ ಕಡೆದ ರಾಜಾರಾಮ್‌ನ ಎದೆಮಟ್ಟದ ಪ್ರತಿಮೆ ಈಗ ಅಲ್ಲಿದೆ. ಇಂಡೋ-ಸೆರಾಸೀನಿಕ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಒಂದು ಪೆವಿಲಿಯನ್‌ನಲ್ಲಿ ಆ ಪ್ರತಿಮೆಯನ್ನು ಇಡಲಾಗಿದೆ.
ರಾಜಾರಾಮ್‌ನ ಗಂಭೀರವಾದ ಈ ಸ್ಮಾರಕೀಕರಣದ ಜೊತೆಯಲ್ಲೇ ಕೆಲವು ವಾಣಿಜ್ಯ ಕಟ್ಟಡಗಳೂ ನಿರ್ಮಾಣಗೊಂಡವು. 1872ರಲ್ಲಿ ಅಂತ್ಯಸಂಸ್ಕಾರದ ಸ್ಮಾರಕ ಎದ್ದು ನಿಂತಾಗ, ಪಕ್ಕದಲ್ಲೇ ಒಂದು ‘‘ಇಂಡಿಯನ್ ಕೆಫೆ’’ ತಲೆಎತ್ತಿತು. ಆ ಕೆಫೆ ಇತ್ತೀಚೆಗೆ ಬಾಗಿಲು ಹಾಕಿದೆಯಾದರೂ ಆ ಕಟ್ಟಡ ಇನ್ನೂ ಅಲ್ಲಿದೆ. ಅದರ ಹೆಸರು ಕೂಡ ‘‘ಇಂಡಿಯನ್ ಪ್ಯಾಲೆಸ್’’ ಎಂದೇ ಇದೆ. 1972ರಲ್ಲಿ ಕಟ್ಟಡ ನಿರ್ಮಾಣದ ಶತಾಬ್ದಿಯ ವೇಳೆ, ಆಧುನಿಕ ಇಂಡಿಯಾನೋ ಬ್ರಿಡ್ಜ್‌ನ ನಿರ್ಮಾಣ ಆರಂಭಗೊಂಡಿತು.
1978ರಲ್ಲಿ ಇದರ ಉದ್ಘಾಟನೆಯಾಯಿತು. ಇದು ರಾಜಾರಾಮ್‌ನ ನೆನಪು ಇನ್ನೂ ಅಲ್ಲಿ ಉಳಿದಿದೆ ಎಂಬುದಕ್ಕೆ ಪುರಾವೆಯಾಗಿ ನಿಂತಿದೆ.